ಧರ್ಮೇಗೌಡರ ಪ್ರಕರಣ ಎತ್ತಿದ ಅನುಕೂಲಸಿಂಧು ರಾಜಕಾರಣದ ಪರಿಣಾಮದ ಪ್ರಶ್ನೆ

ರಾಜಕಾರಣ ಎಂಬುದು ರಾತ್ರಿಯ ಮಾತು ಬೆಳಗ್ಗೆಗೆ ಇಲ್ಲ; ನಿನ್ನೆಯ ಮಾತು ಇಂದಿಗೆ ಇಲ್ಲ ಎಂಬಂತಹ ನಾಚಿಕೆಗೇಡಿನ ಸ್ಥಿತಿಗೆ ತಲುಪಿದರೆ, ಸೂಕ್ಷ್ಮ ಮನಸ್ಸಿನ ರಾಜಕಾರಣಿಗಳು ಅನುಭವಿಸುವ ಬಿಕ್ಕಟ್ಟು ಮತ್ತು ಮಾನಸಿಕ ಒತ್ತಡ ಎಂಬುದು ಯಾವ ಅತಿಗೆ ಅವರನ್ನು ಕರೆದೊಯ್ಯಬಲ್ಲದು ಎಂಬುದಕ್ಕೂ ಬಹುಶಃ ಧರ್ಮೇಗೌಡರ ಈ ದುರಂತ ಅಂತ್ಯ ಒಂದು ಉದಾಹರಣೆ.
ಧರ್ಮೇಗೌಡರ ಪ್ರಕರಣ ಎತ್ತಿದ ಅನುಕೂಲಸಿಂಧು ರಾಜಕಾರಣದ ಪರಿಣಾಮದ ಪ್ರಶ್ನೆ

ವಿಧಾನಪರಿಷತ್ ಉಪ ಸಭಾಪತಿ ಎಲ್ ಎಲ್ ಧರ್ಮೇಗೌಡ ಆತ್ಮಹತ್ಯೆ ಘಟನೆ ರಾಜ್ಯ ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ. ಘಟನೆಯ ಬಗ್ಗೆ ರಾಜಕೀಯ ಮುಖಂಡರು ಆಘಾತದೊಂದಿಗೆ ಅನುಮಾನವನ್ನೂ ವ್ಯಕ್ತಪಡಿಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು. ಅವರು ಆತ್ಮಹತ್ಯೆಗೆ ಶರಣಾಗುವಷ್ಟು ದುರ್ಬಲ ಮನಸ್ಸಿನವರಾಗಿರಲಿಲ್ಲ ಮತ್ತು ತಮ್ಮ ಯಾವುದೇ ನೋವಿನ ಬಗ್ಗೆ ಯಾರ ಜೊತೆಯೂ ಹಂಚಿಕೊಂಡಿರಲಿಲ್ಲ ಎಂದೂ ಹೇಳಿದ್ದಾರೆ.

ಸೋಮವಾರ ಬೆಳಗ್ಗೆಯಿಂದ ಚಿಕ್ಕಮಗಳೂರಿನ ಯುವಜನೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು, ಸಂಜೆ ಕಡೂರು ತಾಲೂಕಿನ ಗುಣಸಾಗರ ಸಮೀಪದ ತಮ್ಮ ತೋಟದ ಮನೆಗೆ ತೆರಳಿದ್ದರು. ಬಳಿಕ ಸಂಜೆ 6:45ರಿಂದ 7:00 ಗಂಟೆ ವೇಳೆ ಗುಣಸಾಗರದ ಬಳಿ ರೈಲ್ವೆ ಹಳಿಯಲ್ಲಿ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿರುವುದು ತಿಳಿದುಬಂದಿದೆ. ತಮ್ಮ ಬೆಂಗಾವಲು ಭದ್ರತಾ ಸಿಬ್ಬಂದಿ ಬದಲು, ಖಾಸಗಿ ಡ್ರೈವರ್ ಜೊತೆ ಸ್ಯಾಂಟ್ರೋ ಕಾರಿನಲ್ಲಿ ತೋಟದ ಮನೆಯಿಂದ ಹೊರಟಿದ್ದ ಎಸ್.ಎಲ್. ಧರ್ಮೇಗೌಡರು ಬೇರೊಬ್ಬ ವ್ಯಕ್ತಿ ಜೊತೆ ಖಾಸಗಿಯಾಗಿ ಮಾತನಾಡಿ ಬರುತ್ತೇನೆ ಎಂದು ಡ್ರೈವರ್ಗೆ ಹೇಳಿ ರೈಲ್ವೆ ಹಳಿ ಕಡೆ ಹೋದವರು ತಡ ಶವವಾಗಿ ಪತ್ತೆಯಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಫೋನ್ನಲ್ಲಿ ಮಾತನಾಡುತ್ತಾ ಹೋಗಿ ತುಂಬಾ ಹೊತ್ತಾದರೂ ವಾಪಸ್ ಬರದೇ ಹೋದಾಗ ಅವರ ಖಾಸಗೀ ಡ್ರೈವರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಧಾವಿಸಿ ಸ್ಥಳ ಶೋಧ ನಡೆಸಿದಾಗ ತಡರಾತ್ರಿ ಧರ್ಮೇಗೌಡರ ಛಿದ್ರಗೊಂಡ ದೇಹ ಸಿಕ್ಕಿದೆ. ಬೇರ್ಪಟ್ಟ ತಲೆಯಿಂದ ಧರ್ಮೇಗೌಡರು ಎಂದು ಗುರುತಿಸಲಾಗಿದೆ. ಅವರು ಬರೆದಿಟ್ಟಿದ್ದರೆನ್ನಲಾದ ಡೆತ್ ನೋಟ್ ಅವರ ಮನೆಯಲ್ಲಿ ಸಿಕ್ಕಿದೆ. ಅದರಲ್ಲಿ ಅವರು ಕೆಲ ದಿನಗಳ ಹಿಂದೆ ವಿಧಾನಪರಿಷತ್ನಲ್ಲಿ ನಡೆದಿದ್ದ ಗಲಾಟೆ ಘಟನೆಯಿಂದ ತಮಗೆ ನೋವಾಗಿದ್ದನ್ನು ಪ್ರಸ್ತಾಪಿಸಿದ್ದಾರೆ. ಹಾಗೆಯೇ, ಕುಟುಂಬಕ್ಕೆ ಆಸ್ತಿಪಾಸ್ತಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹಾಗೇ ತಮ್ಮ ಆತ್ಮಹತ್ಯೆಯ ನಿರ್ಧಾರಕ್ಕೆ ಕುಟುಂಬದವರ ಕ್ಷಮೆ ಯಾಚಿಸಿದ್ದಾರೆ ಎಂದು ಹೇಳಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್ ನಾಯಕರಾಗಿ ಎಸ್ ಎಲ್ ಧರ್ಮೇಗೌಡ ಮತ್ತು ಅವರ ಸೋದರ ಎಲ್ ಎಲ್ ಭೋಜೇಗೌಡರ ರಾಜಕೀಯ ಸಾಧನೆ ಮತ್ತು ಅವರ ರಾಜಕಾರಣದ ವರಸೆ ಬಲ್ಲವರಿಗೆ ಈ ಘಟನೆ ದೊಡ್ಡ ಆಘಾತ ನೀಡಿದೆ. ಸಜ್ಜನಿಕೆಯ ರಾಜಕಾರಣ ಮತ್ತು ತತ್ವಬದ್ಧತೆಗೆ ಈ ಇಬ್ಬರೂ ಸೋದರರು ಹೆಸರಾಗಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಎಂಬ ಎರಡು ಪಕ್ಷಗಳ ಪ್ರಭಾವ ಮತ್ತು ಶಕ್ತಿಯ ಎದುರೂ ಕುಗ್ಗದೆ ಆ ಪಕ್ಷಗಳಿಗೆ ಪ್ರಬಲ ಪೈಪೋಟಿ ಒಡ್ಡಿಕೊಂಡೇ ಎಲ್ಲಾ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ರಾಜಕಾರಣದಲ್ಲಿ ಪ್ರಸ್ತುತತೆ ಉಳಿಸಿಕೊಂಡಿದ್ದರು.

ಅಂತಹ ಹಿನ್ನೆಲೆಯ ನಾಯಕ ಹೀಗೆ ದುರಂತ ಅಂತ್ಯ ಕಂಡಿರುವುದು ಮತ್ತು ಕೆಲವೇ ದಿನಗಳ ಹಿಂದೆ ಅವರ ವ್ಯಕ್ತಿತ್ವಕ್ಕೆ ವೈಯಕ್ತಿಕವಾಗಿಯೂ ಮತ್ತು ಒಟ್ಟಾರೆ ಕರ್ನಾಟಕದ ರಾಜಕಾರಣಕ್ಕೂ ಮಸಿ ಬಳಿಯುವಂತಹ ಘಟನೆ ವಿಧಾನಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ಮಂಡನೆಯ ವೇಳೆ ನಡೆದಿತ್ತು. ಸದನ ಒಳಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಪರಸ್ಪರದ ಮಾರಾಟಕ್ಕೆ ಕಾರಣವಾಗಿದ್ದ ಆ ಘಟನೆಯಲ್ಲಿ ಆಡಳಿತ ಪಕ್ಷದವರು ಧರ್ಮೇಗೌಡರನ್ನು ಒತ್ತಾಯಪೂರ್ವಕವಾಗಿ ಸಭಾಪತಿ ಸ್ಥಾನದಲ್ಲಿ ಕೂರಿಸುವ ಮತ್ತು ಪ್ರತಿಪಕ್ಷದವರು ಅವರನ್ನು ಅಕ್ಷರಶಃ ಎಳೆದಾಡಿ ಆ ಸ್ಥಾನದಿಂದ ಹೊರದಬ್ಬುವ ಮೂಲಕ ಸಭಾ ಘನತೆಗೆ ಚ್ಯುತಿ ತರುವ ಜೊತೆಗೆ ಧರ್ಮೇಗೌಡರೂ ವಿವಾದಕ್ಕೆ ಸಿಲುಕುವಂತೆ ಮಾಡಲಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಕೂಡ ಆತ್ಮಹತ್ಯೆ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈಗಾಗಲೇ ಬಿಜೆಪಿ, ಕಾಂಗ್ರೆಸ್ ಮತ್ತು ಸ್ವತಃ ಧರ್ಮೇಗೌಡರ ಜೆಡಿಎಸ್ ನಾಯಕರು ಕೂಡ ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆಗೆ ಆಗ್ರಹಿಸಿದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ ಹಲವು ನಾಯಕರು ಘಟನೆಯ ಹಿಂದೆ ಬೇರೇನೋ ಸಂಗತಿಗಳಿರುವ ಹಾಗಿದೆ. ಅದು ವಿಧಾನಪರಿಷತ್ ಘಟನೆಯೇ ಇರಲಿ, ಅಥವಾ ಯಾವುದೇ ಇರಲಿ ಈ ಬಗ್ಗೆ ಎಲ್ಲಾ ಕೋನಗಳಿಂದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ಧಾರೆ.

ಜೆಡಿಎಸ್ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಕೂಡ ಈ ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ್ದು, ಪ್ರತಿಧ್ವನಿಯೊಂದಿಗೆ ಮಾತನಾಡುತ್ತಾ, “ವಿಧಾನಪರಿಷತ್ ಘಟನೆಯ ಹಿನ್ನೆಲೆಯಲ್ಲಿ ಗೌಡರು ತುಂಬಾ ನೊಂದುಕೊಂಡಿದ್ದರು. ಪರಿಷತ್ ಘಟನೆ ನಡೆದ ದಿನ ಸಂಜೆಯೇ ಅವರ ಚೇಂಬರಿನಲ್ಲಿ ಎಂಎಲ್ ಸಿ ಅಪ್ಪಾಜಿ ಗೌಡರ ಜೊತೆ ಅವರನ್ನು ಬೇಟಿಯಾದಾಗಲೇ ಹೇಳಿದ್ದರು. ನೀವೆಲ್ಲಾ ಸಭಾಪತಿಗಳ ಆಸನದಲ್ಲಿ ಯಾವ ಕಾರಣಕ್ಕೂ ಅವರ ಸೂಚನೆ ಇಲ್ಲದೆ ಕೂರಬೇಡಿ ಎಂದಿದ್ದರಿ. ಆದರೆ, ಕಲಾಪದ ವೇಳೆ ಯಾರ್ಯಾರೋ ಒತ್ತಡ ಹಾಕಿ, ಏನೋ ಗೊಂದಲ ಸೃಷ್ಟಿಸಿ ನನ್ನಿಂದ ಅಂತಹ ಕೆಲಸ ಮಾಡಿಸಿಬಿಟ್ಟರು. ಅಂತಹ ಅನಾಹುತ ನನ್ನಿಂದ ಆಗಿಹೋಯಿತಲ್ಲಾ.. ಎಂದು ತುಂಬಾ ನೋಂದುಕೊಂಡು ಮಾತನಾಡಿದ್ದರು. ಅದಾಗ ಬಳಿಕ ಎರಡು ಬಾರಿ ಅವರೊಂದಿಗೆ ದೂರವಾಣಿಯಲ್ಲೂ ಮಾತನಾಡುವಾಗಲೂ ಆ ವಿಷಯವನ್ನು ಪ್ರಸ್ತಾಪಿಸಿ ತುಂಬಾ ಗದ್ಗದಿತರಾಗೇ ಮಾತನಾಡಿದ್ದರು. ಕೊನೆಕೊನೆಗೆ ಯಾರ ಸಂಪರ್ಕಕ್ಕೂ ಬಾರದೆ ಊರಿಗೆ ಹೊರಟುಹೋಗಿದ್ದರು. ಅಲ್ಲಿಗೆ ಹೋದ ಮೇಲೆ ನಾನೂ ಕರೆ ಮಾಡಿದ್ದರೂ ಅವರು ಕರೆ ಸ್ವೀಕರಿಸಿರಲಿಲ್ಲ. ಅವರು ಮೃದು ಸ್ವಭಾವದ ವ್ಯಕ್ತಿ. ಅವರಿಗೆ ಈ ಘಟನೆ ತುಂಬಾ ಬೇಸರ ತರಿಸಿತ್ತು ಎಂಬುದು ನಿಜ” ಎಂದರು.

ಎಚ್ ಡಿ ಕುಮಾರ ಸ್ವಾಮಿ ಕೂಡ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ವಿಧಾನಪರಿಷತ್ ಘಟನೆ ಪ್ರಸ್ತಾಪಿಸಿ, ಒಬ್ಬ ಸಜ್ಜನ ರಾಜಕಾರಣಿಯನ್ನು ನಾವೆಲ್ಲಾ ಸೇರಿ ಬಲಿತೆಗೆದುಕೊಂಡಿದ್ದೇವೆ. ವಿಧಾನಪರಿಷತ್ತಿನಲ್ಲಿ ಸಭಾಪತಿ ಸ್ಥಾನಕ್ಕಾಗಿ ಆಡಳಿತ ಮತ್ತು ಪ್ರತಿಪಕ್ಷ ನಡುವೆ ನಡೆದ ಕಿತ್ತಾಟಕ್ಕೆ ಇಂಥ ಮೃದು ಮನಸ್ಸಿನ ರಾಜಕಾರಣಿ ಜೀವ ಬಿಡಬೇಕಾಯಿತು. ಹಾಗೆ ನೋಡಿದರೆ, ಇದು ಆತ್ಮಹತ್ಯೆಯಲ್ಲ; ನಮ್ಮ ನಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನಾವು ನಡೆಸಿದ ಕೊಲೆ” ಎಂದಿದ್ದಾರೆ.

ಆ ಹಿನ್ನೆಲೆಯಲ್ಲಿ ನೋಡಿದರೆ, ಕುಮಾರಸ್ವಾಮಿ ಅವರ ಮಾತು ನಿಜ. ಇದು ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ, ಸಮಯಕ್ಕೊಂದು ಸಿದ್ಧಾಂತ, ಸಂದರ್ಭಕ್ಕೊಂದು ರಾಜಕೀಯ ನಿಲುವು ತೆಗೆದುಕೊಳ್ಳುವ ಮತ್ತು ಅನುಕೂಲಸಿಂಧು ರಾಜಕಾರಣಕ್ಕಾಗಿ ಪಕ್ಷ, ಸಿದ್ಧಾಂತ, ನಂಬಿಕೊಂಡುಬಂದ ನಾಯಕರು, ಕಾರ್ಯಕರ್ತರನ್ನು ಬಲಿ ಕೊಡುವ ರಾಜಕಾರಣದ ಪರಿಣಾಮ. ಮೂರು ಮೂರು ತಿಂಗಳಿಗೊಂದು ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ, ದಿನಕ್ಕೊಂದು ವ್ಯತಿರಿಕ್ತ ನಿಲುವು ತಳೆಯುವ ರಾಜಕಾರಣದ ಹೊಸ ವರಸೆಗೆ ಒಗ್ಗಿಕೊಳ್ಳದ ಸಜ್ಜನ ರಾಜಕಾರಣ, ಸಿದ್ಧಾಂತ ಬದ್ಧತೆಯ ರಾಜಕೀಯ ನಿಲುವುಗಳಲ್ಲಿ ನಂಬಿಕೆ ಇಟ್ಟವರು ಹತಾಶೆಯಿಂದ ತುಳಿದ ಹಾದಿ ಇದು. ಆ ಅರ್ಥದಲ್ಲಿ ಕುಮಾರಸ್ವಾಮಿ ಅವರು ಹೇಳಿದಂತೆ ನಿಜಕ್ಕೂ ಅಂತಹ ಹೊಂದಾಣಿಕೆಯ, ಅನುಕೂಲಸಿಂಧು ರಾಜಕಾರಣಕ್ಕಾಗಿ ನಂಬಿ ಬಂದವರ ಬಲಿ ತೆಗೆದುಕೊಳ್ಳುವ ಸ್ವಾರ್ಥ ರಾಜಕಾರಣಿಗಳು ಕನಿಷ್ಟ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು.

ಅದರಲ್ಲೂ ಚುನಾವಣೆಗಳಲ್ಲಿ ಮತ್ತು ಹೊರಗಿನ ಸಮಾಜದಲ್ಲಿ ಯಾವ ಸಿದ್ಧಾಂತದ ವಿರುದ್ಧ, ಯಾವ ಪಕ್ಷದ ನಿಲುವುಗಳ ವಿರುದ್ಧ ಕಾದಾಡಿರುತ್ತಾರೆಯೋ, ಯಾವ ಬದ್ಧತೆಗಾಗಿ ಚುನಾವಣೆಗಳಲ್ಲಿ ಜೀವ ಪಣಕ್ಕಿಟ್ಟು ಸೆಳೆಸಿರುತ್ತಾರೆಯೋ ಅಂತಹ ಪಕ್ಷ, ಸಿದ್ಧಾಂತದ ವಿಷಯದಲ್ಲಿಯೇ ನಾಯಕರು ಏಕಪಕ್ಷೀಯವಾಗಿ ಕೈಜೋಡಿಸಿದಾಗ, ಅವರನ್ನು ಅನುಸರಿಸಿ ಬಂದ ಮುಖಂಡರುಗಳು ಎಂತಹ ಇಬ್ಬಂದಿತನಕ್ಕೆ, ಮತ್ತು ಒತ್ತಡಕ್ಕೆ ಸಿಲುಕುತ್ತಾರೆ? ಅಂತಹ ನಿರ್ಧಾರಗಳು ಅಂತಿಮವಾಗಿ ಎಂತಹ ಹತಾಶೆಗೆ ತಳ್ಳುತ್ತವೆ ಎಂಬುದಕ್ಕೂ ಈ ಪ್ರಕರಣ ಒಂದು ನಿದರ್ಶನ. ರಾಜಕಾರಣ ಎಂಬುದು ರಾತ್ರಿಯ ಮಾತು ಬೆಳಗ್ಗೆಗೆ ಇಲ್ಲ; ನಿನ್ನೆಯ ಮಾತು ಇಂದಿಗೆ ಇಲ್ಲ ಎಂಬಂತಹ ನಾಚಿಕೆಗೇಡಿನ ಸ್ಥಿತಿಗೆ ತಲುಪಿದರೆ, ಸೂಕ್ಷ್ಮ ಮನಸ್ಸಿನ ರಾಜಕಾರಣಿಗಳು ಅನುಭವಿಸುವ ಬಿಕ್ಕಟ್ಟು ಮತ್ತು ಮಾನಸಿಕ ಒತ್ತಡ ಎಂಬುದು ಯಾವ ಅತಿಗೆ ಅವರನ್ನು ಕರೆದೊಯ್ಯಬಲ್ಲದು ಎಂಬುದಕ್ಕೂ ಬಹುಶಃ ಧರ್ಮೇಗೌಡರ ಈ ದುರಂತ ಅಂತ್ಯ ಒಂದು ಉದಾಹರಣೆ. ಹಾಗಾಗಿ ಕುಮಾರಸ್ವಾಮಿ ಅವರು ಹೇಳಿದಂತೆ ಅವರೂ ಸೇರಿದಂತೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು.

ಒಟ್ಟಾರೆ, ಸದ್ಯಕ್ಕಂತೂ ಧರ್ಮೇಗೌಡರ ದುರಂತ ಹಲವು ಆತಂಕ, ಆಘಾತಕಾರಿ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದು, ರಾಜ್ಯ ರಾಜಕಾರಣದ ಹೇಯ ಪರಿಸ್ಥಿತಿಯ ಬಗ್ಗೆ ಆತ್ಮಾವಲೋಕದ ಮಾತುಗಳಿಗೂ ಕಾರಣವಾಗಿದೆ. “ಅವರ ಸಾವಿನ ಕುರಿತ ತನಿಖೆ ಎಲ್ಲಾ ಕೋನಗಳಿಂದಲೂ ಆಗಬೇಕಿದೆ ಕೂಡ. ರಾಜಕೀಯ ಪರಿಸ್ಥಿತಿಗಳು ಸೃಷ್ಟಿಸಿದ ಒತ್ತಡ, ಅಂತಹ ಪರಿಸ್ಥಿತಿಗೆ ಕಾರಣವಾದ ಬೆಳವಣಿಗೆಗಳು ಮತ್ತು ವ್ಯಕ್ತಿಗಳು, ಅವರ ವೈಯಕ್ತಿಕ ಮನೋದೈಹಿಕ ಸಮಸ್ಯೆಗಳು, ವ್ಯವಹಾರ ಮತ್ತು ಕೌಟುಂಬಿಕ ಕಾರಣಗಳು, ಹೀಗೆ ಹಲವು ಕೋನದ ಸಮಗ್ರ ತನಿಖೆ ನಡೆದಾಗಲೇ ಘಟನೆಯ ಕುರಿತ ಸತ್ಯಾಸತ್ಯತೆ ಹೊರಬರಲು ಸಾಧ್ಯ” ಎಂಬುದು ಬಹುತೇಕ ಎಲ್ಲಾ ರಾಜಕೀಯ ವಲಯಗಳಿಂದ ಕೇಳಿಬರುತ್ತಿರುವ ಮಾತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com