ಐಎಂಎ ಪ್ರಕರಣ ಸಿಬಿಐಗೆ: ಕರ್ನಾಟಕದ `ಶಾರದಾ ಚಿಟ್ ಫಂಡ್’ ಆರಂಭ?

ಪರೋಕ್ಷವಾಗಿಯಾದರೂ ಐಎಂಎ ಕಂಪೆನಿಯ ಮೊಹಮ್ಮದ್ ಮನ್ಸೂರ್ ಖಾನ್ ಹಾಗೂ ಇತರರ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಸಿಬಿಐ ವಿಚಾರಣೆಯನ್ನು ಎದುರಿಸುವ ಸಾಧ್ಯತೆ ದಟ್ಟವಾಗಿದೆ.
ಐಎಂಎ ಪ್ರಕರಣ ಸಿಬಿಐಗೆ: ಕರ್ನಾಟಕದ `ಶಾರದಾ ಚಿಟ್ ಫಂಡ್’ ಆರಂಭ?

ಐಎಂಎ ಪ್ರಕರಣವನ್ನು ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರಕ್ಷಣವೇ ಕೊಡುತ್ತಾರೆಂಬ ನಿರೀಕ್ಷೆ ಇತ್ತು. ಅದಕ್ಕೆ ಕಾರಣ, ಹಗರಣದ ಕುದಿಯ ನಡುವೆ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರೆಲ್ಲಾ ಒಂದೇ ಸ್ವರದಲ್ಲಿ `ಸಿಬಿಐ’ ಎಂದು ಒತ್ತಾಯಿಸುತ್ತಿದ್ದರು. ಸಚಿವ ಸಂಪುಟ ಪಟ್ಟಿ ಅಂತಿಮಗೊಳಿಸಲು ದೆಹಲಿಗೆ ತೆರಳಿದ ಯಡಿಯೂರಪ್ಪ ಮರಳಿದೊಡನೆ ಟೆಲಿಫೋನ್ ಕದ್ದಾಲಿಕೆ ಹಗರಣವನ್ನು ಸಿಬಿಐಗೆ ಹಸ್ತಾಂತರಿಸುವ ನಿರ್ಧಾರವನ್ನು ಬಹಿರಂಗಗೊಳಿಸಿದರು. ಆದರೆ, ಐಎಂಎ ಪ್ರಕರಣದ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಅವರಿನ್ನೂ ಈ ಬಗ್ಗೆ ಹೇಳಿಕೆ ನೀಡಬೇಕಷ್ಟೆ.

ಆಗಸ್ಟ್ 20, 2019 ಕರ್ನಾಟಕದ ಬಿಜೆಪಿ ಪಾಲಿಗೆ ಅತ್ಯಂತ ದೊಡ್ಡ ದಿನ. ಬೆಳಗ್ಗೆ ಯಡಿಯೂರಪ್ಪ ಅವರ `ಏಕ ವ್ಯಕ್ತಿ’ ಪ್ರದರ್ಶನ ಕೊನೆಗೂ ಮುಗಿದು 17 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಾಹ್ನದ ಹೊತ್ತಿಗೆ ಹೈ ಕೋರ್ಟ್ ನಿಂದ ಅಚ್ಚರಿಯ ಸುದ್ದಿ ಹೊರ ಬಂತು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನವಡಗಿ ಹೈ ಕೋರ್ಟ್ ನ ಮುಖ್ಯ ನಾಯಮೂರ್ತಿಗಳ ಪೀಠದ ಮುಂದೆ ಹಾಜರಾಗಿ, ರಾಜ್ಯ ಸರ್ಕಾರ ನಿನ್ನೆಯೇ (ಆಗಸ್ಟ್ 19, 2019) ಐಎಂಎ ಪ್ರಕರಣವನ್ನು ಸಿಬಿಐ ಗೆ ಹಸ್ತಾಂತರಿಸಿದೆ ಎಂದು ಹೇಳಿದರು. ಸರ್ಕಾರಿ ಆದೇಶದ ಪ್ರತಿಯನ್ನೂ ಅವರು ಕೋರ್ಟ್ ಗೆ ಸಲ್ಲಿಸಿದರು. ಅಲ್ಲಿಗೆ ಸಿಬಿಐ ತನಿಖೆ ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದ ಕೆಲವು ಅರ್ಜಿಗಳು ಇತ್ಯರ್ಥಗೊಂಡವು. ಆದರೆ, ಮುಂದಿನ ದಿನಗಳಲ್ಲಿ ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಸಂರಕ್ಷಣಾ ಕಾಯ್ದೆಯಡಿ (Karnataka Protection of Interest of Depositors in Financial Establishments Act 2004 – KPID) ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಹೈ ಕೋರ್ಟ್ ನಡೆಸುತ್ತಿರುವ ವಿಚಾರಣೆ ಮುಂದುವರಿಯಲಿದೆ. ಜೊತೆಗೆ, ಸಿಬಿಐ ತನಿಖೆ ಕೈ ಗೊಳ್ಳುವವರೆಗೆ ಸಮ್ಮಿಶ್ರ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ ತನಿಖೆ ಮುಂದುವರಿಸಬೇಕು ಎಂದು ಹೈ ಕೋರ್ಟ್ ನಿರ್ದೇಶಿಸಿದೆ.

ಒಂದಂತೂ ನಿಜ. ಐಎಂಎ ಇತ್ತೀಚೆಗೆ ರಾಜ್ಯ ಕಂಡ ಅತ್ಯಂತ ದೊಡ್ಡ ಹಣಕಾಸು/ಡೆಪಾಸಿಟ್ ಹಗರಣಗಳಲ್ಲೊಂದು. ಪ್ರಕರಣದ ಸುತ್ತ ಹಿರಿಯ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಹೆಸರುಗಳು ಈಗಾಗಲೇ ಹೊರ ಬಿದ್ದಿವೆ. ಆದರೆ, ಈ ಪ್ರಕರಣದ ಗಹನತೆ ಅಡಗಿರುವುದು ಇನ್ನೂ ಹೊರಬರದೇ ಉಳಿದಿರುವ ಈ ಮೂರೂ ವಿಭಾಗದಲ್ಲಿರುವ ಹೆಸರುಗಳು.

ಹಾಗಾದರೆ, ಈ ಪ್ರಕರಣವನ್ನೂ ಸಿಬಿಐ ಗೆ ಹಸ್ತಾಂತರಿಸಿದ್ದೇನೆ ಎಂದು ಘಂಟಾಘೋಷವಾಗಿ ಹೇಳಿಕೆ ನೀಡುವಲ್ಲಿ ಯಡಿಯೂರಪ್ಪ ಹಿಂದೆ ಸರಿದಿದ್ದೇಕೆ? ಬಿಜೆಪಿ ವಲಯದಲ್ಲಿಯೇ ಈ ಬಗ್ಗೆ ಸ್ಪಷ್ಟ ಉತ್ತರ ಸಿಗುತ್ತಾ ಇದೆ. ಕೆಲವು ಬಿಜೆಪಿಗರ ಪ್ರಕಾರ ಇದು ಬಿಜೆಪಿ ರಾಷ್ಟ್ರವ್ಯಾಪಿ ಅನುಸರಿಸಿರುವ `ನಿರ್ದಯ ರಾಜಕಾರಣ’ಕ್ಕೆ ಮುನ್ನುಡಿಯಾಗಲಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕುವುದು ಎಷ್ಟು ಸತ್ಯವೋ, ಪ್ರತ್ಯಕ್ಷವಾಗಿ ಅಲ್ಲದೇ ಇದ್ದರೂ ಪರೋಕ್ಷವಾಗಿಯಾದರೂ ಐಎಂಎ ಕಂಪೆನಿಯ ಮೊಹಮ್ಮದ್ ಮನ್ಸೂರ್ ಖಾನ್ ಹಾಗೂ ಇತರರ ಜೊತೆ ಸಂಪರ್ಕದಲ್ಲಿದ್ದ ಎಲ್ಲರೂ ಸಿಬಿಐ ವಿಚಾರಣೆಯನ್ನು ಎದುರಿಸಲಿದ್ದಾರೆ.

ಇದಕ್ಕೆ ಇನ್ನೊಂದು ಹಿನ್ನೆಲೆ ಇದೆ. ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ದೇವದುರ್ಗ ಪ್ರವಾಸಿ ಮಂದಿರದಲ್ಲಿ ರೆಕಾರ್ಡ್ ಮಾಡಲಾದ `ಆಪರೇಷನ್ ಕಮಲ’ ಆಡಿಯೊ ಆಧಾರದಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡುತ್ತದೆ ಎಂದೇ ನಂಬಲಾಗಿತ್ತು. ಯಡಿಯೂರಪ್ಪ ಕೂಡ ಆಡಿಯೊದಲ್ಲಿ ಇದ್ದ ಸ್ವರ ನನ್ನದೇ ಎಂದೂ ಒಪ್ಪಿದ್ದರು. ಆದರೆ, ಕುಮಾರಸ್ವಾಮಿ ವಿಶೇಷ ತನಿಖಾ ತಂಡಕ್ಕೂ ವಿಚಾರಣೆ ಒಪ್ಪಿಸಲಿಲ್ಲ, ಆ ಬಗ್ಗೆ ಹೆಚ್ಚಿನ ಆಸಕ್ತಿಯನ್ನೂ ತೋರಲಿಲ್ಲ. ಆಗ ಯಡಿಯೂರಪ್ಪ ಬಹು ದೊಡ್ಡ ಸಂಕಷ್ಟದಿಂದ ಪಾರಾಗಿದ್ದರು.

ಯಾಕೆ ಶಾರದಾ ಚಿಟ್ ಫಂಡ್ ಉದಾಹರಣೆ?

ಐಎಂಎ ಹಗರಣದ ಸಿಬಿಐ ತನಿಖೆ ಹೇಗೆ ನಡೆಯಲಿದೆ ಎಂಬುದನ್ನೂ ಕೆಲವು ಬಿಜೆಪಿ ನಾಯಕರು ನೇರವಾಗಿ ಶಾರದಾ ಚಿಟ್ ಫಂಡ್ ತನಿಖೆಯನ್ನೇ ಉದಾಹರಿಸಿ ಹೇಳುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ಶಾರದಾ ಚಿಟ್ ಫಂಡ್ ಹಗರಣ 2014ರಲ್ಲಿ ಸಿಬಿಐ ಗೆ ಹಸ್ತಾಂತರಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ, ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಕ್ಯಾಬಿನೆಟ್ ನ ಕೆಲವು ಸಚಿವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ಬಂಧನಕ್ಕೊಳಗಾಗಿದ್ದಾರೆ. ಜೊತೆಗೆ, ಪರೋಕ್ಷವಾಗಿ ಪ್ರಕರಣದ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದ ಹಲವು ಸಚಿವರು, ಶಾಸಕರನ್ನು ಸಿಬಿಐ ಈಗಲೂ ಸಮನ್ಸ್ ನೀಡಿ ಕರೆಸಿಕೊಳ್ಳುತ್ತಲೇ ಇದೆ. ಈ ರೀತಿ ಸಮನ್ಸ್ ಪಡೆದ ಕೆಲವು ರಾಜಕಾರಣಿಗಳು ಸದ್ಯ ಬಿಜೆಪಿ ಸೇರಿದ್ದಾರೆ.

ಮಮತಾ ಬ್ಯಾನರ್ಜಿ ಬಲಗೈ ಬಂಟ ಮುಕುಲ್ ರಾಯ್ ಶಾರದಾ ಚಿಟ್ ಫಂಡ್ ಹಾದಿಯ ಮೂಲಕ ಬಿಜೆಪಿ ಸೇರಿದ್ದರು. 2019ರ ಲೋಕಸಭೆ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೃಣಮೂಲ ಕಾಂಗ್ರೆಸ್ ನ 40 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಲ್ಲದೇ ಅಸ್ಸಾಂ ಕಾಂಗ್ರೆಸ್ ನ ಪ್ರಬಲ ನಾಯಕನಾಗಿದ್ದ ಬಿಸ್ವಾಸ್ ಶರ್ಮಾ, ಸಿಬಿಐ ಶಾರದಾ ಚಿಟ್ ಫಂಡ್ ಹಗರಣದಲ್ಲಿ ತನಿಖೆಗೆ ಒಳಪಟ್ಟ ಕೆಲವೇ ದಿನಗಳಲ್ಲಿ ಬಿಜೆಪಿ ಸೇರಿದ್ದರು.

ಸಿಬಿಐ ತನಿಖೆಗೆ ಸರ್ಕಾರದ ಆದೇಶ
ಸಿಬಿಐ ತನಿಖೆಗೆ ಸರ್ಕಾರದ ಆದೇಶ

ಗೌಡರ ನಡೆ ಏನು?

ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಗೆ ಕೊಡುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿರ್ಧಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಪ್ರತಿಕ್ರಿಯೆ ಹಲವರಲ್ಲಿ ಅಚ್ಚರಿ ಮೂಡಿಸಿತ್ತು. ಇದು ಬಿಜೆಪಿ ಹೈ ಕಮಾಂಡ್ ನಿರ್ಧಾರವಲ್ಲ ಎಂದಿದ್ದರು ದೇವೇಗೌಡರು. ಈಗ ಐಎಂಎ ತನಿಖೆ ಸಿಬಿಐಗೆ ವಹಿಸಿರುವುದರ ನಿರ್ಧಾರದ ಬಗ್ಗೆ ದೇವೇಗೌಡರು ಏನು ಹೇಳುವರು ಎಂದು ಕಾದು ನೋಡಬೇಕಿದೆ.

ಸಿಬಿಐ ತನಿಖೆಯಾದರೆ ಜನರ ಹಣ ಬರುವುದೇ?

KPID ಅಥವಾ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ Banning of Unregulated Deposit Schemes Ordinance 2019ಯಡಿಯಲ್ಲಿ ಐಎಂಎ ಪ್ರಕರಣ ದಾಖಲಾಗಿಲ್ಲ. ಹೀಗಾಗಿ IMA ಆಸ್ತಿ ಮುಟ್ಟುಗೋಲು ಹಾಕಿಕೊಂಡರೂ ಕ್ರಿಮಿನಲ್ ಪ್ರಕರಣಗಳ ಮೂಲಕ ಜನರ ಹಣ ಮರಳಿ ಸಿಗುವುದು ಅಸಾಧ್ಯ. ಆದರೆ, ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (Enforcement Directorate) ECIR (Enforcement Case Information Report) ದಾಖಲಿಸಿಕೊಂಡಿರುವುದರಿಂದ IMA ಆಡಳಿತ ಮಂಡಳಿಯ ಸದಸ್ಯರ ಅಪರಾಧಿತ ಹಣದ ಹೂಡಿಕೆಯನ್ನು (Proceeds of Crime) ಜಪ್ತಿ ಮಾಡಿಕೊಳ್ಳಬಹುದು. ಆದರೆ, ಈ ಹಣ ಸಂತ್ರಸ್ತರಿಗೆ ತಲುಪಲು ಈ ಎಲ್ಲಾ ಸಂತ್ರಸ್ತರು ಮತ್ತೆ ಕಾನೂನು ಹೋರಾಟ ನಡೆಸಬೇಕಾಗಬಹುದು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com