ಬಿಜೆಪಿಯಲ್ಲಿ ಮತ್ತೆ ಬಿರುಸಾಯಿತು ನಾಯಕತ್ವ ಬದಲಾವಣೆ ಕೂಗು!

ಸದ್ಯ ಎಲ್ಲರ ಕಣ್ಣು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಮೇಲಿದೆ. ಆ ಫಲಿತಾಂಶ ನೂರಕ್ಕೆ ನೂರು ಯಡಿಯೂರಪ್ಪ ಪರ ಬಂದರೆ, ಸದ್ಯ ಯಡಿಯೂರಪ್ಪ ಬೀಸುವ ದೊಣ್ಣೆಯಿಂದ ಪಾರಾಗಲಿದ್ದಾರೆ. 50-50 ಫಲಿತಾಂಶ ಬಂದರೂ ಅವರ ಕುರ್ಚಿಗೆ ಸಂಚಕಾರ ಬರುವ ಎಲ್ಲಾ ಸಾಧ್ಯತೆಗಳಿವೆ
ಬಿಜೆಪಿಯಲ್ಲಿ ಮತ್ತೆ ಬಿರುಸಾಯಿತು ನಾಯಕತ್ವ ಬದಲಾವಣೆ ಕೂಗು!

ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆ ಮುಗಿದಿದೆ. ಚುನಾವಣೆಯ ನಡುವೆಯೂ ಸಾಕಷ್ಟು ಚರ್ಚೆಯಾಗಿದ್ದ ರಾಜ್ಯ ನಾಯಕತ್ವ ಬದಲಾವಣೆಯ ವಿಷಯ ಇದೀಗ ಸಹಜವಾಗೇ ಮತ್ತೆ ಮುಂಚೂಣಿಗೆಗೆ ಬಂದಿದೆ.

ಒಂದು ಕಡೆ ಚುನಾವಣೆಯ ಮತದಾನದ ತಯಾರಿಗಳು ನಡೆಯುತ್ತಿರುವಾಗಲೇ ಮತ್ತೊಂದು ಕಡೆ ನಾಯಕತ್ವ ಬದಲಾವಣೆಯ ರಹಸ್ಯ ಮಾತುಕತೆಗಳೂ, ಸಭೆಗಳೂ ನಡೆಯುತ್ತಿದ್ದವು. ಸಿಎಂ ಯಡಿಯೂರಪ್ಪ ಅವರ ಸಮುದಾಯದ ನಾಯಕರು ಮತ್ತು ಹಿರಿಯರೇ ನಾಯಕತ್ವ ಬದಲಾವಣೆಯ ಬಗ್ಗೆ ಖಚಿತಪಡಿಸಿಕೊಂಡವರಂತೆ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಸಮುದಾಯದಿಂದ ಮುಂದಿನ ಸಿಎಂ ಯಾರಾಗಬಹುದು ಮತ್ತು ಬಿಜೆಪಿ ಹೈಕಮಾಂಡ್ ಎಂಥವರನ್ನು ಸಿಎಂ ಸ್ಥಾನಕ್ಕೆ ಕೂರಿಸಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಿದ ವರದಿಗಳಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ ಮಾಜಿ ಸಿಎಂ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬುಧವಾರ ಮೈಸೂರಿನಲ್ಲಿ ಮಾತನಾಡಿ, ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸಿಎಂ ಯಡಿಯೂರಪ್ಪ ಕುರ್ಚಿಯಿಂದ ಇಳಿಯುತ್ತಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಶತಸಿದ್ಧ. ಸಿಎಂ ಆಗಿ ಯಡಿಯೂರಪ್ಪ ಮುಂದುವರಿಯುವುದಿಲ್ಲ. ಇದು ನನಗೆ ದೆಹಲಿಯಿಂದಲೇ ಸಿಕ್ಕ ಮಾಹಿತಿ ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿ ನಾಯಕತ್ವ ಬದಲಾವಣೆಯ ಕುರಿತ ಮತ್ತೊಂದು ಸುತ್ತಿನ ರಾಜಕೀಯ ಚರ್ಚೆಗೆ ಮಾಜಿ ಸಿಎಂ ಚಾಲನೆ ನೀಡಿದ್ದಾರೆ.

ಬಿಜೆಪಿಯಲ್ಲಿ ಮತ್ತೆ ಬಿರುಸಾಯಿತು ನಾಯಕತ್ವ ಬದಲಾವಣೆ ಕೂಗು!
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಖಚಿತ – ಸಿದ್ದರಾಮಯ್ಯ

ಅಲ್ಲದೆ ಬಿಜೆಪಿಯಲ್ಲಿಯೇ ಇರುವ ಯಡಿಯೂರಪ್ಪ ವಿರೋಧಿ ಬಣ ಕೂಡ ಚುನಾವಣೆ ಮುಗಿಯುತ್ತಿದ್ದಂತೆ ನಾಯಕತ್ವ ಬದಲಾವಣೆಯ ತನ್ನ ತಂತ್ರಗಾರಿಕೆಗೆ ಮತ್ತೆ ಚಾಲನೆ ನೀಡಿದೆ. ಆ ಹಿನ್ನೆಲೆಯಲ್ಲಿಯೇ ಹುಬ್ಬಳ್ಳಿಯಲ್ಲಿ ಕಳೆದ ವಾರ ಬಿಜೆಪಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಬಹುತೇಕ ಉತ್ತರಕರ್ನಾಟಕದ ನಾಯಕರುಗಳೆಲ್ಲರೂ ಭಾಗವಹಿಸಿದ್ದರು. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ನಡೆದಿದೆ ಎಂದು ಹೇಳಿದರೂ, ವಾಸ್ತವವಾಗಿ ಅದು ಯಡಿಯೂರಪ್ಪ ನಾಯಕತ್ವ ಬದಲಾವಣೆಯಾದಲ್ಲಿ ಪರ್ಯಾಯ ಆಯ್ಕೆಗಳೇನು? ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ಉತ್ತರಕರ್ನಾಟಕ ಭಾಗದಲ್ಲಿ ಅದರಿಂದಾಗಿ ಪಕ್ಷದ ಮೇಲಾಗುವ ಪರಿಣಾಮಗಳೇನು ಎಂಬ ಬಗ್ಗೆಯೇ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವ ವಹಿಸಿದ್ದರು. ಬೆಳಗಾಗಿ ಲೋಕಸಭಾ ಉಪ ಚುನಾವಣೆಯ ವಿಷಯ ಕೂಡ ಆ ಸಭೆಯಲ್ಲಿ ಚರ್ಚೆಗೆ ಬಂದಿದೆ ಎನ್ನಲಾಗಿದೆ.

ಈ ನಡುವೆ ಮತ್ತೊಂದು ಬೆಳವಣಿಗೆಯಲ್ಲಿ ಬೆಂಗಳೂರಿನಲ್ಲಿ ಹೈಕೋರ್ಟ್ ನಿವೃತ್ತು ನ್ಯಾಯಮೂರ್ತಿ ಅಶೋಕ ಬಿ ಹಿಂಚಿಗೇರಿ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಮುಖಂಡರು ಮತ್ತು ಪ್ರಮುಖರ ಸಭೆ ನಡೆದಿದ್ದು, ಸರ್ವಭೂಷಣ ಮಠದ ಮಲ್ಲಿಕಾರ್ಜುನ ದೇವರು ಸ್ವಾಮೀಜಿ ಕೂಡ ಆ ಸಭೆಯಲ್ಲಿದ್ದರು. ಪ್ರಮುಖವಾಗಿ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಬದಲಾಯಿಸಿದಲ್ಲಿ, ಅವರ ಸ್ಥಾನಕ್ಕೆ ಮತ್ತೊಬ್ಬ ಪ್ರಭಾವಿ ಲಿಂಗಾಯತ ನಾಯಕರಾಗಿ ಯಾರನ್ನು ಸೂಚಿಸುವುದು ಮತ್ತು ಯಾರ ಪರವಾಗಿ ಸಮಾಜ ಬಿಜೆಪಿ ದೆಹಲಿ ನಾಯಕರ ಮಟ್ಟದಲ್ಲಿ ಲಾಬಿ ಮಾಡುವುದು ಎಂಬ ಬಗ್ಗೆಯೇ ಚರ್ಚಿಸಲಾಗಿದೆ ಎನ್ನಲಾಗಿದೆ.

ಯಡಿಯೂರಪ್ಪ ತಮ್ಮ ಸ್ವಂತ ಕುಟುಂಬದ ಸ್ವಾರ್ಥಕ್ಕಾಗಿ ಸಮಾಜದ ಹೆಸರನ್ನು ಬಳಸಿಕೊಂಡು ಬಲಿಕೊಡುತ್ತಿದ್ದಾರೆ. ಅವರ ಪುತ್ರರ ವ್ಯಾಪಕ ಭ್ರಷ್ಟಾಚಾರವೇ ಅವರಿಗೆ ಮುಳುವಾಗಿದೆ. ಹಾಗಾಗಿ ಸಮುದಾಯ ಸಿಎಂ ಸ್ಥಾನವನ್ನು ಕಳೆದುಕೊಳ್ಳಬಹುದು. ಆಗ ಮತ್ತೊಬ್ಬ ಸಮಾಜದ ಗಟ್ಟಿ ನಾಯಕರಾಗಿ ಯಾರನ್ನು ಸೂಚಿಸುವುದು ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಲಿಂಗಾಯತ ಸಮನ್ವಯ ವೇದಿಕೆ ಹೆಸರಿನಲ್ಲಿ ನಡೆದ ಈ ಸಭೆಯಲ್ಲಿ ಸದ್ಯ ಬಿಜೆಪಿಯ ಯಡಿಯೂರಪ್ಪ ವಿರೋಧಿ ಬಣದ ದನಿಯಾಗಿರುವ ಯತ್ನಾಳ್ ಹೇಳಿಕೆಯ ಬಗ್ಗೆಯೂ ಮಾತುಕತೆ ನಡೆಯಿತು. ಬಹುತೇಕ ಮಂದಿ ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಂಡರು ಎಂದೂ ವರದಿಯಾಗಿದೆ.

ಈ ನಡುವೆ ಸ್ವತಃ ಯತ್ನಾಳ್ ಕೂಡ ಕಳೆದ ವಾರ ವಿಜಯಪುರದಲ್ಲಿ ಮಾತನಾಡಿ, ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎನ್ನಲಾಗದು ಎಂಬ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಜೊತೆಗೆ, ನಾನು ಸಿಎಂ ಆಗಬೇಕೆಂಬ ಆಸೆ ನನಗಿಲ್ಲ. ಆದರೆ, ಮೋದಿ ಮನಸ್ಸು ಮಾಡಿದರೆ ಏನೂ ಆಗಬಹುದು ಎಂದು ಹೇಳುವ ಮೂಲಕ ಮತ್ತೊಂದು ಬಗೆಯ ವಿಶ್ಲೇಷಣೆಗೆ ಚಾಲನೆ ನೀಡಿದ್ದಾರೆ.

ಒಂದು ಕಡೆ ಇಂತಹ ಹೇಳಿಕೆಗಳು, ಸಭೆಗಳು ಸಿಎಂ ಯಡಿಯೂರಪ್ಪ ಕುರ್ಚಿಯ ಭವಿಷ್ಯದ ಬಗ್ಗೆ ಅನುಮಾನ ಹುಟ್ಟಿಸುತ್ತಿದ್ದರೆ, ಮತ್ತೊಂದು ಕಡೆ ಯಡಿಯೂರಪ್ಪ ವಿರುದ್ಧದ ಹಿಂದಿನ ಭ್ರಷ್ಟಾಚಾರ ಮತ್ತು ಭೂ ಅಕ್ರಮ ಪ್ರಕರಣಗಳ ಜೊತೆ ಇದೀಗ ಅವರ ಪುತ್ರ ವಿಜಯೇಂದ್ರ ಅವರ ಕೇಳಿಬರುತ್ತಿರುವ ವ್ಯಾಪಕ ಭ್ರಷ್ಟಾಚಾರ ಆರೋಪಗಳ ಕುರಿತು ಹೈಕಮಾಂಡ್ ಮಾಹಿತಿ ಪಡೆದಿದ್ದು, ಅದೇ ಪ್ರಕರಣಗಳನ್ನೇ ದಾಳವಾಗಿಸಿಕೊಂಡು ನಾಯಕತ್ವ ಬದಲಾವಣೆಯ ನಿರ್ಧಾರ ಮಾಡಬಹುದು ಎಂದೂ ಹೇಳಲಾಗುತ್ತಿದೆ. ಜೊತೆಗೆ 75 ವರ್ಷ ವಯೋಮಿತಿಯ ಅಸ್ತ್ರವೂ ಹೈಕಮಾಂಡ್ ಕೈಯಲ್ಲಿದೆ. ಮನಸ್ಸು ಮಾಡಿದರೂ ಯಾವ ಅಸ್ತ್ರವನ್ನಾದರೂ ಪ್ರಯೋಗಿಸಿ ಸಕಾರಣ ನೀಡಿಯೇ ನಾಯಕತ್ವ ಬದಲಾವಣೆಗೆ ಹಸಿರು ನಿಶಾನೆ ತೋರಬಹುದು.

ಹಾಗಾಗಿ ಶಿರಾ ಮತ್ತು ಆರ್ ಆರ್ ನಗರ ಉಪಚುನಾವಣೆಯ ಫಲಿತಾಂಶವನ್ನು ಎಲ್ಲರೂ ಎದುರು ನೋಡುತ್ತಿದ್ದು, ಅಲ್ಲಿನ ಅಭ್ಯರ್ಥಿಗಳ ಹಣೇಬರಹದ ಜೊತೆಗೆ ಅದು ರಾಜ್ಯದ ಸಿಎಂ ಅವರ ಅಧಿಕಾರದ ಗ್ರಹಗತಿಯನ್ನೂ ನಿರ್ಧರಿಸಲಿದೆ. ಆ ಹಿನ್ನೆಲೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಮತ್ತು ಸಿಎಂ ಬೆಂಬಲಿಗ ನಾಯಕರು ಈ ಎರಡು ಕ್ಷೇತ್ರಗಳ ಚುನಾವಣೆಯನ್ನು ಉಳಿವು-ಗೆಲುವಿನ ಪ್ರಶ್ನೆಯಾಗಿ ತೆಗೆದುಕೊಂಡು ಗೆಲ್ಲಲು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದಾರೆ. ಅವರ ನಿರೀಕ್ಷೆಯ ಪ್ರಕಾರ ಶಿರಾದಲ್ಲಿ ಗೆಲುವು ಬಹುತೇಕ ನಿಶ್ಚಿತ. ಆರ್ ಆರ್ ನಗರದಲ್ಲಿ ಅರ್ಧಕ್ಕರ್ಧ ಎಂದು ವಿಶ್ಲೇಷಣೆಗಳು ಹೇಳುತ್ತಿವೆ.

ಆ ಹಿನ್ನೆಲೆಯಲ್ಲಿ ಸದ್ಯ ಎಲ್ಲರ ಕಣ್ಣು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಮೇಲಿದೆ. ಆ ಫಲಿತಾಂಶ ನೂರಕ್ಕೆ ನೂರು ಯಡಿಯೂರಪ್ಪ ಪರ ಬಂದರೆ, ಸದ್ಯ ಯಡಿಯೂರಪ್ಪ ಬೀಸುವ ದೊಣ್ಣೆಯಿಂದ ಪಾರಾಗಲಿದ್ದಾರೆ. ಫಿಫ್ಟಿ- ಫಿಫ್ಟಿ ಫಲಿತಾಂಶ ಬಂದರೂ ಅವರ ಕುರ್ಚಿಗೆ ಸಂಚಕಾರ ಬರುವ ಎಲ್ಲಾ ಸಾಧ್ಯತೆಗಳಿವೆ ಎಂಬುದು ಬಿಜೆಪಿಯ ಆಂತರಿಕ ಚರ್ಚೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com