ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ಪುಳಕದಲ್ಲಿರುವ ಆಟಗಾರರು
ಕ್ರೀಡೆ

ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ಪುಳಕದಲ್ಲಿರುವ ಆಟಗಾರರು

ಪ್ರತಿ ವಿಶ್ವಕಪ್‌ನಲ್ಲಿ ಒಂದಲ್ಲ ಒಂದು ವಿಶೇಷ ಇದ್ದೇ ಇರುತ್ತದೆ. ಈ ಬಾರಿ ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ಐದು ಮಂದಿ ಆಟಗಾರರು ವಿಶೇಷವಾಗಿ ಗಮನ ಸೆಳೆದಿದ್ದಾರೆ. ಯಾರವರು?

ಪ್ರತಿಧ್ವನಿ ವರದಿ

1.ಕಗಿಸೋ ರಬಾಡ, ದಕ್ಷಿಣ ಆಫ್ರಿಕಾ

19 ವಯೋಮಿತಿ ಐಸಿಸಿ ವಿಶ್ವಕಪ್‌ ನಲ್ಲಿ ಆಡಿದ್ದ ಇವರು 2014ರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 35 ರನ್‌ ನೀಡಿ 6 ವಿಕೆಟ್‌ ಕಬಳಿಸಿದ್ದರು. ಆಗಲೇ ಕ್ರಿಕೆಟ್‌ ಅಭಿಮಾನಿಗಳು, ಹಿರಿಯ ಆಟಗಾರರು ಹುಬ್ಬೇರಿಸುವಂತೆ ಮಾಡಿದ್ದರು. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್‌ ಆಗಿತ್ತು. ಜತೆಗೆ, 23 ವಿಕೆಟ್‌ ಪಡೆಯುವ ಮೂಲಕ ರಬಾಡ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಕೀರ್ತಿಗೆ ಭಾಜನರಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು 2015 ಜುಲೈ ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ. ಜತೆಗೆ, ಗಂಟೆಗೆ 140 ರಿಂದ 150 ವೇಗದಲ್ಲಿ ಚೆಂಡನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಇದುವರೆಗೆ 66 ಏಕದಿನ ಪಂದ್ಯಗಳಾಡಿದ್ದು, 106 ವಿಕೆಟ್‌ ಪಡೆದಿದ್ದಾರೆ.

2. ಜಸ್ಪ್ರೀತ್‌ ಬುಮ್ರ, ಭಾರತ

2016ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಇವರು, ಐಸಿಸಿ ಏಕದಿನ ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಜಸ್ಪ್ರೀತ್‌ ಬುಮ್ರಾ ಅವರು ಭಾರತದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇವರ ಯಾರ್ಕರ್‌ ಎಸೆತಗಳನ್ನು ಎದುರಿಸುವುದು ಕಷ್ಟ. ಅಲ್ಲದೇ ಡೆತ್‌ ಓವರ್‌ಗಳಲ್ಲಿ ರನ್‌ ನಿಯಂತ್ರಿಸುವ ಶಕ್ತಿ ಇವರಲ್ಲಿದೆ. 49 ಏಕದಿನ ಪಂದ್ಯಗಳಾಡಿರುವ ಇವರು 58 ವಿಕೆಟ್‌ ಕಬಳಿಸಿದ್ದಾರೆ.

  3.ರಶೀದ್‌ ಖಾನ್‌, ಆಫ್ಘಾನಿಸ್ತಾನ

ಇಪ್ಪತ್ತರ ಪ್ರಾಯದ ರಶೀದ್‌ ಖಾನ್‌ ಆಫ್ಘಾನಿಸ್ತಾನದ ಅನುಭವಿ ಸ್ಪಿನ್ನರ್‌. ಭಾರತ ತಂಡವನ್ನು ಎರಡು ದಶಕಗಳ ಕಾಲ ಸಚಿನ್‌ ಪ್ರತಿನಿಧಿಸಿದ ರೀತಿ ರಶೀದ್‌ ಖಾನ್‌ ಕೂಡ ಅಫ್ಘಾನಿಸ್ತಾನ ತಂಡವನ್ನು ಪ್ರತಿನಿಧಿಸಲಿದ್ದಾರೆ. ಪ್ರಸ್ತುತ ಐಸಿಸಿ ಬೌಲಿಂಗ್‌ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ರಶೀದ್‌ ವಿಶ್ವ ಶ್ರೇಷ್ಠ ಲೆಗ್‌ ಸ್ಪಿನ್ನರ್‌ ಆಗಿದ್ದಾರೆ. ಬೌಲಿಂಗ್‌ ಅಲ್ಲದೇ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲರು. 58ಏಕದಿನ ಪಂದ್ಯಗಳಲ್ಲಿ 125 ವಿಕೆಟ್‌ ಕಬಳಿಸಿದ್ದಾರೆ.

4.ಜೇಸನ್‌ ರಾಯ್‌, ಐರ್ಲೆಂಡ್‌

2015ರಲ್ಲಿ ಐರ್ಲೆಂಡ್‌ ವಿರುದ್ಧದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೇಸನ್‌ ರಾಯ್‌, ಕಳೆದ ಪಾಕಿಸ್ತಾನದ ವಿರುದ್ಧ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಸದ್ಯ ಉತ್ತಮ ಲಯದಲ್ಲಿದ್ದಾರೆ. ಪಾಕ್‌ ವಿರುದ್ಧ 87, 76 ಹಾಗೂ 114 ರನ್‌ಗಳನ್ನು ಮೊದಲು ಮೂರು ಪಂದ್ಯಗಳಲ್ಲಿ ಗಳಿಸಿದ್ದರು. ಇಂಗ್ಲೆಂಡ್‌ ತಂಡದ ಮುಖ್ಯ ಆಟಗಾರರಲ್ಲಿ ಜೇಸನ್‌ ರಾಯ್ ಕೂಡ ಒಬ್ಬರು. 76 ಏಕದಿನ ಪಂದ್ಯಗಳಲ್ಲಿ2,938 ರನ್‌ ಗಳಿಸಿದ್ದಾರೆ.

5.ನಥಾನ್ ಲಿಯಾನ್‌, ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಹಿರಿಯ ಸ್ಪಿನ್ನರ್‌ ನಥಾನ್‌ ಲಿಯಾನ್‌ ಅವರು 86 ಟೆಸ್ಟ್‌ ಪಂದ್ಯಗಳಿಂದ ಒಟ್ಟು 343 ವಿಕೆಟ್‌ ಕಬಳಿಸಿದ್ದಾರೆ. ಇದೇ ಮೊದಲ ಬಾರಿ ಲಿಯಾನ್‌ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಆ್ಯಡಂ ಝಂಪಾ ಜತೆಗೆ ಇವರು ಸ್ಪಿನ್  ಮೋಡಿ ಮಾಡಲು ಸಜ್ಜಾಗಿದ್ದಾರೆ. 25 ಏಕದಿನ ಪಂದ್ಯಗಳಲ್ಲಿ 26 ವಿಕೆಟ್‌ ಪಡೆದಿದ್ದಾರೆ.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com