ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ BSY, ಟ್ರಂಪ್‌  ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿರುವುದೇಕೆ?
ರಾಜ್ಯ

ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ BSY, ಟ್ರಂಪ್‌  ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿರುವುದೇಕೆ?

ಡೊನಾಲ್ಡ್ ಟ್ರಂಪ್ ಗೌರವಾರ್ಥ ಏರ್ಪಡಿಸಿರುವ ಔತಣಕೂಟದಲ್ಲಿ ಪಾಲ್ಗೊಂಡರೆ ವರಿಷ್ಠರನ್ನು ಸಂತೃಪ್ತಿಪಡಿಸಿದಂತೆಯೂ ಆಗುತ್ತದೆ. ಸಮಯ ಸಿಕ್ಕಿದರೆ ಕೇಂದ್ರ ಸಚಿವರ ಜತೆ ರಾಜ್ಯದ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಬಹುದು. ಅಮೆರಿಕಾ ಅಧಿಕಾರಿಗಳ ಗಮನ ಸೆಳೆದು ಬೆಂಗಳೂರಿಗೆ ಇನ್ನಷ್ಟು ಅನುಕೂಲ ಕಲ್ಪಿಸಬಹುದು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಯೋಚನೆಯೇ?

ಇಂದಿರಾತನಯ

ಭಾರತಕ್ಕೆ ಆಗಮಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿರುವ ಔತಣ ಕೂಟದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಔತಣ ಕೂಟಕ್ಕೆ ಆಹ್ವಾನ ಬಂದಿದ್ದರೂ ಪಾಲ್ಗೊಳ್ಳುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದು ಸೋಮವಾರವಷ್ಟೇ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ದೀಢೀರ್ ನಿಲುವು ಬದಲಾವಣೆ ಮಾಡಿ ಔತಣಕೂಟದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದು, ಇದರ ಹಿಂದೆ ಔತಣಕೂಟದಲ್ಲಿ ಪಾಲ್ಗೊಳ್ಳುವುದಕ್ಕಿಂತಲೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ವರಿಷ್ಠರನ್ನು ಸಂತುಷ್ಠಗೊಳಿಸುವ ಉದ್ದೇಶ ಅಡಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾದ ಬಳಿಕ ಹೈಕಮಾಂಡ್ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ನಿರ್ಧಾರಗಳ ವಿಚಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಹೈಕಮಾಂಡ್ ನಾಯಕರನ್ನು ಓಲೈಸುತ್ತಿದ್ದಾರೆ. ಇದರ ಮುಂದುವರಿದ ಭಾಗವೇ ಡೊನಾಲ್ಡ್ ಟ್ರಂಪ್ ಔತಣಕೂಟದಲ್ಲಿ ಭಾಗವಹಿಸುತ್ತಿರುವುದು ಎಂದು ಹೇಳಲಾಗುತ್ತಿದೆ. ಔತಣಕೂಟಕ್ಕೆ ತೆರಳಿದರೆ ಅಲ್ಲಿ ಪ್ರಧಾನಿ ಜತೆಗೆ ಬಿಜೆಪಿಯ ಹಿರಿಯ ನಾಯಕರೂ ಇರುತ್ತಾರೆ. ಅವರೊಂದಿಗೆ ಕುಶಲೋಪರಿ ನಡೆಸಿದರೆ ಅಗತ್ಯ ಸಂದರ್ಭದಲ್ಲಿ ನೆರವಿಗೆ ಬರುತ್ತಾರೆ ಎಂಬುದು ಯಡಿಯೂರಪ್ಪ ಅವರ ಭಾವನೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಯಡಿಯೂರಪ್ಪ ಅವರು ಆ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸುವ ಪ್ರಯತ್ನ ಶುರುಹಚ್ಚಿಕೊಂಡಿದ್ದರು. ಆರಂಭದಲ್ಲಿ ಇದಕ್ಕೆ ವರಿಷ್ಠರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆದರೂ ಪಟ್ಟು ಬಿಡದ ಯಡಿಯೂರಪ್ಪ ಒಂದೂ ಕಾಲು ವರ್ಷದ ಬಳಿಕ ಸರ್ಕಾರ ಉರುಳಿಸುವಲ್ಲಿ ಯಶಸ್ವಿಯಾದರು. ಇದರಿಂದ ಯಡಿಯೂರಪ್ಪ ಅವರ ರಾಜಕೀಯ ಶಕ್ತಿ ವರಿಷ್ಠರಿಗೂ ಮನವರಿಕೆಯಾಗಿ ಅವರ ಬೆನ್ನಿಗೆ ನಿಂತಿದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಂಪುಟ ರಚನೆ ವಿಚಾರದಲ್ಲಿ ವರಿಷ್ಠರು ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಎರಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿ ಲಕ್ಷ್ಮಣ ಸವದಿ (ಲಿಂಗಾಯತ) ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ (ಒಕ್ಕಲಿಗ) ಅವರಿಗೆ ನೀಡಬೇಕು ಎಂದು ಹೇಳಿದಾಗ, ಅದನ್ನು ಒಪ್ಪಬೇಕಾದರೆ ಗೋವಿಂದ ಕಾರಜೋಳ (ದಲಿತ) ಅವರಿಗೂ ಉಪಮುಖ್ಯಮಂತ್ರಿ ಹುದ್ದೆ ಬೇಕು ಎಂದು ಹೇಳಿ ಆ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸಿಕೊಂಡಿದ್ದರು. ನಂತರ ತಮಗೆ ಬೇಕಾದಂತೆ ಸಂಪುಟ ರಚನೆ ಮಾಡಿ ಅದಕ್ಕೆ ಹೈಕಮಾಂಡ್ ಒಪ್ಪಿಗೆ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು.

ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ BSY, ಟ್ರಂಪ್‌  ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿರುವುದೇಕೆ?
http://truthprofoundationindia.com/

ನಂತರ ನಡೆದ ಉಪ ಚುನಾವಣೆಯಲ್ಲಿ 15ರಲ್ಲಿ 13 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಾಗ ಯಡಿಯೂರಪ್ಪ ಅವರ ಶಕ್ತಿ ಮತ್ತಷ್ಟು ಹೆಚ್ಚಾಯಿತು. ತಮಗಿಷ್ಟ ಬಂದಂತೆ ನಿರ್ಧಾರಗಳನ್ನು ಕೈಗೊಳ್ಳಲು ಅವರಿಗೆ ಯಾವ ಅಡ್ಡಿಯೂ ಇರಲಿಲ್ಲ. ಆದರೆ, ತನ್ನ ನಂತರ ರಾಜ್ಯ ರಾಜಕೀಯದಲ್ಲಿ ಪುತ್ರ ವಿಜಯೇಂದ್ರ ಅವರಿಗೆ ಹೆಚ್ಚಿನ ಅವಕಾಶ ಸಿಗಲು ಹೈಕಮಾಂಡ್ ನಾಯಕರ ಕೃಪಾಕಟಾಕ್ಷ ಅಗತ್ಯವಿದೆ ಎಂಬ ಕಾರಣಕ್ಕಾಗಿ ಎಲ್ಲಾ ತೀರ್ಮಾನಗಳಿಗೂ ವರಿಷ್ಠರ ಕಡೆ ಮುಖ ಮಾಡಲಾರಂಭಿಸಿದ್ದರು. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಲು ತಮ್ಮೆಲ್ಲಾ ಆಪ್ತರನ್ನು ದೂರವಿಟ್ಟು ಪುತ್ರರಾದ ವಿಜಯೇಂದ್ರ ಮತ್ತು ಬಿ.ವೈ.ರಾಘವೇಂದ್ರ ಅವರನ್ನು ಜತೆಗೆ ಕರೆದುಕೊಂಡು ಹೋಗಿದ್ದರು. ಮಾತುಕತೆಯ ವಿವರಗಳು ಬಹಿರಂಗವಾಗದಿರಲಿ ಎಂಬುದು ಇದರ ಹಿಂದಿನ ಒಂದು ಉದ್ದೇಶವಾದರೆ, ಅದಕ್ಕಿಂತ ಮುಖ್ಯವಾಗಿ ವಿಜಯೇಂದ್ರ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮತ್ತು ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸುವುದರ ಹಿಂದೆ ಇದ್ದ ಅವರ ಪಾತ್ರವನ್ನು ವಿವರಿಸಿ ನಡ್ಡಾ ಅವರಿಗೆ ಪರಿಚಯ ಮಾಡಿಕೊಡುವುದಾಗಿತ್ತು.

ಔತಣಕೂಟದಲ್ಲಿ ಪಾಲ್ಗೊಳ್ಳುವುದರ ಹಿಂದೆ ಸ್ವಕಾರ್ಯದ ಜತೆಗೆ ಸ್ವಾಮಿ ಕಾರ್ಯವೂ ಇದೆ

ಹೈಕಮಾಂಡ್ ನಾಯಕರನ್ನು ಸಂತೋಷಗೊಳಿಸುವ ಯಡಿಯೂರಪ್ಪ ಅವರ ಕಾರ್ಯದ ಮುಂದುವರಿದ ಭಾಗವೇ ಟ್ರಂಪ್ ಔತಣಕೂಟದಲ್ಲಿ ಭಾಗವಹಿಸುವುದು. ಅದಕ್ಕಾಗಿ ಬಜೆಟ್ ಪೂರ್ವಭಾವಿ ಸಭೆ ಸೇರಿದಂತೆ ತಮ್ಮೆಲ್ಲಾ ಪೂರ್ವನಿರ್ಧರಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಯಡಿಯೂರಪ್ಪ ಅವರು ಏಕಾಏಕಿ ದೆಹಲಿಗೆ ಹೊರಟು ನಿಂತರು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಧಿಕೃತವಾಗಿ ಮಾತುಕತೆ ನಡೆಸಲು ಸಾಧ್ಯವಾಗದೇ ಇದ್ದರೂ ಅನೌಪಚಾರಿಕವಾಗಿ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಸೇರಿದಂತೆ ಕೆಲವೊಂದು ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಸಾಧ್ಯವಾದರೆ ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಾಗಿರುವ ಬಾಕಿ ಅನುದಾನದ ಬಗ್ಗೆಯೂ ಅನೌಪಚಾರಿಕವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರ ಜತೆಗೆ ರಾಜ್ಯದ ಕೆಲವೊಂದು ವಿಚಾರಗಳ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಬಂದಿರುವ ಅಲ್ಲಿನ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಲಿದ್ದಾರೆ. ಭಾರತದ ಐಟಿ ಹಬ್ ಆಗಿರುವ ಬೆಂಗಳೂರಿಗೆ ವಿಶ್ವದಲ್ಲೇ ವಿಶೇಷ ಸ್ಥಾನಮಾನವಿದೆ. ಮೇಲಾಗಿ ಐಟಿ ಉದ್ಯಮದಲ್ಲಿ ಬೆಂಗಳೂರಿಗೆ ಸೆಡ್ಡು ಹೊಡೆಯಲು ಹೈದರಾಬಾದ್ ಪ್ರಯತ್ನಿಸುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಔತಣಕೂಟಕ್ಕೆ ಹೋಗಿ ತಾವು ಹೋಗದೇ ಇದ್ದರೆ ಆಗ ಅಮೆರಿಕಾ ಅಧಿಕಾರಿಗಳ ಗಮನ ಬೆಂಗಳೂರಿಗಿಂತ ಹೆಚ್ಚಾಗಿ ಹೈದರಾಬಾದ್ ಮೇಲೆ ಬೀರುತ್ತದೆ. ಭವಿಷ್ಯದಲ್ಲಿ ಇದು ಬೆಂಗಳೂರಿಗೆ ಸ್ವಲ್ಪ ಮಟ್ಟಿನ ತೊಡಕು ಉಂಟುಮಾಡಬಹುದು. ಅದಕ್ಕೆ ಅವಕಾಶವಾಗದೇ ಇರಬೇಕಾದರೆ ಔತಣಕೂಟದಲ್ಲಿ ಪಾಲ್ಗೊಂಡು ಅಮೆರಿಕಾ ಅಧಿಕಾರಿಗಳ ಗಮನ ಸೆಳೆಯಬೇಕಾಗುತ್ತದೆ. ಅದಕ್ಕಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿ ಟ್ರಂಪ್ ಗೌರವಾರ್ಥ ಏರ್ಪಡಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ BSY, ಟ್ರಂಪ್‌  ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿರುವುದೇಕೆ?

ಒಟ್ಟಾರೆ ಡೊನಾಲ್ಡ್ ಟ್ರಂಪ್ ಜತೆಗಿನ ಔತಣಕೂಟದಲ್ಲಿ ಪಾಲ್ಗೊಂಡರೆ ಸ್ವಕಾರ್ಯದ ಜತೆಗೆ ಸ್ವಾಮಿ ಕಾರ್ಯವೂ ಆಗುತ್ತದೆ. ಇದರಿಂದ ರಾಜಕೀಯವಾಗಿ ತಮಗೆ ಅನುಕೂಲವಾದರೆ, ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಮತ್ತು ಕರ್ನಾಟಕಕ್ಕೆ ಲಾಭ ಸಿಗಬಹುದು ಎಂಬ ದೂರದೃಷ್ಟಿಯೊಂದಿಗೆ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ.

Click here Support Free Press and Independent Journalism

Pratidhvani
www.pratidhvani.com