ಭ್ರಷ್ಟಾಚಾರದ ಜಾಲ ಮತ್ತು ಪ್ರಾಮಾಣಿಕ ರಾಜಕಾರಣದ ನಡುವಿನ ಚುನಾವಣೆ: ಅರವಿಂದ ನಾಯ್ಕ್‌
ರಾಜಕೀಯ

ಭ್ರಷ್ಟಾಚಾರದ ಜಾಲ ಮತ್ತು ಪ್ರಾಮಾಣಿಕ ರಾಜಕಾರಣದ ನಡುವಿನ ಚುನಾವಣೆ: ಅರವಿಂದ ನಾಯ್ಕ್‌

ಪ್ರಮುಖ ಪಕ್ಷಗಳು ಭ್ರಷ್ಟರನ್ನೇ ಈ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಮುಂದೆ ಬಂದಿರುವುದು ನಿಜಕ್ಕೂ ಆತಂಕಕಾರಿ ಎಂದು ಅರವಿಂದ ನಾಯ್ಕ್‌ ಹೇಳಿದ್ದಾರೆ.

ಲಾಯ್ಡ್‌ ಡಾಯಸ್

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರಾಜಕೀಯ ಕಳೆಗಟ್ಟುತ್ತಿದೆ. ರಾಷ್ಟ್ರೀಯ ಪಕ್ಷಗಳಿಗೆ ಎದುರಾಗಿ ರಾಜ್ಯದಲ್ಲಿ ಬಲಾಢ್ಯವಾಗಿರುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಜೊತೆಗೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS)ವು ಕೂಡಾ ಈ ಬಾರಿ ತನ್ನ ಅದೃಷ್ಟ ಪರೀಕ್ಷೆಗೆ ನಿಲ್ಲಲಿದೆ. ಈ ಹೊತ್ತಿನಲ್ಲಿ ರಾಜ ರಾಜೇಶ್ವರಿ ನಗರದ KRS ಪಕ್ಷದ ಅಭ್ಯರ್ಥಿಯಾದ ಅರವಿಂದ ನಾಯ್ಕ್‌ ಅವರು ತಮ್ಮ ಯೋಚನೆ ಹಾಗೂ ಯೋಜನೆಗಳ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿದ್ದಾರೆ. ಅರವಿಂದ ಅವರೊಂದಿಗಿನ ಮಾತುಕತೆಯ ಪ್ರಮುಖ ಅಂಶಗಳು ಹೀಗಿವೆ.

ಮೊದಲಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಹಗರಣಗಳಿಂದ ತುಂಬಿ ಹೋಗಿರುವ ಕ್ಷೇತ್ರ. ಈ ಹಿಂದೆ ನಡೆದ ಚುನಾವಣೆ ಕೋರ್ಟ್‌ ಮೆಟ್ಟಿಲೇರಿತ್ತು ಕೂಡಾ. ಭ್ರಷ್ಟಾಚಾರವನ್ನೇ ಅಧಿಕೃತ ಎಂದು ನಂಬಿಕೊಂಡಿರುವ ಪಕ್ಷಗಳ ಮಧ್ಯೆ KRS ಈ ಚುನಾವಣೆ ನಡೆಸುತ್ತಿದೆ. ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಭ್ರಷ್ಟಾಚಾರದ ಅಧಿಕೃತ ಪ್ರತಿನಿಧಿಗಳು.

ಅರವಿಂದ ನಾಯ್ಕ್‌
ಅರವಿಂದ ನಾಯ್ಕ್‌

KRS ಪಕ್ಷವು ಈ ಕ್ಷೇತ್ರದಲ್ಲಿ ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕಾರಣದ ಅಜೆಂಡಾದಿಂದ ಚುನಾವಣೆಯನ್ನು ಎದುರಿಸಲಿದೆ. ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ದ ನಮ್ಮ ಹೋರಾಟ. ಇದು ಕೇವಲ KRS ಪಕ್ಷ ಅಥವಾ ನನ್ನ ವೈಯಕ್ತಿಕ ಹೋರಾಟವಲ್ಲ. ಬದಲಾಗಿ ಒಂದು ಬೃಹತ್‌ ಭ್ರಷ್ಟಾಚಾರದ ಜಾಲ ಮತ್ತು ಪ್ರಾಮಾಣಿಕ ರಾಜಕೀಯದ ನಡುವಿನ ಹೋರಾಟ. ಹೀಗಾಗಿ ಭ್ರಷ್ಟರನ್ನು ಟೀಕಿಸುವ ನೈತಿಕ ಅಧಿಕಾರ ನಮಗಿದೆ. ಪ್ರಜಾತಂತ್ರದಿಂದ ಭರವಸೆಯನ್ನು ಕಳೆದುಕೊಂಡಿರುವ ಜನರಲ್ಲಿ ಮತ್ತೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ. ಅಹಿಂಸಾತ್ಮಕವಾಗಿ ಅಧಿಕಾರ ಹಸ್ತಾಂತರವಾಗಬೇಕಿದೆ. ಅದರ ಲಾಭ ಜನರಿಗೆ ತಲುಪಬೇಕಿದೆ.

ಆದರೆ, ಪ್ರಮುಖ ಪಕ್ಷಗಳು ಭ್ರಷ್ಟರನ್ನೇ ಈ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಮುಂದೆ ಬಂದಿರುವುದು ನಿಜಕ್ಕೂ ಆತಂಕಕಾರಿ. ಮುನಿರತ್ನ ಅವರನ್ನು ಈ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಲೇಬಾರದು. ಅವರನ್ನು ಓರ್ವ ಯೋಗ್ಯ ಅಭ್ಯರ್ಥಿ ಎಂದು ಭಾವಿಸುವುದೇ ದೊಡ್ಡ ಅಪರಾಧ. ಪಕ್ಷಾತೀತವಾಗಿ ಹೇಳುವುದಾದರೆ, ಮುನಿರತ್ನ ಅವರನ್ನು ಚುನಾವಣಾ ರಾಜಕೀಯದಿಂದ ಬಹಿಷ್ಕರಿಸಬೇಕಿತ್ತು. ಈ ದೇಶದ ಕಾನೂನು ವ್ಯವಸ್ಥೆ ಆ ಕೆಲಸವನ್ನು ಮಾಡಬೇಕಿತ್ತು. ಆದರೆ, ಹಾಗಾಗಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರಸ್ತುತ KRS ಪಕ್ಷ ಸಣ್ಣದಿರಬಹುದು. ಆದರೆ, ಅದು ಒಂದು ಬ್ರ್ಯಾಂಡ್‌ ಆಗಿ ಬದಲಾಗುತ್ತಿದೆ. ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ಚುನಾವನೆಗೆ ನಿಲ್ಲುವುದಕ್ಕೂ, ಒಂದು ಪಕ್ಷದ ಬಾವುಟದಡಿಯಲ್ಲಿ ಚುನಾವಣೆಯನ್ನು ಎದುರಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ಈ ಹಿಂದೆ ಪಕ್ಷೇತರರಾಗಿ ನಿಂತಿದ್ದರು. ಆದರೆ, ಈಗ KRS ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣೆಯನ್ನು ಎದುರಿಸಲಾಗುತ್ತಿದೆ. ಹಾಗಾಗಿ, ಎದುರಾಳಿ ಪಕ್ಷಗಳು ಎಷ್ಟೇ ಬಲಾಢ್ಯರಾಗಿದ್ದರೂ, ನಮ್ಮ ಪಕ್ಷದ ಹೆಜ್ಜೆ ಗುರುತುಗಳನ್ನು ಮೂಡಿಸಲು ಈ ಚುನಾವಣೆ ಸಹಕಾರಿಯಾಗಲಿದೆ. ಈ ಹಿಂದೆ ನಾವು ಮಾಡಿರುವ ತಪ್ಪುಗಳಿಂದ ಪಾಠ ಕಲಿತಿದ್ದೇವೆ. ಈಗ ಪ್ರಮುಖ ಪಕ್ಷಗಳ ಭ್ರಷ್ಟಾಚಾರದ ವಿರುದ್ದ ದನಿ ಎತ್ತುವ ಸರದಿ ಮತದಾರರದ್ದು.

ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ. ಆರ್‌ಟಿಒ ಕಚೇರಿಗಳಲ್ಲಿ, ಸುಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಹೀಗೆ ಎಲ್ಲಾ ಕಡೆ ಭೃಷ್ಟಚಾರ ಅವ್ಯಾಹತವಾಗಿ ಸಾಗಿದೆ. ಯಾವುದಾದರೂ ಸರ್ಕಾರಿ ಕಚೇರಿಯ ಮುಂದೆ KRS ಪಕ್ಷದ ಟೋಪಿ ಹಾಕಿ ಹತ್ತು ಜನ ನಿಂತರೆ ಅವತ್ತು ಅಲ್ಲಿ ಕ್ಯೂ ಬ್ರೇಕ್‌ ಆಗಲ್ಲ. ದಲ್ಲಾಳಿಗಳ ತೊಂದರೆ ಇರಲ್ಲ. ಅಧಿಕಾರಿಗಳಿಗೆ ಲಂಚ ತೆಕೊಳುವ ಧೈರ್ಯ ಇರಲ್ಲ. ಇಷ್ಟರ ಮಟ್ಟಿಗಿನ ಬದಲಾವಣೆಯನ್ನು KRS ಪಕ್ಷ ತಂದಿದೆ. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಿ ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕಾರಣವನ್ನು ಜಾರಿಗೆ ತರುವುದೇ ನಮ್ಮ ಮೂಲ ಧ್ಯೇಯ.

ಓಬಳೇಶಪ್ಪ ಬಿ ಟಿ
ಓಬಳೇಶಪ್ಪ ಬಿ ಟಿ

ಈ ಬಾರಿ ಶಿರಾ ವಿಧಾನ ಸಭಾ ಕ್ಷೇತ್ರದಲ್ಲಿಯೂ ಸ್ಪರ್ಧಿಸಲಿರುವ KRS ಪಕ್ಷವು ಅಲ್ಲಿಯೂ ತನ್ನ ಅದೃಷ್ಟವನ್ನು ಪರೀಕ್ಷಿಸಲಿದೆ. ಶಿರಾ ಕ್ಷೇತ್ರಕ್ಕೆ ಓಬಳೇಶಪ್ಪ ಬಿ ಟಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆಮಾಡಲಾಗಿದೆ. ಇಲ್ಲಿಯೂ ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕೀಯವನ್ನು ಪ್ರಚುರಪಡಿಸುವ ಇರಾದೆ KRS ಪಕ್ಷದ್ದು.

Click here to follow us on Facebook , Twitter, YouTube, Telegram

Pratidhvani
www.pratidhvani.com