ಕಾವಲುಗಾರನನ್ನೇ ಕೊಂದು ಶ್ರೀಗಂಧ ಲೂಟಿ ಹೊಡೆದರು, ಅಧಿಕಾರಿಗಳು ಸುಮ್ಮನೆ ಕುಳಿತರು
ರಾಜ್ಯ

ಕಾವಲುಗಾರನನ್ನೇ ಕೊಂದು ಶ್ರೀಗಂಧ ಲೂಟಿ ಹೊಡೆದರು, ಅಧಿಕಾರಿಗಳು ಸುಮ್ಮನೆ ಕುಳಿತರು

ಸಾಗರದ ಉಪ ಅರಣ್ಯಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಶ್ರೀಗಂಧದ ಗೋದಾಮಿಗೆ ನುಗ್ಗಿ, ಕಾವಲುಗಾರನ್ನ ಕೊಂದು ನೂರಾರು ಕ್ವಿಂಟಾಲ್‌ ಶ್ರೀಗಂಧದ ತುಂಡುಗಳನ್ನು ಸಾಗಿಸಿದ್ದರು. ಈ ಕ್ರೌರ್ಯಕ್ಕೆ ಸೆಟೆದು ನಿಲ್ಲಬೇಕಿದ್ದ ಅರಣ್ಯ ಹಾಗೂ ಪೊಲೀಸ್‌ ಇಲಾಖೆ ಇನ್ನೂ ಆರೋಪಿಗಳ ಜಾಡು ಹಿಡಿಯುವುದರಲ್ಲೇ ನಿರತವಾಗಿದೆ

ಉದಯ ಸಾಗರ

ಕಳೆದ ವಾರ ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಶ್ರೀಗಂಧದ ಗೋದಾಮಿಗೆ ನುಗ್ಗಿ, ಕಾವಲುಗಾರನ್ನ ಕೊಂದು, ದಾಸ್ತಾನಿಟ್ಟಿದ್ದ ನೂರಾರು ಕ್ವಿಂಟಾಲ್‌ ಶ್ರೀಗಂಧದ ತುಂಡುಗಳನ್ನು ಸಾಗಿಸಿದ್ದರು. ಮೃತ ಕಾವಲುಗಾರನ ದೇಹ ಇಪ್ಪತ್ತು ಕಿಲೋಮೀಟರ್‌ ಆಚೆಯ ಬಸ್‌ ನಿಲ್ದಾಣದೊಳಗೆ ಬಿಸಾಡಿದ್ದರು, ಈ ಕ್ರೌರ್ಯಕ್ಕೆ ಸೆಟೆದು ನಿಲ್ಲಬೇಕಿದ್ದ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಇನ್ನೂ ಆರೋಪಿಗಳ ಜಾಡು ಹಿಡಿಯುವುದರಲ್ಲೇ ನಿರತವಾಗಿದೆ.

ಅರಣ್ಯ ಇಲಾಖೆಯ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂದರೆ ಕಳ್ಳರು ಹಿರಿಯ ಅಧಿಕಾರಿಗಳ ಕಚೇರಿಗೆ ಲಗ್ಗೆ ಇಡುತ್ತಿದ್ದಾರೆ, ಕಳೆದ ಶುಕ್ರವಾರ ಸಾಗರದ ಅರಣ್ಯ ಉಪವಿಭಾಗಾಧಿಕಾರಿ ಕಚೇರಿ ಕಾವಲುಗಾರನನ್ನ ಕೊಂದು ಒಳಗಿದ್ದ ಗಂಧದ ದಾಸ್ತಾನನ್ನ ಲೂಟಿ ಹೊಡೆದ ಕಳ್ಳರು, ಕಾವಲುಗಾರ ಬಾಳೆಗುಂಡಿ ನಿವಾಸಿ ನಾಗರಾಜ್‌ ಎಂಬುವರ ಮೃತ ದೇಹವನ್ನ ಸುಮಾರು ಇಪ್ಪತ್ತು ಕಿಲೋಮೀಟರ್‌ ಆಚೆಗೆ ಉಳ್ಳೂರು ಗ್ರಾಮಪಂಚಾಯತಿ ವ್ಯಾಪ್ತಿಯ ನೇಂದ್ರವಳ್ಳಿ ಎಂಬ ಬಸ್‌ನಿಲ್ದಾಣದಲ್ಲಿ ಬಿಸಾಡಿ ಹೋಗಿದ್ದರು. ಈ ಕಾರ್ಯಾಚರಣೆಯ ಕುರುಹುಗಳನ್ನ ನೋಡುತ್ತಾ ಹೋದರೆ ಇಡೀ ತಂಡ ಕಮರ್ಷಿಯಲ್‌ ಸಿನಿಮಾ ಕಥೆಗಳಿಗಿಂತ ರೋಚಕವಾಗಿ ಯೋಜನೆ ರೂಪಿಸಿದೆ. ಕಚೇರಿಯಲ್ಲಿದ್ದ ಟ್ಯೂಬ್‌ಲೈಟ್‌ಗಳು ಹಾಗೂ ಸಿಸಿಟಿವಿಗಳನ್ನ ಒಡೆದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಗಂಧದ ತುಂಡುಗಳನ್ನ ದೋಚಿದ್ದರು.

ಬೆಳಕು ಹರಿಯುತ್ತಿದ್ದಂತೆ ಕಚೇರಿಯ ಬಾಗಿಲು ಒಡೆದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಕಾವಲುಗಾರನ ನಾಪತ್ತೆ ನೋಡಿ ಇದು ಆತನದ್ದೆ ಕೃತ್ಯ ಎಂದುಕೊಳ್ಳುತ್ತಿರುವಂತೆ, ಕಾವಲುಗಾರನ ಹೆಣ ಬಸ್‌ನಿಲ್ದಾಣದಲ್ಲಿ ಸಿಕ್ಕಿತೆಂಬ ಮಾಹಿತಿ ಬಂತು. ಈಗ ಜನರು ಆಕ್ರೋಶಭರಿತರಾಗಿ ವ್ಯವಸ್ಥೆಯ ವಿರುದ್ಧ ಹರಿಹಾಯ್ದರು, ಪೊಲೀಸರನ್ನೂ ಶಪಿಸಿದರು.

ಅಷ್ಟಾದರೂ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ ಸ್ಥಳಕ್ಕೆ ಬರಲೇ ಇಲ್ಲ, ಜನರ ಸಿಟ್ಟು ಮತ್ತಷ್ಟು ಏರುತ್ತಿದ್ದಂತೆ ಆಗಮಿಸಿ ಎಫ್‌ಐಆರ್‌ ದಾಖಲಿಸುವುದಾಗಿ ಹೇಳಿ ಹೊರಟರು. ಅಲ್ಲಿ ದೋಚಿದ್ದೆಷ್ಟು, ಏನೇನು ನಷ್ಟ ಸಂಭವಿಸಿದೆ ಎಂಬ ಮಾಹಿತಿಯನ್ನ ಮಾಧ್ಯಮಕ್ಕೂ ನೀಡದೇ ಗೌಪ್ಯವಾಗಿಟ್ಟ ಅರಣ್ಯ ಇಲಾಖೆ ಆರೋಪಿ ಸಿಕ್ಕಾಗ ಇಂತಿಷ್ಟೇ ಕಳುವಾಗಿತ್ತು ಎಂದು ಹೇಳುವುದು ಕಷ್ಟ.

ಶ್ರೀಗಂಧ ಕಾವಲುಗಾರ ನಾಗರಾಜ್‌ ಮನೆಯವರಿಗೆ ಸಾಂತ್ವಾನ ಹೇಳಿದ ಶಾಸಕ ಹರತಾಳು ಹಾಲಪ್ಪ ವಿಚಾರಣೆ ಮಾಡುವಂತೆ ಹೇಳಿ ಹೊರಟರು, ಇತ್ತ ಪೊಲೀಸರು ನಾಲ್ಕು ದಿನಗಳಿಂದ ಆರೋಪಿಗಳಿಗೆ ಬಲೆ ಬೀಸಿ ಯಾವುದೇ ಪ್ರಗತಿ ಕಾಣದೇ ಸಾಕ್ಷ್ಯಗಳಿಗೆ ತಡಕಾಡುತ್ತಿದ್ದಾರೆ, ಕಾವಲುಗಾರನನ್ನ ಕೊಂದು ಬಸ್‌ ನಿಲ್ದಾಣದಲ್ಲಿ ಬಿಡಾಡಿ ಗಂಧವನ್ನ ತುಂಬಿಕೊಂಡು ಹೋದ ಆರೋಪಿಗಳಿಗೆ ಒಳಗಿನ ಮಾಹಿತಿ ಕರಾರುವಕ್ಕಾಗಿ ಗೊತ್ತಿತ್ತು, ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡು ಬಂದು ಸಿನಿಮಾ ಶೈಲಿಯಲ್ಲಿ ಲೂಟಿ ಮಾಡಿದ್ದಾರೆ, ಆದರೂ ಪೊಲೀಸರಿಗೆ ದುಷ್ಕರ್ಮಿಗಳ ಜಾಡು ಸಿಗುತ್ತಿಲ್ಲ! ಅತ್ತ ಮೃತನ ಕುಟುಂಬಕ್ಕೆ ಪರಿಹಾರವೂ ಇಲ್ಲ! ಇದು ಇಡೀ ಅರಣ್ಯ ಇಲಾಖೆ ಹೇಗೆ ಕರ್ತವ್ಯ ನಿರ್ವಹಿಸುತ್ತಿದೆ, ಒಬ್ಬ ಸಾಮಾನ್ಯ ಸಿಬ್ಬಂದಿಗೆ ಇಲಾಖೆಯಲ್ಲಿರುವ ಸ್ಥಾನಮಾನಗಳೇನು ಎಂಬುದಕ್ಕೊಂದು ನಿದರ್ಶನ.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com