ಶಿವಸೇನೆ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಲಿರುವ ಸಿಂಧುದುರ್ಗ್

ಶಿವಸೇನೆ ಆರಂಭದಿಂದಲೂ ಸಿಂಧದುರ್ಗ್‌ ಶಿವಸೇನೆಯ ಭದ್ರಕೋಟೆ. ಬಿಜೆಪಿಯೊಂದಿಗಿನ ಮೈತ್ರಿಯ ವೇಳೆಯಲ್ಲಿಯೂ ಸಿಂಧದುರ್ಗ್‌ ಶಿವಸೇನೆ ಸುಪರ್ದಿಯಲ್ಲಿಯೇ ಇತ್ತು. ಇಂತಹ ಸಿಂಧದುರ್ಗ್‌ಗೆ ಅಮಿತ್‌ ಶಾ ಕಳೆದ ವಾರ ಭೇಟಿ ನೀಡಿದ್ದಾರೆ.
ಶಿವಸೇನೆ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಲಿರುವ ಸಿಂಧುದುರ್ಗ್

ಶಿವಸೇನೆಯ ಪ್ರಾಬಲ್ಯ ಇರುವ ಮುಂಬೈನಲ್ಲಿ ಬಿಜೆಪಿ ತನ್ನ ನೆಲೆ ವಿಸ್ತರಿಸಿದ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಎರಡನೇ ಪ್ರಮುಖ ಪ್ರದೇಶವಾದ ಕೊಂಕಣದ ಕರಾವಳಿ ತೀರದಲ್ಲಿ ನೆಲೆ ವಿಸ್ತರಿಸಲು ಬಿಜೆಪಿಯನ್ನು ಪ್ರಯತ್ನಿಸುತ್ತಿದೆ.

2014 ರಿಂದಲೂ ಬಿಜೆಪಿ ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದೇ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಳೆದ ಭಾನುವಾರ ಸಿಂಧುದುರ್ಗ್‌ಗೆ ಭೇಟಿ ನೀಡಿದ್ದಾರೆ. ಈ ಭೇಟಿ ಮುಖಾಂತರ ಶಿವಸೇನೆಯ ಭದ್ರಕೋಟೆಯಲ್ಲಿ ಬಹಿರಂಗ ಯುದ್ಧದ ಆಹ್ವಾನ ನೀಡಿದಂತಾಗಿದೆ.

ಈಗಾಗಲೇ ಮಾಜಿ ಶಿವ ಸೈನಿಕ್ ಮತ್ತು ಮಹಾರಾಷ್ಟ್ರ ಸಿಎಂ ಠಾಕ್ರೆ ಅವರ ಬದ್ಧ ವಿರೋಧಿ ಆಗಿದ್ದ ನಾರಾಯಣ ರಾಣೆ ಅವರು 2017 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದು ಬಿಜೆಪಿಗೆ ಮತ್ತಷ್ಟು ಬಲ ನೀಡಿಎ. ಈ ಪ್ರದೇಶದಲ್ಲಿ ಪಕ್ಷದ ವಿಸ್ತರಣೆಯನ್ನು ನೋಡಿಕೊಳ್ಳುವ ಬಿಜೆಪಿ ಎಂಎಲ್ಸಿ ಪ್ರಸಾದ್ ಲಾಡ್ ಅವರು "ಕಳೆದ ಕೆಲವು ವರ್ಷಗಳಿಂದ ನಾವು ಕೊಂಕಣ ಪ್ರದೇಶದಲ್ಲಿ ಬಿಜೆಪಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ನಾರಾಯಣ್ ರಾಣೆ ಅವರ ಪ್ರವೇಶದೊಂದಿಗೆ, ನಾವು ವಿಶೇಷವಾಗಿ ಸಿಂಧುದುರ್ಗ್ ಜಿಲ್ಲೆಯಲ್ಲಿ ಹೆಜ್ಜೆ ಹಾಕಿದ್ದೇವೆ. ಅಮಿತ್ ಶಾ ಅವರ ಕೊಂಕಣ ಪ್ರವಾಸವು ಈ ಪ್ರದೇಶದ ಬಗ್ಗೆ ಬಿಜೆಪಿಯ ಬದ್ಧತೆಯನ್ನು ಬಲಪಡಿಸಿದೆ” ಎಂದು ಹೇಳಿದ್ದಾರೆ.

ರಾಣೆ ಸ್ಥಾಪಿಸಿರುವ 'ಸಿಂಧುದುರ್ಗ್ ಶಿಕ್ಷನ್ ಪ್ರಸಾರಕ್ ಮಂಡಲ್' ನಡೆಸುತ್ತಿರುವ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಲು ಶಾ ಅವರು ಭಾನುವಾರ ರಾಣೆಯ ತವರು ಕ್ಷೇತ್ರವಾದ ಸಿಂಧುದುರ್ಗ್‌ನ ಕುಡಾಲ್ ಗೆ ಭೇಟಿ ನೀಡಿದ್ದರು. ಸಿಎಂ ಠಾಕ್ರೆ ಮತ್ತು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಲು ಅವರು ಆ ವೇದಿಕೆಯನ್ನು ಸಮರ್ಥವಾಗಿ ಬಳಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿ ಶಿವಸೇನೆಯು ಅದರ ಸ್ಥಾಪಕರಾದ ಬಾಳ ಠಾಕ್ರೆ ಅವರಿಗೆ ಅವಮಾನ ಮಾಡಿದೆ. 2019 ರ ಚುನಾವಣೆಯ ನಂತರ ಕೇಸರಿ ಮೈತ್ರಿ ಅಧಿಕಾರಕ್ಕೆ ಬಂದರೆ ಸಿಎಂ ಹುದ್ದೆಯನ್ನು ಹಂಚಿಕೊಳ್ಳುವ ಭರವಸೆಯನ್ನು ಬಿಜೆಪಿ ಹಿಂಪಡೆದಿದೆ ಎಂದು ಜನರಿಗೆ ಠಾಕ್ರೆ ಸುಳ್ಳು ಹೇಳುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದರು.


ಮುಚ್ಚಿದ ಬಾಗಿಲುಗಳ ಹಿಂದೆ ನಾವು ನೀಡಿದ್ದೇವೆಂದು ಹೇಳಲಾದ ಭರವಸೆಗಳನ್ನು ನಾವು ಮುರಿದಿದ್ದೇವೆ ಎಂದು ಅವರು (ಶಿವಸೇನೆ) ಹೇಳುತ್ತಲೇ ಬಂದಿದ್ದಾರೆ. ಆದರೆ ನಾನು ಎಂದಿಗೂ ‘ಮುಚ್ಚಿದ ಬಾಗಿಲು’ ರಾಜಕಾರಣದಲ್ಲಿ ತೊಡಗಿಲ್ಲ ಎಂದು ದೃಢವಾಗಿ ಹೇಳಲು ಬಯಸುತ್ತೇನೆ. ನಾನು ಪಾರದರ್ಶಕತೆ ಬಯಸುತ್ತೇನೆ ಮತ್ತು ಸಾರ್ವಜನಿಕ ವೇದಿಕೆಯಲ್ಲೇ ಎಲ್ಲಾ ಭರವಸೆಗಳನ್ನು ನೀಡುತ್ತೇನೆ” ಎಂದು ಶಾ ಭರವಸೆ ನೀಡಿದ್ದರು.

ಇದೇ ಸಂದರ್ಭದಲ್ಲಿ ಅಮಿತ್ ಶಾ 2020 ರ ಜೂನ್‌ನಲ್ಲಿ ನಿಸರ್ಗಾ ಚಂಡಮಾರುತ ಅಪ್ಪಳಿಸಿದಾಗ ರತ್‌ನಗಿರಿ-ಸಿಂಧುದುರ್ಗ್‌ಗೆ ಒಮ್ಮೆಯೂ ಭೇಟಿ ನೀಡದ ಕುರಿತೂ ಸಿಎಂ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಠಾಕ್ರೆಯ ಪ್ರಭಾವ ಕುಗ್ಗಿಸುವ ಪ್ರಯತ್ನವೂ ಮಾಡಿದ್ದರು. ಈ ಎಲ್ಲಾ ವಾಗ್ದಾಳಿಯ ಹಿಂದೆಯಿರುವುದು ಸಿಂಧದುರ್ಗ್‌ನ ಮೇಲೆ ಹಿಡಿತ ಸಾಧಿಸುವ ಹುನ್ನಾರ ಅನ್ನುವುದಂತು ಸ್ಪಷ್ಟ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರತ್ನಾಗಿರಿ-ಸಿಂಧುದುರ್ಗ್ ಕ್ಷೇತ್ರದ ಶಿವಸೇನೆ ಸಂಸದ ವಿನಾಯಕ್ ರೌತ್, ಅಮಿತ್ ಶಾ ಭೇಟಿಯಿಂದ ಕೊಂಕಣದಲ್ಲಿ ತಮ್ಮ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

"ಅಮಿತ್ ಷಾ ಒಂದು ನಿರ್ದಿಷ್ಟ ಜಿಲ್ಲೆಗೆ ಭೇಟಿ ನೀಡಿದಾಗ, ಕೇಂದ್ರ ಸಚಿವರಾಗಿ ಅವರು ಜಿಲ್ಲೆಗೆ ಕೆಲವು‌ ಪ್ರಬಲವಾದ ಘೋಷಣೆಗಳನ್ನು ಮಾಡುತ್ತಾರೆ ಮತ್ತು ಅದರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಬದಲಾಗಿ ಅವರು ಕೇವಲ ಸಿಎಂ, ಶಿವಸೇನೆ ಮತ್ತು ಸರ್ಕಾರವನ್ನು ಟೀಕಿಸಿದ್ದಾರೆ ” ಎಂದು ಅವರು ಅಮಿತ್‌ ಶಾ ಅವರ ಬರುವಿಕೆ ನಮಗೊಂದು ಬೆದರಿಕೆಯಲ್ಲವೆಂದು ತಿಳಿಸಿದ್ದರು.

ಕೊಂಕಣ ಪ್ರದೇಶವು ರತ್ನಾಗಿರಿ, ಪಾಲ್ಘರ್, ರಾಯ್‌ಗಡ್, ಮುಂಬೈ ನಗರ ಮತ್ತು ಮುಂಬೈ ಉಪನಗರವನ್ನು ಒಳಗೊಂಡ ಎರಡು ಜಿಲ್ಲೆಗಳನ್ನು ಒಳಗೊಂಡಿದೆ. ಪಕ್ಷದ ಆರಂಭಿಕ ದಿನಗಳಿಂದಲೂ ಈ ಪ್ರದೇಶವು ಶಿವಸೇನೆಯ ಭದ್ರಕೋಟೆಯಾಗಿದೆ. ಕೊಂಕಣ ಪ್ರದೇಶದ ಮರಾಠಿ ಯುವಕರು ಉದ್ಯೋಗ ಅರಸಿಕೊಂಡು ಮುಂಬೈಗೆ ಬಂದು ಹಣವನ್ನು ತಮ್ಮ ಹುಟ್ಟೂರಿಗೆ ಕಳುಹಿಸುತ್ತಿದ್ದರು. ಕೊಂಕಣ ಪ್ರದೇಶವನ್ನು, ವಿಶೇಷವಾಗಿ ಗ್ರಾಮೀಣ ರತ್ನಾಗಿರಿ ಮತ್ತು ಸಿಂಧುದುರ್ಗ್‌ನ ಜಿಲ್ಲೆಗಳನ್ನು ಅನೌಪಚಾರಿಕವಾಗಿ ‘ಮನಿ ಆರ್ಡರ್ ಎಕಾನಮಿ’ ಎಂದು ಕರೆಯಲಾಗುತ್ತಿತ್ತು.

ಮಹಾರಾಷ್ಟ್ರದ ಹೊರಗಿನಿಂದ ವಲಸೆ ಬಂದವರು ಮುಂಬೈನಲ್ಲಿ ಉನ್ನತ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಸ್ಥಳೀಯ ಮಹಾರಾಷ್ಟ್ರರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬುದು ಶಿವ ಸೇನೆಯ ಆಗಿನ ಪ್ರತಿಪಾದನೆಯಾಗಿತ್ತು. ಇದು ಕೊಂಕಣದಿಂದ ಉದ್ಯೋಗ ಅರಸಿ ಬರುವ ಯುವಕರು ಮತ್ತು ಅವರ ಕುಟುಂಬಗಳಿಗೆ ಶಿವಸೇನೆಯೊಂದಿಗೆ ಒಲವು ಬೆಳೆಯಲು ಕಾರಣವಾಯಿತು. ಪರಿಣಾಮ, ಕೊಂಕಣ ಪ್ರದೇಶದ ಜಿಲ್ಲೆಗಳು ಪಕ್ಷಕ್ಕೆ ಎರಡನೇ ಕೋಟೆಯಾಯಿತು.

1989 ರಲ್ಲಿ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಂದಿನಿಂದಲೂ, ಸ್ಥಾನ ಹಂಚಿಕೆ ವ್ಯವಸ್ಥೆಯಲ್ಲಿ ಕೊಂಕಣದ ಕ್ಷೇತ್ರಗಳು ಯಾವಾಗಲೂ ಶಿವಸೇನೆಗೆ ಲಭ್ಯವಾಗುತ್ತಿದ್ದವು. ಪರಿಣಾಮ, ಈ ಪ್ರದೇಶದಲ್ಲಿ ಬಿಜೆಪಿಯ‌ ಉಪಸ್ಥಿತಿ ನಗಣ್ಯವಾಗಿತ್ತು. ಸೇನೆವನ್ನು ಅವಲಂಬಿಸದೆ ಮಹಾರಾಷ್ಟ್ರವನ್ನು ಆಳುವ ಸಾಮರ್ಥ್ಯವನ್ನು ಹೊಂದಲು ಬಿಜೆಪಿ ಪಕ್ಷವು 2014 ರಿಂದಲೂ ಪ್ರಯತ್ನಿಸುತ್ತಿತ್ತು. ಆದರೆ ಅದಕ್ಕೆ ಅಡ್ಡಿಯಾಗಿದ್ದು ಮುಂಬೈ ಮತ್ತು ಕೊಂಕಣ ಪ್ರ್ಯಾಂತ್ಯಗಳು. ಅದಕ್ಕಾಗಿಯೇ ನಾರಾಯಣ ರಾಣೆ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿತ್ತು. ರಾಣೆ ಅವರು ಶಿವಸೇನೆಯಲ್ಲಿದ್ದು 2005ರಲ್ಲಿ ಉದ್ಧವ್ ಅವರ ಜೊತೆಗಿನ ಭಿನ್ನಾಭಿಪ್ರಾಯದಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು, ಅಲ್ಲಿಂದ ಬಿಜೆಪಿ ಅವರನ್ನು ಪಕ್ಷಕ್ಕೆ ಕರೆಸಿಕೊಂಡಿತ್ತು.

ಕೊಂಕಣ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿರುವ ಪ್ರಸಾದ್ ಲಾಡ್ ಅವರು "ನಾರಾಯಣ ರಾವ್ ಅವರ ಜನಪರ ಕಾರ್ಯಕ್ರಮಗಳಿಂದಾಗಿ ಕೊಂಕಣ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಯಾಗಿದೆ. ಅಮಿತ್ ಶಾ ಭೇಟಿ ಅದಕ್ಕೆ ಮತ್ತಷ್ಟು ಬಲ ತುಂಬಿದೆ" ಎಂದಿದ್ದಾರೆ.

ಶಿವ ಸೇನೆಯ ರೌತ್ ಅವರು ಬಿಜೆಪಿಯ ಪ್ರತಿಪಾದನೆಗಳನ್ನು ವ್ಯಂಗ್ಯ ಮಾಡುತ್ತಾ “ಕೊಂಕಣದಲ್ಲಿ ತನ್ನ ಪ್ರಭಾವ ಹೆಚ್ಚುತ್ತಿದೆ ಎಂದು ಬಿಜೆಪಿ ಹೇಳುತ್ತದೆ. ಆದರೆ ಇದರ ಅರ್ಥವೇನು? ಕೊಂಕಣ ಎಂದರೆ ಸಿಂಧುದುರ್ಗ್ ಮಾತ್ರ ಅಲ್ಲ. ಅದು ಕೇವಲ ಮೂರು ವಿಧಾನಸಭಾ ಸ್ಥಾನಗಳನ್ನು ಹೊಂದಿದೆ, ಅದರಲ್ಲೂ ಬಿಜೆಪಿಗೆ ಕೇವಲ ಒಂದು ಸ್ಥಾನವಿದೆ" ಎಂದಿದ್ದಾರೆ.

ಒಟ್ಟಾರೆ, ಹೇಗಾದರೂ ಶಿವಸೇನೆಯನ್ನು ಮಟ್ಟಹಾಕಬೇಕೆಂದು ಹವಣಿಸುತ್ತಿರುವ ಬಿಜೆಪಿ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ಎದುರು ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವ ಶಿವಸೇನೆ ಈ ಎರಡೂ ಪಕ್ಷಗಳಿಗೂ ತಮ್ಮ ವರ್ಚಸ್ಸು, ಪ್ರಾಬಲ್ಯ ಪ್ರದರ್ಶಿಸಲು ಸಿಂಧುದುರ್ಗ್‌ ವೇದಿಕೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಸಿಂಧದುರ್ಗನ್ನು ಬಿಜೆಪಿ ವಶಕ್ಕೆ ಪಡೆದುಕೊಂಡರೆ ಶಿವಸೇನೆಗೆ ಅದೊಂದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com