ಐಎಂಎ ಕರಿನೆರಳಲ್ಲಿ ಐಪಿಎಸ್ ವರ್ಗಾವಣೆ!

ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಕಮಿಷನರೇಟ್ ನಲ್ಲಿ ಐಜಿಪಿ ಆಗಿರುವ ಅಧಿಕಾರಿಗೆ ಭಡ್ತಿ ನೀಡಿ ಆಯುಕ್ತರಾಗಿ ನೇಮಿಸಿದೆ. ಐಎಂಎ ಪ್ರಕರಣದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಅನೇಕ ಅನುಮಾನಗಳನ್ನು ಹುಟ್ಟಿ ಹಾಕಿದೆ.
ಐಎಂಎ ಕರಿನೆರಳಲ್ಲಿ ಐಪಿಎಸ್ ವರ್ಗಾವಣೆ!
ಡಿಸಿಪಿ ಎಸ್ ಗಿರೀಶ್, ನಿರ್ಗಮಿತ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹಾಗೂ ನೂತನ ಪೊಲೀಸ್ ಆಯುಕ್ತ ಅಲೋಕ್ ಕುಮಾರ್

ರಾಜ್ಯದ ಐಪಿಎಸ್ ವಲಯ ಅಚ್ಚರಿಗೊಳ್ಳುವ ನಿರ್ಧಾರವನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೆಗೆದುಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆಯಷ್ಟೇ ಐಜಿಪಿಯಿಂದ (Inspector General of Police) ಎಡಿಜಿಪಿ (Additional Director General of Police) ಆಗಿ ಭಡ್ತಿ ಪಡೆದ ಅಲೋಕ್ ಕುಮಾರ್ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಆದೇಶ ಹೊರಡಿಸಲಾಗಿದೆ. ಇದರ ಜೊತೆಗೆ ಇನ್ನೂ ಹಲವಾರು ವರ್ಗಾವಣೆಗಳನ್ನು ಮಾಡಲಾಗಿದೆ.

ಆದರೆ, ಈ ವರ್ಗಾವಣೆಯನ್ನು ಅಚ್ಚರಿಯಿಂದ ನೋಡಲು ಎರಡು ಕಾರಣಗಳನ್ನು ನೀಡಲಾಗುತ್ತಿದೆ. ಒಂದು ಆಡಳಿತಾತ್ಮಕ ಹಾಗೂ ಇನ್ನೊಂದು ರಾಜ್ಯ ಸರ್ಕಾರವನ್ನು ಸುತ್ತಿಕೊಂಡಿರುವ ಇತ್ತೀಚಿನ ಐಎಂಎ ಪ್ರಕರಣ.

ಐಎಂಎ ಪ್ರಕರಣ ಸಂಬಂಧ ಸರ್ಕಾರದ ಹಾಗೂ ನಗರ ಪೊಲೀಸ್ ರ ನಿರ್ಲಕ್ಷ್ಯ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಈ ಭಡ್ತಿ ಅನೇಕ ಅನುಮಾನಗಳನ್ನು ಹುಟ್ಟಿ ಹಾಕಿದೆ. ಐ ಮೊನಿಟರಿ ಅಡ್ವೈಸರಿ (I Monetary Advisory) ಕಂಪೆನಿಯ ಬಗ್ಗೆ ಸರ್ಕಾರದ ವಲಯದಲ್ಲಿ 2018 ರಿಂದಲೇ ಅರಿವು ಇತ್ತು. ಕಂದಾಯ ಇಲಾಖೆಯೂ ಈ ಕಂಪೆನಿಯ ಬಗ್ಗೆ ಜಾಗೃತರಾಗಿರುವಂತೆ ಜಾಹಿರಾತು ನೀಡಿತ್ತು. 2019ರ ಮಾರ್ಚ್ ನಲ್ಲಿ ಕಂಪೆನಿ ಹಣ ಮರು ಪಾವತಿಸಲು ವಿಫಲವಾದಾಗ ದೂರುಗಳು ದಾಖಲಾಗಿದ್ದವು.

ಜೂನ್ 6 ರಂದು ಅಲೋಕ್ ಕುಮಾರ್ ಐಎಂಎ ಯ ಮನ್ಸೂರ್ ಖಾನ್ ರನ್ನು ವಿಚಾರಣೆಗೆ ಕರೆದಿದ್ದರು. ಆ ಸಂದರ್ಭ ಸಿಸಿಬಿ ಡಿಸಿಪಿ (ಅಪರಾಧ) ಎಸ್ ಗಿರೀಶ್ ಕೂಡ ಉಪಸ್ಥಿತರಿದ್ದರು. ವಿಚಾರಣೆ ನಡೆಸಿದ ಬಳಿಕ ಮನ್ಸೂರ್ ಖಾನ್ ರನ್ನು ದಾಖಲೆಗಳ ಜೊತೆ ಬರುವಂತೆ ಹೇಳಿ ಕಳುಹಿಸಲಾಯಿತು. ಜೂನ್ 8 ರಂದು ಮನ್ಸೂರ್ ಖಾನ್ ದೇಶ ಬಿಟ್ಟು ಪರಾರಿಯಾದ ಎಂದು ಈಗ ಹೇಳಲಾಗುತ್ತಿದೆ. ಈ ಬಗ್ಗೆ ಅಲೋಕ್ ಕುಮಾರ್ ದಿ ಹಿಂದು ಪತ್ರಿಕೆ ಗೆ ನೀಡಿದ ಹೇಳಿಕೆಯಲ್ಲಿ (The Hindu June 16, 2019) ಮನ್ಸೂರ್ ಖಾನ್ ರ ವಿಚಾರಣೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಐಎಂಎ ತನಿಖೆಗಾಗಿ ಡಿಐಜಿ ಅಧಿಕಾರಿ ರವಿಕಾಂತೇ ಗೌಡ ಅವರ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಿದೆ, ಹಾಗೂ ಈ ತಂಡದ ತನಿಖಾಧಿಕಾರಿ ಸಿಸಿಬಿ ಡಿಸಿಪಿ ಗಿರೀಶ್. ಇದೀಗ ಐಎಂಎ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಒಂದೊಮ್ಮೆ ಹೈ ಕೋರ್ಟ್ ತನಿಖೆಯನ್ನು ಸಿಬಿಐ ಗೆ ವಹಿಸಿದರೆ, ಮನ್ಸೂರ್ ಖಾನ್ ರನ್ನು ವಿಚಾರಣೆಗೆ ಕರೆಸಿ, ಕನಿಷ್ಠ ಅವರ ಪಾಸ್ ಪೋರ್ಟ್ ಕೂಡ ವಶಕ್ಕೆ ಪಡೆಯದೇ ಅವರು ವಿದೇಶಕ್ಕೆ ಪರಾರಿಯಾಗುವಲ್ಲಿ ಅನುಕೂಲಕರ ಸಂದರ್ಭ ಸೃಷ್ಟಿಸಿದ ಬಗ್ಗೆ ಸಿಬಿಐ ಯಾರ ವಿಚಾರಣೆ ನಡೆಸಬೇಕು? ಅಂದ ಹಾಗೆ, ರವಿಕಾಂತೇ ಗೌಡ ಅವರನ್ನು ರಾಜ್ಯ ಸರ್ಕಾರ ಡಿಐಜಿ (ಅಪರಾಧ) ಆಗಿ ನಗರ ಪೊಲೀಸ್ ಕಮಿಷನರೇಟ್ ಗೆ ವರ್ಗಾಯಿಸಿದೆ.

ಮೇ 2015 ರಲ್ಲಿ ಬಹಳ ಸದ್ದು ಮಾಡಿದ್ದ ಲಾಟರಿ ಪ್ರಕರಣದ ಪ್ರಮುಖ ಆರೋಪಿ ಪರಿ ರಾಜನ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಅಲೋಕ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಅಮಾನತ್ತಿನಲ್ಲಿರಿಸಿತ್ತು. ಸಿಐಡಿ ವರದಿಯೊಂದನ್ನು ಆಧರಿಸಿ ರಾಜ್ಯ ಸರ್ಕಾರ ಅಲೋಕ್ ಅವರನ್ನು ಅಮಾನತ್ತುಗೊಳಿಸಿತ್ತು. ನಂತರ ಪ್ರಕರಣ ಸಿಬಿಐ ಗೆ ವರ್ಗಾವಣೆಯಾಯಿತು. ಸಿಬಿಐ ನಲ್ಲಿ ಇನ್ನೂ ಪ್ರಕರಣ ತನಿಖೆಯ ಹಂತದಲ್ಲಿದೆ. ಆದರೆ, ಸಿಬಿಐ FIRನಲ್ಲಿ ಅಲೋಕ್ ಹೆಸರನ್ನು ಸೇರಿಸಿಲ್ಲ. ಅಂದರೆ, ಸಿಬಿಐ ಲಾಟರಿ ಪ್ರಕರಣದಲ್ಲಿ ಅಲೋಕ್ ಅವರ ಪಾತ್ರದ ಬಗ್ಗೆ ಕ್ಲೀನ್ ಚಿಟ್ ನೀಡಿದೆ. ನಂತರ, ಅಲೋಕ್ ವಿರುದ್ಧದ ಅಮಾನತು ರದ್ದುಗೊಂಡು ಅವರು ಸೇವೆಗೆ ಮರಳಿದ್ದರು. ಈ ಮೊದಲು, ಅಲೋಕ್ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ, ನಂತರ ಜಂಟಿ ಪೊಲೀಸ್ ಆಯುಕ್ತ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಆಡಳಿತಾತ್ಮಕ ಗುಸುಗುಸು:

1994 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಸೆಪ್ಟೆಂಬರ್ 2018 ಕ್ಕೆ ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ನಿಯುಕ್ತಿಗೊಂಡಿದ್ದರು. ಅಂದಿನಿಂದಲೂ ನಗರ ಕಮಿಷನರೇಟ್ ನಲ್ಲೇ ಇದ್ದು, ಭಡ್ತಿ ಪಡೆದ ಮೊದಲ ದಿನವೇ ನಗರ ಆಯುಕ್ತರಾಗಿ ನೇಮಕಗೊಂಡವರಲ್ಲಿ ಅಲೋಕ್ ಮೊದಲನೆಯವರು ಎಂಬುದು ವಿಶೇಷ. . ಆಗಬಾರದೆಂದೇನೂ ಇಲ್ಲ. ಆದರೆ, ಆಡಳಿತಾತ್ಮಕವಾಗಿ ಇಲ್ಲೊಂದು ಅಚ್ಚರಿ ಇದೆ. ಅದೇನೆಂದರೆ, 1994 ರ ಬ್ಯಾಚ್ ನವರೇ ಆದ ಇನ್ನಿಬ್ಬರು ಅಧಿಕಾರಿಗಳಿಗೆ – ಬಿ. ದಯಾನಂದ ಹಾಗೂ ಪ್ರಣಬ್ ಮೊಹಂತಿ - ಭಡ್ತಿ ನೀಡದಿರುವುದು. ಇವರಲ್ಲಿ ಮೊಹಂತಿ ಕೇಂದ್ರ ಸೇವೆಯಲ್ಲಿರುವುದರಿಂದ ರಾಜ್ಯ ಸೇವೆಗೆ ಮರಳಿದ ನಂತರ ಭಡ್ತಿ ನೀಡಲಾಗುವುದು.

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಮೂರೂ ಅಧಿಕಾರಿಗಳಲ್ಲಿ ಮೊಹಂತಿ ಸೇವಾ ಹಿರಿತನ ಹೊಂದಿದ್ದಾರೆ. ಮೊಹಂತಿ ನಂತರದ ಸೇವಾ ಹಿರಿತನ ಇರುವುದು ಅಲೋಕ್ ಗೆ. ``ಸಾಮಾನ್ಯವಾಗಿ, ಒಂದೇ ಬ್ಯಾಚ್ ನ ಅಧಿಕಾರಿಗಳಿಗೆ ಭಡ್ತಿ ನೀಡುವಾಗ ಅಷ್ಟೂ ಸ್ಥಾನಗಳು ತೆರವಾಗುವುದನ್ನು ಕಾಯಲಾಗುತ್ತದೆ. ಆದರೆ, ಈ ಬಾರಿ ಒಂದೇ ಸ್ಥಾನ ತೆರವಾಗಿದ್ದರೂ, ದಯಾನಂದ್ ಹಾಗೂ ಅಲೋಕ್ ರಲ್ಲಿ ಸೇವಾ ಹಿರಿತನ ಹೊಂದಿರುವ ಅಲೋಕ್ ರನ್ನು ಮಾತ್ರ ಭಡ್ತಿಗೆ ಪರಿಗಣಿಸಲಾಗಿದೆ,’’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇತರ ವರ್ಗಾವಣೆ: ಡಿಸಿಪಿ (ಪಶ್ಚಿಮ) ರವಿ ಡಿ ಚನ್ನವಣ್ಣವರ್ ಅವರನ್ನು ಸಿಐಡಿ ಗೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಬಿ ರಮೇಶ್ ಅವರನ್ನೂ ಡಿಸಿಪಿ (ಈಶಾನ್ಯ) ಕಲಾ ಕೃಷ್ಣಸ್ವಾಮಿ ಅವರ ಸ್ಥಾನಕ್ಕೆ ಭೀಮಶಂಕರ್ ಗುಳೇದ್ ಅವರನ್ನು ನೇಮಿಸಲಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com