ರಾಜಕೀಯ ಟೀಕೆಗೆ ಹೆದರಿ UKPಗೆ ಹಣ ಕೊಟ್ಟರೆ ಸಿಎಂ ಯಡಿಯೂರಪ್ಪ?
ರಾಜ್ಯ

ರಾಜಕೀಯ ಟೀಕೆಗೆ ಹೆದರಿ UKPಗೆ ಹಣ ಕೊಟ್ಟರೆ ಸಿಎಂ ಯಡಿಯೂರಪ್ಪ?

ಆಯವ್ಯಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಒದಗಿಸದೆ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಕ್ಕಾಗಿ 10 ಸಾವಿರ ಕೋಟಿ ರೂ. ತೆಗೆದಿರಿಸುವುದಾಗಿ ಹೇಳಿದ್ದಾರೆ. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಹಣ ಒದಗಿಸಲು ಸಾಧ್ಯವಾಗದೇ ಇದ್ದರೆ ಈಗ ವ್ಯಕ್ತವಾದ ಟೀಕೆಗಿಂತ ಹತ್ತು ಪಟ್ಟು ಹೆಚ್ಚು ಟೀಕೆ, ಆರೋಪಗಳನ್ನು ಅವರು ಎದುರಿಸಬೇಕಾಗುತ್ತದೆ.

ಇಂದಿರಾತನಯ

ರೈತರು ಮತ್ತು ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗಿರುವ ಕಾಳಜಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಯಡಿಯೂರಪ್ಪ ಅವರ 77ನೇ ಜನ್ಮದಿನಾಚರಣೆ ವೇಳೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಾ, ಯಡಿಯೂರಪ್ಪ ಅವರು ಹೋರಾಟಗಾರರಾಗಿದ್ದು, ಹೋರಾಟದ ಹಾದಿಯಿಂದ ಬಂದವರಿಗೆ ಮಾತ್ರ ಜನರ ಬದುಕು ಅರ್ಥವಾಗುತ್ತದೆ. ದೀರ್ಘಕಾಲದಿಂದ ರಾಜಕಾರಣದಲ್ಲಿರುವವರಿಗೆ ಇಡೀ ರಾಜ್ಯದ ಚಿತ್ರಣ ಗೊತ್ತಿದೆ. ಇಂತಹ ಅರಿವು ಕೆಲವರಲ್ಲಿ ಮಾತ್ರ ಇರುತ್ತದೆ. ಅದರಲ್ಲಿ ಯಡಿಯೂರಪ್ಪ ಸಹ ಒಬ್ಬರು ಎಂದು ಹೇಳಿದ್ದರು. ಈ ಬಾರಿಯ ಬಜೆಟ್ ನೋಡಿದಾಗ ಸಿದ್ದರಾಮಯ್ಯ ಅವರ ಮಾತು ಮತ್ತು ಯಡಿಯೂರಪ್ಪ ಅವರ ಕಾಳಜಿ ಅರ್ಥವಾಗುತ್ತದೆ.

ಏಕೆಂದರೆ, ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಅವರು ನೀರಾವರಿಯನ್ನೂ ಕಡೆಗಣಿಸಿಲ್ಲ. ಜಲ ಸಂಪನ್ಮೂಲ ಯೋಜನೆಗೆ 19,279 ಕೋಟಿ ರೂ. ತೆಗೆದಿರಿಸಿರುವ ಅವರು, ಅದರಲ್ಲಿ ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ., ಕಳಸಾ-ಬಂಡೂರಿಗೆ 500 ಕೋಟಿ ರೂ., ಅಟಲ್ ಭೂಜಲ ಯೋಜನೆಗೆ 1202 ಕೋಟಿ ರೂ. ಹೀಗೆ ಕೋಟಿ ಕೋಟಿ ರೂಗಳನ್ನು ಮೀಸಲಿಟ್ಟಿದ್ದರು. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದ್ದಂತೆ ಮಾರನೇ ದಿನ ಅಂದರೆ, ಶುಕ್ರವಾರ, ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ 10,000 ಕೋಟಿ ರೂ. ನಿಗದಿಪಡಿಸಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಿದ್ದಾರೆ. ಅಂದರೆ, ಈ ಮೊತ್ತ ಸೇರಿದರೆ ಜಲಸಂಪನ್ಮೂಲ ಇಲಾಖೆಗೆ ಅವರು 29,279 ಕೋಟಿ ರೂ. ತೆಗೆದಿಟ್ಟಂತಾಗಿದೆ.

ಇದನ್ನೆಲ್ಲಾ ನೋಡಿದಾಗ ಪತ್ರಿಕೆಯೊಂದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಕುರಿತಂತೆ ಪ್ರಕಟವಾದ ಬರಿಗೈ ದಾನಿ ಎಂಬ ಹೆಡ್ ಲೈನ್ ಕಣ್ಣಮುಂದೆ ಬರುತ್ತದೆ. ಅಷ್ಟೇ ಅಲ್ಲ, ರಾಜಕೀಯ ಟೀಕೆ ಎದುರಿಸುವ ಧೈರ್ಯವಿಲ್ಲದೆ ಹಲವಾರು ಘೋಷಣೆಗಳನ್ನು ಮಾಡುವ ಮೂಲಕ ಬಜೆಟ್ ಅನುಷ್ಠಾನ ಕಷ್ಟ ಎಂಬ ಅನುಮಾನವೂ ಕಾಣಿಸಿಕೊಳ್ಳುತ್ತಿದೆ. ಆದರೆ, ಹೇಗಾದರೂ ಮಾಡಿ ನೀರಾವರಿ ಯೋಜನೆಗೆ ಹಣ ಹೊಂದಿಸುತ್ತೇನೆ ಎಂಬ ಅವರ ಮಾತು ಕೇಳಿದಾಗ, ಏನಾದರೂ ಸಾಧಿಸುತ್ತಾರೇನೋ ಎಂಬ ನಿರೀಕ್ಷೆಯೂ ಮೂಡುತ್ತದೆ. ಜತೆಗೆ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಾರೆ ಎಂಬ ಆತಂಕವೂ ಕಾಡುತ್ತದೆ.

ಯಡಿಯೂರಪ್ಪ ಅವರು ಮಂಡಿಸಿದ ಒಟ್ಟಾರೆ ಬಜೆಟ್ ಮೊತ್ತ 2,34,152.96 ಕೋಟಿ ರೂ. ಇದೀಗ ಕೃಷ್ಣಾ ಮೇಲ್ದಂಡೆ ಯೋಜನೆಗೆ 10,000 ಕೋಟಿ ರೂ. ನೀಡಿರುವುದನ್ನು ಸೇರಿಸಿದರೆ ಅದು 2,44,152 ಕೋಟಿ ರೂ. ತಲುಪುತ್ತದೆ. ಜಿಎಸ್ಟಿ  ನಷ್ಟ ಪರಿಹಾರ ಒಳಗೊಂಡಂತೆ ರಾಜ್ಯದ ಸ್ವಂತ ತೆರಿಗೆ ಸಂಗ್ರಹ 1,28,107 ಕೋಟಿ ರೂ. ಮಾತ್ರ. ಇನ್ನು ಕೇಂದ್ರದಿಂದ ತೆರಿಗೆ ಪಾಲು, ಅನುದಾನ, ತೆರಿಗೆಯೇತರ ರಾಜಸ್ವ ಸೇರಿ ಈ ಮೊತ್ತ 1,79,920 ಕೋಟಿ ರೂ ಆಗುತ್ತದೆ. ಉಳಿದ ಮೊತ್ತವನ್ನು ಸಾಲದಿಂದ ಸಂಗ್ರಹಿಸಬೇಕಾಗುತ್ತದೆ. ಮುಖ್ಯಮಂತ್ರಿಗಳೇ ಹೇಳಿರುವಂತೆ 2,34,152.96 ಕೋಟಿ ರೂ. ಮೊತ್ತದ ಬಜೆಟ್ ಅನುಷ್ಠಾನಕ್ಕೆ ಮುಂದಿನ ವರ್ಷ 53,214.13 ಕೋಟಿ ರೂ. ಸಾಲ ಪಡೆಯಬೇಕಾಗುತ್ತದೆ. ಅದಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆ ಮೊತ್ತವೂ ಸೇರಿದರೆ ಬಜೆಟ್ ಮೊತ್ತ 2,44,152 ಕೋಟಿ ರೂ. ಆಗಲಿದ್ದು, ಈ ಹತ್ತು ಸಾವಿರ ಕೋಟಿ ರೂಪಾಯಿ ಹೇಗೆ ಹೊಂದಾಣಿಕೆ ಮಾಡುತ್ತಾರೆ ಎಂಬುದೇ ದೊಡ್ಡ ಸವಾಲು.

ಆರ್ಥಿಕ ಪರಿಸ್ಥಿತಿ ಮರೆತರೇ ಸಿಎಂ ಯಡಿಯೂರಪ್ಪ?

ಇದೆಲ್ಲವನ್ನೂ ಗಮನಿಸಿದಾಗ ರಾಜಕೀಯ ಕಾರಣಗಳಿಗಾಗಿ ಎದುರಿಸಬೇಕಾದ ಟೀಕೆಗಳಿಗೆ ಬೆದರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನು ಮರೆತರೇ ಎಂಬ ಪ್ರಶ್ನೆ ಎದುರಾಗುತ್ತದೆ. 2019-20ನೇ ಸಾಲಿನಲ್ಲಿ ಆರಂಭವಾಗಿರುವ ಆರ್ಥಿಕ ಹಿಂಜರಿತ 2020-21ಲೇ ಸಾಲಿನಲ್ಲೂ ಮುಂದುವರಿಯುವ ಲಕ್ಷಣ ಸ್ಪಷ್ಟವಾಗಿದೆ. 2019-20ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಿದ್ದ ಕೇಂದ್ರದ ತೆರಿಗೆಯ ಪಾಲು 8,887 ಕೋಟಿ ರೂ., ಜಿಎಸ್‌ಟಿ ಪರಿಹಾರದ ಮೊತ್ತ 3,000 ಕೋಟಿ ರೂ. ಖೋತಾ ಆಗಿದೆ. ಇದನ್ನು ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, 2020-21ನೇ ಸಾಲಿನಲ್ಲಿ ಕೂಡ ಕೂಡ 11,215 ಕೋಟಿ ರೂ. ಕೊರತೆಯಾಗಲಿದೆ ಎಂಬ ಅಂಶವನ್ನೂ ಜನರ ಮುಂದಿಟ್ಟಿದ್ದಾರೆ. ಅಂದರೆ ಮುಂದಿನ ಆರ್ಥಿಕ ವರ್ಷದಲ್ಲೂ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದಿಲ್ಲ. ಕೇಂದ್ರದಿಂದ ನಿರೀಕ್ಷಿತ ಪಾಲು ಬರುವುದು ಕಷ್ಟ ಎಂಬುದು ಗೊತ್ತಿದ್ದರೂ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ರೂ. ಘೋಷಿಸುವಾಗ ಅದಕ್ಕೆ ಬೇಕಾದ ಅನುದಾನ ಎಲ್ಲಿಂದ ತರುವುದು ಎಂಬುದನ್ನು ಪ್ರಸ್ತಾಪಿಸದ ಕಾರಣ, ರಾಜ್ಯ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನು ಅವರು ಮರೆತಂತೆ ಕಾಣುತ್ತಿದೆ.

ಇನ್ನೂ ಕಾರ್ಯರೂಪಕ್ಕೆ ಬಾರದ ಕಳಸಾ-ಬಂಡೂರಿಗೆ 500 ಕೋಟಿ ರೂ. ನೀಡಿ, ಸುಮಾರು 58 ಸಾವಿರ ಕೋಟಿ ರೂ. ಅಗತ್ಯವಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಕಲ್ಪಿಸದೇ ಇದ್ದರೆ ಆ ಭಾಗದ ಜನ ತಿರುಗಿ ಬೀಳುವುದು ಖಂಡಿತ. ಜತೆಗೆ ಪ್ರತಿಪಕ್ಷಗಳಿಂದ ಸಾಕಷ್ಟು ಟೀಕೆ, ಆಕ್ರೋಶ ಎದುರಿಸಬೇಕಾಗುತ್ತದೆ. ಹಾಗೆಂದು ಘೋಷಿಸಿದ ಬಜೆಟ್ ಇನ್ನೂ ಚರ್ಚೆಗೆ ಬರುವ ಮುನ್ನವೇ ಅದರಲ್ಲಿ ಏರುಪೇರು ಮಾಡಲು ಹೊರಟರೆ ಮತ್ತೊಂದು ಗೊಂದಲ ಎದುರಾಗುವುದಲ್ಲದೆ, ಅದಕ್ಕೂ ಪ್ರತಿಪಕ್ಷಗಳು ನೂರಾರು ಕೊಂಕು ಮಾತುಗಳನ್ನು ಹೇಳುವುದು ಖಂಡಿತ. ಇದು ಸರ್ಕಾರವನ್ನು ಮುಜುಗರಕ್ಕೆ ಈಡುಮಾಡುವುದಲ್ಲದೆ, ಇಕ್ಕಟ್ಟಿಗೂ ಸಿಲುಕಿಸುತ್ತದೆ. ಹೀಗಾಗಿ ರಾಜಕೀಯ ಟೀಕೆಗೆ ಹೆದರಿ ಯಡಿಯೂರಪ್ಪ ಅವರು ಆದಾಯ ಸಂಗ್ರಹದ ಬಗ್ಗೆ ಮಾತನಾಡದೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ. ತೆಗೆದಿರಿಸುವುದಾಗಿ ಹೇಳಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾದಾಗ ಅದರ ಯೋಜನಾ ವೆಚ್ಚ ಎಷ್ಟಿತ್ತು ಯೋಜನೆ ವಿಳಂಬವಾಗಿದ್ದರಿಂದ ಅದು ಎಷ್ಟು ಹೆಚ್ಚಾಗಿದೆ ಎಂಬುದನ್ನು ಲೆಕ್ಕ ಹಾಕುತ್ತಾ ಹೊರಟರೆ ಅದು ಹಲವು ದಶ ಸಾವಿರ ಕೋಟಿಗಳನ್ನು ಮೀರುತ್ತದೆ. ಕೆಲವು ಯೋಜನೆಗಳ ವೆಚ್ಚ 5ರಿಂದ 10 ಪಟ್ಟು ಹೆಚ್ಚಾಗಿದೆ. ಇನ್ನೂ ಕೆಲವು ಯೋಜನೆಗಳ ವೆಚ್ಚ 50 ಪಟ್ಟು ಏರಿಕೆಯಾಗಿದ್ದೂ ಇದೆ. ಮುಂದಿನ ದಿನಗಳಲ್ಲೂ ಈ ರೀತಿ ಆಗದೇ ಇರಬೇಕಾದರೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 20 ಕೋಟಿ ರೂ. ಆದರೂ ನಿಗದಿಪಡಿಸಿ ಮೂರು-ನಾಲ್ಕು ವರ್ಷದೊಳಗೆ ಕಾಮಗಾರಿ ಮುಗಿಸಬೇಕು. ಆದರೆ, ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗದ ಕೆಲಸ ಎಂಬುದವನ್ನು ಅರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವರ್ಷಕ್ಕೆ 10 ಸಾವಿರ ಕೋಟಿ ರೂ. ತೆಗೆದಿರಿಸುವುದಾಗಿ ಹೇಳಿದ್ದಾರೆ. ವರ್ಷಾಂತ್ಯದೊಳಗೆ ಆ ಹಣವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಿ ಯೋಜನೆ ಪ್ರಗತಿಪಥದತ್ತ ಕೊಂಡೊಯ್ದರೆ ಮಾತ್ರ ಅನುದಾನ ಮೀಸಲಿಟ್ಟಿದ್ದು ಸಾರ್ಥಕ. ಇಲ್ಲವಾದಲ್ಲಿ ರಾಜಕೀಯ ಟೀಕೆಗೆ ಹೆದರಿ ಅನುದಾನ ಮೀಸಲಿಟ್ಟರು. ಆದರೆ, ಹಣ ಹೊಂದಾಣಿಕೆ ಮಾಡಲು ಸಾಧ್ಯವಾಗದೆ ಅದು ಕೇವಲ ಘೋಷಣೆಯಲ್ಲೇ ಉಳಿಯಿತು ಎಂಬ ಮತ್ತೊಂದು ರಾಜಕೀಯ ಟೀಕೆಯನ್ನು ಎದುರಿಸಬೇಕಾಗುತ್ತದೆ.

Click here Support Free Press and Independent Journalism

Pratidhvani
www.pratidhvani.com