ಡಿ ಕೆ ಶಿವಕುಮಾರ್ ಕೆಪಿಸಿಸಿ ಸಾರಥ್ಯದ ಲಾಭ ನಷ್ಟದ ಪ್ರಶ್ನೆ ಮತ್ತೆ ಮುನ್ನೆಲೆಗೆ?

ಎಲ್ಲಾ ಕಡೆಯಿಂದ ಎದುರಾಗುತ್ತಿರುವ ವೈಫಲ್ಯ ಮತ್ತು ಸಂಕಷ್ಟಗಳ ನಡುವೆ, ಬಿಜೆಪಿಯ ಪ್ರಾಬಲ್ಯದ ಎದುರು ಕನಿಷ್ಟ ಅಸ್ತಿತ್ವ ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ಪಕ್ಷಕ್ಕೆ ಡಿಕೆ ಶಿವಕುಮಾರ್ ಬಲ ತುಂಬಬಲ್ಲರೆ? ಎಂಬ ಪ್ರಶ್ನೆ ಇದೀಗ ಮತ್ತೆ ಮುಂಚೂಣಿಗೆ ಬಂದಿದೆ.
ಡಿ ಕೆ ಶಿವಕುಮಾರ್ ಕೆಪಿಸಿಸಿ ಸಾರಥ್ಯದ ಲಾಭ ನಷ್ಟದ ಪ್ರಶ್ನೆ ಮತ್ತೆ ಮುನ್ನೆಲೆಗೆ?

ಸಿಬಿಐ ನೋಟೀಸ್ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಬುಧವಾರ ಸಂಜೆ ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಲಿದ್ದಾರೆ ಎಂಬ ವರದಿಗಳಿವೆ. ಮೂರು ದಿನಗಳ ಹಿಂದೆ ಮಗಳ ನಿಶ್ಚಿತಾರ್ಥದ ದಿನವೇ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಕೆಪಿಸಿಸಿ ಅಧ್ಯಕ್ಷರಿಗೆ ನೋಟಿಸ್ ನೀಡಿತ್ತು.

ಹಾಗೆ ನೋಡಿದರೆ, ಡಿ ಕೆ ಶಿವಕುಮಾರ್ ಅವರ ವಿರುದ್ಧದ ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ, ಅಕ್ರಮ ವಹಿವಾಟು, ತೆರಿಗೆ ವಂಚನೆ ಪ್ರಕರಣಗಳು ಹೊಸದೇನಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಿಬಿಐ, ಜಾರಿ ನಿರ್ದೇಶನಾಲಯ(ಇಡಿ), ಆದಾಯ ತೆರಿಗೆ ಇಲಾಖೆ (ಐಟಿ) ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಅವರ ಹಿಂದೆ ಬಿದ್ದಿವೆ. ಹಲವು ಬಾರಿ ಅವರ ಮನೆ, ಕಚೇರಿ, ಆಪ್ತೇಷ್ಟರ ನಿವಾಸಗಳ ಮೇಲೆ ದಾಳಿಗಳೂ ನಡೆದಿವೆ. ಆಸ್ತಿಪಾಸ್ತಿ ದಾಖಲೆ, ನಗದು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅವರನ್ನು ಬಂಧಿಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅವರ ವಿರುದ್ಧದ ಗಂಭೀರ ಪ್ರಕರಣಗಳ ವಿಚಾರಣೆ ಮುಂದುವರಿದಿರುವ ನಡುವೆಯೇ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಪಕ್ಷದ ಹೈಕಮಾಂಡ್ ಆಯ್ಕೆ ಮಾಡುವ ಮೂಲಕ, ಅವರ ವಿರುದ್ಧದ ದಾಳಿಗಳು ರಾಜಕೀಯ ಪ್ರೇರಿತ ಎಂಬ ಆರೋಪಗಳನ್ನು ಸಮರ್ಥಿಸಿತ್ತು. ಅದೇ ಹೊತ್ತಿಗೆ ಬಿಜೆಪಿಯ ಆಕ್ರಮಣಕಾರಿ ವರಸೆಯ ಎದುರಿಸಿ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲು ಅವರ ಹೊರತು ಇತರ ಸಮರ್ಥ ಪ್ರಭಾವಿಗಳು ಪಕ್ಷದಲ್ಲಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿತ್ತು. 2015ರಿಂದಲೇ ಬಿಜೆಪಿ ಅವರನ್ನು ಸೆಳೆಯಲು ಪ್ರಯತ್ನ ನಡೆಸಿತ್ತು. ಅವರ ವಿರುದ್ಧದ ದೂರುಗಳು ಮತ್ತು ಅಕ್ರಮಗಳ ಕುರಿತ ಮಾಹಿತಿಯನ್ನೇ ಮುಂದಿಟ್ಟುಕೊಂಟು ಗಾಳ ಹಾಕಿತ್ತು. ಆದರೆ, ಡಿ ಕೆ ಶಿವಕುಮಾರ್ ಬಿಜೆಪಿಯ ಅಂತಹ ತಂತ್ರಗಳಿಗೆ ಮಣಿದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮನಸ್ಸು ಮಾಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದರು. ಹಾಗಾಗಿಯೇ ಅವರನ್ನು ಹಣಿಯಲು ಬಿಜೆಪಿ ಹೈಕಮಾಂಡ್ ಹಠಕ್ಕೆ ಬಿದ್ದಿದೆ. ಅದರ ಪರಿಣಾಮವೇ ಈ ಸರಣಿ ದಾಳಿಗಳು, ಪ್ರಕರಣಗಳು ಎಂಬುದು ರಾಜಕೀಯ ವಲಯದಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು.

ಆ ಹಿನ್ನೆಲೆಯಲ್ಲಿಯೇ ಕಳೆದ ವರ್ಷ ಡಿ ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಸಾರಥ್ಯ ವಹಿಸುವ ಮಾತು ಕೇಳಿಬಂದಾಗ, ಪ್ರಮುಖವಾಗಿ ಬಿಜೆಪಿಯ ಈ ಹಗೆತನದ ರಾಜಕಾರಣ ಮತ್ತು ವಿವಿಧ ತನಿಖಾ ಸಂಸ್ಥೆಗಳು ಅವರನ್ನು ಹಣಿಯಲು ಹವಣಿಸುತ್ತಿರುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಪಕ್ಷದ ಹೊಣೆಗಾರಿಕೆಯನ್ನು ವಹಿಸಿದ ಬಳಿಕ ಅಂತಹ ದಾಳಿಗಳು ಇನ್ನಷ್ಟು ತೀವ್ರವಾಗಬಹುದು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡಿನ ಇಂತಹ ನಿರ್ಧಾರ ಸರಿಯೇ ಎಂಬ ಪ್ರಶ್ನೆಗಳು ಎದ್ದಿದ್ದವು.

ಡಿ ಕೆ ಶಿವಕುಮಾರ್ ಕೆಪಿಸಿಸಿ ಸಾರಥ್ಯದ ಲಾಭ ನಷ್ಟದ ಪ್ರಶ್ನೆ ಮತ್ತೆ ಮುನ್ನೆಲೆಗೆ?
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಿಬಿಐ ಸಮನ್ಸ್

ಇದೀಗ ಕೆಪಿಸಿಸಿ ಸಾರಥ್ಯವಹಿಸಿಕೊಂಡ ಕೆಲವು ತಿಂಗಳುಗಳಲ್ಲೇ ಅಂತಹ ಆತಂಕಗಳು ನಿಜವಾಗಿವೆ. ಅವರ ವಿರುದ್ಧದ ತನಿಖೆ ಮತ್ತು ದಾಳಿ ಇನ್ನಷ್ಟು ತೀವ್ರಗೊಳ್ಳತೊಡಗಿದೆ. ಅದರಲ್ಲೂ ಅವರ ವೈಯಕ್ತಿಕ ಕೌಟುಂಬಿಕ ಸಮಾರಂಭ, ಶುಭಕಾರ್ಯಗಳು, ಉಪ ಚುನಾವಣೆಗಳ ಹೊತ್ತಲ್ಲೇ ಅವರ ಮೇಲೆ ದಾಳಿ, ನೋಟೀಸ್ ನೀಡುವ ಮೂಲಕ ಅವರನ್ನು ಮತ್ತು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಮತ್ತು ಹಣಿಯುವ ಯತ್ನಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಯಾರಿಗೂ ಅನಿಸಬಹುದಾದ ರೀತಿಯಲ್ಲೇ ರಾಜಾರೋಷವಾಗಿ ಎದ್ದುಕಾಣಿಸುತ್ತಿವೆ.

ಈ ನಡುವೆ ಪಕ್ಷ ಸಂಘಟನೆ ಮತ್ತು ಬಿಜೆಪಿ ವಿರುದ್ಧ ಪಕ್ಷವನ್ನು ಬಲಪಡಿಸುವ ವಿಷಯದಲ್ಲಿ ತಮ್ಮ ಎಲ್ಲಾ ರೀತಿಯ ಪ್ರಭಾವ ಬಳಸಿ ದೊಡ್ಡ ಮಟ್ಟದ ಬದಲಾವಣೆ ತರಬಹುದು ಎಂಬ ನಿರೀಕ್ಷೆ ಅವರ ನೇಮಕದ ವೇಳೆ ಸಹಜವಾಗೇ ಇತ್ತು. ಬಿಜೆಪಿಯ ಷಢ್ಯಂತ್ರಗಳಿಗೆ ತಿರುಮಂತ್ರ ಹೇಳಿ, ಸೆಡ್ಡು ಹೊಡೆದು ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲಿದ್ದಾರೆ. ತಮಗಿರುವ ಜಾತಿ ಬೆಂಬಲ ಮತ್ತು ಅಭಿಮಾನಿ ಬಳಗದ ಬಲದೊಂದಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಲಿದ್ದಾರೆ. ಅದರಲ್ಲೂ ಪಕ್ಷದಿಂದ ದೂರಾಗಿರುವ ಯುವ ಜನತೆಯನ್ನು ಮತ್ತೆ ಸೆಳೆಯಲು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿಗೆ ದೊಡ್ಡ ಸವಾಲೊಡ್ಡಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆರಂಭದ ಕೆಲವು ದಿನ ಪಕ್ಷದ ಕಾರ್ಯಕರ್ತರು ಮತ್ತು ಎರಡನೇ ಮತ್ತು ಮೂರನೇ ಹಂತದ ನಾಯಕರ ನಡುವೆ ಅಂತಹ ಭರವಸೆ ಮತ್ತು ಹುಮ್ಮಸ್ಸು ಕೂಡ ಇತ್ತು.

ಆದರೆ, ಇದೀಗ ಅಧ್ಯಕ್ಷರಾಗಿ ಎದುರಿಸಿದ ಮೊದಲ ಉಪಚುನಾವಣೆಯಲ್ಲಿ ಎಲ್ಲಾ ಅನುಕೂಲಕರ ಪರಿಸ್ಥಿತಿಯ ಹೊರತಾಗಿಯೂ ಪಕ್ಷ ಹೀನಾಯ ಸೋಲು ಕಂಡಿದೆ. ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳೆರಡರಲ್ಲೂ ಶಿವಕುಮಾರ್ ಅವರ ಪ್ರಭಾವ ಹೆಚ್ಚಿತ್ತು. ಅವರದೇ ಒಕ್ಕಲಿಗ ಸಮುದಾಯದವೇ ನಿರ್ಣಾಯಕವಾಗಿದ್ದ ಕ್ಷೇತ್ರಗಳು ಅವು. ಜೊತೆಗೆ ರಾಜರಾಜೇಶ್ವರಿ ನಗರ ಅವರ ಮನೆ, ಕಚೇರಿ, ಶಿಕ್ಷಣ ಸಂಸ್ಥೆಗಳ ನೆಲೆ. ಆ ಮೂಲಕ ಅವರ ಅತಿ ಹೆಚ್ಚು ಪ್ರಭಾವದ ಕ್ಷೇತ್ರ. ಆದಾಗ್ಯೂ ಎಲ್ಲಾ ತಂತ್ರಗಾರಿಕೆಗಳ ಹೊರತಾಗಿಯೂ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲು ಕಂಡಿದ್ದಾರೆ. ಸೋಲಿಗೆ ಸ್ವತಃ ಡಿಕೆ ಶಿವಕುಮಾರ್ ಅವರು ಹಲವು ಕಾರಣಗಳನ್ನು ಪಟ್ಟಿ ಮಾಡಿ ಪಕ್ಷದ ಹೈಕಮಾಂಡಿಗೆ ವರದಿ ಒಪ್ಪಿಸಿದ್ದಾರೆ. ಆ ಪೈಕಿ ಇವಿಎಂ ತಿರುಚಿರಬಹುದು, ಜೆಡಿಎಸ್ ಮತ್ತು ಬಿಜೆಪಿ ಒಳಒಪ್ಪಂದ, ಸರ್ಕಾರಿ ಯಂತ್ರದ ದುರುಪಯೋಗ ಮತ್ತಿತರ ಕಾರಣಗಳನ್ನು ಅವರು ಪಟ್ಟಿಮಾಡಿದ್ದಾರೆ.

ಆದರೆ, ಪಕ್ಷದ ಮತ್ತು ವೈಯಕ್ತಿಕವಾಗಿ ಪಕ್ಷದ ಸಾರಥ್ಯವಹಿಸಿದ ತಮ್ಮ ಕಡೆಯಿಂದ ಯಾವ ಲೋಪವಾಯಿತು? ಎಂಬ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಂಡಂತಿಲ್ಲ. ಆ ಎರಡು ಕ್ಷೇತ್ರಗಳ ಉಪ ಚುನಾವಣೆಯ ಸೋಲಿನ ಆತ್ಮಾವಲೋಕನ ಸಭೆ ನಡೆಸುವುದಾಗಿ ಹೇಳಿದ್ದರೂ, ಅಂತಹದ್ದೊಂದು ಸಭೆ ನಡೆದ ಬಗ್ಗೆ ಸಾರ್ವಜನಿಕವಾಗಿ ಯಾವ ಮಾಹಿತಿ ಇಲ್ಲ.

ಈ ಸೋಲಿನ ಪರಾಮರ್ಶೆಯ ನಡುವೆಯೇ ಮಸ್ಕಿ ಮತ್ತು ಬಸವಕಲ್ಯಾಣದ ಉಪಚುನಾವಣೆಯ ತಯಾರಿಗಳು ಆರಂಭವಾಗಿವೆ. ಜೊತೆಗೆ ಸಿಬಿಐ ನೋಟಿಸ್ ಕೂಡ ಜಾರಿಯಾಗಿ, ವಿಚಾರಣೆಗೆ ಹಾಜರಾಗಬೇಕಾಗಿದೆ.

ಈ ನಡುವೆ, ಎದುರಾಗಿರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಬಿಜೆಪಿ ಈಗಾಗಲೇ ಆರು ತಿಂಗಳಿಂದಲೇ ಭರ್ಜರಿ ತಯಾರಿ ಮಾಡಿಕೊಂಡಿದೆ. ಬೂತ್ ಮಟ್ಟದಲ್ಲಿ ಈಗಾಗಲೇ ಚುನಾವಣಾ ಸಮಿತಿಗಳು ರಚನೆಯಾಗಿ, ಮನೆಮನೆ ಪ್ರಚಾರವನ್ನೂ ಆರಂಭಿಸಿದೆ. ಪ್ರಮುಖವಾಗಿ ಆರ್ ಎಸ್ ಎಸ್ ಮತ್ತು ಸಂಘಪರಿವಾರದ ತಂತ್ರಗಾರಿಕೆಯ ಮೇಲೆ ಈ ಬಾರಿ ಪಂಚಾಯ್ತಿ ಚುನಾವಣೆಯಲ್ಲಿ ಪ್ರತಿಪಕ್ಷಗಳನ್ನು ಬೇರು ಸಹಿತ ಕಿತ್ತುಹಾಕಲು ಬಿಜೆಪಿ ಭಾರೀ ತಂತ್ರಗಾರಿಕೆ ಹೆಣೆದಿದೆ. ಆದರೆ, ಕಾಂಗ್ರೆಸ್ ಪಕ್ಷ ಈವರೆಗೆ ಸ್ಪಷ್ಟ ತಂತ್ರಗಾರಿಕೆಯ ರೋಡ್ ಮ್ಯಾಪ್ ಸಿದ್ಧಪಡಿಸಿದ ಮಾಹಿತಿ ಇಲ್ಲ. ಕನಿಷ್ಟ ತಾಲೂಕು ಮತ್ತು ಜಿಲ್ಲಾ ಮಟ್ಟದ ನಾಯಕರ ಮಟ್ಟದಲ್ಲೂ ಪಂಚಾಯ್ತಿ ಚುನಾವಣೆಯ ತಂತ್ರಗಾರಿಕೆ ಕುರಿತು ಸಭೆ-ಸಮಾಲೋಚನೆಗಳಿಗೂ ಈವರೆಗೆ ಚಾಲನೆ ನೀಡಿಲ್ಲ!

ಒಂದು ಕಡೆ ತಮ್ಮದೇ ಪ್ರಭಾವದ ಕ್ಷೇತ್ರಗಳಲ್ಲಿ ಬಿಜೆಪಿಯ ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸಿ, ಕನಿಷ್ಠ ಬಿಜೆಪಿಯ ನೆಲೆಯೇ ಇಲ್ಲದ ಶಿರಾದಂತಹ ಕಡೆ ಕೂಡ ಪಕ್ಷವನ್ನು ಗೆಲುವಿನ ದಡಕ್ಕೆ ಹತ್ತಿಸಲಾಗದ ವೈಫಲ್ಯ. ಮತ್ತೊಂದು ಕಡೆ ಕೆಪಿಸಿಸಿ ಸಾರಥ್ಯದ ವಹಿಸಿಕೊಂಡ ಬಳಿಕ ಇನಷ್ಟು ತೀವ್ರಗೊಂಡಿರುವ ತನಿಖಾ ಸಂಸ್ಥೆಗಳ ದಾಳಿ. ಹೀಗೆ ಎಲ್ಲಾ ಕಡೆಯಿಂದಲೂ ಡಿಕೆ ಶಿವಕುಮಾರ್ ಅವರಿಗೆ ಎದುರಾಗುತ್ತಿರುವ ವೈಫಲ್ಯ ಮತ್ತು ಸಂಕಷ್ಟಗಳ ನಡುವೆ, ಬಿಜೆಪಿಯ ಪ್ರಾಬಲ್ಯದ ಎದುರು ಕನಿಷ್ಟ ಅಸ್ತಿತ್ವ ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ಪಕ್ಷಕ್ಕೆ ಬಲ ತುಂಬಬಲ್ಲರೆ? ಎಂಬ ಪ್ರಶ್ನೆ ಇದೀಗ ಮತ್ತೆ ಮುಂಚೂಣಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಸಿ ಸಾರಥ್ಯವಹಿಸಿದ ಹೈಕಮಾಂಡ್ ತೀರ್ಮಾನದ ಬಗ್ಗೆಯೂ ತೆರೆಮರೆಯ ಚರ್ಚೆಗಳು, ಪರಾಮರ್ಶೆಗಳು ಆರಂಭವಾಗಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com