ಹೈಕಮಾಂಡ್ ಪಾಲಿಗೆ ಇನ್ನಷ್ಟು ಕಗ್ಗಂಟಾಗುತ್ತಿದೆ ಸಚಿವ ಸಂಪುಟ ಬಿಕ್ಕಟ್ಟು

ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆಯ ಅಥವಾ ಪುನರ್ ರಚನೆ ಎಂಬುದು ಕಗ್ಗಂಟಾಗಿದ್ದು, ಒಂದು ಕಡೆ ಯಡಿಯೂರಪ್ಪ ಪಟ್ಟು ಬಿಗಿಯಾಗುತ್ತಿದ್ದರೆ, ಮತ್ತೊಂದು ಕಡೆ ಅವರ ವಿರೋಧಿ ಬಣ ಕೂಡ ಹಿಡಿದ ಪಟ್ಟು ಸಡಿಲಿಸದೆ ಹಠಕ್ಕೆ ಬಿದ್ದಿದೆ.
ಹೈಕಮಾಂಡ್ ಪಾಲಿಗೆ ಇನ್ನಷ್ಟು ಕಗ್ಗಂಟಾಗುತ್ತಿದೆ ಸಚಿವ ಸಂಪುಟ ಬಿಕ್ಕಟ್ಟು

ದೀಪಾವಳಿಯ ಮುಂಚೆಯೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹಾಗೆ ನೋಡಿದರೆ, ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆಯ ಭರ್ಜರಿ ಜಯದ ಹಿನ್ನೆಲೆಯಲ್ಲಿ ಫಲಿತಾಂಶ ಬಂದ ಮಾರನೇ ದಿನವೇ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯಾಗಬೇಕಿತ್ತು. ಆದರೆ, ಫಲಿತಾಂಶ ಬಂದು ವಾರ ಕಳೆಯುತ್ತಾ ಬಂದರೂ ಯಾಕೆ ಆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ನಿಗೂಢವಾಗಿ ಉಳಿದಿದ್ದಾರೆ ಎಂಬುದು ಈಗಿರುವ ಕುತೂಹಲ.

ಸಂಪುಟ ವಿಸ್ತರಣೆಯ ವಿಷಯದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಇತ್ತೀಚೆಗಷ್ಟೇ ಸಂಪುಟದಿಂದ ನಿರ್ಗಮಿಸಿರುವ ಸಿ ಟಿ ರವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಕೆಲವು ಬಿಜೆಪಿ ನಾಯಕರು ಸಂಪುಟ ವಿಸ್ತರಣೆಯ ಕುರಿತ ವಿವಿಧ ಹೇಳಿಕೆಗಳನ್ನೂ, ಸ್ಪಷ್ಟನೆಗಳನ್ನೂ ನೀಡಿದ್ದಾರೆ. ಈ ನಡುವೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಎಲ್ಲರ ಹೇಳಿಕೆಗಳ ನಡುವೆ ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಎಂಬುದೂ ಸೇರಿದಂತೆ ಕೆಲವು ಪ್ರಶ್ನೆಗಳು, ಕುತೂಹಲಗಳು ಹಾಗೆಯೇ ಉಳಿದಿವೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಯನ್ನು ಮುಖ್ಯಮಂತ್ರಿಗಳು ಸಮಯ ಬಂದಾಗ ಮಾಡುತ್ತಾರೆ. ಕೇಂದ್ರೀಯ ನಾಯಕರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಆ ಬಗ್ಗೆ ಸೂಕ್ತ ಸಮಯದಲ್ಲಿ ಸಕಾಲಿಕ ನಿರ್ಧಾರ ಕೈಗೊಳ್ಳುತ್ತಾರೆ. ಆ ಬಗ್ಗೆ ಚಿಂತೆ ಬೇಡ ಎಂದು ಜೋಷಿಯವರು ಹೇಳಿದ್ದರೆ, ವರಿಷ್ಠರು ಬಿಹಾರ ಚುನಾವಣೆ ಮತ್ತು ಆ ನಂತರದ ಬೆಳವಣಿಗೆಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳಿಗೆ ವರಿಷ್ಠರನ್ನು ಸಂಪರ್ಕಿಸುವುದು ಸಾಧ್ಯವಾಗಿಲ್ಲ. ಆದರೆ ದೀಪಾವಳಿಯ ಬಳಿಕ ಬಿಹಾರ ವಿದ್ಯಮಾನಗಳು ಒಂದು ಹಂತಕ್ಕೆ ಬರಲಿದ್ದು, ವರಿಷ್ಠರು ಬಿಡುವು ಮಾಡಿಕೊಳ್ಳಲಿದ್ದಾರೆ. ಆ ಬಳಿಕ ಖಂಡಿತ ಸಿಎಂ ಸಮಾಲೋಚನೆ ನಡೆಸಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.

ಅವರೊಂದಿಗೆ ಹಲವು ಮೂಲ ಬಿಜೆಪಿ ಮತ್ತು ಬಿ ಎಲ್ ಸಂತೋಷ್ ಬಣದ ನಾಯಕರು ಕೂಡ ಕಳೆದ ಒಂದು ವಾರದಿಂದ ಇಂತಹದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅಂದರೆ; ಮುಖ್ಯವಾಗಿ ಎರಡು ವಿಷಯದಲ್ಲಿ; ಯಡಿಯೂರಪ್ಪ ವಿರೋಧಿ ಬಣ ಎನ್ನಲಾಗುತ್ತಿರುವ ಈ ಬಣದ ನಾಯಕರ ಮಾತುಗಳನ್ನು ಸಾಮ್ಯತೆ ಇದೆ. ಅದು; ಮೊದಲನೆಯದಾಗಿ ಸಂಪುಟ ವಿಸ್ತರಣೆಯಾಗುತ್ತದೆಯೇ ವಿನಃ ಪುನರ್ ರಚನೆ ಅಲ್ಲ ಎಂಬುದನ್ನು ಈ ನಾಯಕರ ಹೇಳಿಕೆಗಳು ಪರೋಕ್ಷವಾಗಿ ಸೂಚಿಸುತ್ತಿವೆ. ಎರಡನೆಯದು; ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಮತ್ತು ಅವರನ್ನು ಮುಖ್ಯಮಂತ್ರಿ ಮಾಡಿರುವ ವಲಸೆ ನಾಯಕರು ಸೇರಿದಂತೆ ಅವರ ಬಣದವರು ಧಾವಂತ ಮಾಡುತ್ತಿರುವಂತೆ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರಿಗಾಗಲೀ, ಅಥವಾ ಮೂಲ ಆರ್ ಎಸ್ ಎಸ್ ನಿಷ್ಠರಿಗಾಗಲೀ ಧಾವಂತವಿಲ್ಲ! ಎಂಬುದನ್ನು ಬಹಳ ಸೂಚ್ಯವಾಗಿ ಈ ಹೇಳಿಕೆಗಳು ಪ್ರಸ್ತುತಪಡಿಸುತ್ತಿವೆ.

ಈ ನಡುವೆ, ಸಚಿವ ಸಂಪುಟ ವಿಸ್ತರಣೆಯಾದರೆ, ತಾವು ಮಾತು ಕೊಟ್ಟಿರುವ ವಲಸೆ ನಾಯಕರು ಮತ್ತು ತಮ್ಮ ನಿಷ್ಠ ಮೂಲ ಬಿಜೆಪಿಗರಲ್ಲಿ ಕೆಲವರಿಗೆ ಸಚಿವ ಸ್ಥಾನ ನೀಡುವುದು ಸಾಧ್ಯವಿಲ್ಲ. ಜೊತೆಗೆ ತಮ್ಮ ನಿರೀಕ್ಷೆಯಂತೆ ಕೆಲಸ ಮಾಡದೇ ಇರುವ ಆದರೆ ಬಿ ಎಲ್ ಸಂತೋಷ್ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಕೆಲವು ಸಚಿವರನ್ನು ಅವರ ನಿಷ್ಕ್ರಿಯತೆಯ ನೆಪದಲ್ಲೇ ಸಂಪುಟದಿಂದ ಹೊರ ಹಾಕುವ ಲೆಕ್ಕಾಚಾರಕ್ಕೂ ವಿಸ್ತರಣೆಯಲ್ಲಿ ಅವಕಾಶವಾಗುವುದಿಲ್ಲ. ಹಾಗಾಗಿ ಸಂಪುಟ ವಿಸ್ತರಣೆಗಿಂತ ಪುನರ್ ರಚನೆಯೇ ಸರಿಯಾದ ಆಯ್ಕೆ ಎಂಬುದು ಸಿಎಂ ಯಡಿಯೂರಪ್ಪ ಅವರ ತೀರ್ಮಾನ. ಆ ಹಿನ್ನೆಲೆಯಲ್ಲಿಯೇ ಅವರು ಈಗಾಗಲೇ ದೆಹಲಿಗೆ ತಮ್ಮದೇ ಆದ ಪಟ್ಟಿಯನ್ನು ತಲುಪಿಸಿದ್ದಾರೆ. ಆ ಪಟ್ಟಿಯಲ್ಲಿ ಖಾಲಿ ಇರುವ ಸ್ಥಾನಗಳು, ಪುನರ್ ರಚನೆಯ ಮೂಲಕ ತೆರವು ಆಗಲಿರುವ ಸ್ಥಾನಗಳು ಮತ್ತು ಆ ಸ್ಥಾನಗಳಿಗೆ ಅನಿವಾರ್ಯವಾಗಿ ಅವಕಾಶ ನೀಡಲೇಬೇಕಾದವರ ಹೆಸರುಗಳನ್ನೂ ಸೇರಿಸಲಾಗಿದೆ.

ಜೊತೆಗೆ ಇದೀಗ ಶಿರಾ ಮತ್ತು ಆರ್ ಆರ್ ನಗರ ಗೆಲುವು ಸಹಜವಾಗೇ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ವರ್ಚಸ್ಸನ್ನು ಹೈಕಮಾಂಡ್ ಮಟ್ಟದಲ್ಲಿ ಇನ್ನಷ್ಟು ಹೆಚ್ಚಿಸಿದೆ. ಜೊತೆಗೆ ರಾಜ್ಯ ರಾಜಕಾರಣದಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಅವರಂಥ ಪ್ರಭಾವಿಗಳನ್ನು ಕೂಡ ಎದುರಿಸಿ ತಮ್ಮವರನ್ನು, ಪಕ್ಷದ ಪ್ರಭಾವವೇ ಇರದ ಕ್ಷೇತ್ರಗಳಲ್ಲಿ ಕೂಡ ಗೆಲ್ಲಿಸಿಕೊಂಡು ಬರುವ ಛಾತಿ ಇದೆ ಎಂಬುದನ್ನು ವರಿಷ್ಠರಿಗೆ ಮನದಟ್ಟು ಮಾಡಲು ಈ ಫಲಿತಾಂಶ ಯಶಸ್ವಿಯಾಗಿದೆ. ಆ ಹಿನ್ನೆಲೆಯಲ್ಲಿ ಸಹಜವಾಗೇ ಈಗ ಈ ಉಪಚುನಾವಣೆಯ ಬಳಿಕ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಹೈಕಮಾಂಡ್ ಮಟ್ಟದಲ್ಲಿ ಕೂಡ ಬಿಎಸ್ ವೈ ದನಿಗೆ ತೂಕ ಬಂದಿದೆ.

ಆ ಹಿನ್ನೆಲೆಯಲ್ಲಿಯೇ ಈಗ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ವಿಷಯ ಹೈಕಮಾಂಡ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಕೇವಲ ವಿಸ್ತರಣೆಗೆ ಅಸ್ತು ಎಂದು, ಒಂದಿರೆಡು ಮಂದಿ ವಲಸಿಗರು, ಒಬ್ಬಿಬ್ಬರು ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ, ಬಿಎಸ್ ವೈ ಪ್ರಭಾವಕ್ಕೆ ಕಡಿವಾಣ ಹಾಕುವ ಅವರ ವಿರೋಧಿ ಬಣದ ಲೆಕ್ಕಾಚಾರ ಫಲಿಸಬಹುದು. ಆದರೆ, ಹಿಂದಿನ ಮತ್ತು ಸದ್ಯದ ಉಪಚುನಾವಣೆಗಳ ಗೆಲುವಿನ ವಿಶ್ವಾಸದಲ್ಲಿರುವ ಬಿಎಸ್ ವೈ ಮತ್ತು ಅವರ ಆಪ್ತ ಬಣಕ್ಕೆ ಇದು ಪ್ರತಿಷ್ಠೆಯ ವಿಷಯವಾಗಬಹುದು. ಆಗ ಎದುರಾಗಬಹುದಾದ ಬಿಕ್ಕಟ್ಟು ಮತ್ತು ಸವಾಲುಗಳು ಬಿಜೆಪಿಯ ಪಾಲಿಗೇ ಸಂಚಕಾರವಾಗಬಹುದು ಎಂಬ ಆತಂಕ ಒಂದೆಡೆ. ಹಾಗಂತ ಸಂಪುಟ ಪುನರ್ ರಚನೆಗೆ ಹಸಿರು ನಿಶಾನೆ ತೋರಿ, ಸಿಎಂಗೆ ಸಂಪೂರ್ಣ ಆಯ್ಕೆಯ ಸ್ವಾತಂತ್ರ್ಯ ನೀಡಿದರೆ, ಸಂಪೂರ್ಣ ತಮ್ಮವರನ್ನು ತುಂಬಿಕೊಳ್ಳುವ ಜೊತೆಗೆ, ಬಿ ಎಲ್ ಸಂತೋಷ್ ಬಣ ಸೇರಿದಂತೆ ಮೂಲ ಬಿಜೆಪಿಗರನ್ನು ಹಣಿಯಬಹುದು. ಆಗಲೂ ಪಕ್ಷಕ್ಕೆ ಬಿಕ್ಕಟ್ಟು ಎದುರಾಗಲಿದೆ. ಮತ್ತೆ 2008-09ರ ‘ಕರ್ ನಾಟಕ’ದ ಮರುಪ್ರದರ್ಶನ ಶುರುವಾಗಲೂಬಹುದು ಎಂಬ ಆತಂಕವೂ ಇದೆ.

ವಾಸ್ತವವಾಗಿ ಬಿಹಾರ ಚುನಾವಣೆ, ಆ ಬಳಿಕದ ವಿದ್ಯಮಾನ ಮತ್ತು ದೀಪಾವಳಿ ಎಂಬುದು ಕೇವಲ ನೆಪವಷ್ಟೇ. ನೈಜ ಕಾರಣ ಈ ಆತಂಕ. ಕೇವಲ ವಿಸ್ತರಣೆಯೇ ಅಥವಾ ಸಂಪುಟ ಪುನರ್ ರಚನೆಯೇ? ಎಂಬ ಗೊಂದಲ ಈಗ ಹೈಕಮಾಂಡ್ ಕಾಡತೊಡಗಿದೆ.

ಯಡಿಯೂರಪ್ಪ ಕೂಡ ಇದೇ ಅವಕಾಶವನ್ನು ಬಳಸಿಕೊಂಡು ಪಕ್ಷ ಮತ್ತು ಸರ್ಕಾರದ ಮೇಲಿನ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿ ಮಾಡುವ ಸನ್ನಾಹದಲ್ಲಿದ್ದಾರೆ. ಆ ತಂತ್ರಗಾರಿಕೆಯ ಭಾಗವಾಗಿಯೇ ಅವರ ಆಪ್ತರು ಇದೀಗ ಸರಣಿ ಸಭೆಗಳಿಗೆ ಚಾಲನೆ ನೀಡಿದ್ದಾರೆ. ಈಗಾಗಲೇ ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ಸಭೆ ನಡೆಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಸಚಿವ ಸ್ಥಾನಾಕಾಂಕ್ಷಿಗಳಾದ ಮುರುಗೇಶ್ ನಿರಾಣಿ, ರಾಜೂಗೌಡ, ಪೂರ್ಣಿಮಾ ಶ್ರೀನಿವಾಸ್ ಮತ್ತಿತರರು ತಂತ್ರಗಾರಿಕೆಯ ಕುರಿತು ಚರ್ಚಿಸಿದ್ದಾರೆ. ತಮಗೆ ಸಚಿವ ಸ್ಥಾನ ಬೇಕು ಎಂಬುದಷ್ಟೇ ಅಲ್ಲದೆ, ಸಿ ಪಿ ಯೋಗೀಶ್ವರ್ ಸೇರಿದಂತೆ ಯಾರಿಗೆಲ್ಲಾ ಸಚಿವ ಸ್ಥಾನ ನೀಡಬಾರದು ಎಂಬುದನ್ನೂ ಈ ಗುಂಪು ಪಟ್ಟಿ ಮಾಡಿದ್ದು, ಈಗಾಗಲೇ ಸಿಎಂ ಅವರಿಗೆ ಅಹವಾಲು ಸಲ್ಲಿಸಿದೆ.

ಆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆಯ ಅಥವಾ ಪುನರ್ ರಚನೆ ಎಂಬುದು ಕಗ್ಗಂಟಾಗಿದ್ದು, ಒಂದು ಕಡೆ ಯಡಿಯೂರಪ್ಪ ಪಟ್ಟು ಬಿಗಿಯಾಗುತ್ತಿದ್ದರೆ, ಮತ್ತೊಂದು ಕಡೆ ಅವರ ವಿರೋಧಿ ಬಣ ಕೂಡ ಹಿಡಿದ ಪಟ್ಟು ಸಡಿಲಿಸದೆ ಹಠಕ್ಕೆ ಬಿದ್ದಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com