ಐಎಂಎ ಪ್ರಕರಣ: ಜನರ ಹಣ ಮರಳಿ ದೊರೆಯುವ ಹಾದಿ ಕಠಿಣ

ವಿಶೇಷ ಕಾಯ್ದೆಗಳಿದ್ದರೂ, ಐಎಂಎ ಪ್ರಕರಣದಲ್ಲಿ ಜನರ ಹಣ ವಸೂಲಾತಿ ಅಸಾಧ್ಯ ಎಂಬಂತಾಗಿರುವುದು ಕಟು ಸತ್ಯ.
ಐಎಂಎ ಪ್ರಕರಣ: ಜನರ ಹಣ ಮರಳಿ ದೊರೆಯುವ ಹಾದಿ ಕಠಿಣ

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರು 32,000 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ಈ ದೂರುಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಸಂತ್ರಸ್ತರ ಹಣ ಮರಳಿ ದೊರಕಿಸುವಲ್ಲಿ ಯಶಸ್ವಿಯಾದೀತೆ ಎಂಬುದು ಯಕ್ಷ ಪ್ರಶ್ನೆ.

ಈ ಪ್ರಕರಣ ಈಗ ಬೆಳಕಿಗೆ ಬಂದಿದೆ ಎಂಬಂತೆ ಬಿಂಬಿತವಾಗಿದ್ದರೂ, ಕಳೆದ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಇದು ಸರ್ಕಾರದ ಗಮನದಲ್ಲಿ ಇದೆ. ಅಕ್ಟೋಬರ್ 17, 2017. ಐ ಮೊನಿಟರಿ ಅಡ್ವೈಸರಿ (I Monetary Advisory - IMA) ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿತ್ತು. RBI ನ ಪ್ರಧಾನ ವ್ಯವಸ್ಥಾಪಕರ ಈ ಪತ್ರದಲ್ಲಿ ಹೇಳಲಾಗಿದ್ದು, ``IMA ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಇತರೆ ವ್ಯವಹಾರಗಳಲ್ಲಿ ತೊಡಗಿಸುತ್ತಿದ್ದು, ಕಂಪೆನಿಯು ಈ ವ್ಯವಹಾರಗಳನ್ನು ನಿರ್ವಹಿಸಲು ಪೂರಕ ದಾಖಲೆಗಳನ್ನು ಒದಗಿಸಲು ಸಂಪೂರ್ಣವಾಗಿ ವಿಫಲವಾಗಿರುತ್ತದೆ. ಆದ್ದರಿಂದ ಈ ಕಂಪೆನಿಯ ವಿರುದ್ಧ ಸರ್ಕಾರ ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಸಂರಕ್ಷಣಾ ಕಾಯ್ದೆಯಡಿ (Karnataka Protection of Interest of Depositors in Financial Establishments Act 2004 – KPID) ಕ್ರಮ ಜರುಗಿಸುವುದು ಸೂಕ್ತ.’’

ರಾಜ್ಯದಲ್ಲಿ ಖಾಸಗಿ ಹಣಕಾಸು ಹಣಕಾಸು ಸಂಸ್ಥೆಗಳ ವ್ಯವಹಾರವನ್ನು ಕಾಲಕಾಲಕ್ಕೆ ಪರಿಶೀಲಿಸಲು ರಾಜ್ಯ ಮಟ್ಟದ ಸಮನ್ವಯ ಸಮಿತಿಯೊಂದು (State Level Co-ordination Committee) ಅಸ್ತಿತ್ವದಲ್ಲಿದೆ.. ಈ ಸಮಿತಿಯ ಜುಲೈ 20, 2017ರ ಸಭೆಯಲ್ಲಿ ಈ ಬಗ್ಗೆ ಮೊದಲು ಚರ್ಚೆ ನಡೆದಿತ್ತು. ನಂತರ, ಸೆಪ್ಟೆಂಬರ್ 14, 2017 ರಂದು ನಡೆದ ಉಪಸಮಿತಿಯ ಸಭೆಯಲ್ಲಿ IMA ಕಾರ್ಯ ವೈಖರಿಯ ಬಗ್ಗೆ ಮತ್ತೆ ವಿಸ್ತ್ರತ ಚರ್ಚೆ ನಡೆಸಲಾಗಿತ್ತು. ಅದರಂತೆ, ಅಕ್ಟೋಬರ್ 2017 ರಂದು IMA ಹಣಕಾಸು ವ್ಯವಹಾರದ ಬಗ್ಗೆ ತಕ್ಷಣ ಕ್ರಮ ಗೈಕೊಳ್ಳುವಂತೆ RBI ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಆದದ್ದೇನು?

ರಾಜ್ಯ ಕಂದಾಯ ಇಲಾಖೆಯ ಅಧೀನದಲ್ಲಿ ಬರುವ KPID Act ಪ್ರಕಾರ ಕ್ರಮ ತೆಗೆದುಕೊಳ್ಳಲು, ಪ್ರಕರಣವನ್ನು ಸಿಐಡಿಗೆ (Criminal Investigation Department) ಹಸ್ತಾಂತರಿಸಿ ವರದಿ ಸಲ್ಲಿಸಲು ಸೂಚಿಸಲಾಯಿತು. ಆದರೆ, ವರದಿ ಸಲ್ಲಿಸಿದ ಸಿಐಡಿ, ಈ ಕಾಯ್ದೆಯಡಿಯಲ್ಲಿ IMA ವಿರುದ್ಧ ಕ್ರಮ ಸಾಧ್ಯವಿಲ್ಲ ಎಂದು ಕೈ ಚೆಲ್ಲಿತು. ಇದಲ್ಲದೇ, 2019 ಫೆಬ್ರವರಿಯಲ್ಲಿ ಜಾರಿಗೆ ಬಂದ ಅನಿಯಂತ್ರಿತ ಡೆಪಾಸಿಟ್ ಗಳ ನಿಷೇಧ ಸುಗ್ರೀವಾಜ್ಞೆ (Banning of Unregulated Deposit Schemes Ordinance 2019) ಅಡಿಯಲ್ಲಿಯೂ ತನಿಖೆ ನಡೆಸಲೂ ಪ್ರಯತ್ನಿಸಲಾಯಿತು. ಆದರೆ, ಈ ಕಾಯ್ದೆಯಡಿಯೂ ಕ್ರಮ ಅಸಾಧ್ಯವಾಯಿತು.

ಇದಕ್ಕೆಲ್ಲ ಮುಖ್ಯ ಕಾರಣ IMA ಕಂಪೆನಿಯ ರಚನೆ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ IMA ಒಂದು ಲಿಮಿಟೆಡ್ ಲಯಬಿಲಿಟಿ ಪಾರ್ಟನರಶಿಪ್ ಕಂಪೆನಿ (Limited Liability Partnership - LLP). ಹಾಗಾಗಿ ಪ್ರತಿ ಹೂಡಿಕೆದಾರನೂ ಇಲ್ಲಿ ಸಮಾನ ಪಾಲುದಾರ ಹಾಗೂ ಆ ಹಣ ಡೆಪಾಸಿಟ್ ಅಲ್ಲ. ಅಂದರೆ, ಈ 32,000 ಕ್ಕೂ ಹೆಚ್ಚು ಜನ IMA ನಲ್ಲಿ ಹೂಡಿದ್ದು ತಾಂತ್ರಿಕ ದೃಷ್ಟಿಯಲ್ಲಿ ಬಂಡವಾಳವೇ ಹೊರತು ಡೆಪಾಸಿಟ್ ಅಲ್ಲ. ಆದರೆ, ಈ ಎರಡೂ ಕಾಯ್ದೆಗಳಲ್ಲಿ ರಕ್ಷಿಸಲ್ಪಡುವುದು ಡೆಪಾಸಿಟ್ ದರರ ಹಿತರಕ್ಷಣೆ.

ಇದಾದ ನಂತರ, ನವೆಂಬರ್ 2018 ರಲ್ಲಿ ಕಂದಾಯ ಇಲಾಖೆ ಒಂದು ಸಾರ್ವಜನಿಕ ನೋಟೀಸ್ ಪತ್ರಿಕೆಗಳಲ್ಲಿ ನೀಡಿ ಹಣ ಹೂಡಿದವರಲ್ಲಿ ದೂರು ಇದ್ದಲ್ಲಿ ದಾಖಲಿಸಲು ಕೋರಲಾಯಿತು. ಆದರೆ, ಯಾವುದೇ ದೂರು ಬಂದಿಲ್ಲವಾದ್ದರಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಈ ನೋಟೀಸ್ ನಲ್ಲಿ IMA ವಿರುದ್ಧ KPID ಕಾಯ್ದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿತ್ತು.

ಇದೀಗ IMA ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (Managing Director and Chief Executive Officer) ಮೊಹಮ್ಮದ್ ಮನ್ಸೂರ್ ಖಾನ್ ಮತ್ತು ಇತರರ ವಿರುದ್ಧ ಪೊಲೀಸ್ FIR ನಲ್ಲಿ KPID ಅಥವಾ Banning of Unregulated Deposit Schemes Ordinance 2019ಯ ಸೆಕ್ಷನ್ ಬಳಸಲಾಗಿಲ್ಲ. ಅಂದರೆ, ಪೊಲೀಸ್ ತನಿಖೆ IMA ಆಡಳಿತ ಮಂಡಳಿಯ ಅಪರಾಧಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, KPID ಅಥವಾ Banning of Unregulated Deposit Schemes Ordinance 2019ಯಡಿಯಲ್ಲಿ ಪ್ರಕರಣ ದಾಖಲಾಗದೇ ಇರುವುದರಿಂದ IMA ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಸಾಧ್ಯವಿಲ್ಲ. ಆದರೆ, ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (Enforcement Directorate) ECIR (Enforcement Case Information Report) ದಾಖಲಿಸಿಕೊಂಡಿರುವುದರಿಂದ IMA ಆಡಳಿತ ಮಂಡಳಿಯ ಸದಸ್ಯರ ಅಪರಾಧಿತ ಹಣದ ಹೂಡಿಕೆಯನ್ನು (Proceeds of Crime) ಜಪ್ತಿ ಮಾಡಿಕೊಳ್ಳಬಹುದು. ಆದರೆ, ಈ ಹಣ ಸಂತ್ರಸ್ತರಿಗೆ ತಲುಪಲು ಈ ಎಲ್ಲಾ ಸಂತ್ರಸ್ತರು ಮತ್ತೆ ಕಾನೂನು ಹೋರಾಟ ನಡೆಸಬೇಕಾಗಬಹುದು.

ಇದರಿಂದ ಸರ್ಕಾರಗಳು ಮತ್ತೊಂದು ಪಾಠ ಕಲಿಯಬೇಕಿದೆ. ಕೇವಲ ರಾಜ್ಯ ಜಾರಿಗೊಳಿಸಿದ ಕಾನೂನು ಅಥವಾ ಕೇಂದ್ರ ಸರ್ಕಾರ ಅನುಷ್ಟಾನಗೊಳಿಸಿದ ಕಾನೂನಿಂದಲೂ ಕ್ರಮ ಸಾಧ್ಯವಿಲ್ಲದ LLP ಮಾದರಿಯ ಹಣಕಾಸು ಸಂಸ್ಥೆಗಳ ನಿಯಂತ್ರಣಕ್ಕೆ ಮತ್ತು ಕ್ರಮಕ್ಕೆ ಬೇರೆ ಏನಾದರೂ ಕಾಯ್ದೆ ಅಥವಾ ಪ್ರಸ್ತುತ ಕಾಯ್ದೆಗೆ ತಿದ್ದುಪಡಿ ಅತ್ಯವಶ್ಯ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com