ಐಪಿಎಲ್ ಆಟಗಾರನೋರ್ವನಿಗೆ ಬುಕ್ಕಿ ಓರ್ವ ಫಿಕ್ಸಿಂಗ್ ನಡೆಸಲು ಆಮಿಷ ಒಡ್ಡಿದ ಪ್ರಕರಣವನ್ನು ಬಿಸಿಸಿಐಯ ಭ್ರಷ್ಟಾಚಾರ ವಿರೋಧಿ ಘಟಕ (ACU) ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದೆ.
ಕರೋನಾ ವೈರಸ್ ಹಿನ್ನೆಲೆಯಲ್ಲಿ ಯುಎಇಯಲ್ಲಿ ಐಪಿಎಲ್ ಪಂದ್ಯಾಟ ನಡೆಯುತ್ತಿದ್ದು ವ್ಯಕ್ತಿಗಳು ನೇರವಾಗಿ ಆಟಗಾರರನ್ನು ಸಂಪರ್ಕಿಸುವ ಸಾಧ್ಯತೆ ತೀರಾ ಕಡಿಮೆ. ಅದಾಗ್ಯೂ, ಆನ್ಲೈನ್ ಮುಖಾಂತರ ಫಿಕ್ಸಿಂಗ್ ನಡೆಸಲು ಬುಕ್ಕಿಗಳು ಆಟಗಾರರನ್ನು ಸಂಪರ್ಕಿಸುವ ಸಾಧ್ಯತೆ ಇದೆಯೆಂದು ACU ಈ ಮೊದಲೇ ಎಚ್ಚರಿಸಿತ್ತು.
ಬುಕ್ಕಿ ಓರ್ವ ಆಟಗಾರನನ್ನು ಸಂಪರ್ಕಿಸಿರುವುದನ್ನು ACU ಮುಖ್ಯಸ್ಥ ಅಜಿತ್ ಸಿಂಗ್ ಧೃಡಪಡಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ತೆ ವರದಿ ಮಾಡಿದೆ.
ಆಟಗಾರನನ್ನು ಸಂಪರ್ಕಿಸಿರುವ ವಿಚಾರವನ್ನು ಸ್ವತಃ ಆಟಗಾರನೇ ಬಿಸಿಸಿಐ ಗಮನಕ್ಕೆ ತಂದಿದ್ದು, ಆ ಬುಕ್ಕಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಾವು ತೊಡಗಿದ್ದೇವೆ ಎಂದು ರಾಜಸ್ಥಾನದ ಮಾಜಿ ಡಿಜಿಪಿಯೂ ಆಗಿದ್ದ ಅಜಿತ್ ಸಿಂಗ್ ಹೇಳಿದ್ದಾರೆ.
ಭ್ರಷ್ಟಾಚಾರ ವಿರೋಧಿ ಶಿಷ್ಟಾಚಾರದ ಪ್ರಕಾರ ಫಿಕ್ಸಿಂಗ್ ಆಮಿಷದ ಮಾಹಿತಿ ನೀಡಿದ ಆಟಗಾರನ ಅಥವಾ ಆಟಗಾರ ಪ್ರತಿನಿಧಿಸುವ ತಂಡದ ಹೆಸರನ್ನು ಬಹಿರಂಗಗೊಳಿಸುವಂತಿಲ್ಲ.
ಅನೇಕ ಐಪಿಎಲ್ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದರಿಂದ ಅನೇಕ ಅಭಿಮಾನಿಗಳು ಅವರನ್ನು ಸಂಪರ್ಕಿಸುತ್ತಿರುತ್ತಾರೆ. ಅಭಿಮಾನಿಗಳ ಸೋಗಿನಲ್ಲಿ ಬುಕ್ಕಿಗಳೂ ಆಟಗಾರರನ್ನು ಸಾಮಾಜಿಕ ಜಾಲತಾಣದ ಮೂಲಕವೇ ಸಂಪರ್ಕಿಸಲು ಪ್ರಯತ್ನಿಸುತ್ತಿರುತ್ತಾರೆ.