ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವನ್ನು ನಿರ್ಬಂಧಿಸಿ ಸಂವಿಧಾನದ ಕುರಿತು ಚರ್ಚೆ!
ರಾಜ್ಯ

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವನ್ನು ನಿರ್ಬಂಧಿಸಿ ಸಂವಿಧಾನದ ಕುರಿತು ಚರ್ಚೆ!

ಸಂವಿಧಾನದ ಬುನಾದಿ ಮೇಲೆ ನಿಂತಿರುವ ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗ ಎನಿಸಿಕೊಂಡಿರುವ ಮಾಧ್ಯಮಗಳಿಗೇ ನಿರ್ಬಂಧ ಹೇರಿ ಸಂವಿಧಾನದ ಮೇಲೆ ಚರ್ಚೆ ನಡೆಯುತ್ತಿದೆ ಎಂದರೆ ಅದು ಪ್ರಜಾಪ್ರಭುತ್ವದ ಅಣಕವಲ್ಲದೆ ಬೇರೇನು?

ಇಂದಿರಾತನಯ

ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಸಂವಿಧಾನದ ಕುರಿತು ಭಾರೀ ಚರ್ಚೆಯಾಗುತ್ತಿದೆ. ಭಾರತದ ಸಂವಿಧಾನ ಯಾವ ರೀತಿಯಲ್ಲಿ ಸೃಷ್ಟಿಯಾಯಿತು? ಅದರಿಂದ ಆಗಿರುವ ಅನುಕೂಲಗಳೇನು? ಆ ಸಂವಿಧಾನವನ್ನೇ ಹೇಗೆ ಹಾಳು ಮಾಡಲಾಗುತ್ತಿದೆ? ಎಂದು ಶಾಸಕರು ಭಾರೀ ಭಾಷಣಗಳನ್ನೇ ಬಿಗಿಯುತ್ತಿದ್ದಾರೆ. ಸಂವಿಧಾನ ಕುರಿತ ಚರ್ಚೆಗೆ ಅವಕಾಶ ಮಾಡಿಕೊಟ್ಟ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಸ್ತಾವಿಕ ಭಾಷಣ ಮಾಡುತ್ತಾ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದರು. ನಮ್ಮ ಸಂವಿಧಾನ ಸ್ವತಂತ್ರ ಮಾಧ್ಯಮ. ಪತ್ರಿಕಾವೃಂದ ಸರ್ಕಾರದ ನಾಲ್ಕನೇ ಅಂಗ ಎಂದು ಪ್ರಖ್ಯಾತವಾಗಿದೆ ಎಂದೆಲ್ಲಾ ಮಾಧ್ಯಮಗಳನ್ನು ಹಾಡಿ ಹೊಗಳಿದರು. ಆದರೆ, ಸಂವಿಧಾನದ ಕುರಿತು ಚರ್ಚೆ ನಡೆಯುತ್ತಿರುವ ವಿಧಾನಸಭೆಯಲ್ಲಿ ನಡೆಯುತ್ತಿರುವುದೇನು?

ಹೌದು, ಸಂವಿಧಾನವನ್ನೇ ಬುನಾದಿಯಾಗಿಸಿಕೊಂಡಿರುವ ನಮ್ಮ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಂತರ ನಾಲ್ಕನೇ ಅಂಗ ಎಂದು ಪರಿಗಣಿಸಿರುವ ಮಾಧ್ಯಮಗಳಿಗೆ ವಿಧಾನಸಭೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಅದೂ ಕೂಡ ಸಂವಿಧಾನದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದಾರೆ. ಹೀಗಾಗಿ ಸಂವಿಧಾನದ ಮೇಲೆ ನಡೆಯುತ್ತಿರುವ ಚರ್ಚೆ, ಹೇಳುವುದು ಶಾಸ್ತ್ರ, ತಿನ್ನುವುದು ಬದನೇಕಾಯಿ ಎಂಬಂತಾಗಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಾಧ್ಯಮಗಳ ಮೇಲೆ ಏನು ಸಿಟ್ಟಿದೆಯೋ ಗೊತ್ತಿಲ್ಲ, ವಿಧಾನಸಭೆಯ ಸ್ಪೀಕರ್ ಆದ ಮೇಲೆ ಮಾಡಿದ ಮೊದಲ ಕೆಲಸ ಎಂದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ವಿಧಾನಸಭೆಯ ಕಲಾಪ ಚಿತ್ರೀಕರಣಕ್ಕೆ ನಿಷೇಧ ಹೇರಿದ್ದು. ಇದರ ಪರಿಣಾಮ ತಾವು ಆರಿಸಿ ಕಳುಹಿಸಿದ ಶಾಸಕರು ಸದನದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡುವ ಅವಕಾಶವನ್ನು ಕಳೆದುಕೊಂಡ ಜನ ಸಾಮಾನ್ಯರು ಡಿಡಿ ಚಂದನ ವಾಹಿನಿ ಮೂಲಕ ಪ್ರಸಾರವಾಗುವ ದೃಶ್ಯಗಳನ್ನು ಮಾತ್ರ ನೋಡುವಂತಾಯಿತು. ಇದಕ್ಕೆ ಮಾಧ್ಯಮಗಳು ವಿರೋಧ ವ್ಯಕ್ತಪಡಿಸಿದರೂ ಕ್ಯಾರೇ ಎನ್ನದ ಸ್ಪೀಕರ್ ನಂತರದಲ್ಲಿ ಮಾಧ್ಯಮಗಳಿಗೆ ಶಾಸಕರ ಭವನ ಪ್ರವೇಶಕ್ಕೆ ನಿರ್ಬಂಧ ಹೇರಿದರು. ಯಾವ ಶಾಸಕರೂ ಮಾದ್ಯಮದವರನ್ನು ಶಾಸಕರ ಭವನದೊಳಗೆ ಕರೆಸಿಕೊಳ್ಳುವಂತಿಲ್ಲ ಎಂದು ಫರ್ಮಾನು ಹೊರಡಿಸಿದರು. ಇದೀಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿರುವ ಸ್ಪೀಕರ್, ವಿಧಾನಸಭೆ ಮೊಗಸಾಲೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ನಿರ್ಬಂಧಿಸಿದರು. ಆ ಮೂಲಕ 60 ವರ್ಷದ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದರು.

ಸರ್ಕಾರ, ಪ್ರತಿಪಕ್ಷಗಳು ಏನು ಮಾಡುತ್ತಿವೆ?

ವಿಧಾನಸಭೆ, ವಿಧಾನಸೌಧದ ನೆಲಮಹಡಿ, ಮೊದಲ ಮಹಡಿ ಮತ್ತು ಶಾಸಕರ ಭವನ ಸ್ಪೀಕರ್ ಅವರ ವ್ಯಾಪ್ತಿಗೆ ಬರುತ್ತದೆ. ಈ ವ್ಯಾಪ್ತಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಲು ಸ್ಪೀಕರ್ ಸ್ವತಂತ್ರರಿರುತ್ತಾರೆ. ಅವರ ನಿರ್ಧಾರವನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ, ಆ ನಿರ್ಧಾರಗಳು ಜನರಿಗೆ ಅನುಕೂಲಕರವಾಗಿರಬೇಕೇ ಹೊರತು ತೊಂದರೆ ಕೊಡುವಂತಿರಬಾರದು ಎಂಬ ಅರಿವು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರಿಗೆ ಇರಬೇಕಾಗುತ್ತದೆ. ಆದರೆ, ಇಲ್ಲಿ ಹಾಗೆ ಆಗುತ್ತಿಲ್ಲ. ಪ್ರತಿಯೊಂದು ಸಂದರ್ಭದಲ್ಲೂ ಮಾಧ್ಯಮಗಳಿಗೆ ನಿರ್ಬಂಧ ಹೇರುವ ಮೂಲಕ ಏನನ್ನೋ ಮುಚ್ಚಿಡುವ ಅಥವಾ ಮುಚ್ಚಿಹಾಕುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ. ಇಷ್ಟಾದರೂ ಮುಖ್ಯಮಂತ್ರಿಯವರಾಗಲೀ, ಸರ್ಕಾರವಾಗಲೀ, ಪ್ರತಿಪಕ್ಷಗಳಾಗಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದ ಮೇಲೆ ಮಾಧ್ಯಮಗಳು ಅವರು ಹೇಳಿದಂತೆ ಪ್ರಚಾರ ಮಾಡಲು ಬೇಕೇ ಹೊರತು ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವ ಮಾಧ್ಯಮಗಳು ಅವರಿಗೆ ಬೇಡ ಎನ್ನುವುದು ಸ್ಪಷ್ಟ.

ವಿಧಾನಸಭೆ ಮತ್ತು ಶಾಸಕರ ಭವನದಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸುವುದು ಸ್ಪೀಕರ್ ಅವರ ಪರಮಾಧಿಕಾರ, ಅದನ್ನು ಪ್ರಶ್ನಿಸುವಂತಿಲ್ಲ ಎಂದು ಇದಕ್ಕೆ ಉತ್ತರ ನೀಡಬಹುದು. ಆದರೆ, ಸ್ಪೀಕರ್ ಪರಮಾಧಿಕಾರವನ್ನು ಪ್ರಶ್ನಿಸುವಂತಿಲ್ಲವಾದರೂ ಆಕ್ಷೇಪ ವ್ಯಕ್ತಪಡಿಸುವ ಅಧಿಕಾರ ಶಾಸನ ಸಭೆಯ ಪ್ರತಿನಿಧಿಗಳಿಗೆ ಇದೆ. ಏಕೆಂದರೆ, ಸ್ಪೀಕರ್ ಅವರನ್ನು ಆಯ್ಕೆ ಮಾಡುವುದೇ ಈ ಶಾಸನಸಭೆಯ ಪ್ರತಿನಿಧಿಗಳು, ಅರ್ಥಾತ್ ಶಾಸಕರು. ಆದರೆ, ವಿಧಾನಸಭೆಯ ವ್ಯಾಪ್ತಿಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದರನ್ನು ಯಾವೊಬ್ಬ ಶಾಸಕರೂ ವಿಧಾನಸಭೆಯೊಳಗೆ ಪ್ರಶ್ನಿಸಿ ಆಕ್ಷೇಪಿಸಿಲ್ಲ.

ಸ್ಪೀಕರ್ ಅವರು ಇಂತಹ ನಿರ್ಣಯ ಕೈಗೊಂಡಾಗ ಅದು ಪ್ರತಿಪಕ್ಷದವರಿಗೆ ಸರ್ಕಾರದ ವಿರುದ್ಧ ಪ್ರಯೋಗಿಸಲು ಅತಿ ಶಕ್ತಿಶಾಲಿ ಅಸ್ತ್ರವನ್ನು ಒದಗಿಸಿದಂತೆ. ಪ್ರಸ್ತುತ ಅಧಿವೇಶನ ನಡೆಯುತ್ತಿರುವುದರಿಂದ ವಿಧಾನಸಭೆಯೊಳಗೆ ಅದನ್ನು ಪ್ರಶ್ನಿಸಿ ಸಮಸ್ಯೆ ಸರಿಪಡಿಸುವಂತೆ ಸ್ಪೀಕರ್ ಮತ್ತು ಸರ್ಕಾರವನ್ನು ಒತ್ತಾಯಿಸುವ ಎಲ್ಲಾ ಅವಕಾಶ ಮತ್ತು ಅಧಿಕಾರ ಪ್ರತಿಪಕ್ಷಗಳಿಗೆ ಇದೆ. ಆದರೆ, ಪ್ರತಿಪಕ್ಷ ನಾಯಕರಾದಿಯಾಗಿ ಎಎಲ್ಲರೂ ವಿಧಾನಸಭೆಯ ಹೊರಗೆ, ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಶ್ನಿಸಿ, ಆಕ್ಷೇಪಿಸುತ್ತಿದ್ದಾರೆಯೇ ಹೊರತು ಯಾರೊಬ್ಬರೂ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತಿಲ್ಲ.

ಇನ್ನು ಪ್ರಸ್ತುತ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿರುವುದು ಸಂವಿಧಾನದ ಬಗ್ಗೆ. ಸಂವಿಧಾನದ ಬುನಾದಿ ಮೇಲೆ ನಿಂತಿರುವ ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳನ್ನು ನಾಲ್ಕನೇ ಅಂಗ ಎಂದು ಹೇಳಲಾಗುತ್ತದೆ. ಈ ನಾಲ್ಕನೇ ಅಂಗವನ್ನೇ ನಿರ್ಬಂಧಿಸುವಂತಹ ನಿರ್ಧಾರವನ್ನು ಸ್ಪೀಕರ್ ಕೈಗೊಂಡಾಗ ಪ್ರತಿಪಕ್ಷಗಳು ಮಾಧ್ಯಮ ನಿರ್ಬಂಧವನ್ನು ಸಂವಿಧಾನದ ಚರ್ಚೆ ವೇಳೆ ಪ್ರಸ್ತಾಪಿಸಲು ಅವಕಾಶವಿತ್ತು. ಮಾಧ್ಯಮಗಳನ್ನು ನಿರ್ಬಂಧಿಸಿ ಸಂವಿಧಾನದ ಮೇಲೆ ಯಾವ ರೀತಿ ಚರ್ಚೆ ನಡೆಸಲು ಸಾಧ್ಯ ಎಂದು ಪ್ರಶ್ನಿಸಬಹುದಿತ್ತು. ಆದರೆ, ಅಲ್ಲೂ ಪ್ರತಿಪಕ್ಷಗಳು ವಿಫಲವಾಗಿವೆ. ಅಂದರೆ, ಒಟ್ಟಾರೆಯಾಗಿ ಆಡಳಿತ ಪಕ್ಷವಾಗಲಿ, ಪ್ರತಿಪಕ್ಷವಾಗಲಿ, ಅವರು ಹೇಳಿದಂತೆ ನಡೆದುಕೊಳ್ಳುವ ಮಾಧ್ಯಮಗಳು ಮಾತ್ರ ಬೇಕಾಗಿದೆಯೇ?

ಬೇಡದ ಹುದ್ದೆ ತ್ಯಜಿಸಲು ಈ ರೀತಿ ಮಾಡುತ್ತಿದ್ದಾರೆಯೇ?

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸ್ಪೀಕರ್ ಆಗುವುದು ಯಾವುದೇ ಕಾರಣಕ್ಕೂ ಬೇಕಾಗಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅದರಲ್ಲೊಂದು ಸಚಿವ ಸ್ಥಾನ ಪಡೆದರೆ ಸಾಕು ಎನ್ನುವಂತಿದ್ದರು. ಆದರೆ, ಅವರ ಆಸೆಗೆ ವಿರುದ್ಧವಾಗಿ ಬಿಜೆಪಿ ಅವರನ್ನು ಸ್ಪೀಕರ್ ಸ್ಥಾನದಲ್ಲಿ ಕುಳ್ಳಿರಿಸಿತು. ಹೀಗೆ ಅನಿವಾರ್ಯವಾಗಿ ಅಲಂಕರಿಸಿದ ಸ್ಪೀಕರ್ ಸ್ಥಾನದಿಂದ ಮುಕ್ತಿ ಪಡೆದು ಸಚಿವ ಸ್ಥಾನ ಪಡೆಯಬೇಕು ಎಂಬ ಕಾರಣಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ರೀತಿ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎದುರಾಗುತ್ತಿದೆ.

ಏಕೆಂದರೆ, ಮಾಧ್ಯಮ ನಿರ್ಬಂಧ ಕುರಿತಂತೆ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಆಕ್ಷಪ ವ್ಯಕ್ತಪಡಿಸಿ ಇಂತಹ ನಿರ್ಬಂಧ ವಿಧಿಸುವುದು ಸರಿಯಲ್ಲ. ಇದರಿಂದ ಪಾರದರ್ಶಕ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಆದ್ದರಿಂದ ಈ ನಿರ್ಬಂಧ ವಾಪಸ್ ಪಡೆಯಿರಿ ಎಂದು ಕೋರಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷ ನಾಯಕರು, ಶಾಸಕರು ಕೂಡ ಸ್ಪೀಕರ್ ಅವರ ಮುಂದೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಅದಕ್ಕೆ ಸೊಪ್ಪು ಹಾಕದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಾರೆಯೇ ವಿನಃ ಸಡಿಲಗೊಳಿಸುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಸ್ಪೀಕರ್ ಅವರ ಆಸಕ್ತಿಯಂತೆ ವಿಧಾನಸಭೆಯಲ್ಲಿ ನಡೆಯುತ್ತಿರುವ ಸಂವಿಧಾನ ಕುರಿತ ಚರ್ಚೆ ತನ್ನ ಮೂಲ ಆಶಯಕ್ಕೇ ಕೊಡಲಿ ಪೆಟ್ಟು ಹಾಕಿದಂತಾಗುತ್ತಿದೆ.

Click here Support Free Press and Independent Journalism

Pratidhvani
www.pratidhvani.com