ಬಿಹಾರದಲ್ಲಿ ಮುಂದುವರಿದ ಹಾವು ಏಣಿ ಆಟ; ಬಿಜೆಪಿಯ ವಿರುದ್ಧ ಫಲಿತಾಂಶ ತಿರುಚುವ ಆರೋಪ!

ತಡರಾತ್ರಿಯ ಹೊತ್ತಿಗೆ ಯಾವುದೇ ಕ್ಷಣದಲ್ಲಿ ಎರಡೂ ಮೈತ್ರಿಯ ನಡುವಿನ ಸ್ಥಾನ ಗಳಿಕೆಯ ಅಂತರ ತಿರುವು ಮುರುವು ಆಗುವ ಸಾಧ್ಯತೆ ಹೆಚ್ಚಿದ್ದು, ಕೊನೇ ಕ್ಷಣದ ವರೆಗೆ ಬಿಹಾರದ ಅಧಿಕಾರದ ಗದ್ದುಗೆಯ ವಾರಸುದಾರರ ಯಾರು ಎಂಬುದನ್ನು ನಿಖರವಾಗಿ ಊಹಿಸಲಾಗದ ಅತಂತ್ರ ಸ್ಥಿತಿ ಇದೆ.
ಬಿಹಾರದಲ್ಲಿ ಮುಂದುವರಿದ ಹಾವು ಏಣಿ ಆಟ; ಬಿಜೆಪಿಯ ವಿರುದ್ಧ ಫಲಿತಾಂಶ ತಿರುಚುವ ಆರೋಪ!

ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿಯ ಆಡಳಿತ ವೈಫಲ್ಯ ಹಾಗೂ ಸ್ಥಳೀಯವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತದ ವಿರುದ್ಧದ ಜನಾದ ಶವಾಗಲಿದೆ ಎಂದೇ ಪರಿಗಣಿಸಲಾಗಿದ್ದ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ, ಆಡಳಿತ ಮೈತ್ರಿ ಮತ್ತು ಪ್ರತಿಪಕ್ಷಗಳ ಮೈತ್ರಿ ನಡುವಿನ ನೇರ ಹಣಾಹಣಿಯ, ಕ್ಷಣಕ್ಷಣದ ಏರುಪೇರಿನ ಮೂಲಕ ಮಿಶ್ರ ಜನಾದೇಶವಾಗಿ ಹೊರಹೊಮ್ಮಿದೆ.

ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ವಿಶ್ಲೇಷಣೆಗಳು ಮತ್ತು ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿರುವ ಈ ಜನಾದೇಶ, ಹಾಗೆ ನೋಡಿದರೆ ಮಂಗಳವಾರ ಸಂಜೆಯ ಹೊತ್ತಿನವರೆಗೂ ಯಾವುದೇ ಮೈತ್ರಿಗೂ ಸ್ಪಷ್ಟ ಮೇಲುಗೈ ನೀಡಿಲ್ಲ. ತಡರಾತ್ರಿಯವೆಗೆ ಮತ ಎಣಿಕೆ ಮುಂದುವರಿಯಲಿದ್ದು, ಈವರೆಗೆ ಆಗಿರುವ ಶೇ.60ರಷ್ಟು ಮತ ಎಣಿಕೆಯಲ್ಲಿ ಎನ್ ಡಿಎ ಮೈತ್ರಿಕೂಟ ಮತ್ತು ಮಹಾಘಟಬಂಧನ ಮೈತ್ರಿಕೂಟದ ನಡುವಿನ ಅಂತರ ಹೆಚ್ಚೇನೂ ಇಲ್ಲ. 243 ಒಟ್ಟು ಸದಸ್ಯಬಲದ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 122 ಸ್ಥಾನಗಳ ಸರಳ ಬಹುಮತ ಬೇಕಿದೆ. ಆದರೆ, ರಾತ್ರಿ 9 ರ ಸುಮಾರಿನ ಮಾಹಿತಿ ಪ್ರಕಾರ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ 125 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದರೆ, ಆರ್ ಜೆಡಿ ನೇತೃತ್ವದ ಮಹಾಘಟಬಂಧನ 111 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಶೇಷವೆಂದರೆ; ಎನ್ ಡಿಎ ಯ ಗಳಿಕೆಯಲ್ಲಿ ಬಿಜೆಪಿ ಪಾಲು ದೊಡ್ಡದಿದ್ದರೆ, ಮುಖ್ಯಮಂತ್ರಿ ನಿತೀಶ್ ಅವರ ಜೆಡಿಯು ಪಾಲು ಗಣನೀಯವಾಗಿ ಕುಗ್ಗಿದೆ. ಅದೇ ಹೊತ್ತಿಗೆ ಪ್ರತಿಪಕ್ಷ ಮೈತ್ರಿಯಲ್ಲಿ ಆರ್ ಜೆಡಿ ಪಾಲು ದೊಡ್ಡದಿದ್ದು, ಅತಿ ದೊಡ್ಡ ಪಕ್ಷಕ್ಕಾಗಿನ ಸ್ಪರ್ಧೆಯಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ಒಡ್ಡಿದೆ. ಈ ನಡುವೆ, ಚುನಾವಣಾ ಕಣದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲಿದೆ ಎಂಬ ನಿರೀಕ್ಷೆ ಹುಟ್ಟಿಸಿದ್ದ ಎನ್ ಡಿಎ ಬಂಡಾಯಗಾರ ಎಲ್ ಜೆಪಿ ಒಂದು ಕ್ಷೇತ್ರದಲ್ಲಿಯೂ ಮುನ್ನಡೆ ಕಾಯ್ದುಕೊಂಡಿಲ್ಲ. ಆದರೆ, ಸುಮಾರು ಮೂವತ್ತಕ್ಕು ಹೆಚ್ಚು ಕ್ಷೇತ್ರಗಳಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಗೆಲುವಿಗೆ ಬ್ರೇಕ್ ಹಾಕುವಲ್ಲಿ ಎಲ್ ಜೆಪಿ ಯಶಸ್ವಿಯಾಗಿದೆ. ಆ ಮೂಲಕ ಚುನಾವಣಾ ಪೂರ್ವ ವಿಶ್ಲೇಷಣೆಗಳಂತೆ, ಎಲ್ ಜೆಪಿ ಸ್ವತಃ ತಾನು ಜಯ ಸಾಧಿಸದೇ ಹೋದರೂ, ಜೆಡಿಯು ಪಾಲಿಗೆ ಆತ್ಮಹತ್ಯಾದಳವಾಗಿ ಕೆಲಸ ಮಾಡಲಿದೆ ಎಂಬುದು ನಿಜವಾಗಿದೆ.

ಪರಿಣಾಮವಾಗಿ 2015ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ, ಜೆಡಿಯು 30ಕ್ಕು ಹೆಚ್ಚು ಸ್ಥಾನಗಳಷ್ಟು ನಷ್ಟ ಅನುಭವಿಸಿದ್ದು, ಕೇವಲ 43 ಸ್ಥಾನಗಳಲ್ಲಿ ಮುನ್ನಡೆ ಮತ್ತು ಜಯ ಕಾಯ್ದುಕೊಂಡಿದೆ. ಬಿಜೆಪಿ ಸರಿ ಸುಮಾರು ಅಷ್ಟೇ ಸ್ಥಾನಗಳ ಗಳಿಕೆ ಮಾಡಿಕೊಂಡಿದೆ. ಸುಮಾರು 72 ಸ್ಥಾನಗಳಲ್ಲಿ ಜಯ/ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನದ ಆರ್ ಜೆಡಿ 76 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 19, ಸಿಪಿಐಎಂಎಲ್ 12, ಸಿಪಿಐ ಮತ್ತು ಸಿಪಿಐ ತಲಾ ಮೂರು ಸ್ಥಾನಗಳಲ್ಲಿ ಮುನ್ನಡೆ/ ಜಯ ಕಾಯ್ದುಕೊಂಡಿವೆ. ಫಲಿತಾಂಶ ಪ್ರಕಟವಾಗಿರುವ 74 ಕ್ಷೇತ್ರಗಳ ಪೈಕಿ ಬಿಜೆಪಿ 22, ಆರ್ ಜೆಡಿ 20, ಜೆಡಿಯು 13, ಕಾಂಗ್ರೆಸ್ 7, ಸಿಪಿಐಎಂಎಲ್ 5 ಮತ್ತು ವಿಕಾಸ್ ಶೀಲ ಪಾರ್ಟಿ 2 ಸ್ಥಾನ ಗೆದ್ದುಕೊಂಡಿವೆ.

ಬಹಳ ಕುತೂಹಲಕಾರಿ ಸಂಗತಿ ಎಂದರೆ; ಎಲ್ ಜೆಪಿ ನಿರೀಕ್ಷೆಯಂತೆ ಜೆಡಿಯು ಮತ ಕಬಳಿಸುವ ಮೂಲಕ, ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಚುನಾವಣಾ ರ್ಯಾಲಿಗಳಲ್ಲಿ ಘೋಷಿಸಿದಂತೆ ನಿತೀಶ್ ಕುಮಾರ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅದೇ ಹೊತ್ತಿಗೆ ಪ್ರತಿಪಕ್ಷ ಪಾಳೆಯದಲ್ಲಿ ಕಾಂಗ್ರೆಸ್ ಮತ ಕಬಳಿಸುವ ಮೂಲಕ ಅಸಾದುದ್ದೀನ್ ಒವೈಸಿ ಅವರ ಎಐಐಎಂ ವಿಧ್ವಂಸಕನಾಗಿ ವರ್ತಿಸಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಈ ನಡುವೆ, ಬಹಳ ಮುಖ್ಯವಾಗಿ ಒಂದು ವೇಳೆ ಎನ್ ಡಿಎ ಮೈತ್ರಿಕೂಟವೇ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಈ ಮೊದಲು ಬಿಜೆಪಿ ಘೋಷಿಸಿದಂತೆ ನಿತೀಶ್ ಕುಮಾರ್ ಅವರೇ ಮುಂದುವರಿಯುತ್ತಾರೆಯೇ? ಅಥವಾ ನಿತೀಶ್ ಅವರ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಸರ್ಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿಯಲಿದೆಯೇ ಎಂಬುದು ಬಹುಚರ್ಚಿತ ಸಂಗತಿಯಾಗಿದೆ.

ಈ ನಡುವೆ, ಮತ ಎಣಿಕೆಯ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿದ್ದು ಹಲವು ಕ್ಷೇತ್ರಗಳಲ್ಲಿ ಮತ ಎಣಿಕೆಯನ್ನು ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ. 111ಕ್ಕು ಹೆಚ್ಚು ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಗೆಲುವು ಪಡೆದಿದ್ದರೂ ಆಯೋಗ ಅಧಿಕೃತ ಘೋಷಣೆ ಮಾಡದೆ ಸತಾಯಿಸುತ್ತಿದೆ. ಆಯೋಗದ ಈ ನಡವಳಿಕೆಯ ಹಿಂದೆ ಅನುಮಾನಗಳಿದ್ದು, ಬಿಜೆಪಿಯ ಆಣತಿಯ ಮೇರೆಗೆ ಆಯೋಗ ಫಲಿತಾಂಶವನ್ನು ತಿರುಚುವ ಹುನ್ನಾರಗಳು ನಡೆಯುತ್ತಿವೆ ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಕೂಡ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಜನಾದೇಶವನ್ನು ಇವಿಎಂ ಮತ್ತು ಮತ ಎಣಿಕೆಯ ದುರುಪಯೋಗದ ಮೂಲಕ ತಿರುಚುವ ಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.

ಈ ನಡುವೆ ಸುಮಾರು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಹಾಮೈತ್ರಿ ಮತ್ತು ಎನ್ ಡಿಎ ಅಭ್ಯರ್ಥಿಗಳ ನಡುವಿನ ಹಣಾಹಣಿ ತೀವ್ರವಾಗಿದ್ದು, ಕೇವಲ ಐದು ಸಾವಿರಕ್ಕೂ ಕಡಿಮೆ ಮತಗಳ ಅಂತರದ ಪ್ರತಿಸ್ಪರ್ಧೆ ಕಾಣಿಸಿಕೊಂಡಿದೆ. ಹಾಗಾಗಿ ತಡರಾತ್ರಿಯ ಹೊತ್ತಿಗೆ ಯಾವುದೇ ಕ್ಷಣದಲ್ಲಿ ಎರಡೂ ಮೈತ್ರಿಯ ನಡುವಿನ ಸ್ಥಾನ ಗಳಿಕೆಯ ಅಂತರ ತಿರುವು ಮುರುವು ಆಗುವ ಸಾಧ್ಯತೆ ಹೆಚ್ಚಿದ್ದು, ಕೊನೇ ಕ್ಷಣದ ವರೆಗೆ ಬಿಹಾರದ ಅಧಿಕಾರದ ಗದ್ದುಗೆಯ ವಾರಸುದಾರರ ಯಾರು ಎಂಬುದನ್ನು ನಿಖರವಾಗಿ ಊಹಿಸಲಾಗದ ಅತಂತ್ರ ಸ್‍ಥಿತಿ ಇದೆ. ಅಲ್ಲದೆ, ಫಲಿತಾಂಶ ಕೂಡ ಅಂತಿಮವಾಗಿ ಅತಂತ್ರ ವಿಧಾನಸಭೆಗೆ ಕಾರಣವಾಗುವ ಸಾಧ್ಯತೆಗಳನ್ನು ಕೂಡ ತಳ್ಳಿಹಾಕಲಾಗದು. ಆ ಹಿನ್ನೆಲೆಯಲ್ಲಿ ಬಿಜೆಪಿಯ ಅಧಿಕಾರ ಬಲ ಮತ್ತು ಹಣ ಬಲ ಬಿಹಾರದಲ್ಲಿ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆದು ಕರ್ನಾಟಕ, ಮಧ್ಯಪ್ರದೇಶ, ಗೋವಾದ ಮುಂತಾದ ಕಡೆ ನಡೆದ ಆಪರೇಷನ್ ಕಮಲ ಪ್ರಹಸನಗಳೇ ಬಿಹಾರದಲ್ಲೂ ಮರುಕಳಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com