ಬೆಂಗಳೂರಿಗೆ ಶರಾವತಿ: ಮಲೆನಾಡಿಗರನ್ನು ರೊಚ್ಚಿಗೆಬ್ಬಿಸಿದ ಹೊಸ ಪ್ರಸ್ತಾಪ!
ರಾಜ್ಯ

ಬೆಂಗಳೂರಿಗೆ ಶರಾವತಿ: ಮಲೆನಾಡಿಗರನ್ನು ರೊಚ್ಚಿಗೆಬ್ಬಿಸಿದ ಹೊಸ ಪ್ರಸ್ತಾಪ!

ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದ ನೀರು ತರುವ ಕುರಿತ ಸರ್ಕಾರದ ಹೊಸ ನಡೆ ಮತ್ತೊಮ್ಮೆ ಶರಾವತಿ ಕೊಳ್ಳದಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದು, ಕಳೆದ ವರ್ಷ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಈ ಹೋರಾಟವನ್ನೇ ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸಿದ ಬಿಜೆಪಿಯ ಸ್ಥಳೀಯ ಶಾಸಕರು ಮತ್ತು ಇತರ ನಾಯಕರು ಈಗ ಅಡಕತ್ತರಿಗೆ ಸಿಲುಕಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂದಿನ ಅವರ ನಡೆ ಕುತೂಹಲ ಮೂಡಿಸಿದೆ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಯಾವುದೇ ಒಂದು ಊರು, ನಗರ, ರಾಜ್ಯ ಜನಹಿತದ ದೂರದೃಷ್ಟಿಯ ನಾಯಕತ್ವದ ಬದಲಿಗೆ, ಲೂಟಿ ಮತ್ತು ಹಣದ ಹಪಾಹಪಿಯ ಕಾರ್ಪೊರೇಟ್ ಲಾಬಿ, ರಿಯಲ್ ಎಸ್ಟೇಟ್ ಮಾಫಿಯಾ, ಪರಮ ಸ್ವಾರ್ಥದ ಅಧಿಕಾರಶಾಹಿಯ ಆಡುಂಬೊಲವಾದರೆ ಏನಾಗುತ್ತದೆ ಎಂಬುದಕ್ಕೆ ಸದ್ಯದ ಬೆಂಗಳೂರೇ ಕಣ್ಣೆದುರಿನ ದೊಡ್ಡ ಉದಾಹರಣೆ.

ನಗರ ಯೋಜನೆ ರೂಪಿಸುವ ಮಂದಿಗೆ ಭವಿಷ್ಯದ ಕಲ್ಪನೆಯೇ ಇಲ್ಲದೆ ಹೋದರೆ ಬೆಂಗಳೂರಿನಂತಹ ನರಕಸದೃಶ ನಗರ ಸೃಷ್ಟಿಯಾಗುತ್ತದೆ ಮತ್ತು ಅಂತಹ ನರಕವನ್ನು ಕುಸಿತದ ಅಪಾಯದಿಂದ ಪಾರುಮಾಡುವ ನೆಪದಲ್ಲಿ ಇನ್ನಷ್ಟು, ಮತ್ತಷ್ಟು ಸರಿಪಡಿಸಲಾಗದ ಸ್ವಯಂಕೃತ ಅಪರಾಧಗಳ ಸರಣಿ ಜಾರಿಯಾಗುತ್ತವೆ. ಅಂತಹ ಒಂದು ಸ್ವಯಂಕೃತ ಅನಾಹುತದ ಭಾಗವೇ ಇದೀಗ ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆಯನ್ನು ಮತ್ತೆ ಪ್ರಸ್ತಾಪಿಸುತ್ತಿರುವ ಸರ್ಕಾರದ ವರಸೆ.

ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಕಾವೇರಿ ಐದನೇ ಹಂತ, ಎತ್ತಿನಹೊಳೆ ಮೂಲಗಳ ಹೊರತಾಗಿಯೂ ನೀರಿನ ಹಾಹಾಕಾರ ಮುಂದುವರಿಯಲಿದೆ. ಹಾಗಾಗಿ ಪರ್ಯಾಯ ಜಲಮೂಲವಾಗಿ ಶರಾವತಿ ನದಿಯ ಲಿಂಗನಮಕ್ಕಿ ಜಲಾಶಯವನ್ನು ಬಳಸಿಕೊಳ್ಳುವುದು ಅನಿವಾರ್ಯ. ಅಲ್ಲಿ ಲಭ್ಯ ಇರುವ 30 ಟಿಎಂಸಿ ನೀರಿನ ಪೈಕಿ 15 ಟಿಎಂಸಿ ನೀರು ತರಲು ಯೋಜನೆ ಸಿದ್ಧಪಡಿಸಲಾಗಿದೆ. ಸರ್ಕಾರದ ಅನುಮೋದನೆ ಬಾಕಿ ಇದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದ್ದಾರೆ. ಕಳೆದ ವರ್ಷದ ಮೇನಲ್ಲಿ ಅಂದಿನ ಸರ್ಕಾರದ ಡಿಸಿಎಂ ಡಾ ಪರಮೇಶ್ವರ್ ಅವರು ಇದೇ ಯೋಜನೆ ಪ್ರಸ್ತಾಪಿಸಿ, ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆಗ ಶರಾವತಿ ಕೊಳ್ಳ ಸೇರಿದಂತೆ ಇಡೀ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಲ್ಲಿಸರ್ಕಾರದ ಪ್ರಸ್ತಾಪದ ವಿರುದ್ಧ ವ್ಯಾಪಕ ಜನಾಂದೋಲನ ನಡೆದಿತ್ತು. ಸುಮಾರು ಒಂದು ತಿಂಗಳ ಕಾಲ ನಡೆದ ನಿರಂತರ ಪ್ರತಿಭಟನೆ- ಧರಣಿ- ಪಾದಯಾತ್ರೆ ಮುಂತಾದ ಹೋರಾಟ ಮತ್ತು ವ್ಯಾಪಕ್ ಬಂದ್ ಸರ್ಕಾರವನ್ನು ಹಿಮ್ಮೆಟ್ಟಿಸಿದ್ದವು.

ಅದೇ ಹೊತ್ತಿಗೆ ರಾಜ್ಯ ಸರ್ಕಾರ ಕೂಡ ಬದಲಾಗಿ, ಬಿಜೆಪಿ ಅಧಿಕಾರಕ್ಕೆ ಬಂದಿತ್ತು ಮತ್ತು ಸ್ವತಃ ಶಿವಮೊಗ್ಗ ಜಿಲ್ಲೆಯ ಬಿ ಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಸಿಎಂ ಹುದ್ದೆಗೆ ಏರಿದ ಮೂರೇ ದಿನದಲ್ಲಿ ಯಡಿಯೂರಪ್ಪ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ಬೆಂಗಳೂರಿಗೆ ಶರಾವತಿ ನೀರು ಒಯ್ಯುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ, ಅಂತಹ ಆಲೋಚನೆಯನ್ನೇ ಕೈಬಿಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಅದಾದ ಬಳಿಕ ಹೋರಾಟ ಕೂಡ ತಣ್ಣಗಾಗಿತ್ತು.

ಆದರೆ, ಇದೀಗ ಕೇವಲ ಏಳೆಂಟು ತಿಂಗಳಲ್ಲಿ ಸರ್ಕಾರ ತನ್ನ ಮಾತು ಉಳಿಸಿಕೊಳ್ಳಲಿಲ್ಲ ಮತ್ತು ಮಲೆನಾಡಿನವರ ಕಣ್ಣಿಗೆ ಮಣ್ಣೆರಚಿ ತೆರೆಮರೆಯಲ್ಲಿ ಯೋಜನೆಯನ್ನು ಸಿದ್ದಪಡಿಸಿದೆ ಎಂಬುದು ತುಷಾರ್ ಗಿರಿನಾಥ್ ಅವರ ಹೇಳಿಕೆಯಿಂದ ಜಗಜ್ಜಾಹೀರಾಗಿದೆ.

ಹಾಗೆ ನೋಡಿದರೆ, ಸಿಲಿಕಾನ್ ಕಣಿವೆಗೆ ಶರಾವತಿ ನೀರು ತರುವ ಯೋಜನೆ ಹೊಸದೇನೂ ಅಲ್ಲ. ಅದರ ಬೇರುಗಳಿರುವುದು ಇದೇ ಬಿಜೆಪಿಯ ಮೊದಲ ಅವಧಿಯ ಆಡಳಿತದಲ್ಲೇ. ಬೆಂಗಳೂರಿಗೆ ಪರ್ಯಾಯ ನೀರು ಮೂಲ ಕಂಡುಕೊಳ್ಳುವ ಉದ್ದೇಶದಿಂದ 2010ರ ನವೆಂಬರಿನಲ್ಲಿ ಅಂದಿನ ಬೆಂಗಳೂರು ಮಹಾನಗರ ನೀರು ಸರಬರಾಜು ಮಂಡಳಿಯ ಮುಖ್ಯಸ್ಥ ಬಿ ಎನ್ ತ್ಯಾಗರಾಜ್ ಅವರ ನೇತೃತ್ವದಲ್ಲಿ ಒಂಭತ್ತು ಮಂದಿ ತಜ್ಞರ ಸಮಿತಿ ರಚಿಸಲಾಗಿತ್ತು. ಆ ಸಮಿತಿ 2013ರಲ್ಲಿ ಅಂತಿಮ ವರದಿ ಸಲ್ಲಿಸಿ, ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿ ನೀರನ್ನು ಮೇಲೆತ್ತಿ ವಾರಾಹಿ ಜಲಾಶಯಕ್ಕೆ ತುಂಬಿಸಿ, ಅಲ್ಲಿಂದ ಹಾಸನ ಜಿಲ್ಲೆಯ ಬೇಲೂರು ಸಮೀಪದ ಯಗಚಿ ಹೇಮಾವತಿ ಜಲಾಶಯಕ್ಕೆ ಹಾಯಿಸಿ, ನಂತರ ಗುರುತ್ವ ಬಲದಲ್ಲಿ ಬೆಂಗಳೂರಿಗೆ ನೀರು ಸರಬರಾಜು ಮಾಡುವ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹರಿಸುವುದು ಸಾಧ್ಯ ಎಂದು ಹೇಳಿತ್ತು. ವಾಸ್ತವವಾಗಿ ಆ ವರದಿಯೇ ಈಗಲೂ ಈ ಯೋಜನೆ, ಪ್ರಸ್ತಾವನೆಗಳಿಗೆ ಆಧಾರ.

ಅಲ್ಲದೆ, ಯಾವುದೇ ಅಂತಾರಾಜ್ಯ ವಿವಾದಗಳಿಲ್ಲದ ಮತ್ತು ಅದೇ ಹೊತ್ತಿಗೆ ಅಪಾರ ಪ್ರಮಾಣದ ಕುಡಿಯಲು ಯೋಗ್ಯವಾದ ನೀರು ದೊರೆಯುವುದು ಸದ್ಯಕ್ಕೆ ರಾಜ್ಯದಲ್ಲಿ ಲಿಂಗನಮಕ್ಕಿಯಲ್ಲಿ ಮಾತ್ರ. 151 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಯ ಬಳಿಕ, ಶರಾವತಿ ಕಣಿವೆಯಲ್ಲಿ ಹರಿವ ನೀರು ಸಮುದ್ರದ ಪಾಲಾಗುತ್ತದೆ. ಹಾಗಾಗಿ, ಈ ನೀರು ಬಳಕೆಯಿಂದ ಯಾರಿಗೂ ಯಾವುದೇ ಬಗೆಯ ಹಾನಿ ಕೂಡ ಇಲ್ಲ ಎಂದು ತ್ಯಾಗರಾಜ್ ಸಮಿತಿ ತನ್ನ ಶಿಫಾರಸಿನಲ್ಲಿ ಹೇಳಿತ್ತು. ಹಾಗಾಗಿ, ಬೆಂಗಳೂರು ಮಹಾನಗರವಷ್ಟೇ ಅಲ್ಲದೆ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ಹಲವು ನಗರ-ಪಟ್ಟಣಗಳಿಗೂ ಇಲ್ಲಿಂದ ನೀರು ಸರಬರಾಜು ಮಾಡುವ ಯೋಜನೆ ಇದೆ ಎಂದೂ ತುಷಾರ್ ಗಿರಿನಾಥ್ ಹೇಳಿದ್ದಾರೆ!

ಆದರೆ, ಸ್ವತಃ ಶರಾವತಿ ನದಿ ತಟದಲ್ಲೇ ಬೇಸಿಗೆಯ ಆರು ತಿಂಗಳು ಹಲವು ಪಟ್ಟಣ, ಗ್ರಾಮಗಳ ಜನ ಕುಡಿಯುವ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದು ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ಜಲಾಶಯ ನಿರ್ಮಾಣದ ವೇಳೆ ಮನೆಮಠ, ತೋಟ, ಜಮೀನು ಮುಳುಗಡೆಯಾಗಿ ಮುಳುಗಡೆ ಸಂತ್ರಸ್ತರಾಗಿ ಎತ್ತಂಗಡಿಯಾದ ಜನ ಈಗ ಬದುಕು ಕಂಡುಕೊಂಡಿರುವ ಬಹುತೇಕ ಶಿವಮೊಗ್ಗ ಜಿಲ್ಲೆಯ ಪ್ರದೇಶಗಳು ಇಂದಿಗೂ ತೀವ್ರ ಬರಪೀಡಿತ ಪ್ರದೇಶಗಳಾಗೇ ಇವೆ. ಶರಾವತಿ ಸಂತ್ರಸ್ತರು ನೆಲೆಸಿರುವ ಶಿವಮೊಗ್ಗ, ಸಾಗರ, ಹೊಸನಗರ, ಸೊರಬ ಭಾಗದಲ್ಲಿ ಒಂದೇ ಒಂದು ಎಕರೆ ಜಮೀನು ಕೂಡ ನೀರಾವರಿ ಕಂಡಿಲ್ಲ. ಇನ್ನು ಕುಡಿಯುವ ನೀರಿನ ವಿಷಯದಲ್ಲಿ ಶಿವಮೊಗ್ಗಕ್ಕೆ ತುಂಗೆ, ದಾವಣಗೆರೆಗೆ ತುಂಗಭದ್ರಾ ನೀರು ಲಭ್ಯವಿದೆ. ಮುಂದಿನ ಹತ್ತಾರು ವರ್ಷಗಳವರೆಗೆ ಆ ನೀರಿನ ಮೂಲಗಳಿಗೆ ಅಪಾಯವಿಲ್ಲ. ಪರಿಸ್ಥಿತಿ ಹೀಗಿರುವಾಗ, ನದಿ ಪಾತ್ರದ ಮತ್ತು ಜಲಾನಯನ ಪ್ರದೇಶದ ಜನರ ಸಂಕಷ್ಟವನ್ನು ಗಾಳಿಗೆ ತೂರಿ, ಇಲ್ಲಿನ ನೀರನ್ನು ಈ ಭೂಭಾಗಕ್ಕೆ ಸಂಬಂಧವೇ ಪಡದ ನಗರಕ್ಕೆ ಒಯ್ಯುವುದು ಯಾವ ನ್ಯಾಯ ಎಂಬ ಪ್ರಶ್ನೆ ಇದೆ.

ಅಷ್ಟಕ್ಕೂ ಲಿಂಗನಮಕ್ಕಿ ಸೇರಿದಂತೆ ಶರಾವತಿ ಕೊಳ್ಳದ ಸರಣಿ ಜಲಾಶಯಗಳ ಏಕೈಕ ಉದ್ದೇಶವೇ ಜಲವಿದ್ಯುತ್ ಉತ್ಪಾದನೆ. ಕೆಪಿಸಿ ಮತ್ತು ರಾಜ್ಯ ಸರ್ಕಾರದ ನಡುವಿನ ಒಪ್ಪಂದದಲ್ಲೂ ಅದು ಸ್ಪಷ್ಟವಾಗಿದೆ. ಈಗ ಒಂದು ವೇಳೆ ಆ ಒಪ್ಪಂದವನ್ನು ಮೀರಿ, ಈ ಕಣಿವೆಯ ನೀರನ್ನು ವಿದ್ಯುತ್ ಉತ್ಪಾದನೆ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸುವುದೇ ಆಗಿದ್ದರೆ, ಅಂತಹ ಬದಲಾವಣೆಯ ಮೊದಲ ಫಲಾನುಭವಿಗಳಾಗಬೇಕಿರುವುದು ಈ ಯೋಜನೆಗಳಿಂದಾಗಿ ಬದುಕು ಕಳೆದುಕೊಂಡ, ನಾಡಿಗೆ ಬೆಳಕು ನೀಡುವ ದೊಡ್ಡ ಉದ್ದೇಶಕ್ಕಾಗಿ ಮನೆಮಠ, ಆಸ್ತಿಪಾಸ್ತಿ ತ್ಯಾಗ ಮಾಡಿದ ಜನರೇ ಅಲ್ಲವಾ ಎಂಬ ಪ್ರಶ್ನೆ ಕೂಡ ಇದೆ. ನೀವು ಶರಾವತಿ ಕೊಳ್ಳದ ಜನರನ್ನು ಯೋಗ್ಯ ಕುಡಿಯುವ ನೀರು, ಕನಿಷ್ಠ ಒಂದು ಹಂಗಾಮಿನ ಬೆಳೆಗಳಿಂದ ವಂಚಿತರನ್ನಾಗಿ ಮಾಡಿ, ಪರಿಸರ ಮತ್ತು ಜಲ ಸಂರಕ್ಷಣೆಯ ಹೊಣೆಯನ್ನೇ ಅರಿಯದ, ಧನದಾಹಿ ನಗರಕ್ಕೆ ನಮ್ಮ ನೀರನ್ನು ಲಪಟಾಯಿಸುವುದು ಎಷ್ಟು ಸರಿ ಎಂಬುದು ಶರಾವತಿ ಕಣಿವೆಯ ಜನರ ಪ್ರಶ್ನೆ! ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಕಳೆದ ಮೇ-ಜೂನ್ ನಲ್ಲಿ ಇಲ್ಲಿನ ಜನ ಶರಾವತಿ ನದಿ ಉಳಿಸಿ ಹೋರಾಟ ಎಂಬ ಐತಿಹಾಸಿನ ಜನಾಂದೋಲನವನ್ನು ಕಟ್ಟಿದ್ದರು ಕೂಡ.

ಐಐಎಸ್ಸಿ ಅಧ್ಯಯನವೊಂದರ ಪ್ರಕಾರ ಬೆಂಗಳೂರಿನ ನೀರಿನ ಅಗತ್ಯವಿರುವುದು ವಾರ್ಷಿಕ 18 ಟಿಎಂಸಿ. ಆ ಪೈಕಿ ಸೋರಿಕೆಯಾಗುವ ನೀರಿನ ಪ್ರಮಾಣವೇ 8 ಟಿಎಂಸಿ. ಅಂದರೆ, ವಾಸ್ತವವಾಗಿ ಬಳಕೆಯಾಗುವುದು 10 ಟಿಎಂಸಿ ನೀರು ಮಾತ್ರ. ಅದರಲ್ಲಿ ಈಜುಕೊಳ, ಫೌಂಟೇನ್, ಕೈತೋಟ, ತಂಪು ಪಾನೀಯ ತಯಾರಿಕೆ ಕೈಗಾರಿಕೆ ಮುಂತಾದ ಐಷಾರಾಮಿ ಬಳಕೆಗೆ ಕನಿಷ್ಟವೆಂದರೂ ಒಂದು ಟಿಎಂಸಿ ನೀರು ಬಳಕೆಯಾಗುತ್ತದೆ. ಜೊತೆಗೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬೀಳುವ ವಾರ್ಷಿಕ ಮಳೆ ಪ್ರಮಾಣ 15 ಟಿಎಂಸಿ. ಅಂದರೆ ಬೆಂಗಳೂರು ನಗರದ ಬಳಕೆಗೆ ಅಗತ್ಯಕ್ಕಿಂತ ಹೆಚ್ಚು ನೀರು ಮಳೆಯಿಂದಲೇ ಪಡೆಯಬಹುದು. ಜೊತೆಗೆ ನೀರು ಸಂಸ್ಕರಿಸಿ ಪುನರ್ ಬಳಕೆ ಮಾಡುವ ಮೂಲಕ 4.5 ಟಿಎಂಸಿ ನೀರು ಪಡೆಯಬಹುದು. ಅಲ್ಲದೆ, ಬೆಂಗಳೂರಿನ ಸುತ್ತಲಿನ ಕಣಿವೆ ಮತ್ತು ಕೆರೆಗಳನ್ನು ಪುನರುಜ್ಜೀವನಗೊಳಿಸಿದರೆ ಮುಂದಿನ 50 ವರ್ಷಗಳ ನೀರಿನ ಬೇಡಿಕೆಯನ್ನೂ ಈಡೇರಿಸಬಹುದು. ಆದರೆ, ಬೃಹತ್ ಯೋಜನೆಗಳ ಕಿಕ್ ಬ್ಯಾಕ್ ಮೇಲೆ ಕಣ್ಣಿಟ್ಟಿರುವ ವ್ಯವಸ್ಥೆಗೆ ಇದು ಬೇಕಾಗಿಲ್ಲ ಎಂಬುದು ಪರಿಸರವಾದಿಗಳ ಆತಂಕ.

ಮುಖ್ಯವಾಗಿ ಒಂದು ನಗರಕ್ಕೆ ಮೂಲಭೂತ ಅಗತ್ಯವಾದ ನೀರಿನ ಮೂಲವನ್ನು ಕಂಡುಕೊಳ್ಳದೇ ವಿವಿಧ ಲಾಬಿಗಳು ಮತ್ತು ಲಾಭಕೋರರ ಅನುಕೂಲಕ್ಕಾಗಿ ಬೆಳೆಯಲು ಬಿಟ್ಟಿದ್ದು ಯಾಕೆ? ನಗರ ಧಾರಣೆ ಸಾಮರ್ಥ್ಯವನ್ನು ಮೀರಿ ಯದ್ವಾತದ್ವಾ ಬೆಳೆಯಲು ಬಿಟ್ಟು, ಉದ್ಯಮ ಮತ್ತು ವ್ಯವಹಾರ ವಿಕೇಂದ್ರೀಕರಣವನ್ನು ಜಾರಿಗೆ ತರದೆ ರಿಯಲ್ ಎಸ್ಟೇಟ್ ಮತ್ತು ಕಾರ್ಪರೇಟ್ ಕುಳಗಳೊಂದಿಗೆ ಕೈಜೋಡಿಸಿ ಈಗ ನಗರದ ದಾಹ ತೀರಿಸಲು ಪಶ್ಚಿಮಘಟ್ಟಗಳನ್ನು ಬರಿದುಮಾಡಲು ಹೊರಡುವುದು ಆತ್ಮಹತ್ಯೆಯ ದಾರಿಯಲ್ಲವೆ? ಹೀಗೆ ಬೆಳೆಯುತ್ತಾ ಹೋದರೆ, ನಾಳೆ ರಾಜ್ಯದ ಯಾವ ನೀರಿನ ಮೂಲಗಳೂ ಸಾಕಾಗಲಾರವು. ಆಗ ಮುಂದೇನು?.. ಅದರ ಬದಲಿಗೆ ಈಗಲೇ ಕಟ್ಟುನಿಟ್ಟಾಗಿ ನಗರದ ಬೆಳವಣಿಗೆಗೆ ವಿರಾಮ ಹಾಕುವುದು ಮತ್ತು ಪಶ್ಚಿಮಘಟ್ಟದಂತಹ ಜಾಗತಿಕ ಮಹತ್ವದ ಮತ್ತು ರಾಜ್ಯದ ಇಡೀ ಸಂಪನ್ಮೂಲದ ನಿಧಿಯಾಗಿರುವ ಪರಿಸರವನ್ನು ಕಾಯ್ದುಕೊಂಡು ಹೋಗುವುದು ಮುಂದಿನ ತಲೆಮಾರುಗಳ ಒಳಿತಿನ ದಾರಿಯಲ್ಲವೆ? ಎಂಬ ಬಗ್ಗೆ ಸರ್ಕಾರಗಳು ಯೋಚಿಸಬೇಕಿದೆ ಎಂದು ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ಸಂಚಾಲಕರಲ್ಲಿ ಒಬ್ಬರಾದ ರಾಘವೇಂದ್ರ ಚಾರ್ವಾಕ ಹೇಳುತ್ತಾರೆ.

ಸರ್ಕಾರ ಯೋಜನೆ ಕೈಬಿಟ್ಟಿರುವುದಾಗಿ ಹೇಳಿ ಇದೀಗ ತೆರೆಮರೆಯಲ್ಲಿ ಯೋಜನೆ ಸಿದ್ಧಪಡಿಸಿಕೊಂಡಿದೆ. ಇದು ಶರಾವತಿ ಕೊಳ್ಳದ ಜನರ ವಿಶ್ವಾಸಕ್ಕೆ ಬಗೆದ ದ್ರೋಹ. ನಮ್ಮವರೇ ಸಿಎಂ ಆಗಿದ್ದೂ, ಸ್ವತಃ ತಾವೇ ಕೊಟ್ಟ ಮಾತಿಗೆ ವಿರುದ್ಧವಾಗಿ ಇಂತಹದ್ದೊಂದು ಹಾದಿ ಹಿಡಿದಿರುವುದು ದೊಡ್ಡ ಆಘಾತ ತಂದಿದೆ. ಆದರೆ, ನಾವು ಒಂದು ತೊಟ್ಟು ಶರಾವತಿ ನೀರನ್ನು ಕೂಡ ಬೆಂಗಳೂರು ಅಷ್ಟೇ ಅಲ್ಲ; ಯಾವ ಊರಿಗೂ ಒಯ್ಯಲು ಬಿಡುವುದಿಲ್ಲ. ಶರಾವತಿ ಕಣಿವೆಯ ಪರಿಸರ ಮತ್ತು ಜೀವವೈವಿಧ್ಯದ ಅಳಿವು ಉಳಿವಿನ ಪ್ರಶ್ನೆ ಇದು. ಈ ಭೂಮಿ ಮೇಲೆ ಬದುಕಲು ಮನುಷ್ಯರಿಗೆ ಇರುವಷ್ಟೇ ಹಕ್ಕು ಪಶ್ಚಿಮಘಟ್ಟದ ಎಲ್ಲಾ ಜೀವ ಸಂಕುಲಕ್ಕೂ ಇದೆ. ಆ ಹಕ್ಕು ಕಿತ್ತುಕೊಳ್ಳುವ ಅಧಿಕಾರವನ್ನು ಸರ್ಕಾರಕ್ಕಾಗಲೀ, ಬೆಂಗಳೂರು ಜಲಮಂಡಳಿಗಾಗಲೀ ಯಾರೂ ಕೊಟ್ಟಿಲ್ಲ. ನಾವು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದ್ದೇವೆ ಎಂದು ಪರಿಸರವಾದ ಅಖಿಲೇಶ್ ಚಿಪ್ಪಳಿ ಹೇಳಿದ್ದಾರೆ.

ಒಟ್ಟಾರೆ, ಸರ್ಕಾರದ ಈ ಹೊಸ ನಡೆ ಮತ್ತೊಮ್ಮೆ ಶರಾವತಿ ಕೊಳ್ಳದಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದು, ಕಳೆದ ವರ್ಷ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಈ ಹೋರಾಟವನ್ನೇ ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸಿದ ಬಿಜೆಪಿಯ ಸ್ಥಳೀಯ ಶಾಸಕರು ಮತ್ತು ಇತರ ನಾಯಕರು ಈಗ ಅಡಕತ್ತರಿಗೆ ಸಿಲುಕಿದ್ದು, ಮುಂದಿನ ಅವರ ನಡೆ ಕುತೂಹಲ ಮೂಡಿಸಿದೆ!

Click here Support Free Press and Independent Journalism

Pratidhvani
www.pratidhvani.com