ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ಬಲಪ್ರದರ್ಶನಕ್ಕೆ ಮುಂದಾದ ಸಿಎಂ ಯಡಿಯೂರಪ್ಪ

ಸಿಎಂ ವಿರುದ್ದ ಕೇಳಿ ಬರುತ್ತಿರುವ ಅಧಿಕಾರ ದುರುಪಯೋಗದ ಆರೋಪ ಹಾಗೂ ಅವರ ವಯಸ್ಸನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಹೈಕಮಾಂಡ್‌ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಚಿಂತನೆ ನಡೆಸಿದೆ. ಈ ಸಂದರ್ಭದಲ್ಲಿ, ರಾಜ್ಯ ರಾಜಕೀಯದಲ್ಲಿ ತಮ್ಮ ವರ್ಚಸ್ಸು ಏನು ಎಂಬುದನ್ನು ಸಾಬೀತುಪಡಿಸಲು ಯಡಿಯೂರಪ್ಪನವರು ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.
ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ಬಲಪ್ರದರ್ಶನಕ್ಕೆ ಮುಂದಾದ ಸಿಎಂ ಯಡಿಯೂರಪ್ಪ

ಕರ್ನಾಟಕದ ರಾಜ್ಯ ರಾಜಕಾರಣ ದಿನೇ ದಿನೇ ಹೊಸ ರೀತಿಯ ತಿರುವನ್ನು ಪಡೆಯುತ್ತಿದೆ. ಅದರಲ್ಲೂ ಸರ್ಕಾರದ ಕೆಲಸ ಕಾರ್ಯಗಳಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪದ ಆರೋಪ ಕೇಳಿ ಬಂದ ನಂತರ, ರಾಜ್ಯ ಬಿಜೆಪಿಯಲ್ಲಿ ಅಸಮಧಾನದ ಹೊಗೆ ಎದ್ದಿತ್ತು. ಇದರಿಂದಾಗಿ ಸಿಎಂ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಪವಾದವೂ ಎದ್ದಿತು.

ಈಗ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಲು ಪ್ರಯತ್ನಿಸುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವತ್ತ ಸಿಎಂ ಯಡಿಯೂರಪ್ಪ ದೃಷ್ಟಿ ನೆಟ್ಟಿದ್ದಾರೆ. ಅಗತ್ಯ ಬಿದ್ದರೆ ಬಿಜೆಪಿ ಹೈಕಮಾಂಡ್‌ ಮುಂದೆ ತಮ್ಮ ಬಲವನ್ನು ಸಾಬೀತುಪಡಿಸಲೂ ಸಿಎಂ ಯಡಿಯೂರಪ್ಪನವರು ತಯಾರಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿ ಎಲ್‌ ಸಂತೋಷ್‌ ಅವರು ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಸರ್ವ ಪ್ರಯತ್ನ ಮಾಡಿದರಾದರೂ, ಅದು ಸಾಧ್ಯವಾಗಲಿಲ್ಲ. ಕರ್ನಾಟಕದಲ್ಲಿ ಬಿಜೆಪಿಗೆ ನೆಲೆ ಇಲ್ಲದ ಸಂದರ್ಭದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತರುವವರೆಗೆ ಯಡಿಯೂರಪ್ಪನವರ ಶ್ರಮ ಸಾಕಷ್ಟಿದೆ. ಸಂಪೂರ್ಣ ಕರ್ನಾಟಕದಲ್ಲಿ ಯಡಿಯೂರಪ್ಪನವರ ವರ್ಚಸ್ಸನ್ನು ಮೀರಿ ಬೆಳೆಯುವಂತಹ ನಾಯಕ ಬೇರೆ ಯಾರೂ ಇಲ್ಲ. ಆದರೆ, ಪ್ರತೀ ಬಾರಿಯೂ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ವಿಪಕ್ಷಗಳಿಗಿಂತಲೂ ತಮ್ಮವರಿಂದಲೇ ತೊಂದರೆ ಅನುಭವಿಸಿದ್ದು ಜಾಸ್ತಿ.

ಕಳೆದ ಬಾರಿ ಸ್ವಪಕ್ಷದವರ ಹಾಗೂ ತಮ್ಮದೇ ಭ್ರಷ್ಟಾಚಾರದ ಕಾರಣ ಅಧಿಕಾರ ಕಳೆದುಕೊಂಡಿದ್ದರೆ, ಈ ಬಾರಿ ತಮ್ಮ ಮಗನ ಕಾರಣದಿಂದ ಖುರ್ಚಿ ಕಳೆದುಕೊಳ್ಲೂವ ಭೀತಿಯಲ್ಲಿ ಯಡಿಯೂರಪ್ಪನವರಿದ್ದಾರೆ. ಆದರೆ, ಪಕ್ಷದಲ್ಲಿ ಅವರ ವಿರುದ್ದ ಈವರೆಗೆ ಎದ್ದಿದ್ದ ಎಲ್ಲಾ ಅಸಮಧಾನವನ್ನೂ ಮೆಟ್ಟಿ ನಿಂತು ಬೆಳೆಯುವಲ್ಲಿ ಯಡಿಯೂರಪ್ಪನವರು ಯಶಸ್ವಿಯಾಗಿದ್ದಾರೆ. ಈಗಲೂ ಅಂತಹುದೇ ಒಂದು ಪ್ರಯತ್ನ ಯಡಿಯೂರಪ್ಪನವರ ಕಡೆಯಿಂದ ಆಗುತ್ತಿದೆ.

ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ಬಲಪ್ರದರ್ಶನಕ್ಕೆ ಮುಂದಾದ ಸಿಎಂ ಯಡಿಯೂರಪ್ಪ
ಕಡೆಗಣಿಸುವವರಿಗೆ ತಿರುಗೇಟು ನೀಡಲು ಬಿ ಎಸ್ ವೈ ಸಿದ್ಧತೆ

ರಾಜ್ಯದಲ್ಲಿ ತಮ್ಮ ಪ್ರಭಾವ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಲು ಮತ್ತೆ ಯಿಯೂರಪ್ಪನವರು ಸಿದ್ದತೆಗಲನ್ನು ಆರಂಭಿಸಿದ್ದಾರೆ. ಇದಕ್ಕಾಗಿ ವಿಪಕ್ಷಗಳ ಅದರಲ್ಲೂ ರಾಜ್ಯದಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನ ನೆರವನ್ನು ಪಡೆಯುವ ಆಲೋಚನೆಯನ್ನು ಬಿಎಸ್‌ವೈ ಮಾಡುತ್ತಿದ್ದಾರೆ ಎನ್ನುವ ಕುರಿತು ವರದಿಯಾಗಿದೆ.

ಒಂದು ಕಾಲದಲ್ಲಿ ಮೈತ್ರಿ ಸರ್ಕಾರ ರಚಿಸಿ ದೋಸ್ತ್‌ಗಳೆಂದು ಕರೆಸಿಕೊಂಡಿದ್ದ ಜೆಡಿಎಸ್‌-ಬಿಜೆಪಿ, ನಂತರ ಬೇರೆಯಾಗಿದ್ದರು. ಕುಮಾರಸ್ವಾಮಿ ನನಗೆ ಮೋಸ ಮಾಡಿದರು ಎಂದು ಕರ್ನಾಟಕದಾದ್ಯಂತ ಮತದಾರರಿಗೆ ನಂಬಿಸಿ ಅನುಭೂತಿಯ ಮತಗಳನ್ನು ಪಡೆಯುವಲ್ಲಿ ಯಡಿಯೂರಪ್ಪ ಯಶಸ್ವಿಯಾದರು. ಈಗ ಮತ್ತೆ ತಮ್ಮ ಹಳೇ ದೋಸ್ತಿಯನ್ನು ಬಳಸಿಕೊಂಡು ಕರ್ನಾಟಕದಲ್ಲಿ ತಮ್ಮ ಸ್ಥಾನವನ್ನು ಬಿಎಸ್‌ವೈ ಭದ್ರಪಡಿಸಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಬುಧವಾರ ಶಿರಾದಲ್ಲಿ ನಡೆದ ಜೆಡಿಎಸ್‌ನ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ಕುಮಾರಸ್ವಾಮಿಯವರು, ಯಡಿಯೂರಪ್ಪನವರ ಕುರಿತು ಹೆಚ್ಚು ಮಾತನಾಡಿರಲಿಲ್ಲ. ಆಳವಾಗಿ ನೋಡಿದರೆ, ನೆಪ ಮಾತ್ರಕ್ಕೆ ಬಿಜೆಪಿ ವಿರುದ್ದ ಮಾತನಾಡಿದ ಹೆಚ್‌ಡಿಕೆ, ಕಾಂಗ್ರೆಸ್‌ನವರ ʼಕುಟಿಲʼ ನೀತಿಯನ್ನು ಬಹಿರಂಗಪಡಿಸಿದ ಖುಶಿಯಲ್ಲಿದ್ದರು. ಶಿರಾದಲ್ಲಿ ಬಿಜೆಪಿ ಪ್ರಬಲವಾಗಿರದೇ ಇರುವುದು ಕೂಡಾ ಇದಕ್ಕೆ ಕಾರಣವಾಗಿರಬಹುದು. ಆದರೆ, ಯಡಿಯೂರಪ್ಪನವರ ಕುರಿತಾಗಿ ಅವರಿಗಿರುವ ಮೃದು ಧೋರಣೆಯನ್ನು ಅಲ್ಲಗೆಳೆಯುವಂತಿಲ್ಲ.

ಆಡಳಿತದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪವನ್ನು ಕೂಡ ತೀವ್ರವಾಗಿ ಖಂಡಿಸುವ ಕೆಲಸ ಕುಮಾರಸ್ವಾಮಿಯವರು ಮಾಡಲಿಲ್ಲ. ವಿರೋಧ ಪಕ್ಷವಾಗಿರುವ ಕಾರಣಕ್ಕೆ ಟ್ವೀಟ್‌ ಮಾಡಿದ್ದನ್ನು ಬಿಟ್ಟರೆ, ಬೇರಾವ ವಿಚಾರದಲ್ಲಿಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಯತ್ನ ಕುಮಾರಸ್ವಾಮಿಯವರಿಂದ ಆಗಲಿಲ್ಲ.

ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ಬಲಪ್ರದರ್ಶನಕ್ಕೆ ಮುಂದಾದ ಸಿಎಂ ಯಡಿಯೂರಪ್ಪ
ತಂತಿ ಮೇಲಿನ ನಡಿಗೆಯಲ್ಲಿ ಬಿ ಎಸ್ ವೈ ಎಡವಿದರೆ ಬಿಜೆಪಿಯೂ ಬೀಳುತ್ತದೆ

ಯಡಿಯೂರಪ್ಪನವರು ಕೂಡಾ ಜೆಡಿಎಸ್‌ ವಿರುದ್ದ ಮಾತನಾಡುವುದನ್ನು ಬಿಟ್ಟೇ ಬಿಟ್ಟಿದ್ದಾರೆ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ. ಕೃಷಿ ಮಸೂದೆಗಳ ವಿರುದ್ದ ಪ್ರತಿಭಟಿಸಿದ ಕಾಂಗ್ರೆಸ್‌ ವಿರುದ್ದ ಮಾತನಾಡಿದ ಸಿಎಂ ಅವರು “ನಾನು ಜೆಡಿಎಸ್‌ ಕುರಿತು ಮಾತನಾಡುವುದಿಲ್ಲ,” ಎಂದು ನೇರವಾಗಿ ಹೇಳಿದ್ದರು. ಇದಕ್ಕೆ ಬಿಜೆಪಿ ಹೈಕಮಾಂಡ್‌ನ ಒತ್ತಡವೂ ಕಾರಣ. ಹೇಗೆಂದರೆ, ಸಚಿವ ಸಂಪುಟವನ್ನು ವಿಸ್ತರಣೆ ಅಥವಾ ಪುನರ್‌ರಚನೆ ಮಾಡಲು, ಯಡಿಯೂರಪ್ಪನವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿಲ್ಲ. ಅದರಲ್ಲೂ ಅವರ ವಯಸ್ಸು 77ಕ್ಕೆ ತಲುಪಿರುವುದನ್ನು ಕಾರಣ ನೀಡಿ ಅವರ ಬದಲು ಇನ್ನೊಬ್ಬರನ್ನು ಸಿಎಂ ಮಾಡುವ ಆಲೋಚನೆ ಹೈಕಮಾಂಡ್‌ದು.

ಹಾಗಾಗಿ, ರಾಜ್ಯದಲ್ಲಿ ಯಡಿಯೂರಪ್ಪನವರ ವರ್ಚಸ್ಸು ಇನ್ನೂ ಕಡಿಮೆಯಾಗಿಲ್ಲ ಮತ್ತು ಅಗತ್ಯ ಬಿದ್ದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದಕ್ಕೂ ತಾನು ಸಿದ್ದನಿದ್ದೇನೆ ಎಂಬ ಸಂದೇಶವನ್ನು ರವಾನಿಸಲು ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಜೆಡಿಎಸ್‌ ಪ್ರಾಬಲ್ಯವಿರುವ ಚೆನ್ನಪಟ್ಟಣಕ್ಕೂ ಯಥೇಚ್ಚವಾಗಿ ಅನುದಾನ ಬಿಡುಗಡೆಯಾಗಿದೆ. ರಾಜ್ಯಸಭಾ ಚುನಾವಣೆಯಾದ ನಂತರ ಸರ್ಕಾರದ ಕಡೆಯಿಂದ ದೇವೇಗೌಡ ಅವರಿಗೆ 60 ಲಕ್ಷದ ಕಾರನ್ನು ಕೂಡಾ ನೀಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಂಯ್ಯನವರು ಸರ್ಕಾರಿ ಕಾರಿಗಾಗಿ ಸುಮಾರು ಒಂದು ವರ್ಷ ಕಾಯುವಂತೆ ಇದೇ ಬಿಜೆಪಿ ಸರ್ಕಾರ ಮಾಡಿತ್ತು.

ಅಧಿಕಾರ ಉಳಿಸಿಕೊಳ್ಳಲು ರಾಜಕೀಯ ಬಲಪ್ರದರ್ಶನಕ್ಕೆ ಮುಂದಾದ ಸಿಎಂ ಯಡಿಯೂರಪ್ಪ
‘ಸಂತೋಷ’ಪಡಬೇಕಾದ ಬಿ ಎಸ್ ವೈ ಬೆಚ್ಚುವುದೇಕೆ?

ಕಳೆದ ಬಾರಿ ಬಿಜೆಪಿಯನ್ನು ತ್ಯಜಿಸಿ ಕೆಜೆಪಿಯನ್ನು ಕಟ್ಟಿ ಮೂವತ್ತಕ್ಕೂ ಹೆಚ್ಚು ಸೀಟುಗಳನ್ನು ಗೆದ್ದುಕೊಂಡಿದ್ದ ಯಡಿಯೂರಪ್ಪನವರು ತಮ್ಮ ಖದರ್‌ ಏನೆಂಬುದನ್ನು ತೋರಿಸಿಕೊಟ್ಟಿದ್ದರು. ಇದರಿಂದಾಗಿ ರಾಜ್ಯದಲ್ಲಿ ಬಿಜೆಪಿ ಸೋಲಿನ ಮುಖಭಂಗವನ್ನು ಅನುಭವಿಸಬೇಕಾಯಿತು.

ರಾಜ್ಯದಲ್ಲಿ ಯಡಿಯೂರಪ್ಪನವರ ವರ್ಚಸ್ಸು ಎಷ್ಟರಮಟ್ಟಿಗೆ ಪ್ರಬಲವಾಗಿದೆ ಎಂಬುದು ಹೈಕಮಾಂಡ್‌ಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ, ಅವರನ್ನು ಏಕಾಏಕಿ ಸಿಎಂ ಸ್ಥಾನದಿಂದ ಕೆಳಗಿಳಿಸುವ ತಪ್ಪನ್ನು ಹೈಕಮಾಂಡ್‌ ಮಾಡಲಾರದು, ಎಂಬುದು ಬಿಜೆಪಿಯ ಮೂಲಗಳು ಹೇಳುತ್ತಿವೆ.

ಏನೇ ಆದರೂ ಈಗಿನ ಬದಲಾದ ರಾಜಕೀಯ ನೆಲೆಗಟ್ಟಿನಲ್ಲಿ ಹೊಸ ಪಕ್ಷವನ್ನು ನಿರ್ಮಿಸಿ ಅದಕ್ಕೆ ಜೀವ ತುಂಬಲು ಯಡಿಯೂರಪ್ಪನವರ ವಯಸ್ಸು ಅಡ್ಡಿಯಾಗಲಿದೆ. ಹೀಗಾಗಿ ಜೆಡಿಎಸ್‌ನೊಂದಿಗೆ ಹೋಂದಾಣಿಕೆ ಮಾಡಿಕೊಳ್ಳದೇ ಯಡಿಯೂರಪ್ಪನವರಿಗೆ ಈಗ ತಮ್ಮ ಖುರ್ಚಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ದೇಶದಾದ್ಯಂತ ರಾಜಕೀಯ ರಂಗದಲ್ಲಿ ಆರ್‌ಎಸ್‌ಎಸ್‌ ನೇರ ಪ್ರವೇಶ ಮಾಡಿರುವುದರಿಂದ, ಅಲ್ಲಿನ ನಾಯಕರ ಒತ್ತಡ ಹಾಗೂ ಬಿಜೆಪಿ ನಾಯಕರ ಒತ್ತಡಕ್ಕೆ ತಕ್ಕ ಉತ್ತರವನ್ನು ನೀಡಲು ಯಡಿಯೂರಪ್ಪನವರು ಹೂಡುತ್ತಿರುವ ಕಾರ್ಯತಂತ್ರ ಎಷ್ಟರ ಮಟ್ಟಿಗೆ ಫಲಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com