ರಾಜ್ಯದ ಆರ್ಥಿಕ ಹಿಂಜರಿತಕ್ಕೆ ಮುನ್ನಡಿ ಬರೆಯುತ್ತಿದೆಯೇ ಯಡಿಯೂರಪ್ಪ ಮಂಡಿಸಿದ ಬಜೆಟ್?
ರಾಜ್ಯ

ರಾಜ್ಯದ ಆರ್ಥಿಕ ಹಿಂಜರಿತಕ್ಕೆ ಮುನ್ನಡಿ ಬರೆಯುತ್ತಿದೆಯೇ ಯಡಿಯೂರಪ್ಪ ಮಂಡಿಸಿದ ಬಜೆಟ್?

ನಿಜವಾದ ಆತಂಕ ಸಂಗತಿ ಏನೆಂದರೆ ರಾಜ್ಯ ಸರ್ಕಾರವು ಎತ್ತುತ್ತಿರುವ ಸಾಲದ ಪ್ರಮಾಣವೂ ಹೆಚ್ಚುತ್ತಿದೆ. ಆದರೆ, ಸಾಮಾಜಿಕ ವಲಯಕ್ಕೆ ಮಾಡುವ ವೆಚ್ಚದ ಪ್ರಮಾಣ ಕುಗ್ಗುತ್ತಿದೆ. ಈ ಎರಡ ನಡುವಿನ ವೈರುಧ್ಯವು ರಾಜ್ಯ ಸರ್ಕಾರದ ಆರ್ಥಿಕತೆಯು ದಾರಿತಪ್ಪುತ್ತಿರುವುದನ್ನು ಸಂಕೇತಿಸುತ್ತದೆ. ₹48875.46 ಕೋಟಿ ಸಾಲವನ್ನು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಪಡೆಯಲಾಗಿದ್ದರೆ, ಮುಂದಿನ ವರ್ಷದಲ್ಲಿ ₹53214.13 ಕೋಟಿ ಸಾಲ ಪಡೆಯಲು ಉದ್ದೇಶಿಸಲಾಗಿದೆ.

ರೇಣುಕಾ ಪ್ರಸಾದ್ ಹಾಡ್ಯ

ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ ಬಜೆಟ್ ನಲ್ಲಿ ಉಲ್ಲೇಖಿಸಿಲಾದ ವಿವಿಧ ಯೋಜನೆಗಳ ಹೊರಾಲಂಕಾರಗಳನ್ನು ಹೊರತು ಪಡಿಸಿ ಬೃಹದಾರ್ಥಿಕತೆಯ ಅಂಕಿ ಅಂಶಗಳನ್ನು ಅವಲೋಕಿಸಿದರೆ ಬರುವ (2020-21) ವಿತ್ತೀಯ ವರ್ಷವು ರಾಜ್ಯದ ಪಾಲಿಗೆ ಆರ್ಥಿಕ ಹಿಂಜರಿತದ ವರ್ಷವಾಗುವ ಮುನ್ಸೂಚನೆ ನೀಡುತ್ತಿವೆ. ಸಾಮಾನ್ಯವಾಗಿ ವಾರ್ಷಿಕ ಬಜೆಟ್ ಪ್ರಮಾಣವು ರಾಜ್ಯದ ಒಟ್ಟು ಉತ್ಪನ್ನದ ಅಭಿವೃದ್ಧಿ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚಳವಾಗುತ್ತದೆ. ಹೆಚ್ಚಳದ ಮುನ್ನಂದಾಜು ಮಾಡುವುದು ರಾಜ್ಯದ ಆರ್ಥಿಕತೆ ಮೇಲೆ ವಿತ್ತ ಸಚಿವರಿಗೆ ಇರುವ ಆಶ್ಮವಿಶ್ವಾಸದ ಸಂಕೇತವೂ ಹೌದು. ಪ್ರಸ್ತುತ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್ ನಲ್ಲಿ ಅಂತಹ ಆತ್ಮವಿಶ್ವಾಸ ಕಂಡುಬರುತ್ತಿಲ್ಲ.

ಪ್ರಸಕ್ತ  ವಿತ್ತೀಯ ವರ್ಷದ ಒಟ್ಟು ಬಜೆಟ್ ಮೊತ್ತ ₹2,34,152.96 ಕೋಟಿ ಇದ್ದು, 2020-21ನೇ ಸಾಲಿಗೆ ₹2,37,893.33 ಕೋಟಿ ನಿಗದಿ ಮಾಡಿದ್ದಾರೆ. ಉದ್ದೇಶಿತ ಹೆಚ್ಚಳವು ಕೇವಲ ₹3740.37 ಕೋಟಿಗಳಾಗಿದೆ. ಅಂದರೆ ಹೆಚ್ಚಳದ ಪ್ರಮಾಣವು ಕೇವಲ ಶೇ.1.59ರಷ್ಟಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯವು ಶೇ.6.8ರಷ್ಟು ಆರ್ಥಿಕ ಅಭಿವೃದ್ಧಿ ದಾಖಲಿಸುತ್ತದೆಂದು ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಘೋಷಿಸಲಾಗಿದೆ. ಆದರೆ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಒಟ್ಟು ಬಜೆಟ್ ಗಾತ್ರವನ್ನು ಹೆಚ್ಚಳ ಮಾಡದೇ ಇರುವುದು ಬರುವ ವರ್ಷದಲ್ಲಿ ರಾಜ್ಯದ ಆರ್ಥಿಕತೆ ಹಿಂಜರಿತಕ್ಕೊಳಗಾಗುವ ನಿರೀಕ್ಷೆ ಹೊಂದಿರುವುದನ್ನು ಪರೋಕ್ಷವಾಗಿ ಅಭಿವ್ಯಕ್ತಿಸಿದಂತಾಗಿದೆ. ಅಲ್ಲದೇ ಪರಿಷ್ಕೃತ ಅಂದಾಜಿನಲ್ಲಿ ಪ್ರಸಕ್ತ ವಿತ್ತೀಯ ವರ್ಷದ ಬಜೆಟ್ ಮೊತ್ತವನ್ನು ₹2,26,625 ಕೋಟಿ ಗೆ ತಗ್ಗಿಸಿರುವುದು ಗಮನಿಸಿದರೆ 2020-21ರ ಪರಿಷ್ಕೃತ ಅಂದಾಜಿನಲ್ಲಿ ಒಟ್ಟು ಬಜೆಟ್ ಗಾತ್ರವು ಕುಗ್ಗಲಿದೆ.

ನಿಜವಾದ ಆತಂಕ ಸಂಗತಿ ಏನೆಂದರೆ ರಾಜ್ಯ ಸರ್ಕಾರವು ಎತ್ತುತ್ತಿರುವ ಸಾಲದ ಪ್ರಮಾಣವೂ ಹೆಚ್ಚುತ್ತಿದೆ. ಆದರೆ, ಸಾಮಾಜಿಕ ವಲಯಕ್ಕೆ ಮಾಡುವ ವೆಚ್ಚದ ಪ್ರಮಾಣ ಕುಗ್ಗುತ್ತಿದೆ. ಈ ಎರಡ ನಡುವಿನ ವೈರುಧ್ಯವು ರಾಜ್ಯ ಸರ್ಕಾರದ ಆರ್ಥಿಕತೆಯು ದಾರಿತಪ್ಪುತ್ತಿರುವುದನ್ನು ಸಂಕೇತಿಸುತ್ತದೆ. ₹48875.46 ಕೋಟಿ ಸಾಲವನ್ನು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಪಡೆಯಲಾಗಿದ್ದರೆ, ಮುಂದಿನ ವರ್ಷದಲ್ಲಿ ₹53214.13 ಕೋಟಿ ಸಾಲ ಪಡೆಯಲು ಉದ್ದೇಶಿಸಲಾಗಿದೆ. ಅಂದರೆ ರಾಜ್ಯ ಸರ್ಕಾರ ಪಡೆಯುತ್ತಿರುವ ಸಾಲವು ಶೇ.8.87ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ ಸರ್ಕಾರ ಸಾಮಾಜಿಕ ಸೇವೆಗಳಿಗೆ ವ್ಯಯಮಾಡುತ್ತಿರುವ ಮೊತ್ತವು ಗಣನೀಯವಾಗಿ ತಗ್ಗಿದೆ. ಪ್ರಸಕ್ತ ಸಾಲಿನಲ್ಲಿ ₹71,350.41 ಕೋಟಿಗಳನ್ನು ವಿನಿಯೋಗಿಸಿದ್ದರೆ, 2021ನೇ ಸಾಲಿಗೆ ಈಮೊತ್ತವನ್ನು ₹65046.71 ಕೋಟಿಗೆ ತಗ್ಗಿಸಲಾಗಿದೆ. ಅಂದರೆ ಶೇ.9.69ರಷ್ಟು ಕುಗ್ಗಿದೆ. ಸರ್ಕಾರಗಳು ಮುಕ್ತಮಾರುಕಟ್ಟೆಯಿಂದ ಸಾಲ ಪಡೆಯುವುದೇ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲು. ಆದರೆ ಪ್ರಸಕ್ತ ಬಜೆಟ್ ನಲ್ಲಿ ಯಡಿಯೂರಪ್ಪ ಸಾರ್ವಜನಿಕ ಸಾಲದ ಪ್ರಮಾಣವನ್ನು ಹಿಗ್ಗಿಸಿ, ಸಾಮಾಜಿಕ ಕಾರ್ಯಗಳಿಗೆ ಮಾಡುವ ವೆಚ್ಚದ ಪ್ರಮಾಣವನ್ನು ತಗ್ಗಿಸಿದ್ದಾರೆ. ಸಹಾಯಾನುದಾನ ಮತ್ತು ಅಂಶದಾನದ ಪ್ರಮಾಣವನ್ನು ₹6856.16 ಕೋಟಿಗಳಿಂದ ₹6590.92ಕೋಟಿಗೆ ಇಳಿಸಿದ್ದಾರೆ.

ಕಳೆದೊಂದು ದಶಕದಲ್ಲಿ ಮಂಡನೆಯಾಗಿರುವ ರಾಜ್ಯ ಸರ್ಕಾರದ ಬಜೆಟ್ ಗಳ ಗಾತ್ರ (ಕೋಟಿ ರುಪಾಯಿಗಳಲ್ಲಿ):

  • 2020-21- ₹2,37,893.33
  • 2019-20- ₹2,34,152.96
  • 2018-19  ₹2,18,488
  • 2017-18 ₹1,86,561
  • 2016-17  ₹1,61,419
  • 2015-16 ₹1,42,534
  • 2014-15 ₹1,38,008
  • 2013-14 ₹1,17,005
  • 2012-13 ₹1,02,742
  • 2011-12 ₹85,319

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ತೆರಿಗೆ ಪಾಲಿನಲ್ಲಿ ಪ್ರಸಕ್ತ ₹39806.26 ಕೋಟಿಗಳೆಂದು ಅಂದಾಜಿಸಿದ್ದರೆ, 2021ನೇ ಸಾಲಿಗೆ ₹11215.03 ಕೋಟಿ ಕಡಿತ ಮಾಡಿ ₹28591.23 ಕೋಟಿಗೆ ತಗ್ಗಿಸಲಾಗಿದೆ. ಅಂದರೆ, ಒಂದೇ ವರ್ಷದಲ್ಲಿ ಕೇಂದ್ರದಿಂದ ಕಡಿತವಾದ ಅನುದಾನದ ಪ್ರಮಾಣವು ಶೇ.28.17ರಷ್ಟಾಗಿದೆ. ಕೇಂದ್ರವು ರಾಜ್ಯ ಸರ್ಕಾರಗಳಿಗೆ ಹೀಗೆ ಮನಸೋ ಇಚ್ಛೆ ತೆರಿಗೆ ಕಡಿತ ಮಾಡುವುದು ಗಣತಂತ್ರ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾದುದು. ಆದರೆ, ನಮ್ಮ ಮುಖ್ಯಮಂತ್ರಿಗಳು ರಾಜ್ಯಕ್ಕಾಗಿರುವ ಅನ್ಯಾಯವನ್ನು ಪ್ರಶ್ನಿಸುವ ರಾಜಕೀಯ ಶಕ್ತಿ ಕಳೆದುಕೊಂಡಿರುವುದರಿಂದ ಅದರ ಪರಿಣಾಮವನ್ನು ರಾಜ್ಯದ ಜನತೆ ಹೊರಬೇಕಿದೆ.

ಕೇಂದ್ರದಿಂದ ಕಡಿತವಾದ ತೆರಿಗೆ ಪಾಲನ್ನು ರಾಜ್ಯದ ತೆರಿಗೆ ಮೂಲದಿಂದ ಸಂಗ್ರಹಿಸುವ ಉದ್ದೇಶ ಯಡಿಯೂರಪ್ಪ ಅವರದ್ದಾಗಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದ ತೆರಿಗೆ ಮೂಲದಿಂದ ₹118992.98 ಕೋಟಿ ಸಂಗ್ರಹಿಸುವ ಗುರಿ ಇದ್ದರೆ 2021 ನೇ ಸಾಲಿನಲ್ಲಿ ₹128106.83 ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದಾರೆ. ಕೇಂದ್ರ ಕಡಿತ ಮಾಡಿದ ತೆರಿಗೆ ಪಾಲನ್ನು “ಸರ್ವಜನರ” ಮೇಲೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಸುವ ಮೂಲಕ ಸಂಗ್ರಹಿಸಲು ಮುಂದಾಗಿದ್ದಾರೆ. ಜತೆಗೆ ಯಡಿಯೂರಪ್ಪ ಪ್ರಸ್ತಾಪಿಸಿರುವ ತೆರಿಗೆಗಳಿಂದಾಗಿ ಮದ್ಯಪಾನೀಯಗಳು ಶೇ.6ರಷ್ಟು ದುಬಾರಿಯಾಗಲಿವೆ. ಖಾಸಗಿ ಸಾರಿಗೆ ಸೇವೆಗಳು ಶೇ.5ರಿಂದ8ರಷ್ಟು ಹೆಚ್ಚಳವಾಗಬಹುದು.

ಮುಖ್ಯಮಂತ್ರಿ ಯಡಿಯೂರಪ್ಪ ಏನು ಮಾಡಬಹುದಿತ್ತು?

ಬಜೆಟ್ ಗಾತ್ರವನ್ನು ರಾಜ್ಯದ ಆರ್ಥಿಕ ಅಭಿವೃದ್ಧಿ ಪ್ರಮಾಣಕ್ಕೆ ಅನುಗುಣವಾಗಿ ಹಿಗ್ಗಿಸಬಹುದಿತ್ತು. ಪ್ರಸಕ್ತ ಸಾಲಿನಲ್ಲಿ ಶೇ.6.8ರಷ್ಟು ಆರ್ಥಿಕ ಅಭಿವೃದ್ಧಿ ದಾಖಲಿಸುವ ಅಂದಾಜು ಇರುವುದರಿಂದ ಬಜೆಟ್ ಗಾತ್ರವನ್ನು ಕನಿಷ್ಠ ಶೇ.7-10ರಷ್ಟು ಹಿಗ್ಗಿಸುವ ಸಾಧ್ಯತೆ ಇತ್ತು. ಹಿಗ್ಗಿಸಿದ ಬಜೆಟ್ ಗಾತ್ರಕ್ಕೆ ಸಂಪನ್ಮೂಲ ಕ್ರೋಢೀಕರಣ ಸಾಧ್ಯವಾಗದೇ ಇದ್ದರೂ, ಮುಕ್ತಮಾರುಕಟ್ಟೆಯಿಂದ ಹೆಚ್ಚಿನ ಸಾಲ ತರಬಹುದಿತ್ತು. ರಾಜ್ಯದ ಸಾಲದ ಹೊರೆಯು ಎಸ್ಜಿಡಿಪಿಯ ಶೇ.20ರಷ್ಟು ಮಾತ್ರ ಇರುವುದರಿಂದ ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆಯುವುದು ಕಷ್ಟವಾಗುತ್ತಿರಲಿಲ್ಲ. ಆದರೆ,  ಈ ರೀತಿ ಪಡೆಯುವ ಸಾಲಗಳು ಸಾಮಾಜಿಕ ವೆಚ್ಚಗಳಿಗೆ ಇಲ್ಲವೇ ಬಂಡವಾಳ ಹೂಡಿಕೆಗಳಿಗೆ ಸೀಮಿತವಾಗಬೇಕು. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಬಳಕೆ ಆಗಬಾರದಷ್ಟೇ. ಅಲ್ಲದೇ ಯಡಿಯೂರಪ್ಪ ಬಜೆಟ್ ನಲ್ಲಿ ಪ್ರಸ್ತಾಪಿಸಿರುವಂತೆ ವಿತ್ತೀಯ ಕೊರತೆ ಪ್ರಮಾಣವು ಎಸ್ಜಿಡಿಪಿ ಶೇ.3.5ರ ಮಿತಿಯೊಳಗೆ ಇರುವುದರಿಂದ ರಾಜ್ಯ ಸರ್ಕಾರವು ಮತ್ತಷ್ಟು ಸಾಲ ಪಡೆಯಲು ಅರ್ಹತೆ ಹೊಂದಿದೆ.

ವಾಸ್ತವವಾಗಿ ರಾಜ್ಯ ಸರ್ಕಾರವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಜತೆಗೆ ಮುಕ್ತ ಮಾರುಕಟ್ಟೆಯಲ್ಲಿ ಸಾಲದ ಮೇಲಿನ ಬಡ್ಡಿದರ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಸಾಲ ಮಾಡಿದರೆ, ಬಡ್ಡಿ ಪಾವತಿ ಹೆಚ್ಚಿನ ಹೊರೆಯೇನೂ ಆಗುತ್ತಿರಲಿಲ್ಲ. ಬರುವ ವರ್ಷಗಳಲ್ಲಿ ರಾಜ್ಯದ ಆದಾಯಮೂಲಗಳ ಹೆಚ್ಚಾದ ನಂತರ ಸಾಲ ಮರುಪಾವತಿ ಸಾಧ್ಯವಾಗುತ್ತದೆ. ಆದರೆ, ಆರ್ಥಿಕ ಶಿಸ್ತಿನ ಹೆಸರಿನಲ್ಲಿ ಯಡಿಯೂರಪ್ಪ ಅವರು ರಾಜ್ಯದ ಸಾಮಾಜಿಕ ಯೋಜನೆ ಮೇಲಿನ ವಿನಿಯೋಗವನ್ನು ಕಡಿತ ಮಾಡಿರುವುದು ಉತ್ತಮ ಬೆಳವಣಿಗೆ ಅಲ್ಲ.

ರಾಜ್ಯದ ವಾಸ್ತವಿಕ ಆರ್ಥಿಕ ಪರಿಸ್ಥಿತಿಯನ್ನು ಬಹಿರಂಗ ಪಡಿಸಬರದೆಂಬ ಇರಾದೆ ಯಡಿಯೂರಪ್ಪ ಅವರಿಗೆ ಇದ್ದಂತಿದೆ. ಆ ಕಾರಣಕ್ಕಾಗಿಯೇ ಅವರು ಮೂರು ಡಜನ್ ಇಲಾಖೆಗಳನ್ನೆಲ್ಲ ಒಗ್ಗೂಡಿ ಅರ್ಧ ಡಜನ್ ವಲಯಗಳನ್ನಾಗಿ ಕ್ರೋಢೀಕರಿಸಿ ಜನರ ಮುಂದಿಟ್ಟಿದ್ದಾರೆ. ಆ ಮೂಲಕ ಯಾರಿಗೆ ಎಷ್ಟು? ಅವರಿಗೆ ಯಾಕಿಷ್ಟು? ನಮಗೆ ಅಷ್ಟ್ಯಾಕಿಲ್ಲ? ಎಂಬಿತ್ಯಾದಿ ದೂರು ದುಮ್ಮಾನಗಳಿಂದ ರಕ್ಷಣೆ ಪಡೆದುಕೊಂಡಿದ್ದಾರೆ.

ಮಹಿಳಾ ಉದ್ದೇಶಿತ ಆಯವ್ಯಯ ಮತ್ತು ಮಕ್ಕಳ ಉದ್ದೇಶಿತ ಆಯವ್ಯಯ ಕಲ್ಪನೆಯನ್ನು ಮುನ್ನೆಲೆಗೆ ತಂದಿದ್ದಾರೆ. ಈ ಹಿಂದೆಯೂ ಮಹಿಳೆಯರಿಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳಲ್ಲಿನ ವಿವಿಧ ಯೋಜನೆಗಳಲ್ಲಿ ವಿನಿಯೋಗಿಸುತ್ತಿದ್ದ ಅನುದಾನವನ್ನು ಕ್ರೋಢೀಕರಿಸಿ ಮಹಿಳಾ ಉದ್ದೇಶಿತ ಆಯವ್ಯಯ ಎಂದು ವರ್ಗೀಕರಿಸಲಾಗುತ್ತಿತ್ತು. ಅದನ್ನು ಈಗ ನೇರವಾಗಿ ಬಜೆಟ್ ನಲ್ಲಿಯೇ ಪ್ರಸ್ತಾಪಿಸಿರುವುದು ವಿಶೇಷ. ಜತೆಗೆ ಮಕ್ಕಳ ಉದ್ದೇಶಿತ ಆಯವ್ಯಯ ಕಲ್ಪನೆಯನ್ನು ಸೇರ್ಪಡೆ ಮಾಡಿದ್ದಾರೆ. ದೀರ್ಘಕಾಲದಲ್ಲಿ, ನಾಳಿನ ಪ್ರಜೆಗಳನ್ನು ಸುಸ್ಥಿರ ಮತ್ತು ಸುಭದ್ರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸಲು ಮತ್ತು ಅಭಿವೃದ್ಧಿ ಪಡಿಸಲು ಅನುಕೂಲವಾಗಲಿದೆ.

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿರುವುದರಿಂದ ತೆರಿಗೆ ಹೇರಲು ಯಡಿಯೂರಪ್ಪ ಅವರ ಮುಂದೆ ಇದ್ದ ಆಯ್ಕೆಗಳು ತೀರಾ ಅಲ್ಪವಾಗಿದ್ದವು. ಪೆಟ್ರೋಲು, ಡಿಸೇಲು, ಮದ್ಯಪಾನ, ಸಾರಿಗೆ ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ತೆರಿಗೆ ಹೇರಿದ್ದಾರೆ. ಆ ಲೆಕ್ಕದಲ್ಲಿ ಯಡಿಯೂರಪ್ಪ ಅವರ ಬಜೆಟ್ ‘ಕರಭಾರ’ದ ರಾಜ್ಯದ ಜನತೆ ‘ಹೊರಲಾರ’ದ ಆದರೂ ಹೊರಲೇ ಬೇಕಾದ ಬಜೆಟ್!

Click here Support Free Press and Independent Journalism

Pratidhvani
www.pratidhvani.com