ಸಾಧನೆಯ ಹಾದಿಯಲ್ಲಿ  ಕೊಡಗಿನ  ಬಹುಮುಖ ಪ್ರತಿಭೆ  ಮಿಲನ ಭರತ್‌
ರಾಜ್ಯ

ಸಾಧನೆಯ ಹಾದಿಯಲ್ಲಿ ಕೊಡಗಿನ ಬಹುಮುಖ ಪ್ರತಿಭೆ ಮಿಲನ ಭರತ್‌

ಸರ್ಕಾರಿ ಕೆಲಸ ಸಿಕ್ಕರೆ ಸಾಕು ಹುಟ್ಟಿದ್ದಕ್ಕೂ ಜೀವನ ಸಾರ್ಥಕವಾದಂತೆ, ಪೂರ್ಣವಾದಂತೆ ಎನ್ನುವವರ ಮಧ್ಯೆಯಲ್ಲಿ ಮಿಲನ ಕೆ ಭರತ್‌ ಅವರ ಕರ್ತವ್ಯವು ಅವರ ಬದುಕಿನ ಸಾಕ್ಷಿಪ್ರಜ್ಞೆ ಎನ್ನಬಹುದು. ಅದರಲ್ಲೂ ಸರ್ಕಾರಿ ಕೆಲಸ, ಅದರಲ್ಲಿ ಸಿಗುವ ರಜೆಗಳನ್ನು ಆನುಭವಿಸಿಕೊಂಡು ಅಧಿಕಾರದ ದರ್ಪದೊಂದಿಗೆ ಕಾಲ ಕಳೆಯುವ ಅನೇಕರ ಮಧ್ಯದಲ್ಲಿ ಅಪರೂಪದ ವ್ಯಕ್ತಿತ್ವದ ಕೆಲವರು ನಮ್ಮ ಮಧ್ಯದಲ್ಲಿದ್ದಾರೆ. 

ಕೋವರ್ ಕೊಲ್ಲಿ ಇಂದ್ರೇಶ್

ರಾಜ್ಯದಲ್ಲಿ ವಿಶಿಷ್ಟ ಸಂಸ್ಕೃತಿ ಹೊಂದಿರುವ ಪುಟ್ಟ ಜಿಲ್ಲೆ ಕೊಡಗು. ಕೊಡಗು ಶೌರ್ಯ ಸಾಹಸಕ್ಕೆ ಎಷ್ಟು ಹೆಸರುವಾಸಿ ಅಗಿದೆಯೋ ಕ್ರೀಡಾ ರಂಗದಲ್ಲೂ ತನ್ನದೇ ಅದ ಕೊಡುಗೆ ನೀಡಿದೆ ಅಷ್ಟೇ ಅಲ್ಲ ವಿವಿಧ ರಂಗಗಳಲ್ಲಿ ಕೊಡಗಿನ ಪ್ರತಿಭೆಗಳು ತಮ್ಮ ಹಿರಿಮೆಯನ್ನು ಸಾಕಷ್ಟು ಬಾರಿ ಪ್ರದರ್ಶಿಸಿದ್ದಾರೆ. ಕೊಡಗು ಹಲವು ಬುಡಕಟ್ಟು ಜನಾಂಗಗಳಿರುವ ಜಿಲ್ಲೆ. ಇಲ್ಲಿ ಪ್ರಮುಖವಾಗಿ ಮೂಲನಿವಾಸಿಗಳಾದ ಕೊಡವ ಮತ್ತು ಗೌಡ ಜನಾಂಗದ ಸಂಸ್ಕೃತಿ ಮತ್ತು ಪರಂಪರೆ ಎದ್ದು ಕಾಣುತ್ತಿದೆ. ನಮ್ಮ ಯುವ ಜನಾಂಗ ಆಧುನೀಕತೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಈ ಸಂಧರ್ಭದಲ್ಲಿ ನಮ್ಮ ಶ್ರೀಮಂತ ಕಲೆ ಮತ್ತು ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ಮಿಲನಾ ಭರತ್‌ ಅವರು.

ರಾಜ್ಯದ ಎಷ್ಟೋ ಸಮುದಾಯಗಳಿಗೆ ಈಗಲೂ ಮಾತನಾಡಲು ಸರಿಯಾದ ಭಾಷೆ ಇಲ್ಲ. ಹೀಗಾಗಿ, ಸಂಸ್ಕೃತಿ-ಭಾಷೆಗಳು ಅವಸಾನ ಕಂಡಿವೆ. ಆದ್ರೆ, ಇಂಥ ಶ್ರೀಮಂತ ಸಂಸ್ಕೃತಿ ಮರೆಯಾಗಬಾರದು ಅಂತ ಕೊಡಗಿನ ಮಹಿಳೆಯೊಬ್ಬರು ಪಣತೊಟ್ಟಿದ್ದಾರೆ. ಕೊಡಗು ಜಿಲ್ಲೆಯ ಭಾಗಮಂಡಲದ ಮಿಲನ ಭರತ್, ಮೀನುಗಾರಿಕೆ ವಿಷಯದಲ್ಲಿ ಪದವಿ ಮತ್ತು ಮಾರುಕಟ್ಟೆ ನಿರ್ವಹಣೆ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಶ್ರೇಯಾಂಕ ಗಳಿಸಿದ್ದಾರೆ. ಪ್ರಸ್ತುತ ಸೋಮವಾರಪೇಟೆ ತಾಲೂಕಿನ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಸರ್ಕಾರಿ ಅಧಿಕಾರಿಯಾಗಿದ್ದರೂ ರಜೆ ದಿನಗಳಲ್ಲಿ ತಮ್ಮ ಗೌಡ ಸಮುದಾಯದ ಅರೆ ಭಾಷೆ ಸಂಸ್ಕೃತಿ ಉಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಂಡಲ ಗ್ರಾಮದಲ್ಲಿ ಕಳೆದ 14 ವರ್ಷಗಳಿಂದ `ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್’ ಅಡಿಯಲ್ಲಿ `ನಾಟ್ಯ ಮಿಲನ ನೃತ್ಯ ಶಾಲೆ’ ಮೂಲಕ ಉಚಿತ ನೃತ್ಯ ತರಬೇತಿ ನೀಡುತ್ತಾ ಇದ್ದಾರೆ.

ಸಾಧನೆಯ ಹಾದಿಯಲ್ಲಿ  ಕೊಡಗಿನ  ಬಹುಮುಖ ಪ್ರತಿಭೆ  ಮಿಲನ ಭರತ್‌

ಗೌಡರ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ಹುತ್ತರಿ ಕೋಲು, ಸುಗ್ಗಿ ಕುಣಿತ, ಭೂತಕೋಲ, ಆಟಿ ಕಳಂಜ, ಜೋಗಿ ಕುಣಿತ, ಸೋಬಾನೆ ಪದ ಇವುಗಳನ್ನು ಪ್ರದರ್ಶನ ಕಲೆಯಾಗಿ ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. “ಅರೆ ಭಾಷೆ ಗೌಡರ ಸಿರಿ ಸಂಸ್ಕೃತಿ” ಎಂಬ ಹೆಸರಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇವರ ತಂಡ ಪ್ರದರ್ಶನ ನೀಡಿದೆ. ನೃತ್ಯ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳ ವೇಷ ಭೂಷಣ, ಕಾರ್ಯಕ್ರಮ ನೀಡುವ ಪ್ರಯಾಣದ ವೆಚ್ಚ ಎಲ್ಲವನ್ನೂ ಟ್ರಸ್ಟ್ ಮೂಲಕ ಭರಿಸಲಾಗ್ತಿದೆ. ಇನ್ನು ಸಾಹಿತ್ಯದತ್ತ ಒಲವು ಹೊಂದಿರೋ ಮಿಲನ ಅವರು ಭಾವಲಹರಿ ಮತ್ತು ಮೌನ ಮುರಿಯೋ ಸಮಯ ಅನ್ನೋ ಕವನ ಸಂಕಲನ ಹಾಗೂ “ಕೊಡಗಿನಲ್ಲಿ ಐನ್ ಮನೆಗಳು” ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಬಹುಶಃ ತಮಗೆ ದೊರೆಯುವ ಪ್ರತಿ ನಿಮಿಷವನ್ನೂ ಸಾರ್ಥಕವಾಗಿ ಬಳಸಿಕೊಳ್ಳುತ್ತಿರುವ ಮಿಲನ ಅವರು ಸಮಯದ ಮಿತಿಯಲ್ಲಿ ಸ್ವಯಂ ಸ್ಫೂರ್ತಿಯಿಂದ ನಿಶ್ಯಬ್ದವಾಗಿ ಸೇವೆ ಸಲ್ಲಿಸುತ್ತಿರುವ ಸಾಂಸ್ಕೃತಿಕ ರಾಯಭಾರಿಯೂ ಆಗಿದ್ದಾರೆ. ಮಿಲನ ಕೆ ಭರತ್‌ ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರ್ಕಾರಿ ಕೆಲಸ ಸಿಕ್ಕರೆ ಸಾಕು ಹುಟ್ಟಿದ್ದಕ್ಕೂ ಜೀವನ ಸಾರ್ಥಕವಾದಂತೆ, ಪೂರ್ಣವಾದಂತೆ ಎನ್ನುವವರ ಮಧ್ಯೆಯಲ್ಲಿ ಮಿಲನ ಕೆ ಭರತ್‌ ಅವರ ಕರ್ತವ್ಯವು ಅವರ ಬದುಕಿನ ಸಾಕ್ಷಿಪ್ರಜ್ಞೆ ಎನ್ನಬಹುದು. ಅದರಲ್ಲೂ ಸರ್ಕಾರಿ ಕೆಲಸ, ಅದರಲ್ಲಿ ಸಿಗುವ ರಜೆಗಳನ್ನು ಆನುಭವಿಸಿಕೊಂಡು ಅಧಿಕಾರದ ದರ್ಪದೊಂದಿಗೆ ಕಾಲ ಕಳೆಯುವ ಅನೇಕರ ಮಧ್ಯದಲ್ಲಿ ಅಪರೂಪದ ವ್ಯಕ್ತಿತ್ವದ ಕೆಲವರು ನಮ್ಮ ಮಧ್ಯದಲ್ಲಿದ್ದಾರೆ.

ಸರ್ಕಾರಿ ಸೇವೆಯನ್ನು ಜನಸೇವೆ ಮಾಡಲು ಸಿಕ್ಕಿರುವ ಸಮಾನ ಅವಕಾಶವೆಂದು ವೃತ್ತಿಯೊಂದಿಗೆ ಸಾಂಸ್ಕೃತಿಕ ಪ್ರವೃತ್ತಿಯನ್ನು ಜೋಡಿಸಿಕೊಂಡು ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಮಿಲನ ಅವರು ಕೊಡಗಿನ ಭಾಗದಲ್ಲಿನ ಯುವ ಚೇತನಗಳಿಗೆ ಸಾಂಸ್ಕತಿಕ ಪ್ರತಿಭೆಯನ್ನು ಧಾರೆ ಎರೆಯುತ್ತಾ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಸಮಯವನ್ನು ವ್ಯರ್ಥ ಮಾಡದೆ ಅವಕಾಶಗಳಿಗೆ ಸೆಣಸಾಡಬೇಕು ಎನ್ನುವ ರವೀಂದ್ರರ ಮಾತಿನಲ್ಲಿ ಬಹುಶಃ ನಂಬಿಕೆಯಿಟ್ಟವರು ಮಿಲನ.

ತರಬೇತಿ ಪಡೆದವರಿಂದ ರಾಜ್ಯದ ಮೂಲ ಮೂಲೆಗಳಲ್ಲಿ ಪ್ರದರ್ಶನ ನೀಡಿ ಕಲಾಸಕ್ತರಿಗೆ ಉತ್ತೇಜನ ನೀಡುತ್ತಿದ್ದಾರೆ. ಸರ್ಕಾರದ ಯಾವುದೇ ಸಹಾಯಧನವನ್ನು ಪಡೆಯದೆ ತಮ್ಮ ತಿಂಗಳ ಸಂಬಳದಲ್ಲಿ ಶೇ.30%ರಷ್ಟುಹಣವನ್ನು ತಮ್ಮ ಟ್ರಸ್ಟಿನ ಖಾತೆಗೆ ಸೇರಿಸಿ ಸ್ವಾವಲಂಭಿ ತರಬೇತಿ ಕೇಂದ್ರವಾಗಿಸಿದ್ದಾರೆ. ಸಾಹಿತ್ಯಕ್ಕೂ ಸಾಕಷ್ಟು ಕೊಡುಗೆ ನೀಡುತ್ತಿರುವ ಇವರನ್ನು ಪ್ರೇಮಕವಿ ಹೃದಯಿ ಎನ್ನುವುದುಂಟು.

ಮಿಲನ ಕೆ ಭರತ್‌ ʼಈ ಟಿವಿʼ ವಾಹಿನಿ ಕೊಡಗಿನ ಪ್ರತಿನಿಧಿಯೆನ್ನಿಸಿಕೊಂಡು ʼಪಬ್ಲಿಕ್‌ ಟಿವಿʼಯ ಪಬ್ಲಿಕ್‌ ಹೀರೋ , ಮಹಿಳಾ ಸಾಧಕಿ, ನೃತ್ಯ ಸರಸ್ವತಿ, ಕಿರುತೆರೆಯ ಮಿಸ್‌ ಟ್ಯಾಲೆಂಟ್‌ ಮತ್ತು ಮಿಸ್‌ ವಿವೆಲ್‌ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದರೂ ಕೂಡ ಬಿಗುಮಾನವಿಲ್ಲದೆ ನಾಡು ನುಡಿ, ಕಲೆ ಸಂಸ್ಕೃತಿ, ಸಾಹಿತ್ಯ ಆರಾಧಕಿಯಾಗಿದ್ದಾರೆ. ಇವರ ಪ್ರತಿಭೆಯಿಂದಲೇ ಇವರ ಮನೆಯು ನೂರಾರು ಪ್ರಶಸ್ತಿಗಳಿಂದ ತುಂಬಿ ತುಳುಕಾಡುತ್ತಿದೆ. . ಅನೇಕ ರಾಜ್ಯ ಮಟ್ಟದ ನೃತ್ಯ ಸ್ಪರ್ದೆಗಳಲ್ಲಿ ಈಗಲೂ ಭಾಗವಹಿಸುತ್ತಿರುವ ಮಿಲನ ಅವರು ಸರ್ಕಾರಿ ಅಧಿಕಾರಿಯಾಗಿಯೂ ಸಮರ್ಥ ಸೇವೆ, ಗೃಹಿಣಿಯಾಗಿಯೂ ಸಾರ್ಥಕ ಸೇವೆ ಹಾಗೂ ನೃತ್ಯ ಗುರು ಮತ್ತು ಸಾಹಿತಿ ಆಗಿಯೂ ಅನುಪಮ ಸೇವೆ ಮಾಡುತ್ತಿದ್ದಾರೆ. ಇವರ ಜೀವನಗಾಥೆ ನಮ್ಮ ಯುವಜನಾಂಗಕ್ಕೆ ನಿಜಕ್ಕೂ ಪ್ರೇರಣೆ, ಸ್ಪೂರ್ತಿ ಆಗುತ್ತದೆ. ಇಂಥಹ ಸಮಾಜಮುಖಿ ಪ್ರತಿಭೆಗಳು ನಮ್ಮ ಸರ್ವಕಾಲಿಕ ಅಗತ್ಯ.

Click here Support Free Press and Independent Journalism

Pratidhvani
www.pratidhvani.com