ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯ
ಜೆಡಿಯು ಮತ್ತು ಬಿಜೆಪಿ ಎಷ್ಟೇ ಆತ್ಮವಿಶ್ವಾಸದಿಂದ ಇದ್ದರೂ, ಎಲ್‌ಜೆಪಿಯು ಎನ್‌ಡಿಎದಿಂದ ಹೊರಗೆ ನಡೆದಿರುವುದು ಚುನಾವಣೆಯ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.
ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯ

ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಜೆಡಿಯು ಪಾಲಿಗೆ 122 ಸೀಟುಗಳು ಬಂದಿದ್ದರೆ ಬಿಜೆಪಿ ಪಾಲಿಗೆ 121 ಸೀಟುಗಳು ಲಭ್ಯವಾಗಿವೆ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಇತರ ಪ್ರದೇಶಿಕ ಪಕ್ಷಗಳಿಗೆ ಈ ಎರಡು ಪಕ್ಷಗಳು ತಮ್ಮ ಪಾಲಿನ ಕೆಲವು ಸೀಟುಗಳನ್ನು ಬಿಟ್ಟು ಕೊಡಬೇಕಾಗಿದೆ.

“ಜೆಡಿಯು ತನ್ನ ಪಾಲಿನ 7 ಕ್ಷೇತ್ರಗಳನ್ನು ಹೆಚ್‌ಎಎಮ್‌ ಗೆ ಬಿಟ್ಟುಕೊಡಲಿದೆ. ಬಿಜೆಪಿಯು ತನ್ನ ಕೋಟಾದಿಂದ ವಿಕಾಸ್‌ಶೀಲ್‌ ಇನ್ಸಾನ್‌ ಪಾರ್ಟಿಗೆ ಪಾಲು ನೀಡಲಿದೆ,” ಎಂದು ಸಿಎಂ ನಿತೀಶ್‌ ಕುಮಾರ್‌ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿಹಾರ ಉಪ-ಮುಖ್ಯಮಂತ್ರಿ ಸುಶೀಲ್‌ ಮೋದಿ ಅವರು ಯಾವ ಪಕ್ಷ ಎಷ್ಟೇ ಕ್ಷೇತ್ರಗಳನ್ನು ಗೆದ್ದುಕೊಂಡರೂ ನಿತೀಶ್‌ ಕುಮಾರ್‌ ಅವರೇ ನಮ್ಮ ಮುಖ್ಯಮಂತ್ರಿಯಾಗಲಿದ್ದಾರೆ, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಎಲ್‌ಜೆಪಿಯು ಎನ್‌ಡಿಎ ಮೈತ್ರಿಕೂಟದಿಂದ ಹೊರ ಹೋದ ಕಾರಣಕ್ಕಾಗಿ, ಪ್ರಧಾನಿ ಮೋದಿಯವರೊಂದಿಗಿನ ಎಲ್‌ಜೆಪಿ ಪಕ್ಷದ ನಾಯಕರ ಫೋಟೋಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳದಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇವೆ,” ಎಂದು ಅವರು ಹೇಳಿದ್ದಾರೆ.

ನಿತೀಶ್‌ ಕುಮಾರ್‌ ನೇತೃತ್ವ ಜೆಡಿಯು ಪಕ್ಷದೊಂದಿಗೆ ಅಸಮಾಧಾನವನ್ನು ವ್ಯಕ್ತಪಡಿಸಿ ಎಲ್‌ಜೆಪಿಯು ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತ್ತು. ಆದರೆ, ಬಿಜೆಪಿಯೊಂದಿಗಿನ ತಮ್ಮ ಸಖ್ಯವನ್ನು ಮುಂದುವರೆಸುವುದಾಗಿ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಹೇಳಿದ್ದರು. ಚುನಾವಣೆಯಲ್ಲಿ ಜೆಡಿಯು ವಿರುದ್ದ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಚಿರಾಗ್‌ ಹೇಳಿದ್ದಾರೆ.

ಆದರೆ, ಇದಕ್ಕೆ ವಿರುದ್ದವಾಗಿ ಮಾತನಾಡಿರುವ ಬಿಜೆಪಿಯು, ಎಲ್‌ಜೆಪಿಯೊಂದಿಗೆ ಹಿಂಬಾಗಿಲ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ, ಎಂದು ಹೇಳಿದೆ.

“ಬಿಜೆಪಿಯು ನಿತೀಶ್‌ ಕುಮಾರ್‌ ಅವರ ನೇತೃತ್ವದಲ್ಲೇ ಚುನಾವಣೆಯನ್ನು ಎದುರಿಸಲಿದೆ. ಅವರನ್ನು ಎದುರಿಸಿ ನಿಲ್ಲುವ ಯಾರೂ ಕೂಡಾ ಎನ್‌ಡಿಎ ಮೈತ್ರಿಕೂಟದಲ್ಲಿ ಇರುವುದಿಲ್ಲ,” ಎಂದು ಬಿಹಾರ ಬಿಜೆಪಿ ಮುಖ್ಯಸ್ಥ ಸಂಜಯ್‌ ಜೈಸ್ವಾಲ್‌ ಹೇಳಿದ್ದಾರೆ.

ಜೆಡಿಯು ಮತ್ತು ಬಿಜೆಪಿ ಎಷ್ಟೇ ಆತ್ಮವಿಶ್ವಾಸದಿಂದ ಇದ್ದರೂ, ಎಲ್‌ಜೆಪಿಯು ಎನ್‌ಡಿಎದಿಂದ ಹೊರಗೆ ನಡೆದಿರುವುದು ಚುನಾವಣೆಯ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಇನ್ನು ನಿತೀಶ್‌ ಕುಮಾರ್‌ ಅವರು ಕೂಡಾ ಈ ಹಿಂದೆಯೂ ಎನ್‌ಡಿಎ ಮೈತ್ರಿ ಮುರಿದು ಕಾಂಗ್ರೆಸ್‌, ಆರ್‌ಜೆಡಿಯೊಂದಿಗೆ ಸೇರಿ ಮಹಾಘಟಬಂಧನ್‌ ರಚಿಸಿದ್ದರು. ಈ ಬಾರಿಯೂ ಚುನಾವಣೆಯ ನಂತರ ಒಂದು ವೇಳೆ ಅಂದುಕೊಂಡ ಫಲಿತಾಂಶ ಬಾರದಿದ್ದಲ್ಲಿ, ನಿತೀಶ್‌ ಮತ್ತೆ ತಮ್ಮ ನಿಲುವು ಬದಲಾಯಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ.

ಎಲ್‌ಜೆಪಿ, ಎನ್‌ಡಿಎ ಜೊತೆಗಿದ್ದಾಗ ನಡೆದಂತಹ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸುವ ಫಲಿತಾಂಶ ಬಂದಿತ್ತು. ಆದರೆ, ಎಲ್‌ಜೆಪಿ ಹಿಂದೆ ಸರಿದಿದ್ದರ ಪರಿಣಾಮ ಎಷ್ಟಿರಬಹುದು ಎಂಬುದನ್ನು ಕಾದುನೋಡಬೇಕಾಗಿದೆ.

ಅಕ್ಟೋಬರ್‌ 28, ನವೆಂಬರ್‌ 3 ಹಾಗೂ 7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್‌ 10ರಂದು ಮತ ಎಣಿಕೆ ನಡೆಯಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com