ಚುನಾವಣಾ ಹೊಸ್ತಿಲಲ್ಲಿ ರಾಜಕಾರಣಕ್ಕೆ ಹೊಸ ತಿರುವು ನೀಡುವರೇ ಚಿನ್ನಮ್ಮ?

ಸದ್ಯಕ್ಕೆ ಚಿನ್ನಮ್ಮ ರೀ ಎಂಟ್ರಿ ಪ್ರತಿಪಕ್ಷಗಳಿಗಿಂತ, ಸ್ವತಃ ಅವರದೇ ಪಕ್ಷದಲ್ಲಿಯೇ ದೊಡ್ಡಮಟ್ಟದ ಪ್ರತಿರೋಧದ ಬಿರುಗಾಳಿಯನ್ನು ಎಬ್ಬಿಸಿದೆ. ಎಐಎಡಿಎಂಕೆಯ ನಾಯಕರ ಈ ಪ್ರತಿರೋಧಕ್ಕೆ ಪ್ರತಿಯಾಗಿ ಚಿನ್ನಮ್ಮ ಹೂಡಲಿರುವ ಪ್ರತಿತಂತ್ರ ಯಾವುದು? ಎಂಬುದು ಕುತೂಹಲ ಕೆರಳಿಸಿದೆ.
ಚುನಾವಣಾ ಹೊಸ್ತಿಲಲ್ಲಿ ರಾಜಕಾರಣಕ್ಕೆ ಹೊಸ ತಿರುವು ನೀಡುವರೇ ಚಿನ್ನಮ್ಮ?

ದ್ರಾವಿಡ ರಾಜಕಾರಣದ ‘ಚಿನ್ನಮ್ಮ’ ನಾಲ್ಕು ವರ್ಷದ ಜೈಲುವಾಸದ ಬಳಿಕ ಬಿಡುಗಡೆಯಾಗಿ ಬೆಂಗಳೂರಿನಿಂದ ಚೆನ್ನೈಗೆ ಕಾಲಿಟ್ಟಿದ್ದಾರೆ.

ಜಯಲಲಿತಾ ಮತ್ತು ಕರುಣಾನಿಧಿ ಕಾಲದ ಬಳಿಕ ಹೊಸ ತಲೆಮಾರಿನ ನಾಯಕರ ರಾಜಕಾರಣಕ್ಕೆ ಅಣಿಯಾಗುತ್ತಿರುವ ದ್ರಾವಿಡ ನೆಲಕ್ಕೆ ‘ಮುನ್ನಾರ್ ಗುಡಿ ಗ್ಯಾಂಗ್’ ಖ್ಯಾತಿಯ ಶಶಿಕಲಾ ನಟರಾಜನ್ ರೀ-ಎಂಟ್ರಿ ಹೊಸ ಹವಾ ಎಬ್ಬಿಸಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ 2017ರ ಫೆಬ್ರವರಿಯಿಂದ ಈವರೆಗೆ ನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸಿದ ಶಶಿಕಲಾ ನಟರಾಜನ್, ಜ. 27ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. ಕೋವಿಡ್ ಸೋಂಕಿತರಾಗಿದ್ದ ಹಿನ್ನೆಲೆಯಲ್ಲಿ ನಿಯಮದಂತೆ ಬೆಂಗಳೂರಿನಲ್ಲಿಯೇ ಹೋಂ ಐಸೋಲೇಷನ್ ಮುಗಿಸಿ ಸೋಮವಾರ ಚೆನ್ನೈಗೆ ತೆರಳಿದ್ದಾರೆ. ಅವರು ಪ್ರಯಾಣದುದ್ದಕ್ಕೂ ಹೊಸೂರಿನ ಜೂಜುವಾಡಿ ಚೆಕ್ ಪೋಸ್ಟ್ನಿಂದ ಆರಂಭಿಸಿ ಚೆನ್ನೈವರೆಗೂ ಸಾವಿರಾರು ಮಂದಿ ಹಾರ ತುರಾಯಿ, ಡೋಲು-ಡಮರುಗಳೊಂದಿಗೆ ಅವರನ್ನು ಸ್ವಾಗತಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತಮಿಳುನಾಡಿಗೆ ಅವರ ಪುನರಾಗಮನಕ್ಕೆ ಸಿಕ್ಕ ಈ ಅದ್ದೂರಿ ಸ್ವಾಗತ ಒಂದು ಅರ್ಥದಲ್ಲಿ ತಮಿಳು ರಾಜಕಾರಣಕ್ಕೆ ಅವರಿಗೆ ಸಿಕ್ಕ ಮರು ಪ್ರವೇಶದ ಸ್ವಾಗತ ಎಂದೇ ಬಣ್ಣಿಸಲಾಗುತ್ತಿದೆ. ಅದರಲ್ಲೂ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ತಮಿಳುನಾಡಿಗೆ, ಒಂದು ಕಾಲದ ಜಯಲಲಿತಾ ರಾಜಕಾರಣದ ಸೂತ್ರಧಾರಿಣಿಯ ಪ್ರವೇಶವನ್ನು ಅದ್ದೂರಿಯಾಗಿ ಸಂಭ್ರಮಿಸುವ ಮೂಲಕ ರಾಜಕೀಯ ಹವಾ ಎಬ್ಬಿಸುವ ಅವಕಾಶವಾಗಿಯೂ ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆದರೆ, ‘ಚಿನ್ನಮ್ಮ’ ಶಶಿಕಲಾ ಈವರೆಗೆ ಶಿಕ್ಷೆ ಅನುಭವಿಸಿದ ಪ್ರಕರಣ ಇನ್ನೂ ಕೆಲವು ವರ್ಷಗಳ ಕಾಲ ಅವರ ರಾಜಕೀಯ ಭವಿಷ್ಯಕ್ಕೆ ಮುಳ್ಳಾಗಿರುವ ಹಿನ್ನೆಲೆಯಲ್ಲಿ; ಅವರು ತತಕ್ಷಣಕ್ಕೆ ಚುನಾವಣಾ ರಾಜಕಾರಣಕ್ಕೆ ಸ್ವತಃ ಧುಮುಕುವಂತಿಲ್ಲ! ಅಷ್ಟರಮಟ್ಟಿಗೆ ಶಶಿಕಲಾ ಅವರ ಎದುರಾಳಿಗಳಿಗೆ ನಿರಾಳ ಎನ್ನಲಾಗುತ್ತಿದೆ!

ಜನಪ್ರತಿನಿಧಿಗಳ ಕಾಯ್ದೆ 1958ರ ಸೆಕ್ಷನ್ 8ರ ಪ್ರಕಾರ, ಯಾವುದೇ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ ಅಪರಾಧಿಯು ಜೈಲಿನಿಂದ ಬಿಡುಗಡೆಯಾದ ಬಳಿಕ ಆರು ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸಿರುವ ಹಿನ್ನೆಲೆಯಲ್ಲಿ ಶಶಿಕಲಾ ಅವರಿಗೆ ಈ ಕಾನೂನು ತೊಡಕು ಅವರ ರಾಜಕೀಯ ಮಹತ್ವಾಕಾಂಕ್ಷೆಗೆ ಉರುಳಾಗಿದೆ. ಹಾಗಾಗಿ ತಮಿಳು ರಾಜಕಾರಣಕ್ಕೆ ಮರು ಪ್ರವೇಶ ಪಡೆದರೂ 2027ರ ಚುನಾವಣೆಯವರೆಗೆ ‘ಮುನ್ನಾರ್ ಗುಡಿ ಗ್ಯಾಂಗ್’ ನಾಯಕಿ ಚಿನ್ನಮ್ಮ ಕಿಂಗ್ ಮೇಕರ್ ಆಗಿಯೇ ಇರಬೇಕಾಗುತ್ತದೆಯೇ ವಿನಃ; ಸ್ವತಃ ಕ್ವೀನ್ ಆಗಿ ಅಧಿಕಾರದ ಗದ್ದುಗೆ ಏರುವುದು ಸಾಧ್ಯವಿಲ್ಲ!

ಆದರೆ, ಈ ಕಾನೂನು ತೊಡಕಿನ ಬಗ್ಗೆಯೂ ಬಗೆಬಗೆಯ ವ್ಯಾಖ್ಯಾನಗಳು ಕೇಳಿಬರುತ್ತಿದ್ದು, ಶಶಿಕಲಾ ಜೈಲುಶಿಕ್ಷೆ ಅನುಭವಿಸಿರುವುದು ಅಕ್ರಮ ಆಸ್ತಿಗೆ ಸಂಬಂಧಿಸಿದ ವಾಣಿಜ್ಯ ಅಕ್ರಮ ಪ್ರಕರಣದಲ್ಲಿಯೇ ವಿನಃ ಕ್ರಿಮಿನಲ್ ಅಪರಾಧ ಪ್ರಕರಣದಲ್ಲಿ ಅಲ್ಲ. ಹಾಗಾಗಿ ಆರು ವರ್ಷಗಳ ಚುನಾವಣಾ ನಿರ್ಬಂಧ ಅವರಿಗೆ ಅನ್ವಯಿಸುವುದಿಲ್ಲ ಎಂಬ ವಾದವೂ ಇದೆ.

ಜೊತೆಗೆ, ಶಶಿಕಲಾ ಜೈಲುಶಿಕ್ಷೆಗೆ ಗುರಿಯಾದ ಮತ್ತು ಜಯಲಲಿತಾ ನಿಧನದ ಬಳಿಕ ಈವರೆಗೆ ದ್ರಾವಿಡ ನೆಲದಲ್ಲಿ ಬಹಳಷ್ಟು ನೀರು ಹರಿದಿದೆ. ರಾಜಕಾರಣದ ಲೆಕ್ಕಾಚಾರಗಳು, ಚಹರೆಗಳು ಸಾಕಷ್ಟು ಬದಲಾಗಿವೆ. ಹಾಗಾಗಿ, ಸ್ವತಃ ಜಯಲಲಿತಾ ಅವರೇ ಕಟ್ಟಿ ಬೆಳೆಸಿದ ಮತ್ತು ಇತ್ತೀಚಿನ ವರ್ಷಗಳಲ್ಲಿ ಜಯಾ ಅನಾರೋಗ್ಯದ ಹಿನ್ನೆಲೆಯಲ್ಲಿ ಶಶಿಕಲಾ ಅವರೇ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದ ಎಐಎಡಿಎಂಕೆ ಪಕ್ಷವೇ ಈಗ ಚಿನ್ನಮ್ಮನ ವಿರುದ್ಧ ನಿಂತಿದೆ. ಒಂದು ಕಾಲದಲ್ಲಿ ಚಿನ್ನಮ್ಮನ ಕಾಲಿಗೆ ಸಾರ್ವಜನಿಕವಾಗಿಯೇ ಉದ್ದಂಡ ಎರಗುತ್ತಿದ್ದ ಆಡಳಿತಾರೂಢ ಎಐಎಡಿಎಂಕೆಯ ನಾಯಕರು ಈಗ ಶಶಿಕಲಾ ಅವರೊಂದಿಗೆ ಅಂತರ ಕಾಯ್ದುಕೊಳ್ಳುವಂತೆ ಮತ್ತು ಅವರನ್ನು ಭೇಟಿಯಾದವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಬಹಿರಂಗ ಕರೆ ನೀಡಿದ್ಧಾರೆ. ಚುನಾವಣಾ ಹೊಸ್ತಿಲಲ್ಲಿ ಶಶಿಕಲಾ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿರುವುದೇ ರಾಜಕೀಯ ತಂತ್ರಗಾರಿಕೆಯ ಭಾಗ. ತಮಿಳುನಾಡು ರಾಜಕಾರಣದಲ್ಲಿ ಹಿಡಿತ ಸಾಧಿಸಲು ಹವಣಿಸುತ್ತಿರುವ ಕೆಲವರು, ಈ ಅವಕಾಶವನ್ನು ಬಳಸಿಕೊಂಡು ಪಿತೂರಿ ಹೆಣೆದಿದ್ದಾರೆ ಎಂದೂ ಎಐಎಡಿಎಂಕೆ ನಾಯಕರು ಹೇಳಿದ್ದಾರೆ. 2017ರಲ್ಲಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಜೈಲು ಸೇರಿದ ಬಳಿಕ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಶಶಿಕಲಾ ಅವರನ್ನು ಉಚ್ಚಾಟಿಸಲಾಗಿತ್ತು. ಆದರೆ, ಶಶಿಕಲಾ ನಿಷ್ಠರು ಈಗಲೂ ಅವರೇ ಪಕ್ಷದ ನಾಯಕಿ ಎಂದು ಪಟ್ಟು ಹಿಡಿದಿದ್ದರು.

ಆದರೆ, ಸೋಮವಾರ ಸಂಜೆ ಚೆನ್ನೈಗೆ ತಲುಪಿದ ಶಶಿಕಲಾ, ಮರೀನಾ ಬೀಚ್ ನ ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿ, “ನಾನು ಎಐಎಡಿಎಂಕೆ ಸಿದ್ಧಾಂತದ ಅಡಿಯಾಳು. ತಮ್ಮ ರಕ್ತದಲ್ಲಿ ಹರಿಯುತ್ತಿರುವುದು ಅದೇ ತಮಿಳು ಮೌಲ್ಯಗಳೇ. ಜನರ ಪ್ರೀತಿಗೆ, ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ದಬ್ಬಾಳಿಕೆ ಮತ್ತು ದ್ವೇಷಕ್ಕಲ್ಲ”ಎಂದಿದ್ದಾರೆ. ಬೆಂಗಳೂರಿನಿಂದ ಚೆನ್ನೈವರೆಗೆ ಅವರು ಸಾಗುತ್ತಿದ್ದ ಕಾರು ಮತ್ತು ಅವರ ಹಿಂಬಾಲಕರ ಕಾರುಗಳ ಮೇಲೆ ಎಐಎಡಿಎಂಕೆ ಪಕ್ಷದ ಧ್ವಜವೇ ಇತ್ತು ಎಂಬುದು ಕೂಡ ಪಕ್ಷದ ವಿಷಯದಲ್ಲಿ ಅವರು ಪಟ್ಟು ಹಿಡಿದಿರುವುದಕ್ಕೆ ಸಾಕ್ಷಿಯಾಗಿತ್ತು.

ಹಾಗಾಗಿ, ಸದ್ಯಕ್ಕೆ ಚಿನ್ನಮ್ಮ ರೀ ಎಂಟ್ರಿ ಪ್ರತಿಪಕ್ಷಗಳಿಗಿಂತ, ಸ್ವತಃ ಅವರದೇ ಪಕ್ಷದಲ್ಲಿಯೇ ದೊಡ್ಡಮಟ್ಟದ ಪ್ರತಿರೋಧದ ಬಿರುಗಾಳಿಯನ್ನು ಎಬ್ಬಿಸಿದೆ. ಎಐಎಡಿಎಂಕೆಯ ನಾಯಕರ ಈ ಪ್ರತಿರೋಧಕ್ಕೆ ಪ್ರತಿಯಾಗಿ ಚಿನ್ನಮ್ಮ ಹೂಡಲಿರುವ ಪ್ರತಿತಂತ್ರ ಯಾವುದು? ಪಕ್ಷದ ಆಂತರಿಕ ಭಿನ್ನಮತಕ್ಕೆ ಕಾವು ಕೊಟ್ಟು ಪರಿಸ್ಥಿತಿಯ ಲಾಭ ಪಡೆದು ಪಕ್ಷದ ಚುಕ್ಕಾಣಿಯನ್ನು ಮತ್ತೆ ಹಿಡಿಯುತ್ತಾರೆಯೇ? ಅಥವಾ ಚುನಾವಣೆಯಲ್ಲಿ ಪರೋಕ್ಷ ತಂತ್ರಗಳ ಮೂಲಕ ಪಕ್ಷದ ತಮ್ಮ ಕಡುವಿರೋಧಿಗಳನ್ನು ಮಣಿಸಿ, ಬಳಿಕ ಪಕ್ಷದ ಮೇಲೆ ಹಿಡಿತ ಸಾಧಿಸುವ ಆಟ ಹೂಡುತ್ತಾರೆಯೇ? ಎಂಬುದನ್ನು ಕಾದುನೋಡಬೇಕಿದೆ.

ಅದೇ ಹೊತ್ತಿಗೆ ಶಶಿಕಲಾ ಮತ್ತು ಎಐಎಡಿಎಂಕೆ ನಡುವಿನ ಈ ಸಂಘರ್ಷ ಒಟ್ಟಾರೆ ತಮಿಳುನಾಡು ರಾಜಕಾರಣದಲ್ಲಿ ತರುವ ಬದಲಾವಣೆಗಳೇನು? ಪ್ರತಿಪಕ್ಷಗಳಿಗೆ; ಅದರಲ್ಲೂ ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆಗೆ ಆಗುವ ಲಾಭವೇನು? ತಮಿಳು ರಾಜಕಾರಣದಲ್ಲಿ ಪ್ರವೇಶ ದಾಖಲಿಸುವ ಪ್ರಯತ್ನದಲ್ಲಿರುವ ಬಿಜೆಪಿಗೆ ಈ ಬೆಳವಣಿಗೆ ತರುವ ಲಾಭ-ನಷ್ಟಗಳೇನು ಎಂಬುದು ಕೂಡ ಕುತೂಹಲ ಮೂಡಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com