ಭೂ ಸುಧಾರಣೆಯ ಅರಸು ಆದರ್ಶ ಮಣ್ಣುಪಾಲು ಮಾಡಿದ ಕುಮಾರಸ್ವಾಮಿ

ಬರೋಬ್ಬರಿ ಕಾಲು ಶತಮಾನದ ಹಿಂದೆ ಮುಖ್ಯಮಂತ್ರಿಯಾಗಿ ದೇವೇಗೌಡರು ಚಾಲನೆ ನೀಡಿದ್ದ, ರೈತರಿಂದ ಭೂಮಿ ಕಿತ್ತುಕೊಳ್ಳುವ ಮೂಲಕ ದೇವರಾಜ ಅರಸು ಅವರ ಆಶಯಗಳನ್ನು ಮಣ್ಣುಪಾಲು ಮಾಡುವ ಕಾರ್ಯವನ್ನು ಈಗ ಅವರ ಪುತ್ರ ಎಚ್ ಡಿ ಕುಮಾರಸ್ವಾಮಿ ಪೂರ್ಣಗೊಳಿಸಿದ್ದಾರೆ.
ಭೂ ಸುಧಾರಣೆಯ ಅರಸು ಆದರ್ಶ ಮಣ್ಣುಪಾಲು ಮಾಡಿದ ಕುಮಾರಸ್ವಾಮಿ

ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ 1995ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ದೇವೇಗೌಡರ ಜನತಾ ದಳ ಸರ್ಕಾರ, ರೈತರ ಹಿತ ಕಾಯುವ ಘೋಷಣೆಯೊಂದಿಗೇ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, “ಯಾರು ಏನಾದರೂ ತಮಟೆ ಬಾರಿಸಿಕೊಂಡು ಹೋಗಲಿ, ನಾವು ನಮ್ಮ ಕೆಲಸ ಮುಂದುವರಿಸುತ್ತೇವೆ” ಎಂದು ಹಠಕ್ಕೆ ಬಿದ್ದು ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಅನುಕೂಲಕರ ಕಾನೂನು ಜಾರಿಗೆ ತಂದಿದ್ದರು.

ಇದೀಗ ಅದಾಗಿ ಇಪ್ಪತ್ತೈದು ವರ್ಷಗಳ ಬಳಿಕ ಅದೇ ದೇವೇಗೌಡರು, ಹಾಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮತ್ತದೇ ರಿಯಲ್ ಎಸ್ಟೇಟ್ - ಬಂಡವಾಳಶಾಹಿಗಳಿಗೆ ಬಡ ರೈತರ ಜಮೀನು ಪರಭಾರೆ ಮಾಡುವ ಉದ್ದೇಶದ ಭೂ ಸುಧಾರಣಾ ಕಾಯ್ದೆಯ ಮತ್ತೊಂದು ರೈತ ವಿರೋಧಿ ತಿದ್ದುಪಡಿಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದರೆ, ಅವರ ಪುತ್ರ ಜೆ ಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಸದನದ ಒಳಗೆ ತಿದ್ದುಪಡಿ ಪರ ಮತ ಹಾಕಿ ತಮ್ಮ ಪಕ್ಷ ಮತ್ತು ಕುಟುಂಬದ ರಿಯಲ್ ಎಸ್ಟೇಟ್ ಕಾಳಜಿಯನ್ನು ಮೆರೆದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯದಲ್ಲಿ ಯಾರು ಬೇಕಾದರೂ, ಎಷ್ಟು ಬೇಕಾದರೂ(432 ಎಕರೆ!) ಕೃಷಿ ಭೂಮಿ ಖರೀದಿ ಮಾಡಬಹುದು ಮತ್ತು ಅದನ್ನು ಯಾವುದಕ್ಕೆ ಬೇಕಾದರೂ ಬಳಸಬಹುದು ಎಂಬ ಹೊಸ ತಿದ್ದುಪಡಿಯು ರಾಜ್ಯದ ಸಣ್ಣ ಮತ್ತು ಮಧ್ಯಮ ರೈತರ ಪಾಲಿಗೆ ಮರಣಶಾಸನವಾಗಲಿದೆ. ಹಣವಿದ್ದವರು ಮತ್ತು ಕಪ್ಪುಹಣದ ಮೂಲ ಹೊಂದಿರುವವರು ಒಂದಕ್ಕೆ ಹತ್ತು ಪಟ್ಟು ಕಾಸು ಚೆಲ್ಲಿ ರೈತರಿಗೆ ಆಮಿಷವೊಡ್ಡಿ, ಬೆದರಿಸಿ, ಒತ್ತಡ ಹಾಕಿ ಭೂಮಿ ಖರೀದಿ ಮಾಡುತ್ತಾರೆ. ಹಾಗೆ ಖರೀದಿಸಿದ ಭೂಮಿಯನ್ನು ಕೃಷಿಗೇ ಬಳಸಬೇಕು ಎಂಬ ಈ ಹಿಂದಿನ ನಿರ್ಬಂಧವನ್ನೂ ತೆಗೆದುಹಾಕಿರುವುದರಿಂದ ಆ ಭೂಮಿಯಲ್ಲಿ ರಿಯಲ್ ಎಸ್ಟೇಟ್, ಉದ್ಯಮ ನಡೆಸಲು ಹಣ ಹೂಡುತ್ತಾರೆ. ಹಣವಿದ್ದವರು ಮಾತ್ರ ಬದುಕಬೇಕು ಎಂಬ ಬಿಜೆಪಿಯ ಅಜೆಂಡಾವನ್ನು ಜಾರಿಗೊಳಿಸುವ ಈ ತಿದ್ದುಪಡಿ, ರೈತರನ್ನು ಕೂಲಿಗಳಾಗಿಸುವ ಗುರಿ ಹೊಂದಿದೆ. ಹಾಗಾಗಿ ಕೃಷಿ ವಲಯವನ್ನು ಸಬಲೀಕರಣ ಮಾಡುವ ಕಾನೂನುಗಳು ಬೇಕಾಗಿರುವ ಹೊತ್ತಲ್ಲಿ ರೈತರನ್ನು ಕೃಷಿಯಿಂದ ವಿಮುಖಗೊಳಿಸುವ, ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಪರಭಾರೆ ಮಾಡುವ ಉದ್ದೇಶ ಈ ತಿದ್ದುಪಡಿಯ ಹಿಂದಿದೆ ಎಂಬುದು ಪ್ರಮುಖವಾಗಿ ಕೇಳಿಬರುತ್ತಿರುವ ಆತಂಕ.

ಆ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಕರೋನಾ ಸಂಕಷ್ಟದ ನಡುವೆ ರಾಜ್ಯ ಬಿಜೆಪಿ ಸರ್ಕಾರ ಈ ಮಸೂದೆಯ ಪ್ರಸ್ತಾಪವಿಡುತ್ತಲೇ ರಾಜ್ಯ ವ್ಯಾಪಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಈಗಲೂ ಬಂದ್, ನಿರಂತರ ಹೋರಾಟದ ಮೂಲಕ ರೈತ ಸಂಘಟನೆಗಳು ಸರ್ಕಾರದ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.

1974ರಲ್ಲಿ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 63, ಸೆಕ್ಷನ್ 79 ಎ, ಬಿ,ಸಿ, ಸೆಕ್ಷನ್ 80 ಗಳನ್ನು ಸೇರಿಸಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೇಲ್ಜಾತಿ ಭೂಮಾಲೀಕರ ಶೋಷಣೆಗೆ ಒಳಗಾಗಿದ್ದ ಗೇಣಿದಾರರಿಗೆ ತಾವು ಉಳುವ ಹೊಲದ ಒಡೆತನದ ಕ್ರಾಂತಿಕಾರಕ ಅವಕಾಶ ಕಲ್ಪಿಸಿದ್ದರು. ಆದರೆ, 1995ರಲ್ಲಿ ಎಚ್ ಡಿ ದೇವೇಗೌಡರು ಆ ಕಾಯ್ದೆಗೆ ತಿದ್ದುಪಡಿ ತಂದು ರಿಯಲ್ ಎಸ್ಟೇಟ್ ದಂಧೆಗೆ ಕೃಷಿ ಭೂಮಿ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಇದೀಗ ಬಿ ಎಸ್ ಯಡಿಯೂರಪ್ಪ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಗೆ ಇದ್ದ ನಿರ್ಬಂಧವನ್ನು ತೆಗೆದುಹಾಕುವುದು, ಭೂಮಿತಿಯನ್ನು 50 ಎಕರೆಯಿಂದ 432 ಎಕರೆಗೆ ವಿಸ್ತರಿಸಿರುವುದು ಮತ್ತು ಖರೀದಿಸಿದ ಭೂಮಿಯನ್ನು ಕೃಷಿಗೇ ಬಳಸಬೇಕೆಂದ ಷರತ್ತನ್ನೂ ತೆಗೆದುಹಾಕುವ ಮೂಲಕ ಇಡೀ ಕೃಷಿ ಭೂಮಿಯನ್ನು ಕಾರ್ಪೊರೇಟ್ ಮತ್ತು ಹಣವಂತರ ಉದ್ಯಮ ಹೂಡಿಕೆಗೆ ತೆರೆದಿಟ್ಟಿದ್ದಾರೆ.

ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಎಚ್ ಕೆ ಪಾಟೀಲ್, ಎಸ್ ಆರ್ ಪಾಟೀಲ್, ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಅವರ ಪಕ್ಷ ಕೂಡ ಸದನದ ಒಳಹೊರಗೆ ಈ ಮಸೂದೆಯ ವಿರುದ್ಧ ಪ್ರಬಲ ವಿರೋಧ ವ್ಯಕ್ತಪಡಿಸಿದೆ.

ಆದರೆ, ಸ್ವತಃ ಮಣ್ಣಿನಮಕ್ಕಳು ಎಂದು ತಮ್ಮನ್ನು ತಾವು ಮಾರ್ಕೆಟಿಂಗ್ ಮಾಡಿಕೊಳ್ಳುವುದರಲ್ಲಿ ಮುಂದಿರುವ ದೇವೇಗೌಡರ ಕುಟುಂಬ ಮತ್ತು ಅವರ ಜೆಡಿಎಸ್ ಪಕ್ಷ ಮಾತ್ರ, ಬೀದಿಯಲ್ಲೊಂದು ಸದನದಲ್ಲೊಂದು ವರಸೆ ಪ್ರದರ್ಶಿಸುವ ಮೂಲಕ ರೈತರು ಮತ್ತು ಕೃಷಿಯ ವಿಷಯದಲ್ಲಿ ತಮ್ಮ ಅಸಲೀತನವನ್ನು ಜಗಜ್ಜಾಹೀರುಗೊಳಿಸಿದೆ.

ವಿಧಾನಮಂಡಲದ ಮಳೆಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡನೆಗೆ ಮುನ್ನ ಬೀದಿ ಹೋರಾಟ, ಪ್ರತಿಭಟನೆಗಳನ್ನು ನಡೆಸಿದ್ದ ದೇವೇಗೌಡರು ಮತ್ತು ಅವರ ಪುತ್ರ ಎಚ್ ಡಿ ಕುಮಾರಸ್ವಾಮಿ, ಆ ಬಳಿಕ ಈ ವಿಷಯದಲ್ಲಿ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದರು. ಪಕ್ಷದ ಇತರೆ ನಾಯಕರು ಮಸೂದೆಯ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದರು. ಪಕ್ಷದ ವರಿಷ್ಠರ ನಡೆ ಮಾತ್ರ ಹಲವು ಅನುಮಾನಗಳಿಗೆ ಎಡೆಮಾಡಿತ್ತು.

ಕಳೆದ ಸೆಪ್ಟೆಂಬರಿನಲ್ಲಿ ತಿದ್ದುಪಡಿ ಮಸೂದೆ ರಾಜ್ಯ ವಿಧಾನಸಭೆಯಲ್ಲಿ ಮಂಡನೆಯಾದಾಗ ಒಂದು ಕಡೆ ರೈತ ಸಂಘಟನೆಗಳು ಬೀದಿಬೀದಿಗಳಲ್ಲಿ ಹೋರಾಟ ನಡೆಸುತ್ತಿದ್ದರೆ, ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸದನದ ಒಳಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಭಾತ್ಯಾಗವನ್ನೂ ಮಾಡಿದ್ದವು. ಆ ಸಂದರ್ಭದಲ್ಲಿ ಮಸೂದೆಯನ್ನು ವಿರೋಧಿಸಿ ಸದನದಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಈ ಮಸೂದೆಯನ್ನು ಕರೋನಾ ಸಂದರ್ಭದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಅಗತ್ಯದ ಬಗ್ಗೆ ಪ್ರಶ್ನಿಸಿದ್ದರು. ಜಮೀನು ಖರೀದಿ ಮಿತಿ ಹೆಚ್ಚು ಮಾಡಿರುವುದರಿಂದ ಮತ್ತೆ ರಾಜ್ಯ ಬಲಾಢ್ಯರಿಗೆ ಭೂಮಿ ಹಕ್ಕು ಎಂಬ ಜಮೀನ್ದಾರಿ ಪದ್ಧತಿಯತ್ತ ಹೋಗುವಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಇಂತಹ ತಿದ್ದುಪಡಿಯಿಂದ ನಿಜವಾಗಿಯೂ ರೈತರಿಗೆ ಎಷ್ಟು ಅನುಕೂಲ ಎಂಬ ಬಗ್ಗೆ ಪರಿಶೀಲನೆ ನಡೆಸಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು.

ಆದರೆ ಇದೀಗ ಮಂಗಳವಾರ ವಿಧಾನಪರಿಷತ್ ನಲ್ಲಿ ಮಸೂದೆ ಮಂಡನೆಯಾದಾಗ ಜೆಡಿಎಸ್ ಬಹುತೇಕ ಸದಸ್ಯರು ಮಸೂದೆಯ ಪರ ಬೆಂಬಲ ವ್ಯಕ್ತಪಡಿಸುವ ಮೂಲಕ ಅದು ಉಭಯ ಸದನಗಳ ಅನುಮೋದನೆ ಪಡೆದು ಕಾನೂನು ಆಗಿ ಜಾರಿಗೆ ಬರಲು ದೊಡ್ಡ ಮಟ್ಟದ ನೆರವು ನೀಡಿದ್ದಾರೆ.

ಈ ನಡುವೆ ಕುಮಾರಸ್ವಾಮಿ ಮತ್ತು ಸಿಎಂ ಯಡಿಯೂರಪ್ಪ ನಡುವಿನ ರಹಸ್ಯ ಮಾತುಕತೆಗಳು, ಕುಮಾರಸ್ವಾಮಿ ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ಪರವಾಗಿ ಮೇಲಿಂದ ಮೇಲೆ ನೀಡುತ್ತಿರುವ ಹೇಳಿಕೆಗಳು, ಅದೇ ಹೊತ್ತಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವ್ಯಕ್ತಪಡಿಸುತ್ತಿರುವ ಆಕ್ರೋಶಗಳ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ರೈತ ಪರ ಧೋರಣೆಯಲ್ಲಾದ ಈ ಬದಲಾವಣೆಯನ್ನು ನೋಡಬೇಕಿದೆ. ಸದ್ಯದ ಸ್ಥಿತಿಯಲ್ಲಿ ತಮ್ಮ ಪಕ್ಷ ಮತ್ತು ಕುಟುಂಬ ರಾಜಕಾರಣದ ಅಸ್ತಿತ್ವಕ್ಕೆ ದೊಡ್ಡ ಧಕ್ಕೆ ಎದುರಾಗಿದೆ ಎಂಬುದನ್ನು ಕುಮಾರಸ್ವಾಮಿ ತಡವಾಗಿ ಅರ್ಥಮಾಡಿಕೊಂಡಿದ್ದಾರೆ.

ಆ ಹಿನ್ನೆಲೆಯಲ್ಲೇ ಅವರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಜೊತೆಗೆ ತಮ್ಮ ಮತ್ತು ತಮ್ಮ ಕುಟುಂಬ ಆಸ್ತಿಪಾಸ್ತಿ, ವ್ಯವಹಾರ ರಕ್ಷಣೆಯ ನಿಟ್ಟಿನಲ್ಲಿ ಬಿಜೆಪಿಗೆ ಜಯಕಾರ ಹಾಕತೊಡಗಿದ್ದಾರೆ. ತಮ್ಮ ಕಣ್ಣೆದುರೇ ಬಿಜೆಪಿ ವಿರುದ್ಧ ತೊಡೆತಟ್ಟಿದ ಡಿ ಕೆ ಶಿವಕುಮಾರ್ ಮತ್ತು ಅವರ ಕುಟುಂಬವನ್ನು ಬಿಜೆಪಿ ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಹಣಿಯುತ್ತಿರುವುದನ್ನು ಕಂಡು ಬೆಚ್ಚಿರುವ ಕುಮಾರಸ್ವಾಮಿ, ಹೀಗೆ ಬಿಜೆಪಿ ಓಲೈಕೆಯ ಮೂಲಕ ತಮ್ಮ ಸ್ವಹಿತಾಸಕ್ತಿ ರಕ್ಷಣೆಯ ಅಂತಿಮ ಯತ್ನ ನಡೆಸಿದ್ದಾರೆ. ಅಂತಹ ಓಲೈಕೆಯ ಭಾಗವಾಗಿಯೇ ಹೀಗೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆಯ ವಿಷಯದಲ್ಲಿ ಮೂರು ತಿಂಗಳಲ್ಲೇ ದಿಢೀರ್ ಯೂ ಟರ್ನ್ ಹೊಡೆದಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಜೊತೆಗೆ ಈ ತಿದ್ದುಪಡಿಯ ಹಿಂದೆ; ಹಾಲಿ ಇರುವ ಭೂ ಸುಧಾರಣೆ ಕಾಯ್ದೆಯ ಸೆಕ್ಷನ್ 79 ಎ ಮತ್ತು ಬಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಸುಮಾರು 18 ಸಾವಿರ ಪ್ರಕರಣಗಳಲ್ಲಿ ಲಕ್ಷಾಂತರ ಕೋಟಿ ಮೌಲ್ಯದ ಭೂ ವ್ಯವಹಾರದ ಲಾಭಿಯ ಹಿತಾಸಕ್ತಿ ಅಡಗಿದೆ. ಅಂತಹ ಲಕ್ಷಾಂತರ ಕೋಟಿ ಲಾಭಿ ಕೂಡ ಕುಮಾರಸ್ವಾಮಿ ಅವರ ಈ ರೈತ ದ್ರೋಹಿ ನಿರ್ಧಾರದ ಹಿಂದೆ ಕೆಲಸ ಮಾಡಿರುವ ಸಾಧ್ಯತೆ ಇದೆ. ಅಂತಹ ಅಪಾರ ಲಾಭವೇ ಅವರ ‘ಮಣ್ಣಿನ ಮೊಮ್ಮಗ’ ಎಂಬ ಮುಖವಾಡವನ್ನೂ ಕಳಚಿಡುವಂತೆ ಮಾಡಿರಬಹುದು ಎಂಬ ಆಕ್ರೋಶದ ಟೀಕೆಗಳು ಕೇಳಿಬರುತ್ತಿವೆ.

ಕಾರಣಗಳೇನೇ ಇರಲಿ; ಸದ್ಯಕ್ಕಂತೂ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬ ಮತ್ತು ಅವರ ಜಾತ್ಯತೀತ ಜನತಾ ದಳದ ರೈತರ ಪಕ್ಷ ಎಂಬ ಹೆಗ್ಗಳಿಕೆ ಎಷ್ಟು ಟೊಳ್ಳು ಮತ್ತು ಮಣ್ಣಿನ ಮಕ್ಕಳು ಎಂಬ ಬಿರುದಾಂಕಿತ ಕೂಡ ಎಷ್ಟು ನಗೆಪಾಟಲಿನ ಸಂಗತಿ ಎಂಬುದು ಈಗ ಜಗಜ್ಜಾಹೀರಾಗಿದೆ. ಬರೋಬ್ಬರಿ ಕಾಲು ಶತಮಾನದ ಹಿಂದೆ ಮುಖ್ಯಮಂತ್ರಿಯಾಗಿ ದೇವೇಗೌಡರು ಚಾಲನೆ ನೀಡಿದ್ದ, ರೈತರಿಂದ ಭೂಮಿ ಕಿತ್ತುಕೊಳ್ಳುವ ಮೂಲಕ ದೇವರಾಜ ಅರಸು ಅವರ ಆಶಯಗಳನ್ನು ಮಣ್ಣುಪಾಲು ಮಾಡುವ ಕಾರ್ಯವನ್ನು ಈಗ ಅವರ ಪುತ್ರ ಎಚ್ ಡಿ ಕುಮಾರಸ್ವಾಮಿ ಪೂರ್ಣಗೊಳಿಸಿದ್ದಾರೆ. ‘ಉಳುವವನೇ ಹೊಲದೊಡೆಯ’ ಎಂಬ ಅರಸು ಅವರ ಆದರ್ಶದ ಘೋಷಣೆಯನ್ನು, ‘ಉಳ್ಳವನೇ ಹೊಲದೊಡೆಯ’ ಎಂದು ಬದಲಾಯಿಸಲು ಕುಮಾರಸ್ವಾಮಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com