ಕೊಡಗಿನಲ್ಲಿ  ಭೂ ಪರಿವರ್ತನೆಗೆ  ಅಸ್ತು ಎಂದ ಸರ್ಕಾರ ; ಪರಿಣಾಮವೇನು ಗೊತ್ತೇ?
ರಾಜ್ಯ

ಕೊಡಗಿನಲ್ಲಿ  ಭೂ ಪರಿವರ್ತನೆಗೆ  ಅಸ್ತು ಎಂದ ಸರ್ಕಾರ ; ಪರಿಣಾಮವೇನು ಗೊತ್ತೇ?

ಪುಟ್ಟ ಜಿಲ್ಲೆ ಕೊಡಗು  ಕಳೆದ ಎರಡು ವರ್ಷಗಳ ಭೀಕರ ಮಳೆ ಹಾಗೂ ಭೂ ಕುಸಿತಕ್ಕೆ ಸಿಲುಕಿ ನಲುಗಿ ಹೋಗಿದೆ.ಈ ಕುರಿತು ಸಮೀಕ್ಷೆ ನಡೆಸಿದ ರಾಜ್ಯದ ಹಿರಿಯ ಭೂ ವಿಜ್ಞಾನಿಗಳ ತಂಡ ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣವೂ ಭೂ ಕುಸಿತಕ್ಕೆ ಕಾರಣ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಕೋವರ್ ಕೊಲ್ಲಿ ಇಂದ್ರೇಶ್

ಪುಟ್ಟ ಜಿಲ್ಲೆ ಕೊಡಗು ಕಳೆದ ಎರಡು ವರ್ಷಗಳ ಭೀಕರ ಮಳೆ ಹಾಗೂ ಭೂ ಕುಸಿತಕ್ಕೆ ಸಿಲುಕಿ ನಲುಗಿ ಹೋಗಿದೆ. ಪ್ರವಾಸೋದ್ಯಮವೂ ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ. ಕಳೆದ ವರ್ಷದ ಭೀಕರ ಭೂ ಕುಸಿತದಲ್ಲಿ ಸಾವಿರಾರು ಜನರು ಆಸ್ತಿ ಪಾಸ್ತಿ ಮನೆ ಗಳನ್ನು ಕಳೆದುಕೊಂಡಿದ್ದಾರೆ. ಈ ಕುರಿತು ಸಮೀಕ್ಷೆ ನಡೆಸಿದ ರಾಜ್ಯದ ಹಿರಿಯ ಭೂ ವಿಜ್ಞಾನಿಗಳ ತಂಡ ಅವೈಜ್ಞಾನಿಕ ಕಟ್ಟಡಗಳ ನಿರ್ಮಾಣವೂ ಭೂ ಕುಸಿತಕ್ಕೆ ಕಾರಣ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯ ಬೆನ್ನಲ್ಲೇ ರಾಜ್ಯ ಸರ್ಕಾರ ೨೦೧೯ ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಕೊಡಗಿನಾದ್ಯಂತ ವಾಣಿಜ್ಯಕ್ಕಾಗಿ ಅಥವಾ ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ,

ಜಿಲ್ಲೆಯ ಇಬ್ಬರು ಜನಪ್ರತಿನಿಧಿಗಳಾದ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್‌ ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ ಜಿ ಬೋಪಯ್ಯ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಭೂಪರಿವರ್ತನೆ ಸ್ಥಗಿತದಿಂದ ಜಿಲ್ಲೆಯಲ್ಲಿ ಗಂಭೀರ ಸಮಸ್ಯೆ ಉಂಟಾಗಿರುವ ಬಗ್ಗೆ ಕೊಡಗು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸರಕಾರದ ಗಮನಕ್ಕೆ ತಂದಿದ್ದರು. ಅಲ್ಲದೆ ಭೂಪರಿವರ್ತನೆಯನ್ನು ಮರು ಕಲ್ಪಿಸಬೇಕೆಂದು ಜಿಲ್ಲೆಯಿಂದ ಸಾವಿರಾರು ಮಂದಿ ಲಿಖಿತ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಡಗಿನ ಜನ ಸಾಮಾನ್ಯರ ಹಿತದೃಷ್ಟಿಯಿಂದ ಭೂಪರಿವರ್ತನಾ ಕಾರ್ಯವನ್ನು ಮರು ಪ್ರಾರಂಭಿಸ ಬೇಕೆಂದು ಮುಖ್ಯಮಂತ್ರಿಗಳ ಕಚೇರಿಯಿಂದಲೂ ಸೂಚನೆ ನೀಡಲಾಗಿತ್ತು.ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು ಹಾಗೂ ರಾಜ್ಯದ ಉನ್ನತ ಅಧಿಕಾರಿಗಳ ಸಭೆಯನ್ನು ಇಂದು ಬೆಂಗಳೂರಿನಲ್ಲಿ ನಡೆಸಿ , ಭೂಪರಿವರ್ತನೆಗೆ ಮರು ಅವಕಾಶ ಕಲ್ಪಿಸಲು ಕೆಲವು ನಿಬಂಧನೆಗಳೊಂದಿಗೆ ನಿರ್ಧರಿಸಲಾಯಿತು.

ಮುಖ್ಯವಾಗಿ ಬೆಟ್ಟ ಪ್ರದೇಶಗಳಿಂದ ಸಹಜವಾಗಿ ಹರಿದು ಬರುವ ನೀರನ್ನು ತಡೆದು, ಅಂತಹ ಕಡೆಗಳಲ್ಲಿ ರೆಸಾರ್ಟ್ ಇತ್ಯಾದಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡಲಾಗುವುದಿಲ್ಲ. ಒಳಚರಂಡಿಗಳು ಇರುವಂತಹ ಪ್ರದೇಶಗಳಲ್ಲಿ ಗಿರಿಕಂದರಗಳಿಂದ ನೀರು ಹರಿದು ಬರುವಂತಹ ಸ್ಥಳಗಳನ್ನು ಇನ್ನು ಮುಂದೆ ‘ಬಫರ್ ಜೋನ್’ ಎಂದು ಘೋಷಿಸ ಲಾಗುತ್ತದೆ. ಅಂತಹ ಪ್ರದೇಶಗಳಲ್ಲಿ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ನೀರನ್ನು ತಡೆಹಿಡಿಯುವಂತಹ ಕಾರ್ಯಕ್ಕೆ ವಿರಾಮ ಹಾಕಲಾಗುತ್ತದೆ. ಏಕೆಂದರೆ ಹಾಗೆ ಮಾಡಿದಾಗ ಆ ಪ್ರದೇಶಗಳಲ್ಲಿ ಸ್ಥಗಿತಗೊಳ್ಳುವ ನೀರಿನ ಹರಿವು ಬೇರೆಡೆಗೆ ತಿರುವು ಪಡೆದು ಅಲ್ಲಿ ಭೂಕುಸಿತ ಉಂಟಾಗುವ ಅಪಾಯ ಎದುರಾಗುವುದರಿಂದ ಈ ನಿರ್ಬಂಧ ವಿಧಿಸಲಾಗಿದೆ.

ಇದೇ ರೀತಿ ವಾಣಿಜ್ಯ ಕಟ್ಟಡಗಳು, ಶಾಲೆಗಳು, ರೆಸಾರ್ಟ್‍ಗಳು, ಪೆಟ್ರೋಲ್ ಬಂಕ್‍ಗಳು ಅಥವಾ ಖಾಸಗಿ ಉದ್ಯಮಗಳನ್ನು ಪ್ರಾರಂಭಿಸಬೇಕಾದರೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಿಂದ ಕಡ್ಡಾಯ ನಿರಾಪೇಕ್ಷಣಾ ಪತ್ರ ಪಡೆದು ಬಳಿಕ ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದು ಕಟ್ಟಡಗಳನ್ನು ನಿರ್ಮಿಸಬೇಕಾಗಿದೆ. ಅಲ್ಲದೆ 2018 ಹಾಗೂ 2019ರಲ್ಲಿ ಜಿಲ್ಲೆಯ ಯಾವ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿತ್ತು. ಆ ಪ್ರದೇಶಗಳಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದಿಲ್ಲ. ಇದೇ ಅಲ್ಲದೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಿಂದ ವರದಿ ತರಿಸಿ, ಈ ಹಿಂದೆ ಭೂಕುಸಿತದ ಪ್ರದೇಶವಲ್ಲದೆ ಮುಂದೆಯೂ ಎದುರಾಗಬಹುದಾದ ಭೂಕುಸಿತ ಸಂಭವನೀಯ ಪ್ರದೇಶ ಹಾಗೂ ‘ರೆಡ್ ಅಲರ್ಟ್ ಸ್ಥಳಗಳಲ್ಲಿ ಭೂ ಪರಿವರ್ತನೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಸರ್ಕಾರ ನಿರ್ಭಂಧ ವಿಧಿಸಿದ್ದ ಅವಧಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಮಾತ್ರ 20 ಸೆಂಟ್‌ ಗಳವರೆಗೆ ಅಂದರೆ ಅಂದಾಜು 2700 ಚದರ ಅಡಿಗಳವರೆಗೆ ಪರಿವರ್ತನೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದರಿಂದಾಗಿ ಕೊಡಗಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಒಮ್ಮೆಲೇ ಬ್ರೇಕ್‌ ಬಿದ್ದಂತಾಗಿತ್ತು. ಕೊಡಗಿನಲ್ಲಿ ಬಹುತೇಕ ಬೆಳೆ ಕಾಫಿಯೇ ಆಗಿದ್ದು ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇಳುವರಿ ಕಡಿಮೆಯಾಗಿರುವುದು ಮತ್ತು ಕೃಷಿ ಉತ್ಪನ್ನಗಳ ದರ ಕುಸಿತದಿಂದಾಗಿಯೂ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದರು. ಈ ನಡುವೆ ಕೊಡಗಿನಲ್ಲಿ ಅದ್ಬುತ ಬೆಳವಣಿಗೆ ದಾಖಲಿಸುತ್ತಿರುವದೆಂದರೆ ಪ್ರವಾಸೋದ್ಯಮ ಮಾತ್ರ.

ಇಂದು ಕೊಡಗು ಪ್ರವಾಸೀ ಜಿಲ್ಲೆಯಾಗಿಯೇ ಗುರುತಿಸಿಕೊಂಡಿದ್ದು ವಾರ್ಷಿಕವಾಗಿ ಸುಮಾರು ೧೮ ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಐಟಿ ಬಿಟಿ ಉದ್ಯಮ ದಾಪುಗಾಲಿನ ಬೆಳವಣಿಗೆ ದಾಖಲಿಸಿದಂತೆಯೇ ಕೊಡಗಿನಲ್ಲಿ ಪ್ರವಾಸೋದ್ಯಮವೂ ಜತೆಗೇ ಬೆಳೆಯುತ್ತ ಸಾಗಿದೆ. ಬೆಂಗಳೂರಿಗೆ ಹತ್ತಿರದ ಪ್ರವಾಸೀ ಧಾಮ ಕೊಡಗೇ ಅಗಿದ್ದು ಕೇವಲ 250 ಕಿಲೋಮೀಟರ್‌ ದೂರದಲ್ಲಿರುವುದೂ ಇದಕ್ಕೆ ಪ್ರಮುಖ ಕಾರಣವಾಗಿದೆ.

ಇಂದು ಕೊಡಗಿನಲ್ಲಿ ಅಂದಾಜು 3000 ಕ್ಕೂ ಅಧಿಕ ಹೋಂ ಸ್ಟೇ ಗಳಿವೆ. ಅದರೆ ಇದರಲ್ಲಿ ಸರ್ಕಾರದಿಂದ ಅನುಮತಿ ಪಡೆದಿರುವುದು ಕೇವಲ 650 ಮಾತ್ರ. ಇನ್ನುಳಿದ ಹೋಂ ಸ್ಟೇ ಗಳಲ್ಲಿ ನೀತಿ ನಿಯಮಗಳನ್ನೂ ಗಾಳಿಗೆ ತೂರಿ ನಡೆಸಲಾಗುತ್ತಿದೆ. ಹೋಂ ಸ್ಟೇ ಉದ್ಯಮದಿಂದಾಗಿ ಕೊಡಗಿನಲ್ಲಿ ಸಾವಿರಾರು ಉದ್ಯೋಗ ಸೃಷ್ಟಿ ಆಗಿದೆ ಮತ್ತು ಆಗುತ್ತಿದೆ. ಭೂ ಪರಿವರ್ತನೆ ನಿಷೇಧದಿಂದ ನೂತನ ಹೋಂ ಸ್ಟೇ , ರೆಸಾರ್ಟ್‌ ಸ್ಥಾಪನೆಗೆ ತಡೆ ಬಿದ್ದಿತ್ತು. ಈಗ ತಡೆ ಇಲ್ಲದಿರುವುದರಿಂದ ಹೋಂ ಸ್ಟೇ ಗಳು ನಾಯಿ ಕೊಡೆಗಳಂತೆ ತಲೆ ಎತ್ತಲಿವೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತಿದ್ದಾರೆ.

ದಿನವೊಂದಕ್ಕೆ ಸುಮಾರು 3 ರಿಂದ 5 ಸಾವಿರ ಪ್ರವಾಸಿಗರು ಕೊಡಗಿಗೆ ಭೇಟಿ ನೀಡುತ್ತಾರೆ ಈ ಸಂಖ್ಯೆ ವೀಕೆಂಡ್‌ ಗಳಲ್ಲಿ 10 ಸಾವಿರ ತನಕ ಉಬ್ಬುತ್ತದೆ. ಇಷ್ಟು ಪ್ರವಾಸಿಗರು ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್‌ ತ್ಯಾಜ್ಯದಿಂದಾಗಿ ಕೊಡಗು ಮಲಿನವಾಗುತ್ತಿದೆ ಎಂದು ಮಡಿಕೇರಿಯ ಕಾವೇರಿ ಸೇನೆ ಜಿಲ್ಲಾ ಸಂಚಾಲಕ ರವಿ ಚಂಗಪ್ಪ ಹೇಳಿದರು. ಪ್ರವಾಸಿ ತಾಣಗಳಲ್ಲಿ ಸಾಕಷ್ಟು ದೊಡ್ಡದಾಗಿ ಮಾಲಿನ್ಯ ಮಾಡದಂತೆ ಫಲಕಗಳನ್ನು ಹಾಕಿದ್ದರೂ ಪ್ರವಾಸಿಗರು ಮಲಿನ ಮಾಡುವುದು ತಪ್ಪಿಲ್ಲ ಎಂದೂ ಅವರು ಹೇಳಿದರು. ದಿನವೊಂದಕ್ಕೆ ಅನ್‌ ಲೈನ್‌ ಮೂಲಕ ಇಂತಿಷ್ಟೆ ಪ್ರವಾಸಿಗರಿಗೆ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಬೇಕು ಹಾಗಾದಲ್ಲಿ ಪರಿಸರ ಉಳಿಯಲಿದೆ ಎನ್ನುತ್ತಾರೆ.

ಈ ವರದಿಗಾರನೊಂದಿಗೆ ಮಾತನಾಡಿದ ಮಡಿಕೇರಿಯ ಹೋಂ ಸ್ಟೇ ಮಾಲೀಕ ನಟರಾಜ್‌ ಅವರ ಪ್ರಕಾರ ಕೊಡಗಿನಲ್ಲಿ ಈಗ ಇರುವ ಹೋಂ ಸ್ಟೇ ಗಳ ಸಂಖ್ಯೆಯೇ ಮಿತಿ ಮೀರಿದೆ. ಬಹಳಷ್ಟು ಹೋಂ ಸ್ಟೇ ಮಾಲೀಕರು ನಿಯಮ ಉಲ್ಲಂಘಿಸಿ ಬೇರೆಯವರಿಗೆ ಹೋಂ ಸ್ಟೇ ನಡೆಸಲು ಲೀಸ್‌ ಗೆ ನೀಡುತಿದ್ದಾರೆ. ಈಗ ಇರುವ ಹೋಂ ಸ್ಟೇ ಗಳಿಗೆ ಬಿಸಿನೆಸ್‌ ಇಲ್ಲ , ಇನ್ನು ಹೊಸದಾಗಿ ಹೋಂ ಸ್ಟೇ ಗಳನ್ನು ಆರಂಬಿಸಿದರೆ ಮತ್ತಷ್ಟು ಪರಿಸರ ನಾಶ ಆಗುತ್ತದೆ ಎನ್ನುತ್ತಾರೆ. ಮೊದಲಿಗೆ ಅನಧಿಕೃತ ಹೋಂ ಸ್ಟೇ ಗಳನ್ನು ಮುಚ್ಚಿಸಿ ನೂತನ ಹೋಂ ಸ್ಟೇ ಗಳನ್ನು ಪ್ರಾರಂಬಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಿ ಆ ಸಮಿತಿಯ ಮೂಲಕ ಹೊಸ ಹೋಂ ಸ್ಟೇ ಗಳಿಗೆ ಅನುಮತಿ ನೀಡುವುದು ಉತ್ತಮ ಎಂದೂ ಅವರು ಹೇಳಿದರು.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com