ಗೋಹತ್ಯೆ ಮಸೂದೆಯ ಹಿಂದೆ ಇರುವುದು ಕೇವಲ ಕೋಮು ಲೆಕ್ಕಾಚಾರವೆ?

ಗೋಹತ್ಯೆ ಮಸೂದೆಯಂತಹ ಬಿಜೆಪಿ ಮತ್ತು ಸಂಘಪರಿವಾರದ ಪಕ್ಕಾ ವ್ಯಾವಹಾರಿಕ ಹೆಜ್ಜೆಗಳನ್ನು ಕೇವಲ ಧರ್ಮ, ಕೋಮು ಮುಂತಾದ ನೆಲೆಯಲ್ಲಿ ನೋಡುವುದು ಒಂದು ರೀತಿಯಲ್ಲಿ ದಡ್ಡತನದ ಪರಮಾವಧಿಯಾದೀತು.
ಗೋಹತ್ಯೆ ಮಸೂದೆಯ ಹಿಂದೆ ಇರುವುದು ಕೇವಲ ಕೋಮು ಲೆಕ್ಕಾಚಾರವೆ?

ಒಂದು ಮಸೂದೆಯನ್ನು ಸದನದಲ್ಲಿ ಮಂಡಿಸುವಾಗ ಪಾಲಿಸಬೇಕಾದ ಎಲ್ಲಾ ರೀತಿ-ರಿವಾಜುಗಳನ್ನು ಗಾಳಿಗೆ ತೂರಿ ಬುಧವಾರ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ (ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ)ಯನ್ನು ಮಂಡಿಸಿ, ಅನುಮೋದನೆಯನ್ನೂ ಪಡೆಯುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ.

ಮಾರನೇ ದಿನವೇ ವಿಧಾನಪರಿಷತ್ತಿನಲ್ಲಿ ಆ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಹುಸಿಯಾಗಿದೆ. ಪರಿಷತ್ತಿನಲ್ಲಿ ತನಗೆ ಬಹುಮತದ ಕೊರತೆ ಇರುವುದು ಮತ್ತು ಮುಖ್ಯವಾಗಿ ಪರಿಷತ್ತಿನ ಸಭಾಧ್ಯಕ್ಷರು ಕಾಂಗ್ರೆಸ್ಸಿನವರಾಗಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿಯಂತೆ ತಮ್ಮ ತಾಳಕ್ಕೆ ಕುಣಿಯುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಸರ್ಕಾರ ಪರಿಷತ್ತಿನಲ್ಲಿ ಮಸೂದೆ ಮಂಡಿಸುವುದನ್ನು ಮುಂದೂಡಿದೆ. ಅನುಮೋದನೆಗಾಗಿ ಮುಂದಿನ ಬೇಸಿಗೆ ಅಧಿವೇಶನದವರೆಗೆ ಕಾಯಬಹುದು. ಇಲ್ಲವೇ ಸುಗ್ರೀವಾಜ್ಞೆ ಮೂಲಕ ತಕ್ಷಣವೇ ಜಾರಿಗೆ ತರಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಈ ನಡುವೆ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾಗುತ್ತಲೇ ಸಿಎಂ ಬಿ ಎಸ್ ಯಡಿಯೂರಪ್ಪ ತಮ್ಮ ಸರ್ಕಾರಿ ಅಧಿಕೃತ ನಿವಾಸದಲ್ಲೇ ಗೋಪೂಜೆ ಮಾಡಿ ಸಂಭ್ರಮಿಸಿದರೆ, ರಾಜ್ಯಾದ್ಯಂತ ಬಿಜೆಪಿ, ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ವಿವಿಧ ಸಂಘಪರಿವಾರದ ಸಂಘಟನೆಗಳು ಸಂಭ್ರಮಾಚರಣೆ ಮಾಡಿವೆ. ಆದರೆ, ಗಮನಿಸಬೇಕಾದ ಒಂದು ಸಂಗತಿ ಎಂದರೆ; ಹಸು, ಹೋರಿ, ಕರು, ಎತ್ತು, ಎಮ್ಮೆಗಳ ರಕ್ಷಣೆಗಾಗಿ ಮಾಡಲಾಗಿದೆ. ಅವುಗಳ ಅಕ್ರಮ ಸಾಗಣೆ, ಮಾರಾಟ ತಡೆಯುವ ಉದ್ದೇಶದಿಂದಲೇ ಗೋ ಮಾತೆಯ ರಕ್ಷಣೆಗಾಗಿಯೇ ಈ ಮಸೂದೆ ರೂಪಿಸಲಾಗಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರ ಹೇಳುತ್ತಿದ್ದರೂ, ರಾಜ್ಯದ ಯಾವುದೇ ಮೂಲೆಯಲ್ಲಿ ನಿಜವಾಗಿಯೂ ಜಾನುವಾರುಗಳನ್ನು ಸಾಕುವ ಯಾವುದೇ ರೈತನಾಗಲೀ, ಕೃಷಿಕನಾಗಲೀ, ಹೈನುಗಾರಿಕೆ ವೃತ್ತಿನಿರತನಾಗಲೂ ಈ ಮಸೂದೆಗೆ ವಿಧಾನಸಭೆ ಅನುಮೋದನೆ ನೀಡಿದ ಬಗ್ಗೆ ಸಂಭ್ರಮಿಸಿದ ಒಂದೇ ಒಂದು ಘಟನೆ ವರದಿಯಾಗಿಲ್ಲ!

ಗೋಹತ್ಯೆ ಮಸೂದೆಯ ಹಿಂದೆ ಇರುವುದು ಕೇವಲ ಕೋಮು ಲೆಕ್ಕಾಚಾರವೆ?
ಸರ್ಕಾರದ ಉದ್ದೇಶ ನಿಜವಾಗಿಯೂ ಗೋರಕ್ಷಣೆಯೇ ಅಥವಾ ಗೋ ರಾಜಕಾರಣವೆ?

ಹಾಗಾದರೆ, ರೈತರಿಗೆ, ನಿಜವಾಗಿಯೂ ಗೋವು ಸೇರಿದಂತೆ ಬಹುತೇಕ ಸಾಕುಪ್ರಾಣಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡವರಿಗೆ ಸರ್ಕಾರದ ಈ ಘನ ಉದ್ದೇಶವೇ ತಲುಪಿಲ್ಲವೆ? ಅಥವಾ ಸರ್ಕಾರ ಮಾಡುತ್ತಿರುವುದು ಅವರಿಗೆ ಬೇಕಾಗಿಲ್ಲವೆ? ಅಥವಾ ಅವರಿಗೆ ಖುಷಿ ಕೊಡುವ ಬದಲು, ಆತಂಕ ಹುಟ್ಟಿಸುವಂತಹದ್ದು ಈ ಮಸೂದೆಯಲ್ಲಿದೆಯೆ? ಎಂಬ ವಾಸ್ತವಿಕ ಪ್ರಶ್ನೆಗಳಿಗೆ ರೈತರ- ಹೈನುಗಾರರ ಈ ನಿರ್ಲಕ್ಷ್ಯ ಕಾರಣವಾಗಿದೆ. ಜೊತೆಗೆ ಈ ಮಸೂದೆ ರೈತರ ಪರವೂ ಅಲ್ಲ, ಜಾನುವಾರುಗಳ ಪರವೂ ಅಲ್ಲ; ಬದಲಾಗಿ ಗೋವಿನ ಹೆಸರಿನಲ್ಲಿ ದಂಧೆ ಮಾಡುವವರ ಪರ, ಗೋವಿನ ಹೆಸರಿನಲ್ಲಿ ರಾಜಕಾರಣ ಮಾಡುವವರ ಪರ ಮತ್ತು ಗೋವಿನ ಹೆಸರಿನಲ್ಲಿ ದ್ವೇಷ, ದಾದಾಗಿರಿ, ಗೂಂಡಾಗಿರಿ ಮಾಡುವವರ ಪರ ಎಂಬ ಟೀಕೆಗಳಿಗೂ ರೈತರ ಅರ್ಥಪೂರ್ಣ ಮೌನ ಇಂಬು ನೀಡಿದೆ.

ಆ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ಬಿಜೆಪಿ ಆಡಳಿತದ ಸರ್ಕಾರಗಳು ಪೈಪೋಟಿಗೆ ಬಿದ್ದಂತೆ ಒಂದಕ್ಕಿಂತ ಒಂದು ಕಠಿಣ ಕಾನೂನುಗಳನ್ನು ರೂಪಿಸಿ ಗೋ ರಕ್ಷಣೆಗೆ ಪ್ರಯತ್ನಿಸುತ್ತಿರುವುದು ಮತ್ತು ಅದೇ ಹೊತ್ತಿಗೆ ದೇಶ ಮತ್ತು ವಿದೇಶದಲ್ಲಿ ಸಗಣಿ, ಗಂಜಲ, ಚರ್ಮ, ಗೊರಸುಗಳಿಂದ ಹಿಡಿದು ಹಾಲು, ಮೊಸರು, ತುಪ್ಪದವರೆಗೆ ಹಸು ಮತ್ತು ಜಾನುವಾರುಗಳ ಉತ್ಪನ್ನಗಳಿಗೆ ಏರುತ್ತಿರುವ ಬೇಡಿಕೆಯ ನಡುವಿನ ನಂಟನ್ನು ಪರಿಶೀಲಿಸಿದರೆ, ಈ ಸರ್ಕಾರಗಳ ಗೋ ಮಾತೆ ಮೇಲಿನ ದಿಢೀರ್ ಮಮಕಾರದ ಹಿಂದಿನ ಅಸಲೀ ಹಕೀಕತ್ತು ಬಯಲಾಗದೇ ಇರದು.

ದೇಶದ ಗೋಮಾಂಸ (ಎಮ್ಮೆ ಮಾಂಸವೂ ಸೇರಿ) ವಹಿವಾಟು ವರ್ಷಕ್ಕೆ ಬರೋಬ್ಬರಿ 30 ಸಾವಿರ ಕೋಟಿಯಷ್ಟು ಬೃಹತ್ ಉದ್ಯಮ. ಇನ್ನು ಗೋವು ಮತ್ತು ಎಮ್ಮೆಯ ಹೈನುಗಾರಿಕೆಯ ಉದ್ಯಮದ ಗಾತ್ರ ವಾರ್ಷಿಕ ಬರೋಬ್ಬರಿ ಹತ್ತು ಲಕ್ಷ ಕೋಟಿ ರೂಗಳಷ್ಟು ದೊಡ್ಡದು. ಇನ್ನು ಚರ್ಮೋದ್ಯಮ ಎಂಬುದು ಸುಮಾರು 45 ಸಾವಿರ ಕೋಟಿ ರೂಪಾಯಿ ವ್ಯವಹಾರ. ಇನ್ನು ಇತ್ತೀಚಿನ ವರ್ಷಗಳಲ್ಲಿ ಭಾರೀ ಬೇಡಿಕೆ ಕಾಣುತ್ತಿರುವ ಮತ್ತು ಪ್ರಚಾರ ಪಡೆಯುತ್ತಿರುವ ಸಗಣಿ, ಬೆರಣಿ, ಗಂಜಲ ಮುಂತಾದ ಉತ್ಪನ್ನಗಳ ಮಾರುಕಟ್ಟೆ ಕನಿಷ್ಠವೆಂದರೂ 20-25 ಸಾವಿರ ಕೋಟಿ ವಾರ್ಷಿಕ ವಹಿವಾಟಿನ ಉದ್ಯಮವಾಗಿದ್ದು, ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅಂತಾರಾಷ್ಟ್ರೀಯ ಬೇಡಿಕೆಯ ನಿರೀಕ್ಷೆ ಇದೆ. ಹೀಗೆ ಲಕ್ಷಾಂತರ ಕೋಟಿ ರೂ. ವಾರ್ಷಿಕ ವಹಿವಾಟಿನ ಮೂಲ ಗೋಮಾತೆ ಮತ್ತು ಎಮ್ಮೆ, ಎತ್ತು ಮುಂತಾದ ಅದರ ಸಹಚಾರಿಗಳು. ಈಗ ದೇಶ- ವಿದೇಶದಲ್ಲಿ ಹೆಚ್ಚುತ್ತಿರುವ ಗೋವು ಮತ್ತು ಇತರೆ ಜಾನುವಾರು ಉತ್ಪನ್ನಗಳ ಕುರಿತ ಆಸಕ್ತಿ ಮತ್ತು ಬಳಕೆ ಸಹಜವಾಗೇ ಆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಬಿಜೆಪಿ ಮತ್ತು ಸಂಘಪರಿವಾರದ ಮಂದಿಯ ಪಾಲಿಗೆ ಗೋವು ಎಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ.

ಆ ಹಿನ್ನೆಲೆಯಲ್ಲಿ ಕಳೆದ ವರ್ಷ ಪ್ರಧಾನಿ ಮೋದಿಯವರ ಸರ್ಕಾರ, ಬರೋಬ್ಬರಿ 500 ಕೋಟಿ ರೂ. ಅನುದಾನದೊಂದಿಗೆ ರಾಷ್ಟ್ರೀಯ ಕಾಮಧೇನು ಆಯೋಗ(ಕೌ ಕಮೀಷನ್) ಸ್ಥಾಪಿಸಿದೆ. ಅದರ ಹಸು ಸಂರಕ್ಷಣೆಯ ಜೊತೆಗೆ ಸಗಣಿ, ಗಂಜಲ ಸೇರಿದಂತೆ ಅದರ ಉಪ ಉತ್ಪನ್ನಗಳ ಮಾರುಕಟ್ಟೆ ಮತ್ತು ಮೌಲ್ಯವರ್ಧನೆಗೆ ರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ಮತ್ತು ಉತ್ತೇಜನಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ, ಕಳೆದ ಆರೇಳು ವರ್ಷದಲ್ಲಿ ದೇಶಾದ್ಯಂತ ಸಾವಿರಾರು ಗೋಶಾಲೆಗಳನ್ನು ಆರಂಭಿಸಲು ಕೇಂದ್ರದ ಬಿಜೆಪಿ ಸರ್ಕಾರ ಸುಮಾರು ಒಂದು ಸಾವಿರ ಕೋಟಿ ರೂ. ಅನುದಾನ ನೀಡದೆ.

ಗೋಹತ್ಯೆ ಮಸೂದೆಯ ಹಿಂದೆ ಇರುವುದು ಕೇವಲ ಕೋಮು ಲೆಕ್ಕಾಚಾರವೆ?
ಗೋಹತ್ಯೆ ನಿಷೇಧ ಕಾನೂನು; ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ ಕುಮಾರಸ್ವಾಮಿ

ಅಂದರೆ ಒಂದು ಕಡೆ ಗೋರಕ್ಷಣೆಯ ಹೆಸರಿನಲ್ಲಿ ಸರ್ಕಾರಗಳು ಗೋಶಾಲೆ ನಡೆಸುವವರು, ಗೋ ಉತ್ಪನ್ನ ತಯಾರಕರು ಮುಂತಾದ ಹಿತಾಸಕ್ತ ಗುಂಪುಗಳಿಗೆ ವಿವಿಧ ಯೋಜನೆ, ಕಾರ್ಯಕ್ರಮಗಳ ಅಡಿ ಪ್ರತಿ ವರ್ಷ ನೀಡುತ್ತಿರುವ ಸಾವಿರಾರು ಕೋಟಿ ರೂ. ಅನುದಾನ. ಮತ್ತೊಂದು ಕಡೆ ಜನಾರೋಗ್ಯ ಮತ್ತು ಕೃಷಿ ಕ್ರೇತ್ರದಲ್ಲಿ ಹೆಚ್ಚುತ್ತಿರುವ ಗೋವು ಮತ್ತು ಇತರೆ ಜಾನುವಾರು ಉತ್ಪನ್ನಗಳ ಬಳಕೆ ಸೃಷ್ಟಿಸಿರುವ ಹೊಸ ಮಾರುಕಟ್ಟೆ. ಹೀಗೆ ಉಭಯ ಲಾಭದ ಕೊಯ್ಲು ಮಾಡುತ್ತಿರುವ ಒಂದು ವರ್ಗದ ಲಾಭಿ ಎಷ್ಟಿಗೆ ಎಂಬುದಕ್ಕೆ ಈ ಗೋ ಹತ್ಯೆ ನಿಷೇಧ ಮಸೂದೆಗಳೇ ಉದಾಹರಣೆ.

ಹಾಗಾಗಿ, ಕರ್ನಾಟಕವಿರಬಹುದು, ಉತ್ತರಪ್ರದೇಶವಿರಬಹುದು, ಮಧ್ಯಪ್ರದೇಶವಿರಬಹುದು; ಎಲ್ಲಾ ಕಡೆ ಬಿಗಿ ಕಾನೂನುಗಳೊಂದಿಗೆ ಜಾರಿಗೆ ಬರುತ್ತಿರುವ ಈ ಗೋ ಮಾತೆ ಸಂರಕ್ಷಣೆ ಜಪದ ಮಸೂದೆಗಳ ಉದ್ದೇಶ ಸ್ಪಷ್ಟ. ಮೊದಲನೆಯದಾಗಿ ಸದ್ಯ ಸಾಂಪ್ರದಾಯಿಕ ವಿಧಾನದಲ್ಲಿ ಹಸು ಮತ್ತು ಎಮ್ಮೆ ಸೇರಿದಂತೆ ಜಾನುವಾರುಗಳನ್ನು ಸಾಕುತ್ತಿರುವ ರೈತಾಪಿ ವರ್ಗ, ಅದರಲ್ಲೂ ಶೂಧ್ರ ಮತ್ತು ದಲಿತ ವರ್ಗವನ್ನ ಅದರಿಂದ ದೂರ ಮಾಡುವುದು. ಹಾಗಾಗಿಯೇ ಕೃಷಿ ಮತ್ತು ಸಾಕಾಣಿಕೆ ಉದ್ದೇಶಕ್ಕೆ ಜಾನುವಾರು ಸಾಗಣೆ ಮಾಡುವುದಕ್ಕೂ ಪರವಾನಿಗೆ ಪಡೆಯಬೇಕು ಇಲ್ಲವಾದರೆ ಲಕ್ಷಾಂತರ ದಂಡ ಮತ್ತು ಏಳೆಂಟು ವರ್ಷ ಕಠಿಣ ಶಿಕ್ಷೆಯಂತಹ ಕೃಷಿಕ ವಿರೋಧಿ ಕಾನೂನು ಅಳವಡಿಸಲಾಗಿದೆ. ಯಾವುದೇ ರೀತಿಯಲ್ಲಿ ಜಾನುವಾರಿಗೆ ಹಿಂಸೆ ನೀಡಿದರೂ ಅವರ ಮೇಲೆ ಕಠಿಣ ಕೇಸು ಹಾಕಲು ಅವಕಾಶ ನೀಡಲಾಗಿದೆ.

ಎರಡನೆಯದಾಗಿ ಹೀಗೆ ರೈತರು ಕಠಿಣ ಕಾನೂನುಗಳಿಗೆ ಬೆದರಿ ಜಾನುವಾರು ಸಾಕಾಣಿಕೆಯನ್ನೇ ಕೈಬಿಟ್ಟು, ತಮ್ಮ ಜಾನುವಾರುಗಳನ್ನೆಲ್ಲಾ ಗೋಶಾಲೆಗಳಿಗೆ ಅಟ್ಟಿದರೆ, ಕ್ರಮೇಣ ದೇಶದಲ್ಲಿ ವಾಣಿಜ್ಯ ಉದ್ದೇಶದ ಹೈನಗಾರಿಕೆಯಲ್ಲಿ ತೊಡಗಿಸಿಕೊಂಡವರನ್ನು ಹೊರತುಪಡಿಸಿ ಗೋಶಾಲೆಗಳೇ ಇಡೀ ಜಾನುವಾರು ಕೇಂದ್ರಿತ ಲಕ್ಷಾಂತರ ಕೋಟಿ ರೂಪಾಯಿ ವಹಿವಾಟಿನ ಲಾಭಕೋರರಾಗುತ್ತಾರೆ. ಹಾಗೆ ಭಾರೀ ವೇಗದಲ್ಲಿ ಬೆಳೆಯುತ್ತಿರುವ ಉದ್ಯಮ ವಲಯವನ್ನು ಬಡ ರೈತನ ಕೈಯಿಂದ ತಪ್ಪಿಸಿ, ತನ್ನ ಮತಬ್ಯಾಂಕ್ ಆದ ಹಿತಾಸಕ್ತ ಗುಂಪಿಗೆ ಹಸ್ತಾಂತರಿಸುವ ಬಿಜೆಪಿ ಮತ್ತು ಸಂಘಪರಿವಾರವ ಯೋಜಿತ ಕಾರ್ಯತಂತ್ರದ ಭಾಗವೇ ಈ ಗೋ ಹತ್ಯೆ ಮಸೂದೆಗಳು!

ಗೋಹತ್ಯೆ ಮಸೂದೆಯ ಹಿಂದೆ ಇರುವುದು ಕೇವಲ ಕೋಮು ಲೆಕ್ಕಾಚಾರವೆ?
ಗೋಹತ್ಯೆ ನಿಷೇಧ ಮಸೂದೆ: ಸದನದಲ್ಲಿ ಕಾಂಗ್ರೆಸ್‌ನಿಂದ ಬಾವಿಗಿಳಿದು ಪ್ರತಿಭಟನೆ

ಒಂದು ಕಡೆ ಭೂಸುಧಾರಣಾ ತಿದ್ದುಪಡಿ ಮಸೂದೆಯ ಮೂಲಕ ಬಡ ರೈತರಿಂದ ಭೂಮಿಯನ್ನು ಕಿತ್ತುಕೊಂಡು ಕಾರ್ಪರೇಟ್ ಕಂಪನಿಗಳಿಗೆ ಒಪ್ಪಿಸುವ ತಂತ್ರದ ಭಾಗವಾಗಿ ಆ ಮಸೂದೆ ಜಾರಿಗೆ ತರುತ್ತಿರುವ ಹೊತ್ತಿಗೇ, ಭೂಮಿ ಕಳೆದುಕೊಳ್ಳಲಿರುವ ರೈತರು ಜಾನುವಾರುಗಳನ್ನು ಸಾಕಲಾಗದೆ ಗೋಶಾಲೆಗೆ ಅಟ್ಟುವ ಅನಿವಾರ್ಯತೆ ಸೃಷ್ಟಿಲಾಗುತ್ತಿದೆ. ಒಂದು ವೇಳೆ ಭೂಮಿ ಕೈತಪ್ಪಿದ ಪರಿಸ್ಥಿತಿಯಲ್ಲೂ ಒಂದೆರಡು ಜಾನುವಾರು ಕಟ್ಟಿಕೊಂಡು ಜೀವನ ನಡೆಸುವ ಅವಕಾಶವೂ ಉಳಿಯದಿರಲೆಂದು ಈಗ ಗೋ ಹತ್ಯೆ ನಿಷೇಧದ ಹೆಸರಿನಲ್ಲಿ ಜಾನುವಾರು ಸಾಕುವುದೇ ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ, ಈಗಾಗಲೇ ಕೃಷಿ ಮತ್ತು ಜನಬಳಕೆ ಹೊರತುಪಡಿಸಿ ಉಳಿದ ಜಾಗವನ್ನೆಲ್ಲಾ ಅರಣ್ಯವೆಂದು ಘೋಷಿಸಿ, ರೈತರಿಗೆ ಜಾನುವಾರು ಮೇಯಿಸಲು ಒಂದಿಂಚು ಜಾಗವೂ ಇಲ್ಲದಂತೆ ಮಾಡಲಾಗಿದೆ!

ಹಾಗಾಗಿ, ಗೋಹತ್ಯೆ ಮಸೂದೆಯಂತಹ ಬಿಜೆಪಿ ಮತ್ತು ಸಂಘಪರಿವಾರದ ಪಕ್ಕಾ ವ್ಯಾವಹಾರಿಕ ಹೆಜ್ಜೆಗಳನ್ನು ಕೇವಲ ಧರ್ಮ, ಕೋಮು ಮುಂತಾದ ನೆಲೆಯಲ್ಲಿ ನೋಡುವುದು ಒಂದು ರೀತಿಯಲ್ಲಿ ದಡ್ಡತನದ ಪರಮಾವಧಿಯಾದೀತು. ಲಕ್ಷಾಂತರ ಕೋಟಿ ವಹಿವಾಟಿನ ಉದ್ಯಮದ ವಾರಸುದಾರಿಕೆಯ ಪ್ರಶ್ನೆ ಅದು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದ ರೈತ ಸಮುದಾಯಕ್ಕೆ, ಗೋ ಹತ್ಯೆ ನಿಷೇಧ ಮಸೂದೆ ಕೂಡ ಭೂ ಸುಧಾರಣೆ ತಿದ್ದುಪಡಿ ಮಸೂದೆಯ ಮತ್ತೊಂದು ರೂಪ ಎಂಬುದು ಅರಿವಾಗುವುದೇ?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com