ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು, ಬಹಿರಂಗವಾಗಿ ರಾಜ್ಯದ ಅಧಿಕೃತ ವಿಪಕ್ಷವಾದ ಕಾಂಗ್ರೆಸ್ಗೆ ಬಾಹ್ಯ ಬೆಂಬಲ ಸೂಚಿಸಿದ್ದಾರೆ. ಗುರುವಾರ ಬೆಳಿಗ್ಗೆ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೆಂಬಲ ಸೂಚಕ ಪತ್ರವನ್ನು ನೀಡಿದ್ದಾರೆ.
ಕಾಂಗ್ರೆಸ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಂಟಿಬಿ ನಾಗರಾಜ್ ಅವರು ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಯಾದಾಗ ನಡೆದ ಉಪಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವಾಗಿನಿಂದ ಶರತ್ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಪುಕಾರು ಹಬ್ಬಿತ್ತು.
ಶಾಸಕರಾಗಿರುವಾಗಲೇ ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಯಾದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕತ್ವ ಕಳೆದುಕೊಳ್ಳುವ ಸಂಭವವಿರುವುದರಿಂದ, ವಿರೋಧ ಪಕ್ಷಕ್ಕೆ ಬಾಹ್ಯ ಬೆಂಬಲವನ್ನು ಸೂಚಿಸಿದ್ದಾರೆ.
“ತಾಲೂಕಿನ ಮತದಾರರ ಅಭಿವೃದ್ದಿಯ ಹಿತದೃಷ್ಟಿಯಿಂದ ನಾವಿಲ್ಲಿ ಸೇರಿದ್ದೇವೆ. ನಾನು ಪಕ್ಷೆತರನಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಕೂಡಾ ನಾನು ಪಕ್ಷೇತರನಾಗಿಯೇ ಮುಂದುವರೆಯಲಿದ್ದೇನೆ. ಆದರೆ, ಈಗ ದೇಶದಲ್ಲಿ ನಡೆಯುತ್ತಿರುವ ರೈತರ ವಿರುದ್ದದ ದಬ್ಬಾಳಿಕೆ, ಬೆಲೆ ಏರಿಕೆಯ ಸಮಸ್ಯೆಗಳ ಕುರಿತು ಏಕಾಂಗಿಯಾಗಿ ಹೋರಾಟ ನಡೆಸುವ ಬದಲು, ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿ ನನ್ನ ಹೋರಾಟ ಮುಂದುವರೆಸಲಿದ್ದೇನೆ,” ಎಂದು ಶರತ್ ಹೇಳಿದ್ದಾರೆ.
ಶರತ್ ಬಚ್ಚೇಗೌಡ ಅವರು ನೀಡಿರು ಬೆಂಬಲ ಕೋರಿಕೆ ಪತ್ರವನ್ನು ಸ್ವೀಕರಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ, ಶರತ್ ಬಚ್ಚೇಗೌಡ ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅವರ ಹೋರಾಟದೊಂದಿಗೆ ನಮ್ಮ ಪಕ್ಷದ ಬೆಂಬಲ ಇದ್ದರೆ ಅವರ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತೆ ಎಂಬ ಕಾರಣಕ್ಕೆ ಅವರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಅವರಿಗೆ ನಾವು ನಮ್ಮ ಕಡೆಯಿಂದ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು, ಶರತ್ ಬಚ್ಚೇಗೌಡ ತಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ದನಿ ಎತ್ತಲು ನಮ್ಮ ಬೆಂಬಲ ಕೇಳಿದ್ದಾರೆ. ನಮ್ಮ ಪಕ್ಷದ ಸಿದ್ದಾಂತಗಳಿಗೆ ಒಪ್ಪಿ ಬಂದಿರುವ ನಿಮಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ, ಎಂದಿದ್ದಾರೆ.