ಸಂಪುಟ ವಿಸ್ತರಣೆ ಜೇನುಗೂಡಿಗೆ ಕೈಹಾಕಿರುವ ಬಿಎಸ್‌ವೈ ರಾಜ್ಯಭಾರ ಎಷ್ಟು ದಿನ?‌

ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಸಿಎಂ ಆದ ಬಿಎಸ್‌ವೈ ಈಗ ತಮ್ಮ ಯುಗಾಂತ್ಯಕ್ಕೆ ಕಾಲ ನಿಗದಿ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನಗಳು ಎದ್ದಿವೆ. ಸಂಪುಟ ವಿಸ್ತರಣೆಯ ನಂತರದ ವಿದ್ಯಮಾನಗಳು ಇದನ್ನು ನಿರ್ಧರಿಸಲಿವೆ.
ಸಂಪುಟ ವಿಸ್ತರಣೆ  ಜೇನುಗೂಡಿಗೆ ಕೈಹಾಕಿರುವ ಬಿಎಸ್‌ವೈ ರಾಜ್ಯಭಾರ ಎಷ್ಟು ದಿನ?‌

ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಮುಂಬೈನಲ್ಲಿ ಬಚ್ಚಿಟ್ಟು ಸಮ್ಮಿಶ್ರ ಸರ್ಕಾರವನ್ನು ಸಂಖ್ಯಾಬಲದ ಆಧಾರದಲ್ಲಿ ಪತನಗೊಳಿಸದ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ/ ಪುನಾರಚನೆ ವಿದ್ಯಾಮಾನ ಸ್ಫೋಟಕ್ಕೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ. ಸಂವಿಧಾನೇತರ ಶಕ್ತಿಗಳು ಸೇರಿದಂತೆ ಆಂತರಿಕ ಹಾಗೂ ಬಹಿರಂಗವಾಗಿ ಹಲವಾರು ಒತ್ತಡಗಳಿಗೆ ಸಿಲುಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಹೆಸರಿನಲ್ಲಿ ಜೇನುಗೂಡಿಗೆ ಕೈಹಾಕಲು ಮುಂದಡಿ ಇಟ್ಟಿದ್ದಾರೆ. ಸಂಪುಟ ವಿಸ್ತರಣೆಯ ನಂತರದ ಬೆಳವಣಿಗೆಗಳು ಸ್ಫೋಟದ ತೀವ್ರತೆಯನ್ನು ನಿರ್ಧರಿಸಲಿವೆ.

ಮಂತ್ರಿ ಮಂಡಲ ವಿಸ್ತರಣೆಯ ನಂತರದಲ್ಲಿ ಸೃಷ್ಟಿಯಾಗುವ ಪ್ರಾದೇಶಿಕ ನ್ಯಾಯ/ಅನ್ಯಾಯ, ಜಾತಿ ಸಮೀಕರಣ, ಜಿಲ್ಲಾ ಪ್ರಾತಿನಿಧ್ಯ, ಮೂಲ-ವಲಸಿಗ, ಹಿರಿ-ಕಿರಿಯ, ಆಪ್ತೇಷ್ಟರ ಮುನಿಸು, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತೃಪ್ತಿಪಡಿಸುವ ಒತ್ತಡ, ಲಿಂಗಾಯತ ಸಮುದಾಯದ ಶಾಸಕರಿಗೆ ಸಂಪುಟದಲ್ಲಿ ಹೆಚ್ಚು ಸ್ಥಾನ ಕಲ್ಪಿಸುವ ಮೂಲಕ ಬಿಜೆಪಿಯ ಬೆನ್ನಿಗೆ ನಿಂತಿರುವ ಸಮುದಾಯದ ಹಿತ ಕಾಯುವುದು, ಚುನಾವಣೆಗಳಲ್ಲಿ ವಿವಿಧ ಸಮುದಾಯಗಳಿಗೆ ನೀಡಿದ ಭರವಸೆ  ಕಾಯ್ದುಕೊಳ್ಳುವುದು ಹೀಗೆ ಕೊನೆ ಮೊದಲಿಲ್ಲದ ಸಮಸ್ಯೆಗಳನ್ನು ಯಡಿಯೂರಪ್ಪ ಹಾಗೂ ಬಿಜೆಪಿ ಎದುರಿಸಬೇಕಿದೆ. ಇವುಗಳೆಲ್ಲವನ್ನೂ ನಿಭಾಯಿಸುವುದರ ಜೊತೆಗೆ ಕೇಂದ್ರ ಸರ್ಕಾರದ ಅವಗಣನೆಯಿಂದ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ರಾಜ್ಯ ಸರ್ಕಾರವನ್ನು ಸಮರ್ಥವಾಗಿ ನಡೆಸುವುದು ಯಡಿಯೂರಪ್ಪನವರಿಗೆ ಸವಾಲಿನ ಕೆಲಸ.

ಈ ಮಧ್ಯೆ, ಪಕ್ಷದಲ್ಲೇ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ಸಂಚುಗಳಿಗೆ ಸಂಪುಟ ವಿಸ್ತರಣೆಯ ನಂತರ ಘಟಿಸಬಹುದಾದ ಬೆಳವಣಿಗೆಗಳು ನೀರೆರೆಯಬಹುದು. ವಯೋಸಹಜವಾಗಿ ರಾಜಕೀಯ ಬದುಕಿನ ಸಂಧ್ಯಾಕಾಲ ತಲುಪಿರುವ ಯಡಿಯೂರಪ್ಪನವರು ಅಸಮರ್ಥರು ಎನ್ನುವ ಹುಯಿಲೆಬ್ಬಿಸುವ ಮೂಲಕ ಅವರನ್ನು ಬದಿಗೆ ಸರಿಸುವ ಪ್ರಯತ್ನಗಳನ್ನು ಬಿಜೆಪಿಯಲ್ಲಿ ಗುಪ್ತವಾಗಿ ಕಾರ್ಯನಿರ್ವಹಿಸುತ್ತಿರುವ ಬಣ ಮಾಡಲು ಕೈಹಾಕುವುದನ್ನು ಅಲ್ಲಗಳೆಯಲಾಗದು. ಸಮಗ್ರವಾಗಿ ನೋಡಿದರೆ ಸಂಪುಟ ವಿಸ್ತರಣೆ ವಿದ್ಯಮಾನವು ಯಡಿಯೂರಪ್ಪನವರ ರಾಜಕೀಯ ಬದುಕಿನ ನಿರ್ಣಾಯಕ ಘಟ್ಟ ಹಾಗೂ ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎನ್ನುವುದು ರಾಜಕೀಯ ತಜ್ಞರ ವಿಶ್ಲೇಷಣೆ.

http://truthprofoundationindia.com/  

ಕರ್ನಾಟಕ ಮಂತ್ರಿ ಮಂಡಲವು ಮುಖ್ಯಮಂತ್ರಿ ಸೇರಿದಂತೆ 34 ಸದಸ್ಯ ಬಲಹೊಂದಿದೆ. ಈಗಾಗಲೇ ಬಿಜೆಪಿಯ 16 ಮಂದಿ ಸಚಿವರಿದ್ದಾರೆ. ಇನ್ನು 17 ಮಂದಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಅವಕಾಶವಿದೆ. ಕಾಂಗ್ರೆಸ್-ಜೆಡಿಎಸ್ ಹಾಗೂ ಪಕ್ಷೇತರರಾದ ಒಟ್ಟು 17 ಮಂದಿಗೂ ಸಂಪುದಲ್ಲಿ ಅವಕಾಶ ಕಲ್ಪಿಸಲು ಬಿಜೆಪಿ ಇಷ್ಟವಿಲ್ಲ. ಇದಕ್ಕಾಗಿ ಅಧಿಕಾರ ಹಿಡಿಯಲು ನೆರವಾದವ ಕಾಂಗ್ರೆಸ್-ಜೆಡಿಎಸ್ ನ ಅರ್ಹ ಹಾಗೂ ಅನರ್ಹ ಶಾಸಕರಲ್ಲಿ ಒಡಕು ಉಂಟು ಮಾಡುವ ಮೂಲಕ ಅಸಲಿ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ.

ಅಧಿಕಾರ ಹಾಗೂ ಹಣದ ಆಸೆಗೆ ಬಿದ್ದು ಪ್ರಜಾತಂತ್ರಿಕ ಮೌಲ್ಯಗಳನ್ನು ಧಿಕ್ಕರಿಸಿ ಬಿಜೆಪಿ ಸೇರಿದ ಕಾಂಗ್ರೆಸ್-ಜೆಡಿಎಸ್‌ನ 15 ಶಾಸಕರು ಅತಂತ್ರರಾಗಿದ್ದು, ಕ್ಷೇತ್ರದ ಜನತೆಗೆ ಉತ್ತರಿಸಲಾಗದೇ ಬಿಜೆಪಿಯ ಕಪಟತನವನ್ನು ಬಹಿರಂಗವಾಗಿ ವಿರೋಧಿಸಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅನರ್ಹಗೊಂಡು ಬಳಿಕ ಚುನಾವಣೆಯಲ್ಲಿ ಗೆದ್ದು ಅರ್ಹರಾದ ಹಾಗೂ ಅನರ್ಹರಾಗಿಯೇ ಉಳಿದ ಕೆಲವರ ಸ್ಥಿತಿಯನ್ನು ಕಂಡು ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ಭವಿಷ್ಯ ನಿಜವಾಗಿದೆ ಎಂದು ಬೀಗುತ್ತಿವೆ.

ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಎಲ್ಲರಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಕಲ್ಪಿಸುವ ಮಾತಿಗೆ ಬದ್ಧವಾಗಿ ಅವರನ್ನು ಸಚಿವರನ್ನಾಗಿ ಮಾಡಿದರೆ ಪಕ್ಷದ ಮೂಲ ನಾಯಕರಲ್ಲಿ ಅಸಮಾಧಾನ ಬುಗಿಲೇಳುವ ಆತಂಕ ಬಿಜೆಪಿಗೆ ಇದೆ. ಬಿಜೆಪಿಗೆ ವಿವಿಧ ಪಕ್ಷಗಳ ನಾಯಕರ ವಲಸೆ ಹೆಚ್ಚಿರುವುದರಿಂದ ಸಹಜವಾಗಿ ಪಕ್ಷದ ಮೂಲ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಪಕ್ಷ ಪ್ರವೇಶಿಸುವವರು ಸ್ಥಾನಮಾನದ ನಿರೀಕ್ಷೆ ಇಟ್ಟುಕೊಂಡೇ ಸೇರುವುದರಿಂದ ಅವರನ್ನು ನಿಭಾಯಿಸುವ ಸ್ಥಾನದಲ್ಲಿ ಬಿಜೆಪಿ ಇಲ್ಲ ಎಂಬುದು ವಾಸ್ತವ.

ಅಧಿಕಾರ ಹಿಡಿದೇ ತೀರುವ ಹಠಕ್ಕೆ ಬಿದ್ದು ಕಾಂಗ್ರೆಸ್-ಜೆಡಿಎಸ್‌ ಶಾಸಕರನ್ನು ರಾಜೀನಾಮೆ ಕೊಡಿಸಿ ಬಿಜೆಪಿಗೆ ಸೇರಿಸಿಕೊಂಡ ಯಡಿಯೂರಪ್ಪ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಅನರ್ಹರನ್ನು ಬೆಂಬಲಿಸುವ ಕುರಿತು ಬಹಿರಂಗವಾಗಿ ಮಾತನಾಡಿರಲಿಲ್ಲ. ಇತರೆ ಬಿಜೆಪಿ ನಾಯಕರು ಅನರ್ಹರ ಬಗ್ಗೆ ಆಡುತ್ತಿದ್ದ ಮಾತಿನ ಬಗ್ಗೆ ತೀರ ನೊಂದು ಕೊಳ್ಳುತ್ತಿದ್ದ ಬಿಎಸ್‌ವೈ ಈಗ ಮೌನದ ಮೂಲಕ ಅಸಹಾಯಕ ಉತ್ತರ ರವಾನಿಸುತ್ತಿದ್ದಾರೆ. ಸದ್ಯ ಮೌನಕ್ಕೆ ಶರಣಾಗುವುದು ಬಿಟ್ಟು ಅವರಿಗೆ ಹೆಚ್ಚಿನ ದಾರಿಗಳೂ ಇಲ್ಲ. ಅಷ್ಟರ ಮಟ್ಟಿಗೆ ಬಿಜೆಪಿಯಲ್ಲಿ ಅವರನ್ನು ಕಟ್ಟಿಹಾಕಲಾಗಿದೆ.

http://truthprofoundationindia.com/   

ರಾಜ್ಯ ಬಿಜೆಪಿ ಹಾಗೂ ಬಹುತೇಕ ಮಂತ್ರಿಗಳನ್ನು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ನಿಯಂತ್ರಿಸುತ್ತಿದ್ದಾರೆ ಎಂಬ ಆರೋಪ ಪಕ್ಷದ ವಲಯದಲ್ಲೇ ಪ್ರಬಲವಾಗಿ ಕೇಳಿಬರುತ್ತಿದೆ. ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯ ಯಾವೊಬ್ಬ ನಾಯಕನೂ ಮಾತನಾಡದೇ ಇದ್ದ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮದೇ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಯತ್ನಾಳ್ ಪರೋಕ್ಷವಾಗಿ ಸಂತೋಷ್‌ ವಿರುದ್ಧ ಹರಿಹಾಯ್ದಿದ್ದರು. ಆಗಲೂ ಯಾರೊಬ್ಬರೂ ವಾಸ್ತವದ ಬಗ್ಗೆ ಮಾತನಾಡಿದ್ದ ಯತ್ನಾಳ್ ಬೆಂಬಲಕ್ಕೆ ನಿಂತಿರಲಿಲ್ಲ. ಬದಲಾಗಿ ಬಸವನಗೌಡ ಪಾಟೀಲ್ ಯತ್ನಾಳ್‌ ಗೆ ಷೋಕಾಷ್ ನೋಟಿಸ್ ಜಾರಿಗೊಳಿಸಿದ್ದನ್ನು ಸ್ಮರಿಸಬಹುದು.

ಇತ್ತೀಚೆಗೆ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ನಿಕಟಪೂರ್ವ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡುವ ಅವಕಾಶವನ್ನು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ನಿರಾಕರಿಸಲಾಗಿತ್ತು. ಪೌರತ್ವ ತಿದ್ದಪಡಿ ಕಾಯ್ದೆ ಕುರಿತ ಜಾಗೃತಿ ಅಭಿಯಾನ ನಡೆಸಲು ಹುಬ್ಬಳ್ಳಿಗೆ ಬಂದಿದ್ದ ಅಮಿತ್ ಶಾ ಅವರು ಅಲ್ಲಿಯೂ ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆ ಅಥವಾ ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವ ಸಂಬಂಧ ಸಮಯ ನೀಡಿರಲಿಲ್ಲ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ಉದ್ಘಾಟಿಸುವುದನ್ನು ಆದ್ಯತೆಯ ವಿಚಾರವನ್ನಾಗಿಸಿದ್ದ ಶಾ ಅವರು ರಾಜ್ಯದ ಗಂಭೀರ ವಿಚಾರಗಳನ್ನು ಯಡಿಯೂರಪ್ಪ ಅವರ ಜೊತೆ ಚರ್ಚಿಸುವ ಗೋಜಿಗೆ ಹೋಗಲಿಲ್ಲ. ಇದರ ಹಿಂದಿನ ಸೂತ್ರಧಾರರುಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರ ನಾಯಕತ್ವವೂ ಯಡಿಯೂರಪ್ಪ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದ ಎಲ್ಲಾ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಕೆಲಸವನ್ನು ಅಸಂವಿಧಾನಿಕ ಕೈ ಒಂದು ಮಾಡುತ್ತಿದೆ ಎಂದು ಬಿಎಸ್‌ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರೊಬ್ಬರು ‘ಪ್ರತಿಧ್ವನಿ’ಗೆ ವಿವರಿಸಿದ್ದಾರೆ.

“ಸೋತವರಿಗೆ ಸಂಪುಟದಲ್ಲಿ ಸ್ಥಾನವಿಲ್ಲ” ಎಂದು ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳುವುದು ಅವರ ತಂತ್ರ. ಆದರೆ, ಅನರ್ಹಗೊಂಡು ಉಪಚುನಾವಣೆಯಲ್ಲಿ ಸೋತಿದ್ದು ಮಂತ್ರಿಯಾಗಲು ಮಾನದಂಡದ ವಿಚಾರವಾದರೆ ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ, ಹಿಂದೆ ಕೆ ಎಸ್ ಈಶ್ವರಪ್ಪನಂಥವರನ್ನು ಉಪಮುಖ್ಯಮಂತ್ರಿ ಮಾಡುವ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ ಕಮಲ ಪಾಳೆಯದ ನಾಯಕರಲ್ಲಿ ಉತ್ತರವಿಲ್ಲ. ಇಂಥ ಹತ್ತಾರು ವಿರೋಧಾಭಾಸಗಳನ್ನು ಬಿಜೆಪಿ ಎದುರಿಸುತ್ತಿದೆ.

ಎಲ್ಲಾ ಸಮಸ್ಯೆಗಳಿಗಿಂತಲೂ ಮುಖ್ಯವಾದುದು ಸಂವಿಧಾನಿಕ ಮಹತ್ವ ಇಲ್ಲದ ಇನ್ನೊಂದು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವ ವಿಚಾರ. ಕಾಂಗ್ರೆಸ್-ಜೆಡಿಎಸ್‌ ಬಂಡಾಯ ಶಾಸಕರ ನೇತೃತ್ವವಹಿಸಿದ್ದ ವಾಲ್ಮೀಕಿ ಸಮುದಾಯದ ರಮೇಶ್ ಜಾರಕಿಹೊಳಿಗೆ ಮಹತ್ವದ ಹುದ್ದೆ ಕಲ್ಪಿಸುವ ಭರವಸೆಯನ್ನು ದೆಹಲಿಯ ನಾಯಕರು ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲಿ ವಾಲ್ಮೀಕಿ ನಾಯಕ ಬಿ ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದ್ದ ಬಿಜೆಪಿಯು ಸರ್ಕಾರ ಬಂದರೆ ಉಪಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಿತ್ತು ಎನ್ನಲಾಗಿದೆ. ಈಗ ರಾಮುಲು ಹಾಗೂ ರಮೇಶ್ ಜಾರಕಿಹೊಳಿ ಯಾರಲ್ಲಿ ಒಬ್ಬರನ್ನೂ ಡಿಸಿಎಂ ಮಾಡಿದರೂ ಆಕ್ರೋಶ ಬುಗಿಲೇಳಲಿದೆ. ಮಾಡದಿದ್ದರೂ ಅಸಮಾಧಾನದ ಹೊಗೆ ಹೆಚ್ಚಾಗಲಿದೆ. ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಗೆದ್ದ ಶಾಸಕರಿಗೆ ಸಂಪುಟದಲ್ಲಿ ಸಿಂಹಪಾಲು ದೊರೆತರೆ ವಿರೋಧ ಪಕ್ಷಗಳು ಹಾಗೂ ಬಿಜೆಪಿಯ ಅಸಮಾಧಾನಿತರು ನಾಯಕತ್ವದ ವಿರುದ್ಧ ಅಖಾಡಕ್ಕಿಳಿಯುವ ಸಾಧ್ಯತೆಯನ್ನು ಅಷ್ಟು ಸುಲಭಕ್ಕೆ ತಳ್ಳಿಹಾಕಲಾಗದು. ಹಣ, ಜಾತಿ, ಧರ್ಮದ ಆಧಾರದಲ್ಲಿ ಅಧಿಕಾರ ಹಿಡಿಯುವುದೇ ರಾಜಕಾರಣವಾಗಿರುವಾಗ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮೀಜಿ ಈಚೆಗೆ ಬಹಿರಂಗವಾಗಿ ಬಿಎಸ್‌ವೈಗೆ ಬೆದರಿಕೆ ಹಾಕಿದ್ದ ಘಟನೆಯು ಸಂಪುಟ ವಿಸ್ತರಣೆಯ ಬಳಿಕ ವಿಭಿನ್ನ ರೂಪದಲ್ಲಿ ಪ್ರಧಾನ ಭೂಮಿಕೆಗೆ ಬರುವುದಿಲ್ಲ ಎಂದು ಹೇಳಲಾಗದು. ಅಗ್ನಿಕುಂಡದಲ್ಲಿ ಕುಳಿತಿರುವ ಯಡಿಯೂರಪ್ಪ ಇವೆಲ್ಲವನ್ನೂ ಜಯಿಸಲಿದ್ದರೋ ಅಥವಾ ಕೈಚೆಲ್ಲಲಿದ್ದಾರೋ ಎಂಬುದು ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com