ನಿತೀಶ್ ಕುಮಾರ್ ಮತ್ತೆ ಬಿಹಾರದ ಸಿಎಂ: ಅಧಿಕೃತವಾಗಿ ಘೋಷಿಸಿದ ಎನ್‌ಡಿಎ

ಪ್ರಧಾನ ಮಂತ್ರಿ ನರೇಂದ್ರ ಮೋದಿಯೂ ಸೇರಿದಂತೆ ಎನ್ ಡಿ ನಾಯಕರು ಅಂತಿಮವಾಗಿ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿ ಎಂದು ಆಯ್ಕೆ ಮಾಡಿದ್ದಾರೆ.
ನಿತೀಶ್ ಕುಮಾರ್ ಮತ್ತೆ ಬಿಹಾರದ ಸಿಎಂ: ಅಧಿಕೃತವಾಗಿ ಘೋಷಿಸಿದ ಎನ್‌ಡಿಎ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಅತ್ಯಂತ ಕಳಪೆ ಸಾಧನೆ ಮಾಡಿರುವುದರಿಂದ, ಎನ್ ಡಿಎ ಮೈತ್ರಿಕೂಟ ಸರಳ ಬಹುಮತ ಪಡೆಯುವುದಕ್ಕೂ ಸಿಕ್ಕಾಪಟ್ಟೆ ತಿಣುಕಾಡುವಂತೆ ಮಾಡಿದ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಎನ್ ಡಿಎ ಮೈತ್ರಿಕೂಟದ ಇತರ ಪಕ್ಷಗಳು, ಮುಖ್ಯವಾಗಿ ಬಿಜೆಪಿ ನಾಯಕರು ಒಪ್ಪುತ್ತಾರೊ ಇಲ್ಲವೋ ಎಂದು ಎದ್ದಿದ್ದ ಗೊಂದಲ ಬಗೆಹರಿದಿದೆ. ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ಎನ್ ಡಿಎ ಇಂದು ಅಧಿಕೃತವಾಗಿ ಘೋಷಿಸಿದೆ.

ಜೆಡಿಯು-ಬಿಜೆಪಿ ನೇತೃತ್ವದ ಮೈತ್ರಿಕೂಟ ಎನ್ ಡಿಎ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ನಿತೀಶ್ ಕುಮಾರ್ ಹೆಸರನ್ನು ಘೋಷಣೆ ಮಾಡುವಾಗಲೇ ಬಿಜೆಪಿ ಕೆಲ ನಾಯಕರು ಅಪಸ್ವರ ಹಾಡಿದ್ದರು. ಆದರೆ ನಿತೀಶ್ ಕುಮಾರ್ ಈಗಾಗಲೇ ಮುಖ್ಯಮಂತ್ರಿ ಸ್ಥಾನದಲ್ಲಿ ‌ಇದ್ದುದರಿಂದ ಅವರನ್ನೇ ಅನಿವಾರ್ಯವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಇಲ್ಲದೆ ಇದ್ದರೆ 'ವಿಶ್ವಾಸದ ಕೊರತೆಯ ಪ್ರಶ್ನೆ' ಉದ್ಭವಿಸಬಹುದು. ಜೊತೆಗೆ 'ಆಡಳಿತ ವಿರೋಧಿ ಅಲೆ ಇದೆ' ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಆತಂಕ ಎನ್ ಡಿಎ ನಾಯಕರನ್ನು ಕಾಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಚುನಾವಣೆಗೂ ಮುನ್ನವೇ ಇದ್ದ ಇಂಥ ಅಪಸ್ವರಕ್ಕೆ ಸಹಜವಾಗಿ ಫಲಿತಾಂಶ ಬಂದ ನಂತರ ಪುಷ್ಠಿ ಸಿಕ್ಕಂತಾಗಿದೆ. ಏಕೆಂದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ 243 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಬಿಹಾರದಲ್ಲಿ‌ 108 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ 43 ಸ್ಥಾನ ಗೆದ್ದಿದೆ. ಅಲ್ಲದೆ ಬಿಜೆಪಿ 74 ಸ್ಥಾನಗಳಲ್ಲಿ ಜಯ ಗಳಿಸಿರುವುದರಿಂದ ಮತ್ತೊಮ್ಮೆ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು.

ಬಿಹಾರದಲ್ಲಿ ತನ್ನ ನೇತೃತ್ವದ ಸರ್ಕಾರ ಮಾಡಬೇಕು, ತಮ್ಮದೇ ಪಕ್ಷದವರನ್ನು ಮುಖ್ಯಮಂತ್ರಿ ಮಾಡಬೇಕು, ಅದಕ್ಕಾಗಿ ತಮ್ಮ ಪಕ್ಷವೇ ಜೆಡಿಯುಗಿಂತ ಹೆಚ್ಚು ಸ್ಥಾನ ಪಡೆಯಬೇಕು ಎಂದು ಬಿಜೆಪಿಯ ರಾಷ್ಟ್ರೀಯ ನಾಯಕರು ಲೆಕ್ಕಾಚಾರ ಹಾಕಿಕೊಂಡಿದ್ದರು. ಅದೇ ಕಾರಣಕ್ಕೆ ಕೇಂದ್ರದ ಎನ್ ಡಿಎ ಜೊತೆ ಬಹಳ ಚೆನ್ನಾಗಿಯೇ ಇರುವ ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಎಲ್ಲೆಲ್ಲಿ ಜೆಡಿಯು ಅಭ್ಯರ್ಥಿಗಳು ಪ್ರಬಲವಾಗಿದ್ದರೋ ಅಂತಹ ಕ್ಷೇತ್ರಗಳಲ್ಲಿ ಎಲ್ ಜೆಪಿ‌ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲಾಗಿತ್ತು. ಎಲ್ ಜೆಪಿ ಸ್ಪರ್ಧೆಯಿಂದ ಜೆಡಿಯು ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳಲ್ಲಿ ಸೋಲುವಂತಾಯಿತು ಎನ್ನುವುದು ಈಗ ಇತಿಹಾಸ.

ಬಿಹಾರದಲ್ಲಿ ಜೆಡಿಯು-ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 125 ಸ್ಥಾನಗಳೊಂದಿಗೆ ಸರಳ ಬಹುಮತ ಗಳಿಸಿದೆ. ಆರ್ ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ 110 ಸ್ಥಾನಗಳನ್ನು ಗಳಿಸಿದೆ. ಜೊತೆಗೆ ತೀವ್ರ ಪೈಪೋಟಿ ನೀಡಿ ಎನ್ ಡಿಎ ತ್ರಾಸದಾಯಕ ಗೆಲುವು ಸಾಧಿಸುವಂತೆ ಮಾಡಿದೆ. ಮತ ಎಣಿಕೆ ಸಂದರ್ಭದಲ್ಲಿ ಮತ ಎಣಿಕೆ ಬಗ್ಗೆ, ಫಲಿತಾಂಶ ಪ್ರಕಟಿಸುವ ಬಗ್ಗೆ, ಅಂಚೆ ಮತಪತ್ರಗಳ ಬಗ್ಗೆ, ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದರೆಂಬ ಬಗ್ಗೆ ಬಹಳಷ್ಟು ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ 'ಬಿಜೆಪಿ ಚೋರ್ ದರ್ವಾಜಾ (ಕಳ್ಳ ಕಾಗಿಲುದ) ಮೂಲಕ ಅಧಿಕಾರ ಹಿಡಿದಿದೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ‌ ಸರ್ಕಾರವೇ ಇದ್ದುದರಿಂದ ಆಡಳಿತ ಯಂತ್ರ ಹಾಗೂ ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರ ಗಳಿಸಿದೆ. ನಿಜವಾಗಿಯೂ ಗೆದ್ದಿರುವವರು ನಾವೇ. ಅವರು ಕುರ್ಚಿಯ ಮೇಲೆ ಕೂರಬಹುದು, ನಾವು ಬಿಹಾರ ಜನತೆಯ ಹೃದಯದಲ್ಲಿ ಜಾಗ ಪಡೆದಿದ್ದೇವೆ. ನಿತೀಶ್ ಕುಮಾರ್ ಸೋಲನ್ನು ಒಪ್ಪಿಕೊಳ್ಳಬೇಕು. ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬಾರದು ಎಂದು ಹೇಳಿದ್ದರು. ಆ ಮೂಲಕ ನಿತೀಶ್ ಕುಮಾರ್ ಅವರ ನೈತಿಕಬಲ ಕುಗ್ಗುವಂತೆ ಮಾಡಿದ್ದರು.

ಫಲಿತಾಂಶ ಹೊರಬಿದ್ದ ಬಳಿಕ ನಿತೀಶ್ ಕುಮಾರ್ ಬಿಹಾರದ ಬಿಜೆಪಿ ನಾಯಕರ ಜೊತೆ ಹಾಗೂ ಹೈಕಮಾಂಡ್ ಪ್ರತಿನಿಧಿಯಾದ ಬಿಹಾರ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಜೊತೆ ಸರಣಿ ಸಭೆಗಳನ್ನು ನಡೆಸಿದ್ದರು. ಆದರೆ ಯಾವ ಹಂತದಲ್ಲೂ ನಿತೀಶ್ ಕುಮಾರ್ ಅವರಿಗೆ 'ನೀವೇ ಮುಂದಿನ ಮುಖ್ಯಮಂತ್ರಿ' ಎಂಬ ಭರವಸೆ ಸಿಕ್ಕಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿರುವ ನಿತೀಶ್ ಕುಮಾರ್ ಆಪ್ತರ ಬಳಿ 'ತನಗೆ ಮುಖ್ಯಮಂತ್ರಿ ಆಗಲು ಮನಸ್ಸು ಒಪ್ಪುತ್ತಿಲ್ಲ' ಎಂದು ಹೇಳಿದ್ದಾರೆ ಎಂಬ ವಿಷಯವೂ ಕೇಳಿಬಂದಿತ್ತು.

ಈ ಗೊಂದಲಗಳಿಗೆ ತೆರೆ ಎಳೆಯಲು ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯೂ ಸೇರಿದಂತೆ ಎನ್ ಡಿ ನಾಯಕರು ಅಂತಿಮವಾಗಿ ನಿತೀಶ್ ಕುಮಾರ್ ಅವರನ್ನೇ ಮುಖ್ಯಮಂತ್ರಿ ಎಂದು ಆಯ್ಕೆ ಮಾಡಿದ್ದಾರೆ. ಜೊತೆಗೆ ಎನ್ ಡಿಎ ವತಿಯಿಂದ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಇದರಿಂದಾಗಿ ತಮ್ಮ ಪಕ್ಷ ಜೆಡಿಯು ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದರೂ ನಿತೀಶ್ ಕುಮಾರ್ ಆರನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com