ಬುಧವಾರ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕಾನೂನು ಮಸೂದೆಯನ್ನು ಮಂಡಿಸಲಾಗಿದೆ. ಈ ಸಂದರ್ಭ ತೀವ್ರವಾದ ಪ್ರತಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಪಶು ಸಂಗೋಪನಾ ಖಾತೆ ಸಚಿವ ಪ್ರಭು ಚವ್ಹಾನ್ ಅವರು ಮಸೂದೆಯನ್ನು ಮಂಡಿಸಿದರು. ಸದನದಲ್ಲಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಗಿತ್ತು. ಮತ್ತೆ ಸದನ ಆರಂಭವಾದಾಗ, ವಿಪಕ್ಷ ನಾಯಕರಾದ ಸಿದ್ದರಾಯ್ಯನವರು ಮಸೂದೆಯ ಕುರಿತಾಗಿ ಗುರುವಾರ ಚರ್ಚೆಯನ್ನು ನಡೆಸಲು ಅವಕಾಶ ಕೇಳಿದರು. ಇದಕ್ಕೆ ಒಪ್ಪದ ಬಿಜೆಪಿ ನಾಯಕರು, ಬುಧವಾರವೇ ಚರ್ಚೆಯನ್ನು ನಡೆಸಬೇಕು ಎಂದು ಪಟ್ಟು ಹಿಡಿದು ಕುಳಿತರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಅವರು, 2013ರಲ್ಲಿ ಗೋಹತ್ಯೆ ಕಾನೂನು ವಾಪಾಸ್ ಪಡೆದಾಗ ನಿಮ್ಮ ಇಚ್ಚೆಯಂತೆ ನಡೆದುಕೊಂಡಿದ್ರಿ. ಈಗ ನಾವು ಮತ್ತೆ ಕಾಯ್ದೆ ತರುತ್ತಾ ಇದ್ದೇವೆ, ನೀವು ಸುಮ್ಮನಿರಿ ಎಂದು ಹೇಳಿದರು.
ಇದಕ್ಕೂ ಮೊದಲು, ಕಾಂಗ್ರೆಸ್ ನಾಯಕರ ಮಾತಿಗೆ ಕಿವಿಗೊಡದ ಸಭಾಧ್ಯಕ್ಷರ ನಡೆಯನ್ನು ಖಂಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಎಚ್ ಕೆ ಪಾಟೀಲ್ ಅವರು, ಸದನವನ್ನು ಬಿಜೆಪಿ ಪಕ್ಷದ ಕಚೇರಿಯಾಗಿ ಬಳಸಿಕೊಳ್ಳಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದ್ದು ಮಾಡಿದ ಕಪ್ಪು ಪಟ್ಟಿ – ಕೇಸರಿ ಪಟ್ಟಿ:
ಬಿಜೆಪಿ ಸದಸ್ಯರು ಸದನದಲ್ಲಿ ಕೇಸರಿ ಶಾಲು ಧರಿಸಿ ಕುಳಿತಿರುವುದನ್ನು ವಿರೋಧಿಸಿದ ಎಚ್ ಕೆ ಪಾಟೀಲ್ ಅವರಿಗೆ ಉತ್ತರ ನೀಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಾಂಗ್ರೆಸ್ ಸದಸ್ಯರು, ಮಂಗಳವಾರದಂದು ಕಪ್ಪು ಪಟ್ಟಿ ಧರಿಸಿದ್ದಾಗ ನಾವು ಯಾರೂ ವಿರೋಧ ಮಾಡಿರಲಿಲ್ಲ. ಈಗ ಅವರು ಕೇಸರಿ ಪಟ್ಟಿ ಧರಿಸಿದ್ದಾರೆ, ಅವರಿಗೆ ತೆಗೆಯಲು ಹೇಳೋಕೆ ಆಗುತ್ತಾ? ಎಂದು ಮರು ಪ್ರಶ್ನಿಸಿದ್ದಾರೆ.
ಸದನವನ್ನು ಗುರುವಾರ ಬೆಳಿಗ್ಗೆ 10.30ರ ತನಕ ಮುಂದೂಡಲಾಗಿದೆ.