ದೇಶಕ್ಕೆ ಕರೋನಾ ಭೀತಿ… ಬಿಸಿಸಿಐಗೆ ‘ಐಪಿಎಲ್’ ಲಾಭ-ನಷ್ಟದ ಚಿಂತೆ..!!
ಕ್ರೀಡೆ

ದೇಶಕ್ಕೆ ಕರೋನಾ ಭೀತಿ… ಬಿಸಿಸಿಐಗೆ ‘ಐಪಿಎಲ್’ ಲಾಭ-ನಷ್ಟದ ಚಿಂತೆ..!!

ಸದ್ಯ ಕರೋನಾ ಆತಂಕದಿಂದ ಈ ಬಾರಿಯ ಐಪಿಎಲ್ ಮಂಕಾಗಲಿದೆ. ಪ್ರೇಕ್ಷಕ ವರ್ಗ ಬರುತ್ತೋ, ಇಲ್ವೋ ಅನ್ನೋ ಆತಂಕಕ್ಕಿಂತಲೂ ಬಿಸಿಸಿಐಗೆ ಅದೆಲ್ಲಿ ಹಣದ ಒಳಹರಿವು ಕಡಿಮೆಯಾಗುತ್ತೆ ಅನ್ನೋ ಆತಂಕವೇ ಜಾಸ್ತಿಯಾಗಿದೆ.ಆ ಕಾರಣಕ್ಕಾಗಿಯೇ 2020ರ ಐಪಿಎಲ್‌ನಲ್ಲಿ ಕೊನೆಗೂ ಒಂದಿಷ್ಟು ಮಾರ್ಪಾಡು ಮಾಡಿದೆ.

ಮೊಹಮ್ಮದ್‌ ಇರ್ಷಾದ್‌

ಊರು ಮುಳುಗಿದರೇನಂತೆ ನಿಗದಿತ ದಿನಾಂಕಕ್ಕೆ ಐಪಿಎಲ್ ಮಾಡಿಯೇ ಸಿದ್ಧ ಎಂಬಂತಿದ್ದ ಬಿಸಿಸಿಐ ಈಗ ಕರೋನಾ ವೈರಸ್ ಮುಂದೆ ತಲೆಬಾಗಲೇಬೇಕಾಯಿತು. ಮೇ ತಿಂಗಳೊಳಗಾಗಿ ಚುಟುಕು ಕ್ರಿಕೆಟ್ ಕೂಟ ಮಾಡಿ ಮುಗಿಸೋ ಯೋಚನೆಯಲ್ಲಿದ್ದ ಬಿಸಿಸಿಐಗೆ ಕರೋನಾ ವೈರಸ್ ಅಡ್ಡಗಾಲಿಟ್ಟಿದೆ. ಹಾಗಂತ ಬಿಸಿಸಿಐ 13ನೇ ಆವೃತ್ತಿಯ ಐಪಿಎಲ್ ಕ್ರೀಡಾಕೂಟವನ್ನು ಸಂಪೂರ್ಣವಾಗಿ ಕೈ ಬಿಟ್ಟಿಲ್ಲ. ಬದಲಾಗಿ ಮತ್ತೊಂದು ದಿನ ನಿಗದಿಪಡಿಸಿ ಪಂದ್ಯಾಕೂಟ ಮುಂದೂಡಿದೆ. ಮಾರ್ಚ್ 29ರಂದು ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಚಾಲನೆ ಪಡೆಯಬೇಕಿದ್ದ ಐಪಿಎಲ್ ಕ್ರೀಡಾಕೂಟ ಏಪ್ರಿಲ್ 15ರಿಂದ ಆರಂಭವಾಗಲಿದೆ. ಹಣದ ಹೊಳೆಯೇ ಹರಿದು ಬರೋ ಬಿಸಿಸಿಐ ಅಷ್ಟು ಸುಲಭವಾಗಿ ಕ್ರೀಡಾಕೂಟ ಕೈ ಬಿಡುವ ಮನಸ್ಸು ಮಾಡಿರಲಿಲ್ಲ.

ಜಗತ್ತಿನ ಅತೀ ಶ್ರೀಮಂತ ಕ್ರಿಕೆಟ್ ಸಂಸ್ಥೆ ಅನ್ನೋ ಹೆಸರು ಪಡೆದಿರುವ ಬಿಸಿಸಿಐ ಪಾಲಿಗೆ ಐಪಿಎಲ್ ಅನ್ನೋದು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ. ಐಪಿಎಲ್‌ನಿಂದ ಸಾವಿರಾರು ಕೋಟಿ ಲಾಭವನ್ನ ಬಿಸಿಸಿಐ ಪಡೆಯುತ್ತಿದೆ. ಐಪಿಎಲ್ ಕ್ರೀಡಾಕೂಟಕ್ಕೆಂದೇ ಹರಿದು ಬರೋ ಪ್ರಾಯೋಜಕರು, ಜಾಹೀರಾತುದಾರರು ತಮ್ಮ ಕಂಪೆನಿ ಪ್ರಾಯೋಜಕತ್ವಕ್ಕೆ ನೀರಿನಂತೆ ಹಣ ಸುರಿಯುತ್ತಾರೆ. ಇನ್ನು ಬೆಟ್ಟಿಂಗ್‌ಕೋರರ ವಿಚಾರವೇ ಬೇರೆ ಬಿಡಿ. ಆದ್ರೆ ಅದೇನೆ ಇರಲಿ ಸದ್ಯ ಕರೋನಾ effectನಿಂದ ಈ ಬಾರಿಯ ಐಪಿಎಲ್ ಮಂಕಾಗಲಿದೆ. ಪ್ರೇಕ್ಷಕ ವರ್ಗ ಬರುತ್ತೋ, ಇಲ್ವೋ ಅನ್ನೋ ಆತಂಕಕ್ಕಿಂತಲೂ ಬಿಸಿಸಿಐಗೆ ಅದೆಲ್ಲಿ ಹಣದ ಒಳಹರಿವು ಕಡಿಮೆಯಾಗುತ್ತೆ ಅನ್ನೋ ಆತಂಕವೇ ಜಾಸ್ತಿಯಾಗಿದೆ. ಆ ಕಾರಣಕ್ಕಾಗಿಯೇ 2020ರ ಐಪಿಎಲ್‌ನಲ್ಲಿ ಕೊನೆಗೂ ಒಂದಿಷ್ಟು ಮಾರ್ಪಾಡು ಮಾಡಿದೆ.

ಸದ್ಯ ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಲೀಗ್‌ನ ಫೈನಲ್ ಪಂದ್ಯಕ್ಕೂ ಹಾಗೂ ಭಾರತ-ದಕ್ಷಿಣ ಆಫ್ರಿಕಾ ನಡುವಣ ಇನ್ನುಳಿದಿರುವ ಎರಡು ಏಕದಿನ ಪಂದ್ಯಾಕೂಟಕ್ಕೂ ಕರೋನಾ ಸೋಂಕಿನ ಬಿಸಿ ತಟ್ಟಿದೆ. ಪರಿಣಾಮ ಪಂದ್ಯಾಕೂಟಗಳು ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿಂದೆ ಫುಟ್ಬಾಲ್, ಬೇಸ್‌ಬಾಲ್, ಗಾಲ್ಫ್, ಐಸ್‌ಹಾಕಿ ಮುಂತಾದ ಕ್ರೀಡೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ನಡೆದಿದ್ದವು. ಇದೀಗ ಆ ಸಾಲಿಗೆ ಕ್ರಿಕೆಟ್ ಸರಣಿಯೂ ಸೇರಿದಂತಾಗಲಿದೆ.

ಈ ಹಿಂದೆ ನಡೆದಂತಹ ಪ್ರೇಕ್ಷಕರಿಲದ್ಲ ಪಂದ್ಯಾಕೂಟಗಳು ಬಹುತೇಕ ಗಲಭೆಯಂತಹ ಸನ್ನಿವೇಶದಲ್ಲಾದರೆ, ಇದೀಗ ನಡೆಯುತ್ತಿರುವ ಖಾಲಿ ಕ್ರೀಡಾಂಗಣದ ಆಟವು ವೈರಸ್ ಸೋಂಕಿನ ಭಯದಿಂದ ಆಗಿದೆ. ಅಲ್ಲೆಲ್ಲಾ ಆಟಗಾರರ ಸುರಕ್ಷತೆ ಬಗ್ಗೆ ಗಮನಹರಿಸಿದ್ರೆ, ಇಲ್ಲಿ ಆಟಗಾರರ ಜೊತೆ ಜೊತೆಗೆ ಪ್ರೇಕ್ಷಕರ ಮಾತ್ರವಲ್ಲದೇ ದೇಶದ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಳ್ಳಬೇಕಿದೆ. ಹಾಗಂತ ಬಿಸಿಸಿಐ ಇದ್ಯಾವುದರ ಬಗ್ಗೆ ತಲೆಗೆಡಿಸಿಕೊಂಡಿರಲಿಲ್ಲ. ಆದ್ರೆ ಅದ್ಯಾವಾಗ ಮಹಾರಾಷ್ಟ್ರ, ದೆಹಲಿ ಸರಕಾರಗಳು ತಮ್ಮ ರಾಜ್ಯದಲ್ಲಿ ಐಪಿಎಲ್ ಕ್ರೀಡಾಕೂಟಕ್ಕೆ ರೆಡ್ ಸಿಗ್ನಲ್ ತೋರಿಸಿದವೋ ಅದಾಗಲೇ ಬಿಸಿಸಿಐ ಎಚ್ಚೆತ್ತುಕೊಂಡು ಸಭೆ ನಡೆಸಿದೆ. ಅನಿವಾರ್ಯವಾಗಿ ಐಪಿಎಲ್ 13 ನೇ ಆವೃತ್ತಿಯನ್ನು ಏಪ್ರಿಲ್ 15 ರಿಂದ ಆರಂಭಿಸಲು ನಿರ್ಧರಿಸಿದೆ.

ಬಿಸಿಸಿಐ ಲಾಭ-ನಷ್ಟದ ಲೆಕ್ಕಾಚಾರ:

ಕೋವಿಡ್-19 ಸೊಂಕು ನಡುವೆಯೂ ಐಪಿಎಲ್ ನಡೆಸಲು ತೀರ್ಮಾನಿಸಿದ್ದ ಬಿಸಿಸಿಐ ಇದೀಗ ಭಾರತೀಯ ಕ್ರೀಡಾ ಸಚಿವಾಲಯ ಹಾಗು ಆರೋಗ್ಯ ಸಚಿವಾಲಯ ನೀಡಿರುವ ಆದೇಶವನ್ನ ಪಾಲಿಸಲು ಮುಂದಾಗಿದೆ. ಒಂದೋ ಪ್ರೇಕ್ಷಕರಿಲ್ಲದ ʼಖಾಲಿ ಕ್ರೀಡಾಂಗಣʼದಲ್ಲಿ ಐಪಿಎಲ್ ಆಯೋಜಿಸಬೇಕು. ಇಲ್ಲವೇ ಐಪಿಎಲ್ ಮ್ಯಾಚ್ ಮುಂದೂಡಬೇಕು. ‘ಕ್ರೌಡ್‌ಲೆಸ್ ಗೇಮ್’ ನಡೆಯೋದಾದ್ರೆ ಗ್ಯಾಲರಿಯಲ್ಲಿ ಯಾವೊಬ್ಬ ಪ್ರೇಕ್ಷಕನಿಲ್ಲದೇ ಐಪಿಎಲ್ ಕ್ರಿಕೆಟ್ ಕೂಟವೇ ಬಣಗುಡಲಿದೆ. ಅತ್ತ cheer leaders ಇಲ್ಲ, ಇತ್ತ ಫೋರ್, ಸಿಕ್ಸರ್‌ಗಳಿಗೆ ಕಿರುಚಾಡೋ ಪ್ರೇಕ್ಷಕರೂ ಇಲ್ಲದಾಗುತ್ತಾರೆ. ಮನೆಯಿಂದಲೇ ಟಿವಿ ಮುಂದೆ ಕೂತು ನೋಡಬೇಕಷ್ಟೇ. ಡ್ರೆಸ್ಸಿಂಗ್ ರೂಮ್ ನಲ್ಲಿ ಕ್ರೀಡಾಪಟುಗಳಿದ್ದರೆ, ನೇರಪ್ರಸಾರ ನೀಡೊ ಸ್ಪೋರ್ಟ್ಸ್ ಚಾನೆಲ್ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳಿಗಿಂತ ಜಾಸ್ತಿ ಮಂದಿ ಕ್ರೀಡಾಂಗಣದ ಬಳಿ ಕಾಣಿಸಿಕೊಳ್ಳಲಾರರು. ಆದ್ದರಿಂದ ಪ್ರೇಕ್ಷಕ ವರ್ಗದಿಂದ ಬರೋ ಅರ್ಧದಷ್ಟು ಆದಾಯಕ್ಕೆ ಅದು ಕತ್ತರಿ ಹಾಕಿದಂತೆ. ಇನ್ನು ಐಪಿಎಲ್ ಕ್ರೀಡೆ ಮುಂದೂಡಿದರೆ ಮೇ ತಿಂಗಳ ನಂತರ ಶುರುವಾಗೊ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಯಿಂದಾಗಿ ಆಟಗಾರರ ಅಲಭ್ಯತೆ ಕಾಣಬಹುದು. ಆ ಎಲ್ಲಾ ಕಾರಣದಿಂದಾಗಿ ಬಿಸಿಸಿಐ ಮುಂದೆ 13 ನೇ ಆವೃತ್ತಿಯ ಐಪಿಎಲ್ ಪಂದ್ಯಾಕೂಟದಲ್ಲಿ ಹಲವಾರು ಬದಲಾವಣೆ ಮಾಡಲೇಬೇಕಾದ ಒತ್ತಡ ನಿರ್ಮಾಣವಾಗಿದೆ.

ಕೊನೆ ಹಂತದಲ್ಲಿ ಫ್ರಾಂಚೈಸಿಗಳ ಜೊತೆ ಮಾತಾಡಿ ಲೀಗ್ ಹಂತದ ಪಂದ್ಯಗಳ ಸಂಖ್ಯೆ ಇಳಿಕೆ ಕಂಡ್ರೂ ಅಚ್ಚರಿಯಿಲ್ಲ. ಅಲ್ಲದೇ ಏಪ್ರಿಲ್ 15 ರವರೆಗೆ ಭಾರತ ಪ್ರವೇಶಿಸಲು ವೀಸಾ ನಿರ್ಬಂಧಿಸಿರುವ ಹಿನ್ನೆಲೆ, ವಿದೇಶಿ ಆಟಗಾರರು ಬಹುತೇಕ ಈ ಬಾರಿಯ ಐಪಿಎಲ್‌ನಿಂದ ದೂರವುಳಿಯುವ ಸಾಧ್ಯತೆಗಳಿವೆ. ಹಾಗಂತ ಫ್ರಾಂಚೈಸಿಗಳು ವಿದೇಶಿ ಆಟಗಾರರನ್ನ ಕರೆತರಲು ಬೇಕಾದ ಪ್ರಯತ್ನ ಮುಂದುವರೆಸಿದ್ದಾರೆ. ಒಂದು ವೇಳೆ ಏಪ್ರಿಲ್ 15 ರ ವೇಳೆಗೆ ಕೋವಿಡ್-19 ಆತಂಕ ಕಡಿಮೆಯಾದ್ರೆ, ಐಪಿಎಲ್‌ನ ಲೀಗ್ ಹಂತದಲಿಯೇ ವಿದೇಶಿ ಆಟಗಾರರು ತಮ್ಮ ತಮ್ಮ ತಂಡಗಳನ್ನ ಸೇರಿಕೊಂಡ್ರೂ ಅಚ್ಚರಿಯಿಲ್ಲ. ವಿದೇಶಿ ಆಟಗಾರರಿಂದಲೇ ರಂಗು ಪಡೆಯುವ ಐಪಿಎಲ್‌ಗೆ ಅವರ ಅಲಭ್ಯತೆ ಸ್ವಲ್ಪ ಮಟ್ಟಿಗೆ ಪೆಟ್ಟು ನೀಡೊದು ಪಕ್ಕಾ. ಇದಲ್ಲದೇ ನಿಗದಿಯಂತೆ ಪಂದ್ಯಗಳು ನಡೆದರೆ ವೈರಸ್ ಭೀತಿಯಿಂದ ಪ್ರೇಕ್ಷಕ ಗ್ಯಾಲರಿಯಿಂದ ಬರಬಹುದಾದ ಆದಾಯದಲ್ಲಿ ಶೇಕಡಾ 5 ರಿಂದ 10 ರಷ್ಟು ಕೊರತೆ ಎದುರಾಗಬಹುದು ಎನ್ನುವ ಲೆಕ್ಕಾಚಾರವು ಬಿಸಿಸಿಐ ಮುಂದಿತ್ತು. ಈಗಾಗಲೆ ಪ್ರಾಯೋಜಕರು ಹಾಗೂ ಜಾಹೀರಾತುದಾರರಿಂದ ಹಣ ಪಡೆದಿರೋ ಬಿಸಿಸಿಐ ಹೇಗಾದರೂ 13ನೇ ಆವೃತ್ತಿಯ ಐಪಿಎಲ್ ಮಾಡಿ ಮುಗಿಸಲೇಬೇಕು ಅನ್ನೋ ಜಿದ್ದಿಗೆ ಬಿದ್ದಿರುವುದಂತು ನಿಜ.

ಹಾಗಂತ ಐಪಿಎಲ್ ಕ್ರೀಡಾಕೂಟ ಆಗದೆ ಹೋದರೆ ಅದೆಷ್ಟೊ ಪ್ರತಿಭಾವಂತ ದೇಶಿ ಕ್ರೀಡಾಪಟುಗಳು ಸಿಕ್ಕ ಅವಕಾಶದಿಂದ ವಂಚಿತರಾಗುತ್ತಾರೆ. ಇನ್ನೊಂದು ವರುಷ ಕಾಯಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಈಗಾಗಲೇ ಹತ್ತಾರು ಕ್ರಿಕೆಟ್ ಪ್ರತಿಭೆಗಳು ಇದೇ ಐಪಿಎಲ್‌ನಿಂದ ಅರಳಿದ ಪ್ರತಿಭೆಗಳಾಗಿದ್ದಾವೆ. ಅಲ್ಲದೇ ರಾಷ್ಟçಮಟ್ಟದ ತಂಡಕ್ಕೂ ಸುಲಭವಾಗಿ ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐನ ಆಯ್ಕೆ ಸಮಿತಿಗೆ ಐಪಿಎಲ್ ಪರೋಕ್ಷವಾಗಿ ಸಹಕಾರಿಯಾಗಿದೆ ಅನ್ನೊ ಸತ್ಯ ಒಪ್ಪದೇ ಇರಲಾಗದು. ಆದರೂ ದೇಶವಿಡೀ ಭಯಾನಕ ಕರೋನಾ ವೈರಸ್ ಆತಂಕದಲ್ಲಿದ್ದಾಗ ಬಿಸಿಸಿಐ ಐಪಿಎಲ್ ಪಂದ್ಯದ ಅಮಲಿನಲ್ಲಿದೆ ಅಂದ್ರೆ ‘ರೋಮ್ ನಗರ ಹೊತ್ತಿ ಉರಿಯಬೇಕಾದ್ರೆ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದನಂತೆ’ ಅನ್ನೋ ಗಾದೆ ಮಾತು ನೆನಪಿಸುತ್ತಿದೆ.

Click here Support Free Press and Independent Journalism

Pratidhvani
www.pratidhvani.com