ಬಿಹಾರದಲ್ಲಿ ಕೆಲವು ವಾರಗಳ ಹಿಂದೆಯಷ್ಟೇ ರಚನೆಯಾಗಿದ್ದ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವು ಕುಸಿದು ಬೀಳುವ ಆರಂಭಿಕ ಲಕ್ಷಣಗಳು ಗೋಚರಿಸಲು ತೊಡಗಿವೆ. ಚುನಾವಣಾ ಪೂರ್ವವೇ ಎನ್ಡಿಎ ಮೈತ್ರಿಕೂಟದಲ್ಲಿ ನಡೆದ ಆಂತರಿಕ ಕಲಹಗಳು ಎಲ್ಜೆಪಿಯನ್ನು ಎನ್ಡಿಎ ಕೂಟದಿಂದ ಹೊರ ನಡೆಯುವಂತೆ ಮಾಡಿದ್ದವು. ಇದರ ನೇರ ನಷ್ಟ ಅನುಭವಿಸಿದ್ದು ಮಾತ್ರ ಜೆಡಿಯು.
ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಲಾಭ ಪಡೆದುಕೊಂಡರೂ ಎನ್ಡಿಎಯೊಂದಿಗಿನ ಸಖ್ಯದಿಂದ ತಮ್ಮ ಪಕ್ಷಕ್ಕೆ ಭರಿಸಲಾರದಷ್ಟು ನಷ್ಟ ಮಾಡಿಕೊಂಡಿದ್ದಾರೆ. ಬಿಹಾರ ಚುನಾವಣೆಯಲ್ಲಿ ಜೆಡಿಯುನ ಕಳಪೆ ಪ್ರದರ್ಶನಕ್ಕೆ ಬಹುತೇಕ ಬಿಜೆಪಿಯೇ ಕಾರಣ ಎನ್ನಲಾಗಿದೆ. ಎನ್ಡಿಎ ಮೈತ್ರಿಕೂಟದಿಂದ ಹೊರನಡೆದ ಎಲ್ಜೆಪಿ, ಯುವ ನಾಯಕ ಚಿರಾಗ್ ಪಾಸ್ವಾನ್ ನೇತೃತ್ವದಲ್ಲಿ ಜೆಡಿಯುವಿನೊಂದಿಗೆ ನೇರ ಸೆಣಸಾಟ ನಡೆಸಿ, ಜೆಡಿಯು ಮತಗಳನ್ನು ವಿಭಜಿಸಿ, ಜೆಡಿಯು ಮತಬೇಟೆಗೆ ಸಾಕಷ್ಟು ಕಡಿವಾಣ ಹಾಕಿತ್ತು. ಅಲ್ಲದೆ, ಜೆಡಿಯುವನ್ನು ನಖಶಿಖಾಂತ ಟೀಕಿಸುತ್ತಲೇ ಪ್ರಚಾರ ನಡೆಸಿದ ಪಾಸ್ವಾನ್, ಜೆಡಿಯು ಮಿತ್ರಪಕ್ಷ ಬಿಜೆಪಿ ವಿರುದ್ಧ ಮೌನವಾದರು, ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಬಹುತೇಕ ಕಡೆ ಮಾತನಾಡಿದ ಪಾಸ್ವಾನ್, ನಿತೀಶ್ ಕುಮಾರ್ ರನ್ನಷ್ಟೇ ತಮ್ಮ ಎದುರಾಳಿಯೆಂದು ಪರಿಗಣಿಸಿದ್ದರು.
ಸಾಧಾರಣವಾಗಿ ಮೈತ್ರಿ ಪಕ್ಷಗಳನ್ನು ಎದುರಿಸುವಾಗ ಮೈತ್ರಿ ಕೂಟದ ಎಲ್ಲಾ ಪಕ್ಷಗಳನ್ನೂ ಒಂದೇ ರೀತಿ ಪರಿಗಣಿಸುವುದು ವಾಡಿಕೆ. ಆದರೆ, ಪಾಸ್ವಾನ್ ಬಿಹಾರದಲ್ಲಿ ಅದಕ್ಕೆ ಬದಲಾಗಿ ಬಿಜೆಪಿಯ ಕಡೆಗೆ ಮೃಧು ಧೋರಣೆ ತೋರುತ್ತಾ, ಜೆಡಿಯುನ ಶಕ್ತಿ ಕುಂದಿಸಲು ಪ್ರಯತ್ನಿಸಿದ್ದಾರೆ, ಬಹುತೇಕ ಯಶಸ್ವಿಯೂ ಆಗಿದ್ದಾರೆ. ಇದು ಬಿಜೆಪಿ ಹಾಗೂ ಚಿರಾಗ್ ಪಾಸ್ವಾನ್ ಒಳೊಪ್ಪಂದ ನಡೆದಿದೆ ಎನ್ನುವ ಗುಮಾನಿ ಹಬ್ಬಲು ಮುಖ್ಯ ಕಾರಣವಾಯಿತು.
ಆದರೆ, ಈ ಎಲ್ಲದರ ಅರಿವೂ ನಿತೀಶ್ ಕುಮಾರ್ರಿಗೆ ಇತ್ತು ಎನ್ನಲಾಗಿದೆ. ಆದರೆ ಬಿಜೆಪಿಯಿಂದ ಬೆಂಬಲ ಪಡೆಯುವ ಅನಿವಾರ್ಯತೆಗೆ ಅವರು ಸಿಲುಕಿದ್ದರಿಂದ ಬಿಜೆಪಿಯ ವಿರುದ್ಧ ಮಾತನಾಡಲು ಅವರು ಹಿಂಜರಿದಿದ್ದರು. ಆದರೆ, ಇದೀಗ ತಮ್ಮ ಪಕ್ಷದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿರುವುದರಿಂದ ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ, ಬಿಜಪಿ-ಜೆಡಿಯು ನಡುವಿನ ಜಟಾಪಟಿ ಇದೇ ಮೊದಲಲ್ಲ, ಚುನಾವಣೆಗೂ ಪೂರ್ವ ಅಂದರೆ ಸೀಟು ಹಂಚಿಕೆ ವೇಳೆಯಲ್ಲೇ ಇದು ಬಹಿರಂಗಗೊಂಡಿತ್ತು.
ಬೆರಳು ನೀಡಿದರೆ ಕೈ ನುಂಗುವ ಬಿಜೆಪಿ
ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಿಜೆಪಿ ಕ್ರಮೇಣ ಪ್ರಾದೇಶಿಕ ಪಕ್ಷದ ಬಲ ಕುಂದಿಸಿ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳುವುದು ಹೊಸತೇನಲ್ಲ. ಬೆರಳು ನೀಡಿದರೆ ಕೈ ನುಂಗುವ ಬಿಜೆಪಿಯ ಬುದ್ಧಿಗೆ ಒಳ್ಳೆಯ ಉದಾಹರಣೆ; ಕರ್ನಾಟಕದಲ್ಲಿ ಜೆಡಿಎಸ್ ನೊಂದಿಗಿನ ಮೈತ್ರಿ. ಅದುವರೆಗೂ ಸ್ವಂತ ಸರ್ಕಾರ ರಚಿಸುವಷ್ಟು ಬಲವಿಲ್ಲದ ಬಿಜೆಪಿ, ಜೆಡಿಎಸ್ನೊಂದಿಗಿನ ಮೈತ್ರಿ ಬಳಿಕ ಸ್ವಂತ ಸರ್ಕಾರ ರಚಿಸುವಷ್ಟು ಪ್ರಭಾವಿಯಾಗಿ ಕರ್ನಾಟಕದಲ್ಲಿ ಬೆಳೆಯಿತು.
2020 ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶವೂ ಇದನ್ನೇ ಸೂಚಿಸಿದೆ. ಜೆಡಿಯು ಪಕ್ಷಕ್ಕೆ ಸರ್ಕಾರ ರಚಿಸಲು ಬೆಂಬಲ ನೀಡಿದ್ದ ಬಿಜೆಪಿ ಈ ಬಾರಿ ಜೆಡಿಯುಗಿಂತ ಹೆಚ್ಚಿನ ಸ್ಥಾನವನ್ನು ಗೆದ್ದು ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಯ ಈ ಅಭೂತಪೂರ್ವ ಗೆಲುವು ನಿತೀಶ್ ಕುಮಾರ್ರನ್ನು ಮತ್ತೆ ಮುಖ್ಯಮಂತ್ರಿಗಾದಿಯಲ್ಲಿ ಕೂರುವಂತೆ ಮಾಡಿತ್ತು.
ನಿತೀಶ್ ಪ್ರಮಾಣ ವಚನ ಸ್ವೀಕರಿಸುವಾಗಲೇ ಇವರು ಈ ಬಾರಿ ಹೆಚ್ಚು ಕಾಲ ಈ ಸ್ಥಾನದಲ್ಲಿ ಕೂರುವುದಿಲ್ಲವೆಂದೇ ರಾಜಕೀಯ ತಜ್ಞರು ಭವಿಷ್ಯ ನುಡಿದಿದ್ದರು. ಅದಕ್ಕೆ ಪೂರಕವೆಂಬಂತೆ ಇದೀಗ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲು ತಾನು ಸಿದ್ಧವೆಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಅಲ್ಲಿಗೆ, ಮುಖ್ಯಮಂತ್ರಿ ಪಟ್ಟಕ್ಕಾಗಿ ಇನ್ನೂ ಬಿಜೆಪಿಯ ಕೃಪೆಯಲ್ಲಿರುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಬಿಜೆಪಿಗೆ ರವಾನಿಸಿದ್ದಾರೆ.
ನಿತೀಶ್ ಕುಮಾರ್ ಮಾತ್ರವಲ್ಲದೆ ಜೆಡಿಯುನ ಇತರೆ ಹಿರಿಯ ನಾಯಕರೂ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಲು ಶುರುವಿಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಜೆಡಿಯು ನಾಯಕರಿಗೆ ಬಿಜೆಪಿ ವಿರುದ್ಧ ಬಹಿರಂಗ ಹೇಳಿಕೆ ನೀಡಲು ಪ್ರೇರಣೆಯಾಗಿರುವುದು ಅಸ್ಸಾಂ ರಾಜಕಾರಣ!
ಇತರೆ ಪಕ್ಷಗಳ ಶಾಸಕರನ್ನು, ನಾಯಕರನ್ನು ಆಪರೇಷನ್ ಕಮಲದ ಮೂಲಕವೋ, ಅಥವಾ ಬೆದರಿಸುವ ಮೂಲಕವೋ ತಮ್ಮೆಡೆಗೆ ಸೇರಿಸಿಕೊಳ್ಳುವ ಬಿಜೆಪಿ, ಈ ತಂತ್ರಗಾರಿಕೆಯನ್ನು ತನ್ನದೇ ಮಿತ್ರ ಪಕ್ಷ ಜೆಡಿಯುವಿನ ಮೇಲೆ ಪ್ರಯೋಗಿಸಿದೆ. ಅಸಾಮಿನಲ್ಲಿದ್ದ ಏಳು ಜೆಡಿಯು ಶಾಸಕರಲ್ಲಿ ಆರು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದು ಜೆಡಿಯು ನಾಯಕರಲ್ಲಿ ಅಸಮಾಧಾನವನ್ನು ಹೆಚ್ಚಿಸಿದೆ. ಹಾಗಾಗಿಯೇ ನಿತೀಶ್ ಸೇರಿದಂತೆ ಜೆಡಿಯು ಹಿರಿಯ ನಾಯಕರು ಬಿಜೆಪಿಯ ವಿರುದ್ಧ ಮಾತನಾಡಿದ್ದಾರೆ.
ಸರ್ಕಾರ ಬೀಳುವ ಸೂಚನೆ ನೀಡುತ್ತಿದೆ ಬಿಹಾರ ರಾಜಕೀಯ ಪ್ರಹಸನ!
ಜೆಡಿಯು ವಲಯದಿಂದ ಬಿಜೆಪಿ ವಿರುದ್ಧದ ಹೇಳಿಕೆಗಳು ಬರುತ್ತಿರುವಂತೆಯೇ ಸರ್ಕಾರ ಬೀಳುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಇನ್ನಷ್ಟು ಪುಷ್ಟಿ ನೀಡಿದ್ದು ಆರ್ಜೆಡಿ ನಾಯಕ ಶ್ಯಾಮ್ ರಜಾಕ್ ಹೇಳಿಕೆ.
ಜೆಡಿಯುನ 17 ಶಾಸಕರು ತನ್ನ ಮುಖಾಂತರ ಆರ್ಜೆಡಿಯೊಂದಿಗೆ ಸಂಪರ್ಕದಲ್ಲಿದ್ದಾರೆಂದು ಹೇಳಿರುವ ಶ್ಯಾಮ್, ಬಿಜೆಪಿಯ ಗುಲಾಮಗಿರಿ ಮಾಡುತ್ತಿರುವ ನಿತೀಶ್ ಕುಮಾರ್ ವರಸೆಗೆ ಬೇಸತ್ತು 17 ಶಾಸಕರು ಪಕ್ಷ ತೊರೆಯುವ ಮನಸ್ಸು ಮಾಡಿದ್ದಾರೆ. ಆದರೆ ಈಗ ಅವರು ಪಕ್ಷ ತೊರೆದರೆ ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅವರ ಸದಸ್ಯತ್ವ ರದ್ದಾಗುತ್ತದೆ ಎನ್ನುವ ಕಾರಣದಿಂದ ನಾವೇ ಪಕ್ಷ ತೊರೆಯದಂತೆ ತಾತ್ಕಾಲಿಕವಾಗಿ ತಡೆದಿದ್ದೇವೆ. 25 ರಿಂದ 28 ಶಾಸಕರು ಒಟ್ಟಿಗೆ ಪಕ್ಷ ತೊರೆದರೆ ಅವರ ಸದಸ್ಯತ್ವ ಅನರ್ಹಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಶೀಘ್ರವೇ ಆರ್ಜೆಡಿ ಸರ್ಕಾರ ರಚನೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.
ಜೆಡಿಯು ಶಾಸಕರು ಆರ್ಜೆಡಿಯೊಂದಿಗೆ ಸಂಪರ್ಕದಲ್ಲಿದ್ದಾರೆಂಬ ಹೇಳಿಕೆಯನ್ನು ನಿರಾಕರಿಸಿರುವ ನಿತೀಶ್ ಕುಮಾರ್ ಸಮ್ಮಿಶ್ರ ಸರ್ಕಾರ ಅಂದಾಗ ಮನಸ್ತಾಪ ಇರುವುದು ಸಹಜ, ಆದರೆ ಯಾವ ಜೆಡಿಯು ಶಾಸಕರೂ ಆರ್ಜೆಡಿ ಸಂಪರ್ಕದಲ್ಲಿಲ್ಲ ಎಂದಿದ್ದಾರೆ. ಯಾವ ಜೆಡಿಯು ಶಾಸಕರೂ ಪಕ್ಷ ತೊರೆಯುವುದಿಲ್ಲ ಎಂದು ನಿತೀಶ್ ವ್ಯಕ್ತಪಡಿಸಿದ್ದರೂ, ಶ್ಯಾಮ್ ರಜಾಕ್ ಹೇಳಿಕೆಯನ್ನು ಸಾರಸಗಟಾಗಿ ತಳ್ಳಿ ಹಾಕುವಂತಿಲ್ಲ. ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿದ್ದುಕೊಂಡೇ ಎನ್ಡಿಎ ಶಾಸಕರನ್ನು ಮಂತ್ರಿಗಿರಿ ಆಮಿಷವೊಡ್ಡಿದ್ದ ಕರೆಯ ಆಡಿಯೋ ಕ್ಲಿಪ್ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು.
ಒಂದೆಡೆ ಆರ್ಜೆಡಿ ಯೂ ಶಾಸಕರ ಕೊಂಡುಕೊಳ್ಳುವಿಕೆ ಮೂಲಕವಾದರೂ ಸರಿಯೇ ಸರ್ಕಾರ ರಚಿಸಬೇಕೆಂದು ಪಣತೊಟ್ಟಿದೆ. ಇನ್ನೊಂದೆಡೆ, ಜೆಡಿಯು-ಬಿಜೆಪಿ ನಡುವಿನ ವೈಮನಸ್ಸು ಸ್ವತಃ ಮುಖ್ಯಮಂತ್ರಿಯೇ ಪಟ್ಟ ಬಿಟ್ಟುಕೊಡಲು ಸನ್ನದ್ಧವೆಂದು ಹೇಳಿಕೆ ನೀಡುವಲ್ಲಿಗೆ ತಲುಪಿದೆ. ಒಟ್ಟಾರೆ, ನಿತೀಶ್ ಕುಮಾರ್ ಖುರ್ಚಿ ಅಲುಗಾಡುತ್ತಿದೆ. ಬಿದ್ದು ಹೋಗುವ ಸರ್ಕಾರದಿಂದ ಶಾಸಕರನ್ನು ಹೆಕ್ಕಿಕೊಳ್ಳಲು ಆರ್ಜೆಡಿ ಕಾದು ಕುಳಿತಿದೆ.