ಬಿಜೆಪಿ vs ಜೆಡಿಯು; ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಯಾರಾಗಿರುವ ನಿತೀಶ್ ಕುಮಾರ್

ʼಬಿಹಾರ ಜನತೆಯ ಜನಾದೇಶಕ್ಕೆ ಅನುಗುಣವಾಗಿ ಸಿಎಂ ಅಭ್ಯರ್ಥಿ ಆಯ್ಕೆಯಾಗಲಿ ಎಂದು ಈ ಹಿಂದೆ ಕೂಡ ಹೇಳಿದ್ದೆ. ಬೇಕಾದರೆ ಬಿಜೆಪಿ ತಮ್ಮದೇ ಅಭ್ಯರ್ಥಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲʼ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಬಿಜೆಪಿ vs ಜೆಡಿಯು; ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಯಾರಾಗಿರುವ ನಿತೀಶ್ ಕುಮಾರ್

ನನಗೆ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರಲಿಲ್ಲ. ಬಿಜೆಪಿಯು ತನ್ನದೇ ಆದ ಅಭ್ಯರ್ಥಿಯನ್ನು ಈ ಹುದ್ದೆಗೆ ನೇಮಿಸಬಹುದಿತ್ತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರನ್ನು ತನ್ನೆಡೆಗೆ ಸೆಳೆದಿರುವ ಬಿಜೆಪಿ ನಡೆಯ ವಿರುದ್ಧ ಜೆಡಿಯು ಇದೀಗ ತಿರುಗಿ ಬಿದ್ದಿದ್ದು, ಜೆಡಿಯು ನಾಯಕರು ಬಿಜೆಪಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಬಿಜೆಪಿ ಸರ್ಕಾರಗಳು ಅಂತರ್‌-ಧರ್ಮೀಯ ವಿವಾಹಗಳನ್ನು ತಡೆಯಲು ಲವ್ ಜಿಹಾದ್ ಹೆಸರಿನಲ್ಲಿ ತಂದಿರುವ ಕಾನೂನು ಕುರಿತು ಅಪಸ್ವರ ಎತ್ತಿರುವ ಜೆಡಿಯು, ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಯ ಮೇಲೆ ಇನ್ನಷ್ಟು ಒತ್ತಡವನ್ನು ತರಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಇದೀಗ ಖುದ್ದು ನಿತೀಶ್ ಕುಮಾರ್ ಅವರೇ ಬಿಜೆಪಿ ವಿರುದ್ಧ ಅಖಾಡಕ್ಕಿಳಿದಂತಿದೆ. ಜೆಡಿಯುನ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿರುವ ನಿತೀಶ್ ಕುಮಾರ್ ʼ'ವಿಧಾನಸಭೆ ಫಲಿತಾಂಶ ಹೊರಬಂದ ಬಳಿಕ ಮುಖ್ಯಮಂತ್ರಿ ಆಗಬೇಕೆಂಬ ಆಸೆ ನನಗೆ ಇರಲಿಲ್ಲ. ಜನರು ತಮ್ಮ ಆದೇಶವನ್ನು ನೀಡಿದ್ದರು. ಆ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನದೇ ಆದ ಅಭ್ಯರ್ಥಿಯನ್ನು ಬಿಹಾರ ಮುಖ್ಯಮಂತ್ರಿ ಹುದ್ದೆಗೆ ನೇಮಿಸಬಹುದಿತ್ತು' ಎಂದು ತಿಳಿಸಿದ್ದಾರೆ.

ʼಬಿಹಾರ ಜನತೆಯ ಜನಾದೇಶಕ್ಕೆ ಅನುಗುಣವಾಗಿ ಸಿಎಂ ಅಭ್ಯರ್ಥಿ ಆಯ್ಕೆಯಾಗಲಿ ಎಂದು ಈ ಹಿಂದೆ ಕೂಡ ಹೇಳಿದ್ದೆ. ಬೇಕಾದರೆ ಬಿಜೆಪಿ ತಮ್ಮದೇ ಅಭ್ಯರ್ಥಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲʼ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಾವು ಅಧಿಕಾರಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಜನರ ಸೇವೆಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಮುಖ್ಯಮಂತ್ರಿ ಪದವಿ ಬಿಟ್ಟುಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವುದರ ಕುರಿತು ನಿತೀಶ್‌ ಕುಮಾರ್ ನೀಡಿರುವ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ. ತನಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿರುವ ಜೆಡಿಯು ನಾಯಕನಿಗೆ ಮುಖ್ಯಮಂತ್ರಿ ಪಟ್ಟ ನೀಡಿದಾಗಲೇ ರಾಜಕೀಯ ತಜ್ಞರು, ನಿತೀಶ್ ಮುಖ್ಯಮಂತ್ರಿ ಗಾದಿಯಲ್ಲಿ ಹೆಚ್ಚುದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಜೆಡಿಯುನ ಪ್ರಬಲ ವಿರೋಧಿ ಆರ್‌ಜೆಡಿ ಕೂಡಾ ಇದೇ ಮಾತು ಹೇಳಿತ್ತು.

ಈ ಹಿನ್ನೆಲೆಯಲ್ಲಿ ನಿತೀಶ್‌ ಅವರ ಮಾತು ಜೆಡಿಯು-ಬಿಜೆಪಿ ಮೈತ್ರಿ ನಡುವಿನ ಅಂತಃ ಕಲಹವನ್ನು ಬಹಿರಂಗಪಡಿಸಿದೆ. ಖುದ್ದು ನಿತೀಶ್‌ ಅವರಿಗೆನೇ ಬಿಜೆಪಿ ಜೊಎಗಿನ ಮೈತ್ರಿ ಮುಂದೆವರೆಸುವ ಲಕ್ಷಣ ಕಾಣುತ್ತಿಲ್ಲ ಎನ್ನಲಾಗಿದೆ. ಎಲ್ಲಾ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಮಾಡಿರುವಂತೆಯೇ ಜೆಡಿಯುವಿನ ಬಲವನ್ನು ಕುಗ್ಗಿಸಲೂ ಬಿಜೆಪಿ ಯತ್ನಿಸಿದೆ ಎನ್ನುವ ಮಾತುಗಳು ಬಿಹಾರ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ಪಡಸಾಲೆಯಲ್ಲಿ ತೇಲಿಬಂದಿತ್ತು. ಇದಕ್ಕೆ ಪೂರಕವೆನಿಸುವಂತೆ ಅರುಣಾಚಲ ಪ್ರದೇಶದ ಜೆಡಿಯುನ ಆರು ಶಾಸಕರನ್ನು ಬಿಜೆಪಿ ತನ್ನೆಡೆಗೆ ಸೆಳೆದಿದೆ. ಇದೇ ಭರವಸೆಯಲ್ಲಿ ಅಮಿತ್‌ ಶಾ ಅರುಣಾಚಲ ಪ್ರದೇಶದಲ್ಲಿ ಕಮಲ ಬಹುಮತ ಪಡೆಯುತ್ತದೆ ಎಂದಿದ್ದಾರೆ ಎನ್ನಲಾಗಿದೆ.

ಅರುಣಾಚಲ ಪ್ರದೇಶದಲ್ಲಿ ಮಿತ್ರದ್ರೋಹ ಮಾಡಿರುವ ಬಿಜೆಪಿ

ಹೇಳಿಕೇಳಿ ಬಿಜೆಪಿ ಮತ್ತು ಜೆಡಿಯು ಎನ್‌ಡಿಎ ಮೈತ್ರಿ ಪಕ್ಷಗಳು. ಇದೀಗ ತನ್ನದೇ ಮಿತ್ರ ಪಕ್ಷಗಳ ಆರು ಶಾಸಕರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಅರುಣಾಚಲದಲ್ಲಿದ್ದ ಏಳು ಜೆಡಿಯು ಶಾಸಕರಲ್ಲಿ ಆರು ಮಂದಿಯನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿರುವುದು ಜೆಡಿಯುಗೆ ಮರ್ಮಾಘಾತವಾಗಿದೆ.

ಕಳೆದ ಒಂದುವಾರದಿಂದ ಬಿಜೆಪಿ ಹಾಗೂ ಜೆಡಿಯು ನಡುವಿನ ಬಿಕ್ಕಟ್ಟು ಸುದ್ದಿಯಾಗುತ್ತಿದ್ದು, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಮಟ್ಟಿಗೆ ಅವಕಾಶವಾದಿ ರಾಜಕಾರಣಿಯೆಂದೇ ಕರೆಯಲ್ಪಡುವ ನಿತೀಶ್‌ ಕುಮಾರ್‌ ಹೇಳಿಕೆ. ಈ ಬಿಕ್ಕಟ್ಟಿನ ತೀವ್ರತೆಯನ್ನು ಬಹಿರಂಗಪಡಿಸಿದೆ.

ಅರುಣಾಚಲ ಪ್ರದೇಶದಲ್ಲಿನ 60 ವಿಧಾನಸಭಾ ಸ್ಥಾನಗಳ ಪೈಕಿ 15ರಲ್ಲಿ ಜೆಡಿಯು ಸ್ಪರ್ಧಿಸಿತ್ತು. ಚುನಾವಣೆಯಲ್ಲಿ 41 ಸ್ಥಾನಗಳನ್ನು ಗೆದ್ದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದರೆ, ಏಳು ಸ್ಥಾನಗಳನ್ನು ಗೆದ್ದ ಜೆಡಿಯು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಶುಕ್ರವಾರ ದೋರ್ಜಿ ಖರ್ಮ, ಜಿಕ್ಕೆ ಟಾಕೊ, ಹಯೀಂಗ್ ಮಂಗ್ಫಿ, ಡೊಂಗ್ರು ಸಿಯಾಂಗ್ಜು, ತಲೇಮ್ ಟಬೊ ಹಾಗೂ ಕಂಗಾಂಗ್ ಟಕು ಅವರು ಜೆಡಿಯು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com