ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

ವಲಸೆ ಕಾರ್ಮಿಕರ ಸಂಕಷ್ಟ, ನಿರುದ್ಯೋಗ, ಬಡತನ ಮತ್ತು ಅವುಗಳನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ನಾಯಕರ ಪೊಳ್ಳು ಭರವಸೆಗಳ ನಡುವೆಯೂ ಈ ಬಾರಿ ಬಿಹಾರದಲ್ಲಿ ಬದಲಾವಣೆಯ ಬಿರುಗಾಳಿ ಬೀಸುವ ಸೂಚನೆಗಳು ಕಾಣಿಸುತ್ತಿವೆ. ಆ ಸೂಚನೆ ಎಷ್ಟರಮಟ್ಟಿಗೆ ನಿಖರ ಮತ್ತು ಎಷ್ಟರಮಟ್ಟಿಗೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅನಿರೀಕ್ಷಿತ ಎಂಬುದನ್ನು ಕಾದುನೋಡಬೇಕಷ್ಟೆ!
ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ವಾರ ಉಳಿದಿದೆ. ಚುನಾವಣಾ ಕಣ ಕಾವೇರಿರುವ ಈ ಹೊತ್ತಿನಲ್ಲಿ ಭಾರೀ ಭರವಸೆಗಳ ಮಹಾಪೂರವೇ ಹರಿಯುತ್ತಿದೆ.

ಮುಖ್ಯವಾಗಿ ಬಡತನ, ನಿರುದ್ಯೋಗ ಮತ್ತು ಶಿಕ್ಷಣದ ವಿಷಯದಲ್ಲಿ ದೇಶದಲ್ಲಿಯೇ ತೀರಾ ಶೋಚನೀಯ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಸದ್ಯ ಚುನಾವಣಾ ಕಣದಲ್ಲಿ ಸದ್ದು ಮಾಡುತ್ತಿರುವ ಆಡಳಿತರೂಢ ಬಿಜೆಪಿ-ಜೆಡಿಯು ಎನ್ ಡಿಎ ಮೈತ್ರಿ, ಕಾಂಗ್ರೆಸ್- ಆರ್ ಜೆಡಿಯ ಮಹಾಮೈತ್ರಿ ಮತ್ತು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ ಜೆಪಿ ಸೇರಿದಂತೆ ಮೂರೂ ಪ್ರಮುಖ ರಾಜಕೀಯ ಶಕ್ತಿಗಳೂ ಉದ್ಯೋಗ ಮತ್ತು ಅಭಿವೃದ್ಧಿಯ ವಿಷಯವನ್ನು ಮುಂದಿಟ್ಟುಕೊಂಡು ಭಾರೀ ಭರವಸೆಗಳ ಹೊಳೆ ಹರಿಸುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾಂಗ್ರೆಸ್ ಮತ್ತು ಆರ್ ಜೆಡಿ ಮೈತ್ರಿಕೂಟವಂತೂ ಲಾಕ್ ಡೌನ್ ಅವಧಿಯ ಬಿಹಾರಿ ಕಾರ್ಮಿಕರ ಮಹಾವಲಸೆ ಮತ್ತು ಸಾವು ನೋವಿನ ವಿವರಗಳನ್ನೇ ಮುಂದಿಟ್ಟುಕೊಂಡು ಆಡಳಿತರೂಢ ಬಿಜೆಪಿ ಮತ್ತು ಜೆಡಿಯು ವಿರುದ್ಧ ಮತ್ತು ಮೋದಿ ಹಾಗೂ ನಿತೀಶ್ ಕುಮಾರ್ ವೈಫಲ್ಯಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗೆ ಕಾವು ಕೊಟ್ಟಿವೆ. ಆ ಹಿನ್ನೆಲೆಯಲ್ಲಿಯೇ ಆರ್ ಜೆಡಿ ನಾಯಕ ತೇಜಸ್ವಿ ಯಾದವ್, 15 ವರ್ಷಗಳ ಆಡಳಿತದಲ್ಲಿ ನಿತೀಶ್ ಕುಮಾರ್ ಅವರು ಬಿಹಾರಿಗಳಿಗೆ ಉದ್ಯೋಗ ಕೊಟ್ಟಿದ್ದರೆ ಲಾಕ್ ಡೌನ್ ಅವಧಿಯಲ್ಲಿ ಬರೋಬ್ಬರಿ 30 ಲಕ್ಷ ಮಂದಿ ಬಿಹಾರಿಗಳು ಯಾಕೆ ಹಾದಿ ಬೀದಿ ಹೆಣವಾಗಿ ಪಡಬಾರದ ಪಾಡುಪಟ್ಟು ತಾಯ್ನೆಲಕ್ಕೆ ಬರಿಗಾಲಿನ ಪಯಣ ಬೆಳೆಸಿದರು? ಎಂಬ ಸವಾಲು ಎಸೆದಿದ್ದಾರೆ.

15 ವರ್ಷಗಳ ನಿತೀಶ್ ಕುಮಾರ್ ಆಡಳಿತಕ್ಕೆ ಕಳೆದ ಆರು ತಿಂಗಳ ಲಾಕ್ ಡೌನ್ ಮತ್ತು ಕರೋನಾ ಸಂಕಷ್ಟ ಒಂದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ ಸಾಕ್ಷಿಯಾಗಿ ಕಣ್ಣೆದುರಿಗಿದೆ. ಹಾಗಾಗಿ ಬಿಹಾರದ ಜನಸಾಮಾನ್ಯರು ಈ ಬಾರಿ ಹಿಂದೆಂದಿಗಿಂತ ನಿತೀಶ್ ಆಡಳಿತದ ವಿಷಯದಲ್ಲಿ ಭ್ರಮನಿರಸನಗೊಂಡಿದ್ದಾರೆ. ಜೊತೆಗೆ ಮೋದಿಯವರ ನೀತಿಗಳು ಮತ್ತು ತಪ್ಪು ನಿರ್ಧಾರಗಳಿಂದ ನೊಂದ ಮತದಾರ ಕೂಡ ಆಕ್ರೋಶಗೊಂಡಿದ್ದಾನೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ನಿತೀಶ್ ಅವರಿಗೆ ಸರಣಿ ಸವಾಲುಗಳನ್ನು ಎಸೆಯುತ್ತಿದ್ದಾರೆ. 15 ವರ್ಷಗಳ ನಿಮ್ಮ ಅವಧಿಯ ಬಿಹಾರದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ನಿಮ್ಮ ಸಾಧನೆ ಏನು? ಎಂದು ಸರಣಿ ಸವಾಲುಗಳನ್ನು ಹಾಕುತ್ತಿದ್ದಾರೆ.

ಬುಧವಾರ ಕೂಡ ಇಂತಹದ್ದೇ ಹೊಸ ಸವಾಲು ಎಸೆದಿದ್ದು, ನಿಮ್ಮ ಹದಿನೈದು ವರ್ಷಗಳ ಯಾವುದಾದರೂ ಒಂದು ಸಾಧನೆ ಇದ್ದರೆ ಹೇಳಿ, ಆ ಬಗ್ಗೆಯೂ ಬಹಿರಂಗ ಚರ್ಚೆಗೆ ಸಿದ್ಧ. ಮುಖ್ಯಮಂತ್ರಿ ಅಭ್ಯರ್ಥಿಗಳ ಚುನಾವಣಾ ವಾಗ್ವಾದ ಎಂಬ ಹೊಸ ಪರಂಪರೆ ಬಿಹಾರದಿಂದಲೇ ಆರಂಭವಾಗಲಿ ಎಂದಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳ ಭರವಸೆಗಳು, ನೀತಿ-ನಿಲುವುಗಳ ಕುರಿತ ಸಾರ್ವಜನಿಕ ವಾಗ್ವಾದದ ಮೂಲಕವೇ ಅವರು ತಮ್ಮ ಭವಿಷ್ಯದ ಸರ್ಕಾರದ ಆದ್ಯತೆಗಳನ್ನು ಪ್ರಕಟಿಸುತ್ತಾರೆ. ಆ ಚರ್ಚೆಯ ಆಧಾರದ ಮೇಲೆಯೇ ಜನ ಮತ ಚಲಾಯಿಸುತ್ತಾರೆ. ಅದೇ ಮಾದರಿ ಬಿಹಾರದಲ್ಲಿ ಈ ಚುನಾವಣೆಯಿಂದಲೇ ಪ್ರಾರಂಭವಾಗಲಿ ಎಂದು ಯಾದವ್ ಸವಾಲು ಹಾಕಿದ್ದಾರೆ.

ಆದರೆ, ತೇಜಸ್ವಿ ಯಾದವ್ ಅವರ ಈ ಬಹಿರಂಗ ಚರ್ಚೆಯ ಸವಾಲಿಗೆ ಸಿಎಂ ನಿತೀಶ್ ಕುಮಾರ್ ಅವರಾಗಲೀ, ಅವರ ಪಕ್ಷದ ಪ್ರಮುಖರಾಗಲೀ ಈವರೆಗೆ ಪ್ರತಿಕ್ರಿಯಿಸಿಲ್ಲ. ಬದಲಾಗಿ ಬಿಜೆಪಿಯ ನಾಯಕ ಮತ್ತು ಕೇಂದ್ರ ಸಚಿವ ನಿತ್ಯಾನಂದ ರಾಯ್ ಪ್ರತಿಕ್ರಿಯಿಸಿದ್ದು, ನಿತೀಶ್ ಕುಮಾರ್ ಅವರು ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದ ಒತ್ತಡದಲ್ಲಿರುವುದರಿಂದ ತಾವು ಯಾದವ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿದ್ದಾರೆ.

ಈ ನಡುವೆ ಕಳೆದ ನಾಲ್ಕೈದು ದಿನಗಳಿಂದ ಚುನಾವಣಾ ಕಣದಲ್ಲಿ ತೇಜಸ್ವಿ ಯಾದವ್ ಅವರ ಈ ಸವಾಲುಗಳು ಸಾಮಾಜಿಕ ಜಾಲತಾಣ ಮತ್ತು ಕಟ್ಟೆ ಮಾತುಕತೆಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡತೊಡಗಿದ್ದು, ಯಾದವ್ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಅನಿರೀಕ್ಷಿತ ಜನಜಂಗುಳಿ ಹೆಚ್ಚತೊಡಗಿದೆ. ತೇಜಸ್ವಿ ಯಾದವ್ ರ್ಯಾಲಿಗಳಿಗೆ ದೊಡ್ಡಮಟ್ಟದ ಜನ ಸಮೂಹ ನೆರೆಯುತ್ತಿರುವುದು ಎನ್ ಡಿಎ ಬಣದಲ್ಲಿ ಸಂಚಲನ ಮೂಡಿಸಿದೆ ಎಂದು ವರದಿಗಳು ಹೇಳುತ್ತಿವೆ.

ಈ ನಡುವೆ ತಾವು ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕ ಯೋಜನೆಗಳಿಗೆ ಸಹಿ ಹಾಕುವುದಾಗಿ ತೇಜಸ್ವಿ ಯಾದವ್ ಹೇಳಿರುವುದು ಕೂಡ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಬಿಹಾರದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶಗಳೇ ಇಲ್ಲ. ರಾಜ್ಯದ ಸುತ್ತೆಲ್ಲಾ ಭೂಮಿಯೇ ಇದ್ದು, ಕರಾವಳಿ ಪ್ರದೇಶದ ನೇರ ಸಂಪರ್ಕವಿಲ್ಲದೇ ಇರುವುದರಿಂದ ಬಂಡವಾಳಶಾಹಿಗಳು ಮತ್ತು ಉದ್ಯಮಿಗಳಿ ಹೂಡಿಕೆಗೆ ಹಿಂಜರಿಯುತ್ತಿದ್ದಾರೆ ಎಂಬ ನಿತೀಶ್ ಕುಮಾರ್ ಅವರ ಈ ಹಿಂದಿನ ಹೇಳಿಕೆಯ ಹಿನ್ನೆಲೆಯಲ್ಲಿ ತೇಜಸ್ವಿಯವರ ಈ ಭಾರೀ ಭರವಸೆ ಎಷ್ಟರಮಟ್ಟಿಗೆ ನಿಜವಾಗಲಿದೆ ಎಂಬ ಚರ್ಚೆಯೂ ನಡೆಯುತ್ತಿದೆ.

ಕಾಂಗ್ರೆಸ್ ಅಂತೂ ತನ್ನ ಚುನಾವಣಾ ಪ್ರಚಾರದ ಪ್ರಮುಖ ತಂತ್ರವಾಗಿ ವಲಸೆ ಕಾರ್ಮಿಕ ಗೋಳು ಬಿಂಬಿಸುತ್ತಿದೆ. ವಲಸೆ ಕಾರ್ಮಿಕ ಮನಕಲಕುವ ಚಿತ್ರಗಳು, ಆ ಮಹಾ ವಲಸೆಯ ಕುರಿತ ಮಾಹಿತಿ-ವಿವರಗಳನ್ನೇ ಬಳಸಿಕೊಂಡು ತನ್ನ ಪ್ರಚಾರ ಸಾಮಗ್ರಿಗಳಲ್ಲಿ ಮತ್ತು ಆನ್ ಲೈನ್ ಪ್ರಚಾರದಲ್ಲಿ ಪ್ರಮುಖವಾಗಿ ನಿತೀಶ್ ಮತ್ತು ಮೋದಿ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ. ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಅಧಿಕಾರವಂಚಿತವಾಗಿರುವ ಕಾಂಗ್ರೆಸ್, ಆ ಮೂಲಕ ತನ್ನದು ಎಂಬ ಒಂದು ನಿರ್ದಿಷ್ಟ ಮತಬ್ಯಾಂಕ್ ಹೊಂದಲು ವಲಸೆ ಕಾರ್ಮಿಕರ ವಿಷಯವನ್ನು ಪ್ರಬಲವಾಗಿ ಪ್ರಸ್ತಾಪಿಸುತ್ತಿದೆ. ಆ ಮೂಲಕ ಜಾತಿ ಮತ್ತು ಮತವನ್ನು ಮೀರಿ ಬಡ ಕಾರ್ಮಿಕರನ್ನು ತನ್ನ ಕನಿಷ್ಟ ಖಾತರಿಯ ಮತಬ್ಯಾಂಕ್ ಮಾಡಿಕೊಳ್ಳುವ ಯತ್ನ ನಡೆಸಿದೆ. ಜೊತೆಗೆ ಈ ಬಾರಿ ಜೆಡಿಯುನಲ್ಲಿ ಯಾವುದೇ ಒಬ್ಬ ಮುಸ್ಲಿಮರಿಗೂ ಟಿಕೆಟ್ ನೀಡದೇ ಇರುವ ಹಿನ್ನೆಲೆಯಲ್ಲಿ ಮುಸ್ಲಿಮರು ತನ್ನ ಕಡೆ ವಾಲಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ.

ಈ ನಡುವೆ ಸಿಎಂ ನಿತೀಶ್ ಕುಮಾರ್ ಅವರು ನಿರುದ್ಯೋಗ ಮತ್ತು ಕಾರ್ಮಿಕರ ವಲಸೆಯ ವಿಷಯಗಳು ಚುನಾವಣಾ ಚರ್ಚೆಯ ಪ್ರಮುಖ ಭಾಗವಾಗುತ್ತಿರುವುದರಿಂದ ಮುಜಗರಕ್ಕೀಡಾಗುತ್ತಿದ್ದು, ಆ ವಾದಗಳಿಗೆ ಪ್ರತಿಯಾಗಿ ತಮ್ಮ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ಧಾರೆ. ಆದರೆ, ಮೋದಿಯವರು ಚುನಾವಣೆ 2015ರ ಚುನಾವಣೆ ಘೋಷಣೆಗೆ ಮುನ್ನ ಘೋಷಿಸಿದ್ದ 1.25 ಲಕ್ಷ ಕೋಟಿ ಪ್ಯಾಕೇಜ್ ಬಿಹಾರ ಪ್ಯಾಕೇಜ್ ಎಲ್ಲಿ ಎಂದು ಜನ ಕೇಳತೊಡಗಿದ್ದಾರೆ. ಇದೇ ವಿಷಯದಲ್ಲಿ ನಿತೀಶ್ ಕುಮಾರ್ ಅವರ ಸಾರ್ವಜನಿಕ ಪ್ರಚಾರ ಸಭೆಗಳಲ್ಲೂ ಗದ್ದಲಗಳು ನಡೆದ ಘಟನೆಗಳೂ ವರದಿಯಾಗಿವೆ. ಜೊತೆಗೆ ಕಳೆದ ಕೆಲವು ದಿನಗಳಿಂದ ನಿತೀಶ್ ಕುಮಾರ್ ಅವರ ರ್ಯಾಲಿಗಳಲ್ಲಿ ಅವರ ವಿರುದ್ಧದ ಘೋಷಣೆಗಳು, ಮೋದಿ ವಿರುದ್ಧದ ದಿಕ್ಕಾರಗಳು ಮತ್ತು ಜೆಡಿಯು ನಾಯಕರಿಗೆ ಪ್ರಚಾರಕ್ಕೆ ಅವಕಾಶ ನೀಡದೇ ಗ್ರಾಮಗಳಿಂದ ಹೊರಕಳಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ಈ ನಡುವೆ ಚಿರಾಗ್ ಪಾಸ್ವಾನ್ ಮತ್ತು ತೇಜಸ್ವಿ ಯಾದವ್ ನಡುವೆ ಅನಿರೀಕ್ಷಿತ ಸ್ನೇಹ ಕುದುರುತ್ತಿದೆ. ಈ ಮೊದಲೇ ಸಂದರ್ಭ ಬಂದರೆ ಚಿರಾಗ್ ಜೊತೆ ಕೈಜೋಡಿಸುವುದಾಗಿ ತೇಜಸ್ವಿ ಹೇಳಿದ್ದರೂ, ಇತ್ತೀಚಿನ ಮೂರ್ನಾಲ್ಕು ದಿನಗಳ ಬೆಳವಣಿಗೆಗಳು ಬೇರೆಯದೇ ಮಟ್ಟದ ಸ್ನೇಹಕ್ಕೆ ಸಾಕ್ಷಿಯಾಗಿವೆ. ಕೇಂದ್ರ ಮಟ್ಟದಲ್ಲಿ ತಾನಿನ್ನೂ ಎನ್ ಡಿಎ ಭಾಗವಾಗಿರುವುದಾಗಿ ಚಿರಾಗ್ ಹೇಳುತ್ತಿದ್ದರೂ, ಅವರ ಎಲ್ ಜೆಪಿ ಅಧ್ಯಕ್ಷ ಪ್ರಿನ್ಸ್ ರಾಜ್ ಅವರು ಮಂಗಳವಾರ ಆರ್ ಜೆಡಿ ನಾಯಕಿ ರಾಬ್ಡಿ ದೇವಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಹೊಸ ರಾಜಕೀಯ ಲೆಕ್ಕಾಚಾರದ ಸೂಚನೆ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹಾಗಾಗಿ ವಲಸೆ ಕಾರ್ಮಿಕರ ಸಂಕಷ್ಟ, ನಿರುದ್ಯೋಗ, ಬಡತನ ಮತ್ತು ಅವುಗಳನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ನಾಯಕರ ಪೊಳ್ಳು ಭರವಸೆಗಳ ನಡುವೆಯೂ ಈ ಬಾರಿ ಬಿಹಾರದಲ್ಲಿ ಬದಲಾವಣೆಯ ಬಿರುಗಾಳಿ ಬೀಸುವ ಸೂಚನೆಗಳು ಕಾಣಿಸುತ್ತಿವೆ. ಆ ಸೂಚನೆ ಎಷ್ಟರಮಟ್ಟಿಗೆ ನಿಖರ ಮತ್ತು ಎಷ್ಟರಮಟ್ಟಿಗೆ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅನಿರೀಕ್ಷಿತ ಎಂಬುದನ್ನು ಕಾದುನೋಡಬೇಕಷ್ಟೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com