ಎಸ್ ಪಿ ಗೆ ಫೋನ್ ಕೊಟ್ಟು ನೀವೇ ಉತ್ತರಿಸಿ ಎಂದ ರವೂಫ್
ರಾಜ್ಯ

ಎಸ್ ಪಿ ಗೆ ಫೋನ್ ಕೊಟ್ಟು ನೀವೇ ಉತ್ತರಿಸಿ ಎಂದ ರವೂಫ್

ಬ್ರೇಕಿಂಗ್ ನ್ಯೂಸ್ ಬಿರುಗಾಳಿಗೆ ತತ್ತರಿಸಿ ಹೋದ ರವೂಫ್ ಕತೆಯಿದು. ಯಾವ ಪೊಲೀಸ್ ಮೂಲದಿಂದಲೂ ಖಚಿತಪಡಿಸಿಕೊಳ್ಳದೇ ರವೂಫ್ ರನ್ನು ಭಯೋತ್ಪಾದಕ ಎಂದು ಸುದ್ದಿ ಮಾಡಿದ ಮಾಧ್ಯಮಗಳು, ಕೊನೆಗೆ ಅವರಲ್ಲಿ ಕ್ಷಮೆಯೂ ಕೇಳಿಲ್ಲ.

ರಮೇಶ್ ಎಸ್ ಪೆರ್ಲ

ಮೊದಲಿಗೆ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ ಎಂಟು ಮಂದಿ ವಂಚಕರನ್ನು ಶಂಕಿತ ಉಗ್ರರೆಂದು ಬಿಂಬಿಸುವಲ್ಲಿ ಮಾಧ್ಯಮದವರು ವಿಫಲರಾದರು. ಅಷ್ಟರಲ್ಲಿ ಬೆಳ್ತಂಗಡಿಯ ಗೋವಿಂದೂರಿನ ನಿವಾಸಿ ರವೂಫ್ ಎಂಬಾತನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ಯಾವುದೇ ಕನಿಷ್ಟ ಜವಾಬ್ದಾರಿ ಇಲ್ಲದೆ ಸುಳ್ಳು ಸುದ್ದಿ ಬಿತ್ತರಿಸಿದವು.

``ಪಾಕಿಸ್ತಾನದಿಂದ ಸ್ಯಾಟ್ ಲೈಟ್ ಕರೆ ಬಂದ ಹಿನ್ನೆಲೆಯಲ್ಲಿ ಕೇರಳ ಮೂಲದ ಮೌಲ್ವಿಯನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ಬಳಿ ನಡೆದಿದೆ’’, ``ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇಂದು ಖಚಿತ ಮಾಹಿತಿ ಮೇರೆಗೆ ಕೇರಳ ಮೂಲದ ಮೌಲ್ವಿಯನ್ನು ಬೆಳ್ತಂಗಡಿ ಬಳಿಯ ಗೋವಿಂದೂರಿನಲ್ಲಿ ವಶಕ್ಕೆ ಪಡೆದಿದ್ದಾರೆ’’ ಹೀಗೆಲ್ಲಾ ಮಾಧ್ಯಮಗಳು ಪ್ರಚಾರ ಮಾಡಿದ ಸುದ್ದಿ.

``ಬಂಧಿತನನ್ನು ರವೂಫ್ ಎಂದು ಗುರುತಿಸಲಾಗಿದ್ದು, ಈತ ಕೇರಳದ ಮಸೀದಿಯೊಂದರಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಪಾಕಿಸ್ತಾನದಿಂದ ಸ್ಯಾಟ್ ಲೈಟ್ ಕರೆ ಬಂದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಲಾಗಿದೆ. ಪಾಕಿಸ್ತಾನದಿಂದ ಅಣುಬಾಂಬ್ ದಾಳಿಯ ಭೀತಿ ಎದುರಾಗಿದ್ದು, ಬೆಂಗಳೂರು, ಮಂಗಳೂರು, ಸೇರಿದಂತೆ ರಾಜ್ಯದ ಐದು ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದಿಂದ ಮೌಲ್ವಿಯೊಬ್ಬರಿಗೆ ಸ್ಯಾಟ್ ಲೈಟ್ ಕರೆ ಬಂದಿತ್ತೆಂಬ ಮಾಹಿತಿ ಲಭ್ಯವಾಗಿತ್ತು. ಇದರನ್ವಯ ತನಿಖೆ ತೀವ್ರಗೊಳಿಸಿದ ಎನ್.ಐ.ಎ ಅಧಿಕಾರಿಗಳ ತಂಡ ಇಂದು ಮೌಲ್ವಿ ರವೂಫ್ ನನ್ನು ಬಂಧಿಸಿದ್ದಾರೆ’’… ಹೀಗೆ ಬ್ರೇಕಿಂಗ್ ಸುದ್ದಿ ಮುಂದುವರಿದಿತ್ತು.

<a href="http://www.truthprofoundationindia.com/">www.truthprofoundationindia.com</a>

ಇಂತಹದೊಂದು ಸುಳ್ಳು ಸುದ್ದಿಗೂ ಮುನ್ನ ರಾ (Research and Analysis Wing- RAW) ಹೆಸರನ್ನು ಉಲ್ಲೇಖಿಸಿ ``ಉತ್ತಮ ಸಮಾಜಕ್ಕಾಗಿ’’ ಎಂದು ಘೋಷಿಸಿಕೊಳ್ಳುವ ಟಿವಿ ಚಾನಲಿನಲ್ಲಿ ಸುದ್ದಿ ಬರುತ್ತದೆ. ಗೋವಿಂದೂರಿನ ಎಷ್ಟು ಅಕ್ಷಾಂಶ-ರೇಖಾಂಶದಿಂದ ನಿಷೇಧಿತ ಸ್ಯಾಟ್ ಲೈಟ್ ಫೋನಿನಿಂದ ಪಾಕಿಸ್ತಾನ ನಡುವೆ ಸಂಪರ್ಕ ಸಾಧಿಸಲಾಗಿದೆ ಎಂಬುದೂ ಸುದ್ದಿಯ ಭಾಗವಾಗಿತ್ತು. ಯಾವಾಗ ಈ ``ನಮ್ಮಲ್ಲಿ ಮಾತ್ರ’’ ಸುದ್ದಿ ಪ್ರಸಾರವಾಯಿತೋ ನಂತರ ಸರಿ ಸುಮಾರು ಎಲ್ಲಾ ಟಿವಿ ಚಾನಲುಗಳು ``ನಮ್ಮಲ್ಲೂ ಇದೆ’’ ಎಂದು ಶುರು ಮಾಡಿದವು. ಯಾರೂ ಕೂಡ ಸುದ್ದಿಯ ವಾಸ್ತವ ಅರಿಯಲು ಹೋಗಲಿಲ್ಲ.

ಇವೆಲ್ಲದಕ್ಕೆ ಪ್ರೇರಣೆ ಒದಗಿಸಿದ್ದು ಸ್ಥಳೀಯ ನಿವಾಸಿಗಳಿಂದ. ಅವರಿಗೂ ಪ್ರೇರಣೆ ದೊರೆತಿದ್ದು ಹಿಂದಿನ ದಿನ ಘೋಷಿತವಾದ ಹೈ ಅಲರ್ಟ್. ಗೋವಿಂದೂರಿನಲ್ಲಿ ವಾರದ ಆರು ದಿನವೂ ಬಾಗಿಲು ಹಾಕಿರುತ್ತಿದ್ದ ಹೊಸ ಮನೆಯೊಂದನ್ನು ಕೆಲವು `ಹೈ ಅಲರ್ಟ್’ ನಾಗರಿಕರು ಪೊಲೀಸರ ಗಮನಕ್ಕೆ ತಂದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ತಮ್ಮ ಕೈಯಲ್ಲಿದ್ದ ಸೆಲ್ಯುಲ್ಲರ್ ಮೊಬೈಲಿನಿಂದ ರವೂಫ್ ಎಂಬ ಮನೆಯೊಡನಿಗೆ ಕಾಲ್ ಮಾಡಿದ್ದಾರೆ. ತಾನು ಮಂಗಳೂರು ಸಮೀಪದ ಮಂಜನಾಡಿಯಲ್ಲಿ ಇದ್ದೇನೆ ಎಂದಿದ್ದಾರೆ ರವೂಫ್.

ಅನಂತರ ಹಲವು ಪೊಲೀಸ್ ಠಾಣೆಗಳಿಂದ, ಹಲವು ಪೊಲೀಸರಿಂದ ರವೂಫ್ ಗೆ ಫೋನ್ ಬರತೊಡಗಿದೆ. ಎಲ್ಲರ ಪ್ರಶ್ನೆ ಒಂದೇ. ನೀವು ಎಲ್ಲಿದ್ದೀರಿ. ಆದರೆ, ಅಷ್ಟು ಹೊತ್ತಿಗಾಗಲೇ ಮಾಧ್ಯಮದವರು ರವೂಫ್ ಅವರನ್ನು ಬಂಧಿಸಿ ಆಗಿತ್ತು. ಆದರೆ, RAW ದವರಾಗಲಿ ಎನ್ಐಎ ಆಗಲಿ ಮಾಧ್ಯಮದವರು ಬಂಧಿಸಿರುವ ರವೂಫ್ ಅವರನ್ನು ಕರಕೊಂಡು ಹೋಗಲು ಬರಲೇ ಇಲ್ಲ. ಟಿವಿ ನೋಡಿದ ಪೊಲೀಸರು ಏನಾಗಿದೆ ಎಂದು ತಿಳಿಯಲು ರವೂಫ್ ಅವರಿಗೆ ಫೋನ್ ಮಾಡುತ್ತಲೇ ಇದ್ದರು.

ಮಂಗಳೂರಲ್ಲಿ ಜನಸ್ನೇಹಿ ಮತ್ತು ಮಾಧ್ಯಮ ಸ್ನೇಹಿ ಪೊಲೀಸ್ ಅಧಿಕಾರಿಗಳು ಇದ್ದರೂ ಬಹುತೇಕ ಸುದ್ದಿಜೀವಿಗಳು ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಸ್ಪಷ್ಟನೆ ಕೇಳಲಿಲ್ಲ. ಒಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ತಮಿಳು ಪತ್ರಿಕೆಯ ರಾಜೇಂದ್ರನ್ ಮಾತ್ರ ಈ ಬಗ್ಗೆ ಪ್ರಶ್ನಿಸಿದರು. ಟಿವಿ ಚಾನಲುಗಳ ಸುಳ್ಳು ಸುದ್ದಿಯಿಂದ ಬೇಸತ್ತು ಊರಲ್ಲಿ ಮುಖ ಎತ್ತಿ ನಡೆಯಲಾಗದೆ ರವೂಫ್ ಕೊನೆಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವರಿಷ್ಠಾಧಿಕಾರಿ ಬಿ. ಎ. ಲಕ್ಷ್ಮೀ ಪ್ರಸಾದ್ ಅವರ ಕಚೇರಿಗೆ ಆಗಮಿಸಿ ತಮ್ಮ ಮೊಬೈಲನ್ನು ಎಸ್ಪಿಯವರಿಗೆ ನೀಡಲು ಮುಂದಾದರು.

ರವೂಫ್ ಎಸ್ಪಿ ಎದುರು ಹಾಜರಾದ ಮೇಲಾದರೂ ಮಾಧ್ಯಮಗಳು ಸುಳ್ಳು ಸುದ್ದಿಯ ಅಸಲಿ ಮುಖವನ್ನು ಜನರಿಗೆ ಬಿತ್ತರ ಮಾಡಬೇಕಾಗಿತ್ತು. ಮಾಡಿಲ್ಲ. ಮರುದಿನ ರವೂಫ್ ಅವರು ಮಾಜಿ ಸಚಿವ ಯು. ಟಿ. ಖಾದರ್ ಅವರ ಸಮಕ್ಷಮ ಪತ್ರಿಕಾಗೋಷ್ಠಿ ನಡೆಸಿ ತಾನು ಬಂಧಿತನಾಗಿದ್ದೇನೆ ಎಂಬ ವರದಿಯ “ಸುದ್ದಿಮೂಲ” ಯಾವುದು ಎಂದು ಮಾಧ್ಯಮದವರಲ್ಲಿಯೇ ಕೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಶಾಸಕ ಖಾದರ್ ಕೂಡ ಇದಕ್ಕೊಂದು ತಾತ್ವಿಕ ಅಂತ್ಯ ಹಾಡುವ ಇರಾದೆ ಹೊಂದಿದಂತಿಲ್ಲ. ಏಕೆಂದರೆ, ಇಂತಹ ಫೇಕು ಸುದ್ದಿಗಳು ಮಂಗಳೂರಿನಿಂದ ಸೃಷ್ಟಿಯಾಗುವುದು ಇದೇ ಮೊದಲಲ್ಲ. ಈ ಬಾರಿ ಇಂಗ್ಲೀಷ್ ಪತ್ರಿಕೆಯೊಂದು ಕೂಡ ಈ ಫೇಕ್ ಸುದ್ದಿಯನ್ನು ಪ್ರಕಟಿಸಿದೆ. ಈ ರವೂಫ್ ಎಂಬ ವ್ಯಕ್ತಿ ಇತ್ತೀಚೆಗೆ ನಿಧನರಾದ ಮಂಜನಾಡಿ ಅಬ್ಬಾಸ್ ಮುಸ್ಲಿಯಾರ್ ಅವರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಬಡವನಾಗಿದ್ದ ತನ್ನ ಸಹಾಯಕನಿಗಾಗಿ ದಾನಿಗಳ ನೆರವಿನೊಂದಿಗೆ ಮುಸ್ಲಿಯಾರ್ ಗೋವಿಂದೂರಿನಲ್ಲಿ ಮನೆ ನಿರ್ಮಿಸಿಕೊಟ್ಟಿದ್ದರು. ಇದನ್ನೂ ಬಳಸಿಕೊಂಡ ಟಿವಿ ಚಾನಲುಗಳು ಬಡವನಾಗಿದ್ದವ ದಿಢೀರ್ ಶ್ರೀಮಂತನಾಗಿದ್ದು ಹೇಗೆ ಎಂದು ಮತ್ತೊಂದು ಬ್ರೇಕಿಂಗ್ ಕೂಡ ನೀಡಿದ್ದವು.

Click here to follow us on Facebook , Twitter, YouTube, Telegram

Pratidhvani
www.pratidhvani.com