ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!
ರಾಜ್ಯ

ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!

ಬಿಎಸ್‌ ಯಡಿಯೂರಪ್ಪನವರು ಸಿಎಂ ಆದ ಮೇಲೆ ಸಾಕಷ್ಟು ಅನುದಾನದ ಜೊತೆ ಬೃಹತ್‌ ಅಭಿವೃದ್ಧಿ ಕಾರ್ಯಕ್ರಮಗಳೂ ಜಿಲ್ಲೆಯಲ್ಲಿ ನಡೆದಿವೆ. ಆದರೆ, ಬಿಎಸ್‌ವೈ ಜೊತೆ ಈಶ್ವರಪ್ಪನವರು ಕಾಣಿಸಿಕೊಂಡಿದ್ದು ಒಂದೇ ಕಾರ್ಯಕ್ರಮ, ಅದೂ ಸರ್ಕಾರ ರಚನೆಯಾದ ಸಂದರ್ಭ. 

ಉದಯ ಸಾಗರ

ಏನಾಗಿದೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ? ಮುಖ್ಯಮಂತ್ರಿಗಳು ಬಂದಾಗಲೆಲ್ಲಾ ಅನಾರೋಗ್ಯ! ರಾಜ್ಯ ರಾಜಕಾರಣದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನ ಮೂಡಿಸಿರುವ ಶಿವಮೊಗ್ಗ ಹಲವು ಧೀಮಂತ ನಾಯಕರನ್ನ ಕೊಡುಗೆಯಾಗಿ ನೀಡಿದೆ, ಅಂತವರಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಕೂಡ ಒಬ್ಬರು. ಇವರಷ್ಟೇ ಸಮಾನರಾಗಿ ಸ್ನೇಹಿತರಾಗಿ ರಾಜ್ಯ ಬಿಜೆಪಿಯಲ್ಲಿ ಹಿಡಿತ ಸಾಧಿಸಿಕೊಂಡವರು ಕೆ ಎಸ್‌ ಈಶ್ವರಪ್ಪ. ಸಂಘಟನೆಯಲ್ಲೇ ಗುರುತಿಸಿಕೊಂಡು ಬಂದರೂ ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿಯಲ್ಲಿ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ಧ ತಣ್ಣನೆ ಪ್ರತಿಭಟನೆ ಎಬ್ಬಿಸಿ ಸುಮ್ಮನೆ ಕೂತು ಬಿಡುತ್ತಾರೆ, ತಮ್ಮ ಅಸಮಾಧಾನವನ್ನ ಹೊರಹಾಕುತ್ತಲೇ ಇರುತ್ತಾರೆ.

ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯ ಪರಿಸ್ಥಿತಿ, ಶಿವಮೊಗ್ಗ ನಗರ ಒಂದು ಪ್ರಾಂತ್ಯ, ಉಳಿದದ್ದು ಇನ್ನೊಂದು ಪ್ರಾಂತ್ಯ ಎಂಬಂತಿದೆ. ಶಿವಮೊಗ್ಗ ನಗರದ ಶಾಸಕ ಕೆಎಸ್‌ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಬಿಎಸ್‌ ಯಡಿಯೂರಪ್ಪನವರು ಸಿಎಂ ಆದ ಮೇಲೆ ಸಾಕಷ್ಟು ಅನುದಾನದ ಜೊತೆ ಬೃಹತ್‌ ಅಭಿವೃದ್ಧಿ ಕಾರ್ಯಕ್ರಮಗಳೂ ಜಿಲ್ಲೆಯಲ್ಲಿ ನಡೆದಿವೆ. ಆದರೆ, ಬಿಎಸ್‌ವೈ ಜೊತೆ ಈಶ್ವರಪ್ಪನವರು ಕಾಣಿಸಿಕೊಂಡಿದ್ದು ಒಂದೇ ಕಾರ್ಯಕ್ರಮ, ಅದೂ ಸರ್ಕಾರ ರಚನೆಯಾದ ಸಂದರ್ಭ. ಒಮ್ಮೆ ಅಚಾನಕ್‌ ಆಗಿ ಜಿಲ್ಲಾಪಂಚಾಯತ್‌ ಸಭಾಂಗಣದಲ್ಲಿ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದರಷ್ಟೇ. ಇವೆರಡನ್ನು ಹೊರತು ಪಡಿಸಿ ಇಬ್ಬರೂ ಒಟ್ಟಿಗೆ ವೇದಿಕೆ ಹಂಚಿಕೊಂಡ ಸಂದರ್ಭಗಳಿಲ್ಲ.

ಇಬ್ಬರು ನಾಯಕರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿಲ್ಲ, ಆದರೆ ಇವರ ನಡುವಿನ ಮನಸ್ಥಾಪಕ್ಕೆ ಪುಷ್ಠಿ ನೀಡುವಂತಹ ಸಂದರ್ಭಗಳು ಜರುಗುತ್ತಲೇ ಇವೆ. ನಿನ್ನೆ ಶಿವಮೊಗ್ಗಲ್ಲಿ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ ಅನುದಾನದ ಕಾರ್ಯಕ್ರಮಗಳಿಗೆ ಸಿಎಂ ಅಡಿಗಲ್ಲು ಹಾಕಿದ್ದಾರೆ. ಸಾವಿರಾರು ಅಭ್ಯರ್ಥಿಗಳು ಹಾಜರಿದ್ದ ಬೃಹತ್‌ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ್ದಾರೆ. ಶಿಕಾರಿಪುರದಲ್ಲಿ ಸಹೋದ್ಯೋಗಿಗಳೆಲ್ಲಾ ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಆದರೆ ಶಿಷ್ಟಾಚಾರವಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವ, ಒಂದು ಕಾಲದ ಕುಚುಕು ಗೆಳೆಯ ಈಶ್ವರಪ್ಪನವರು ಮಾತ್ರ ಗೈರು. ಆಪ್ತರು ಹೇಳುವ ಪ್ರಕಾರ ಕೆಎಸ್‌ಇ ಗೆ ಅನಾರೋಗ್ಯವಂತೆ! ಆರೋಗ್ಯ ಯಾವಾಗ ಬೇಕಾದರೂ ಹದಗೆಡಬಹುದು ಆದರೆ ಸಿಎಂ ಕಾರ್ಯಕ್ರಮಗಳಿರುವಾಗ ಹೀಗೇಕೆ? ಎಂಬ ಅನುಮಾನ ಮೂಡುತ್ತೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಕೆಎಸ್‌ಇ ಗೈರಾಗಿದ್ದನ್ನ ನೆನಪು ಮಾಡಿಕೊಳ್ಳಬಹುದು.

ಶಿವಮೊಗ್ಗ ನಗರದಲ್ಲಿ, ನಗರ ವ್ಯಾಪ್ತಿಯಿಂದ ಜಿಲ್ಲಾ ಬಿಜೆಪಿಯ ಪದಾಧಿಕಾರಿಯಾದವರಲ್ಲಿ ಸದಾ ಒಳಜಗಳ ಹಾಗೂ ಮನಸ್ಥಾಪಗಳಿವೆ, ಇಲ್ಲಿ ಬಿಎಸ್‌ವೈ ಹಾಗೂ ಈಶ್ವರಪ್ಪ ಆಪ್ತರೆಂದೇ ಗುರುತಿಸಿಕೊಂಡವರಿದ್ದಾರೆ, ಇನ್ನು ಸಂಘಟನೆಯಿಂದ ಬಂದವರು ಬಿಜೆಪಿ ರಾಜ್ಯಾಧ್ಯಕ್ಷರ ಆಪ್ತರಾಗಿ ಕೆಲವು ಹುದ್ದೆ ಅಲಂಕರಿಸಿಕೊಂಡು ಬಿಎಸ್‌ವೈ ಬಣವನ್ನ ಅನುಮಾನದಿಂದ ನೋಡುವುದು ಇದ್ದೇ ಇದೆ. ಆದರೆ ಸಿಎಂ ಮಾತ್ರ ಸ್ಥಳೀಯ ವಿಷಯಗಳಿಗೆ ತಲೆಕೆಡಿಸಿಕೊಳ್ಳದೇ ಶಿವಮೊಗ್ಗಕ್ಕೆ ಸಾಕಷ್ಟು ಅನುದಾನವನ್ನೂ ತಂದುಕೊಂಡು ಆಯಾ ತಾಲೂಕುಗಳ ಶಾಸಕರ ಜೊತೆ ಕಾರ್ಯಕ್ರಮಗಳನ್ನ ನಡೆಸಿ ಆಚಿಂದಾಚೆ ಶಿಕಾರಿಪುರದಿಂದ ಹೊರಟು ಬಿಡುತ್ತಾರೆ. ವಿಶೇಷವಾಗಿ ಮಧ್ಯ ಕರ್ನಾಟಕದ ಕಾರ್ಯಕ್ರಗಳಿಗೆ ಶಿಕಾರಿಪುರವನ್ನೇ ಕೇಂದ್ರವನ್ನಾಗಿಸಿಕೊಳ್ಳುತ್ತಾರೆ, ಶಿವಮೊಗ್ಗ ನಗರದ ಕಡೆ ಸುಳಿಯುವುದೂ ಕಡಿಮ

ಇತ್ತೀಚೆಗೆ ಶಿವಮೊಗ್ಗ ಮೇಯರ್‌ ಚುನಾವಣೆ ನಡೆಯಿತು, ಈ ಚುನಾವಣೆಯಲ್ಲಿ ಶಿಸ್ತಿನ ಪಕ್ಷ ಬಿಜೆಪಿಯ ಬಣ ರಾಜಕೀಯ ಎಷ್ಟರಮಟ್ಟಿಗೆ ವೈಷಮ್ಯ ಸಾಧಿಸಿತ್ತು ಎಂದರೆ ಎರಡೂ ಬಣದ ಕಾರ್ಪೋರೇಟರ್‌ಗಳು ಮೇಯರ್‌ಗಾದಿಗೆ ಆಪ್ತರ ಮೂಲಕ ಪರಸ್ಪರ ಸುಳ್ಳು ಪ್ರಮಾಣಪತ್ರ ಪ್ರಕರಣ ದಾಖಲಿಸಿಕೊಂಡು ಪ್ರತಿಷ್ಠೆಗೆ ಇಳಿದಿದ್ದರು, ಕೊನೆಗೆ ಮೇಯರ್‌ ಅಭ್ಯರ್ಥಿ ಯೋಗ್ಯತೆ ಹೈಕೋರ್ಟ್‌ನಲ್ಲಿ ಸ್ಟೇ ತರುವ ಮೂಲಕ ತಾತ್ಕಾಲಿಕ ಸಿಂಧುತ್ವ ಪಡೆದುಕೊಂಡಿತು. ಈಶ್ವರಪ್ಪ ಬಣದ ಸುವರ್ಣ ಶಂಕರ್‌ ಮೇಯರ್‌ ಆದರು, ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡಿದ್ದ ಅನಿತಾ ರವಿಶಂಕರ್‌ ತಣ್ಣಗಾದರು. ಇವೆಲ್ಲಾ ಬಿಎಸ್‌ವೈಗೆ ಗೊತ್ತಿದ್ದರೂ ಗೊತ್ತಿಲ್ಲದ ತರಹ ನಡೆದುಕೊಳ್ಳುತ್ತಾರೆ. ಇಬ್ಬರು ನಾಯಕರಿಗೂ ಎಪ್ಪತ್ತು ದಾಟಿರುವುದರಿಂದ ಪರಸ್ಪರ ಅಸಮಾಧಾನ ಅನವಶ್ಯ.

Click here Support Free Press and Independent Journalism

Pratidhvani
www.pratidhvani.com