ಮಂಕಿ ಪಾರ್ಕ್: ಅಸ್ಪಷ್ಟ ಯೋಜನೆಗೆ ಇನ್ನಾದರೂ ಸಿಕ್ಕೀತೆ ನಿಖರ ತಳಹದಿ?
ರಾಜ್ಯ

ಮಂಕಿ ಪಾರ್ಕ್: ಅಸ್ಪಷ್ಟ ಯೋಜನೆಗೆ ಇನ್ನಾದರೂ ಸಿಕ್ಕೀತೆ ನಿಖರ ತಳಹದಿ?

ಶಾಶ್ವತವಾಗಿ ಮಲೆನಾಡಿಗರನ್ನು ವಾನರ ಉಪಟಳದಿಂದ ಪಾರು ಮಾಡಬಲ್ಲ ಕ್ರಮಗಳ ಅಗತ್ಯವಿದೆ. ಆದರೆ ಆ ಇಡೀ ಯೋಜನೆಯ ಪ್ರಸ್ತಾವನೆಗಳಲ್ಲಿ ಅಂತಹ ಶಾಶ್ವತ ಕ್ರಮಗಳ ಬಗ್ಗೆ ಯಾವುದೇ ಪ್ರಸ್ತಾಪವೇ ಇಲ್ಲದಿರುವುದು ವಿಚಿತ್ರ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಸುಮಾರು ಒಂದು ದಶಕದಿಂದ ಮಲೆನಾಡಿನ ಕೃಷಿ ಮತ್ತು ಜನಾರೋಗ್ಯಕ್ಕೆ ದೊಡ್ಡ ಆತಂಕ ಒಡ್ಡಿರುವ ಕೆಂಪು ಮೂತಿ ಮಂಗಗಳ ಹಾವಳಿ ನಿಯಂತ್ರಣಕ್ಕೆ ಗಮನ ಕೊಟ್ಟಿರುವ ರಾಜ್ಯ ಬಿಜೆಪಿ ಸರ್ಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ‘ಮಂಕಿ ಪಾರ್ಕ್’ ಸ್ಥಾಪನೆಗೆ ಬಜೆಟ್ ನಲ್ಲಿ 1.25 ಕೋಟಿ ರೂಪಾಯಿ ಅನುದಾನ ಘೋಷಿಸಿದೆ.

ಒಂದು ಕಡೆ ಬೆಳೆ ಹಾನಿ, ಉಪಟಳದ ಮೂಲಕ ವಾರ್ಷಿಕ ಹತ್ತಾರು ಕೋಟಿ ಮೌಲ್ಯದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನಷ್ಟ ಹಾಗೂ ಮತ್ತೊಂದು ಕಡೆ ಮಾರಕ ಮಂಗನ ಕಾಯಿಲೆ ಹರಡುವ ಮೂಲಕ ಪ್ರತಿ ವರ್ಷ ಹತ್ತಾರು ಸಾವುಗಳಿಗೆ ಕಾರಣವಾಗುತ್ತಿರುವ ಮಂಗಗಳು ಕಳೆದ ಕೆಲವು ವರ್ಷಗಳಿಂದ ಮಲೆನಾಡಿಗರ ಪಾಲಿಗೆ ದೊಡ್ಡ ಪಿಡುಗಾಗಿ ಪರಿಣಮಿಸಿವೆ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಜನರ ಪಾಲಿಗೆ ಬಗೆಹರಿಯದ ತಲೆನೋವಾಗಿವೆ.

ಆ ಹಿನ್ನೆಲೆಯಲ್ಲೇ ಕಳೆದ ಎರಡು ಮೂರು ವರ್ಷಗಳಿಂದ ಮಂಗನ ಪಿಡುಗು ನಿವಾರಣೆಗಾಗಿ ಮಲೆನಾಡಿಗರು ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಹಲವು ಪ್ರತಿಭಟನೆ, ಧರಣಿ, ಪಾದಯಾತ್ರೆಗಳೂ ನಡೆದಿದ್ದವು. ಮಂಗನ ನಿಯಂತ್ರಣ, ಸ್ಥಳಾಂತರದ ಬೇಡಿಕೆಗಳು ಕೇಳಿಬಂದಿದ್ದವು. ಸ್ವತಃ ಕಾಡಿನಲ್ಲಿ ಇರುವ ಮಂಗಗಳ ಜೊತೆಗೆ ಇತರೆ ಅಕ್ಕಪಕ್ಕದ ಪೇಟೆ-ಪಟ್ಟಣಗಳ ಮಂಗಗಳನ್ನು ಕೂಡ ಕಾಡಂಚಿನ ಗ್ರಾಮಗಳಿಗೆ ತಂದು ಬಿಡಲಾಗುತ್ತಿದೆ. ಆ ಕಾರಣದಿಂದಾಗಿಯೇ ಮಲೆನಾಡಿನ ಮೂಲನಿವಾಸಿ ಮಂಗಗಳಿಗಿಂತ ಜನರನ್ನು ಕಂಡರೆ ಕಿಂಚಿತ್ತೂ ಭಯವಿಲ್ಲದ ವಲಸೆ ಮಂಗಗಳೇ ಉಪದ್ರವಿಗಳಾಗಿ ತಮ್ಮನ್ನು ಕಾಡುತ್ತಿವೆ ಎಂಬ ದೂರುಗಳೂ ಜನರಿಂದ ಕೇಳಿಬಂದಿದ್ದವು.

ಆ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದಲೇ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ಹಲವು ಸಮಾಲೋಚನಾ ಸಭೆಗಳೂ ನಡೆದಿದ್ದವು. ಸ್ವತಃ ಬಿ ವೈ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಲೇ ವಿಶೇಷವಾಗಿ ಅವರ ಗಮನ ಸೆಳೆದು, ಹಿಮಾಚಲಪ್ರದೇಶದ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ಒಂದು ಮಂಕಿ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಕಾಡಂಚಿನ ಪ್ರದೇಶದ ಮಂಗಗಳನ್ನು ಸೆರೆಹಿಡಿದು ಪಾರ್ಕ್ ನಲ್ಲಿ ಬಿಟ್ಟು, ವಾನರ ಉಪಟಳ ತಪ್ಪಿಸಬಹುದು ಎಂಬ ಪ್ರಸ್ತಾವನೆ ಕೂಡ ಮಂಡಿಸಲಾಗಿತ್ತು.

ಈ ಬಗ್ಗೆ ಆಸಕ್ತಿ ವಹಿಸಿದ್ದ ಜಿಲ್ಲೆಯ ಹೊಸನಗರದ ‘ಶೋಧ’ ಎಂಬ ಸ್ವಯಂಸೇವಾ ಸಂಸ್ಥೆ, ಹಿಮಾಚಲ ಪ್ರದೇಶದ ಮಂಕಿ ಪಾರ್ಕ್ ಪ್ರಯೋಗವನ್ನು ಅಧ್ಯಯನ ನಡೆಸಿ ಸರ್ಕಾರಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಿ, ‘ಪ್ರಾಯೋಗಿಕವಾಗಿ ತಾಲೂಕಿನ ನಿಟ್ಟೂರು ಬಳಿ 150 ಎಕರೆ ಕಂದಾಯ ಭೂಮಿಯಲ್ಲಿ ಪಾರ್ಕ್ ನಿರ್ಮಾಣ ಮಾಡಿ, ಸುತ್ತಮುತ್ತಲ ಪ್ರದೇಶದ ಕಾಡಂಚಿನ ಮಂಗಗಳನ್ನು ಹಿಡಿದು ಅಲ್ಲಿ ಬಿಡಬಹುದು. ಜೊತೆಗೆ, ಶೇ.50ರಷ್ಟು ಮಂಗಗಳಿಗೆ ಸಂತಾನಹರಣ ಮಾಡಿದರೆ ಪರಿಣಾಮಕಾರಿಯಾಗಿ ಮಂಗಗಳ ಸಂತತಿ ನಿಯಂತ್ರಣ ಕೂಡ ಸಾಧ್ಯ. ಆ ಮೂಲಕ ಮಲೆನಾಡಿಗರನ್ನು ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಹೇಳಿತ್ತು.

ಈ ನಡುವೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಕೂಡ ಮಂಕಿ ಪಾರ್ಕ್ ನಿರ್ಮಾಣದ ಕುರಿತು ತನ್ನದೇ ಆದ ಒಂದು ಪ್ರಾಥಮಿಕ ವರದಿಯನ್ನೂ ನೀಡಿತ್ತು. ಆ ವರದಿಯ ಪ್ರಕಾರ, ಮಂಗಗಳ ಉಪಟಳ ತಡೆಗೆ ಪ್ರಮುಖವಾಗಿ ಲಿಂಗನಮಕ್ಕಿ ಜಲಾಶಯದ ಹಿನ್ನೀರು ದ್ವೀಪಗಳಲ್ಲಿ ಪಾರ್ಕ್ ನಿರ್ಮಾಣ ಮಾಡುವುದು ಹೆಚ್ಚು ಪ್ರಯೋಜನಕಾರಿ. ಅದರಿಂದಾಗಿ ಮಂಗಗಳ ನಿಯಂತ್ರಣ ಮತ್ತು ಅವುಗಳಿಂದ ಹರಡುವ ಕಾಯಿಲೆಗಳ ನಿಯಂತ್ರಣ ಕೂಡ ಸಾಧ್ಯವಿದೆ. ಪಾರ್ಕಿನ ಒಳಗೆ ಸಂತಾನಹರಣ ಕೇಂದ್ರ ಸ್ಥಾಪನೆ, ಅವುಗಳಿಗೆ ಆಹಾರ, ದ್ವೀಪಕ್ಕೆ ಹೋಗಿಬರಲು ಬೋಟ್ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನು ಪ್ರಸ್ತಾಪಿಸಿ ವಿವರ ವರದಿ ನೀಡಲಾಗಿತ್ತು.

ಈ ನಡುವೆ, ಜಿಲ್ಲಾಡಳಿತ ಕೂಡ ಪ್ರತ್ಯೇಕವಾಗಿ ಮಂಕಿ ಪಾರ್ಕ್ ನಿರ್ಮಾಣಕ್ಕೆ ಪೂರ್ವತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಇದೀಗ ಅನುದಾನವನ್ನು ಬಳಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.

ಆದರೆ, ಅನುದಾನ ಘೋಷಣೆಯಾಗಿದ್ದರೂ, ಮಂಕಿ ಪಾರ್ಕ್ ನಿರ್ಮಾಣದ ಜಾಗದ ವಿಷಯದಲ್ಲಿ ಇನ್ನೂ ಸ್ವಯಂ ಸೇವಾ ಸಂಸ್ಥೆಗಳು, ಜಿಲ್ಲಾಡಳಿತ, ಅರಣ್ಯ ಇಲಾಖೆಗಳ ನಡುವೆ ಸಹಮತ ಮೂಡಿಲ್ಲ.

ಸ್ವಯಂ ಸೇವಾ ಸಂಸ್ಥೆ ನಿಟ್ಟೂರು ಬಳಿಯ ಕಂದಾಯ ಭೂಮಿಯಲ್ಲೇ ಪಾರ್ಕ್ ನಿರ್ಮಾಣವಾಗಬೇಕು ಎಂಬ ಅಭಿಪ್ರಾಯಕ್ಕೆ ಅಂಟಿಕೊಂಡಿದ್ದು, ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಶೋಧ ಸಂಸ್ಥೆಯ ಪುರುಷೋತ್ತಮ್ “ಹಿನ್ನೀರು ದ್ವೀಪ ಪ್ರದೇಶದಲ್ಲಿ ಪಾರ್ಕ್ ನಿರ್ಮಿಸಿದರೆ ಅಲ್ಲಿ ಮಳೆಗಾಲದಲ್ಲಿ ನೀರು ದಾಟಿ ಹೋಗಿಬರುವುದು ದುಃಸಾಧ್ಯ. ಬೇಸಿಗೆಯಲ್ಲಿ ನೀರು ಬತ್ತಿದಾಗ ಮಂಗಗಳಿಗೇ ನೀರಿನ ಹಾಹಾಕಾರವಾಗಬಹುದು. ಇನ್ನು ದೊಡ್ಡ ಸಂಖ್ಯೆಯ ಮಂಗಗಳಿಗೆ ಅಗತ್ಯ ಅಪಾರ ಪ್ರಮಾಣದ ಆಹಾರದ ಕೊರತೆಯೂ ಉಂಟಾಗಲಿದೆ. ಹಾಗಾಗಿ ಅದು ಕಾರ್ಯಸಾಧುವಲ್ಲ. ಬದಲಾಗಿ ನಿಟ್ಟೂರು ಬಳಿ ಸುಮಾರು ನಾಲ್ಕು ಸಾವಿರ ಎಕರೆ ಕಂದಾಯ ಭೂಮಿ ಲಭ್ಯವಿದ್ದು, ಅದರಲ್ಲಿ 150 ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಿಸುವುದು ಎಲ್ಲಾ ರೀತಿಯಲ್ಲೂ ಅನುಕೂಲಕರ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಈ ಪ್ರಸ್ತಾಪದ ಬಗ್ಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಈವರೆಗೆ ಸಮ್ಮತಿ ಸೂಚಿಸಿಲ್ಲ. ಅರಣ್ಯ ಇಲಾಖೆ ಶರಾವತಿ ಹಿನ್ನೀರು ಪ್ರದೇಶದಲ್ಲಿ ಪಾರ್ಕ್ ಸ್ಥಾಪನೆ ಮತ್ತು ಸಂತಾನಹರಣ ಕೇಂದ್ರ ಸ್ಥಾಪನೆಯ ಬಗ್ಗೆ ಆಸಕ್ತಿ ವಹಿಸಿದ್ದರೆ, ಜಿಲ್ಲಾಡಳಿತದ ಮುಂದೆ ಈವರೆಗೆ ಸ್ಪಷ್ಟ ಯೋಜನೆಯೇ ಇಲ್ಲ!

ಹಾಗೆ ನೋಡಿದರೆ, ಇಡೀ ಪ್ರಸ್ತಾವನೆ ಮತ್ತು ಅನುದಾನ ಘೋಷಣೆಯ ಹಿಂದೆ ಯಾವುದೇ ಸ್ಪಷ್ಟ ವೈಜ್ಞಾನಿಕ ಅಧ್ಯಯನವಾಗಲೀ, ಯಾವುದೇ ನಿರ್ದಿಷ್ಟ ಸಂಶೋಧನಾ ವರದಿಯ ತಳಹದಿಯಾಗಲೀ ಇಲ್ಲವೇ ಇಲ್ಲ. ಶೋಧ ಸಂಸ್ಥೆಯ ಪ್ರಸ್ತಾವನೆ ಕೂಡ ಯಾವುದೇ ಅಧ್ಯಯನ ವರದಿ ಅಥವಾ ಸಂಶೋಧಣೆಯನ್ನು ಆಧಾರವಾಗಿಟ್ಟುಕೊಂಡು ತಯಾರಿಸಿದ್ದಲ್ಲ. ಕೇವಲ ಸ್ಥಳೀಯ ಆಸಕ್ತರ ಅಭಿಪ್ರಾಯ, ಮಾಹಿತಿಗಳ ಮೇಲೆ ತಯಾರಿಸಲಾದ ಪ್ರಸ್ತಾವನೆ ಅಷ್ಟೇ. ಅರಣ್ಯ ಇಲಾಖೆ ಕೂಡ, ಮಲೆನಾಡಿನ ಮಂಗಗಳ ಸಂಖ್ಯೆ ಹೆಚ್ಚಳದ ಕಾರಣವೇನು, ಬೆಳೆ ಹಾನಿ ಮಾಡಲು ನಿಖರ ಕಾರಣವೇನು? ಹಾನಿಯಿಂದಾಗಿ ಆಗಿರುವ ನಷ್ಟವೆಷ್ಟು? ಕಳೆದ ವರ್ಷ ಸುಮಾರು 23 ಮಂದಿಯನ್ನು ಬಲಿತೆಗೆದುಕೊಂಡು ಭೀಕರ ಮಂಗನ ಕಾಯಿಲೆ(ಕೆಎಫ್ ಡಿ) ದಿಡೀರ್ ಉಲ್ಬಣಕ್ಕೆ ಕಾರಣವೇನು? ಮಂಗಗಳ ಹಾವಳಿ ನಿಯಂತ್ರಣಕ್ಕೆ ಇರುವ ವೈಜ್ಞಾನಿಕ ವಿಧಾನಗಳೇನು? ಮಲೆನಾಡಿನ ಯಾವ ಭಾಗದಲ್ಲಿ ಯಾವ ಕಾರಣಕ್ಕೆ ಮಂಗಗಳ ಹಾವಳಿ ಹೆಚ್ಚಾಗಿದೆ. ಕಾಡಿನಲ್ಲಿ ಅವುಗಳಿಗೆ ಅಗತ್ಯ ಆಹಾರ ಸಿಗುತ್ತಿಲ್ಲವೆ? ಅಥವಾ ಊರಿನ ಮಂಗಗಳು ಕಾಡಿಗೆ ಬಂದಿದ್ದರಿಂದ ಈ ಸಮಸ್ಯೆ ಉಲ್ಬಣವಾಗಿದೆಯೇ? ಮಂಕಿ ಪಾರ್ಕ್ ಮಾತ್ರವೇ ಪರಿಹಾರವೆ ಅಥವಾ ಸಂತಾನಹರಣ, ಸ್ಥಳಾಂತರದಂತಹ ಇತರ ಕ್ರಮಗಳು ಕಾರ್ಯಸಾಧುವೆ? ಮಂಕಿ ಪಾರ್ಕ್ ಅಂತಿಮವಾದರೆ, ಎಲ್ಲಿ ಮತ್ತು ಯಾವ ಸ್ವರೂಪದಲ್ಲಿ ಮಾಡಿದರೆ ಪ್ರಯೋಜನಕಾರಿ?

ಹೀಗೆ ಸಾಲು ಸಾಲು ಮೂಲಭೂತ ಪ್ರಶ್ನೆಗಳಿಗೆ ಯಾವುದೇ ಅಧ್ಯಯನ ಅಥವಾ ಸಂಶೋಧನೆಯ ಆಧಾರದ ಮೇಲೆ ಉತ್ತರ ಕಂಡುಕೊಳ್ಳುವ ಮೊದಲೇ ಅನುದಾನದ ಬೇಡಿಕೆ ಇಡಲಾಗಿದೆ ಮತ್ತು ಸರ್ಕಾರ ಅಂತಹ ಯಾವ ವಿಸ್ತೃತ, ವೈಜ್ಞಾನಿಕ ವರದಿಯ ಬೆಂಬಲವಿಲ್ಲದೆ ಅನುದಾನವನ್ನು ಘೋಷಿಸಿಯೂ ಆಗಿದೆ!

ಈ ನಡುವೆ, ಮಂಗಗಳ ಉಪಟಳ ನಿಯಂತ್ರಣಕ್ಕೆ ಸ್ವಯಂಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು ಪದೇಪದೇ ಪ್ರಸ್ತಾಪಿಸುತ್ತಿದ್ದ ಹಿಮಾಚಲ ಪ್ರದೇಶದ ಮಾದರಿ ಕೂಡ ಆರಂಭದಲ್ಲೇ ವಿಫಲವಾಗಿ ಅಲ್ಲಿನ ಸರ್ಕಾರ ಸಂತಾನಹರಣ ಮತ್ತು ಸಾಮೂಹಿಕ ನಾಶ(ಕಲ್ಲಿಂಗ್)ನಂತಹ ಪರ್ಯಾಯ ಕ್ರಮಗಳಿಗೆ ಮಾರುಹೋಗಿದೆ ಎಂಬ ಅಂಶವನ್ನು ಮುಚ್ಚಿಡುವ ಪ್ರಯತ್ನಗಳು ಕೂಡ ನಡೆದಿದ್ದವು.

ಆದರೆ, 2010ರ ಸುಮಾರಿಗೆ ಇದೇ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗಲೇ ಅಂದಿನ ಸಚಿವ ವಿ ಎಸ್ ಆಚಾರ್ಯ ಅವರ ಒತ್ತಾಸೆಯ ಮೇರೆಗೆ ಭಾರತೀಯ ಕಿಸಾನ್ ಸಂಘ ಮತ್ತು ಅರಣ್ಯ ಇಲಾಖೆಯ ಜಂಟಿ ನಿಯೋಗ ಹಿಮಾಚಲಪ್ರದೇಶಕ್ಕೆ ಭೇಟಿ ನೀಡಿ ಮಂಕಿ ಪಾರ್ಕ ಕುರಿತು ಅಧ್ಯಯನ ನಡೆಸಿತ್ತು. 2008ರಲ್ಲಿ ಆರಂಭವಾಗಿದ್ದ ಆ ಪಾರ್ಕ್ ಎರಡೇ ವರ್ಷದಲ್ಲಿ ವಿಫಲವಾಗಿದ್ದರಿಂದ ಅಲ್ಲಿನ ಸರ್ಕಾರ ಆ ಯೋಜನೆಯನ್ನೇ ಕೈಬಿಟ್ಟಿತ್ತು. ಹಾಗಾಗಿ ಅಪಾರ ಸಂಖ್ಯೆಯಲ್ಲಿರುವ ಮಲೆನಾಡಿನ ಮಂಗಗಳ ನಿಯಂತ್ರಣಕ್ಕೆ ಅಂತಹ ಸೀಮಿತ ಪ್ರಯತ್ನಗಳು ಫಲ ಕೊಡುವುದಿಲ್ಲ. ಅದಕ್ಕೆ ಬದಲಾಗಿ ಸಂತಾನ ಹರಣ ಮತ್ತು ಗುಂಪುಗುಂಪಾಗಿ ಹಿಡಿದು ಮಂಗಗಳ ಸಂತತಿ ವಿರಳವಿರುವ ಕಾಡಿಗೆ ಬಿಡುವುದು ಪರಿಣಾಮಕಾರಿಯಾಗಬಹುದು ಎಂದು ಆಗಲೇ 10 ಶಿಫಾರಸುಗಳನ್ನು ಒಳಗೊಂಡ ಸುಮಾರು 9 ಕೋಟಿ ವೆಚ್ಚದ ಯೋಜನಾ ವರದಿ ಸಲ್ಲಿಸಿದ್ದೆವು ಎಂದು ಉಡುಪಿಯ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಅವರ ಹೇಳಿಕೆ ಅಲ್ಲಿನ ವೈಫಲ್ಯಗಳನ್ನು ಬಯಲು ಮಾಡಿತ್ತು ಮತ್ತು ಹಲವು ಪತ್ರಿಕಾವರದಿಗಳು ಕೂಡ ಹಿಮಾಚಲಪ್ರದೇಶದ ಪ್ರಯೋಗದ ವೈಫಲ್ಯದ ಮೇಲೆ ಬೆಳಕು ಚೆಲ್ಲಿದ್ದವು.

ಈ ನಡುವೆ ಕೆಂಪು ಮೂತಿ ಕೋತಿಗಳ ಸಾಮಾನ್ಯ ಆವಾಸ ಸ್ಥಾನವಾದ ಎಲೆಯುದುರುವ ಕಾಡು ಕ್ರಮೇಣ ಕರಗಿದ್ದು, ಕಾಡಿನಲ್ಲಿ ಅವುಗಳ ಆಹಾರವಾಗಿದ್ದ ವಿವಿಧ ಹಣ್ಣು ಮತ್ತು ಕಾಯಿಯ ಮರಗಳು ಉರುವಲು, ನಾಟಾ, ಮತ್ತು ದನಕರುಗಳ ಮೇವಿನ ಉದ್ದೇಶಕ್ಕಾಗಿ ಬರಿದಾಗಿದ್ದು ಕೂಡ ಈ ಮಂಗಗಳು ನಾಡಿಗೆ ಲಗ್ಗೆ ಇಡಲು ಕಾರಣ. ಜೊತೆಗೆ ಚಿರತೆ, ಕಿರುಬ, ಸೀಳುನಾಯಿ ಮುಂತಾದ ಮಂಗಗಳ ಸಹಜ ಭೇಟೆ ಪ್ರಾಣಿಗಳ ಸಂಖ್ಯೆ ಕ್ಷೀಣಿಸಿರುವುದರಿಂದ ಕಾಡಿನಲ್ಲಿ ಅವುಗಳಿಗೆ ಸಹಜ ಭಕ್ಷಕಗಳೇ ಇಲ್ಲದಾಗಿದೆ. ಹಾಗಾಗಿ ಅವುಗಳ ಸಂತಾನಕ್ಕೆ ಯಾವುದೇ ನೈಸರ್ಗಿಕ ಹತೋಟಿ ಎಂಬುದೇ ಇಲ್ಲದೆ ಆಹಾರ ಸರಪಳಿಯ ವ್ಯತ್ಯಯ ಭಾರೀ ಸಂಖ್ಯೆಯ ಮಂಗಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿಯೂ ಅರಣ್ಯ ಇಲಾಖೆ ಯೋಚಿಸಿ, ತತಕ್ಷಣದ ನಿಯಂತ್ರಣ ಕ್ರಮಗಳ ಜೊತೆಗೆ ದೂರಗಾಮಿ ನೈಸರ್ಗಿಕ ಹತೋಟಿ ಕ್ರಮಗಳ ಪುನರುಜ್ಜೀವನಕ್ಕೂ ಪ್ರಯತ್ನ ನಡೆಸಬೇಕು. ಅದು ಮಾತ್ರ ಶಾಶ್ವತವಾಗಿ ಮಲೆನಾಡಿಗರನ್ನು ಈ ಉಪಟಳದಿಂದ ಪಾರುಮಾಡಬಲ್ಲದು. ಆದರೆ, ಮಂಗಗಳ ಹಾವಳಿ ನಿಯಂತ್ರಣದ ಈ ಇಡೀ ಯೋಜನೆಯಲ್ಲಿ ಅಂತಹ ಶಾಶ್ವತ ಕ್ರಮಗಳ ಬಗ್ಗೆ ಯಾವುದೇ ಪ್ರಸ್ತಾಪವೇ ಇಲ್ಲದಿರುವುದು ವಿಚಿತ್ರ ಎಂಬ ಅಭಿಪ್ರಾಯ ಕೂಡ ಪರಿಸರಪ್ರಿಯರಲ್ಲಿದೆ.

ಒಟ್ಟಾರೆ, ಒಂದೂಕಾಲು ಕೋಟಿ ಅನುದಾನದ ನಿರೀಕ್ಷೆಯಲ್ಲಿ ಎಲ್ಲರೂ ಧಾವಂತದಲ್ಲಿ ತರಾತುರಿಯ ವರದಿ, ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆಯೇ ವಿನಃ, ಅದರ ಹಿಂದೆ ಮಲೆನಾಡಿನ ವಾನರ ಹಾವಳಿಗೆ ಶಾಶ್ವತ ಕ್ರಮವಹಿಸುವ ಕಾಳಜಿಯಾಗಲೀ, ಸಮಸ್ಯೆಯ ಕೂಲಂಕಶ ಅಧ್ಯಯನದ ಆಧಾರದ ವಿವೇಚನೆಯಾಗಲೀ ಕಾಣುತ್ತಿಲ್ಲ ಎಂಬುದು ವಿಪರ್ಯಾಸ! ಹಾಗಾಗಿ ಅವಸರದ, ಅಸ್ಪಷ್ಟ ಪ್ರಸ್ತಾವನೆಗಳಿಗೆ ಇನ್ನಾದರೂ ಬೇಕಿದೆ ಸ್ಪಷ್ಟತೆ ಮತ್ತು ವೈಜ್ಞಾನಿಕ ನಿಖರತೆ. ಇಲ್ಲದೇ ಹೋದರೆ, ಹಲವು ಹತ್ತು ಯೋಜನೆಗಳಂತೆ ಈ ಯೋಜನೆ ಕೂಡ ಸಾರ್ವಜನಿಕ ಹಣದ ವ್ಯರ್ಥ ಪೋಲಿಗೆ, ಯಾರೋ ನಾಲ್ಕು ಜನರ ಆದಾಯದ ಮೂಲವಾಗಿ ಮಾತ್ರ ಅಂತ್ಯಕಾಣಲಿದೆ ಎಂಬುದರಲ್ಲಿ ಅನುಮಾನವಿಲ್ಲ!

Click here Support Free Press and Independent Journalism

Pratidhvani
www.pratidhvani.com