ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಈ ಬಾರಿಯಾದರೂ ವ್ಯವಸ್ಥಿತ ಹೋರಾಟ ನಡೆಸುವುದೇ ಕಾಂಗ್ರೆಸ್‌?

ರಾಜ್ಯದಲ್ಲಿ ಹಲವು ಬಾರಿ ಜನಪರ ಹೋರಾಟಗಳನ್ನು ಮುನ್ನಡೆಸುವ ಅವಕಾಶ ಕಾಂಗ್ರೆಸ್‌ಗೆ ಲಭಿಸಿದ್ದರೂ, ಅವುಗಳನ್ನು ಕೈಚೆಲ್ಲಿ ಕುಳಿತಿತ್ತು. ಈ ಬಾರಿಯೂ ಕಾಂಗ್ರೆಸ್ಸಿಗರ ಹೋರಾಟ ಕೇವಲ ಸದನದ ವೀರಾವೇಷಾದ ಮಾತುಗಳಿಗೆ ಸೀಮಿತವಾಗದೇ, ನಿಜವಾದ ರೂಪದಲ್ಲಿ ಕಾ ...
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಈ ಬಾರಿಯಾದರೂ ವ್ಯವಸ್ಥಿತ ಹೋರಾಟ ನಡೆಸುವುದೇ ಕಾಂಗ್ರೆಸ್‌?

ಅಂದು ರೈತ, ರೈತನ ಮಗ, ರೈತ ಹೋರಾಟಗಾರ ಎಂಬ ಯಾವ ಖ್ಯಾತಿ-ಪ್ರಖ್ಯಾತಿಗಳೂ ಇಲ್ಲದ ದೇವರಾಜ ಅರಸು ಭೂಸುಧಾರಣಾ ಕಾಯ್ದೆ ತಂದಿದ್ದರು. ತನ್ಮೂಲಕ ಉಳುವವರಿಗೆ ಭೂಮಿ ನೀಡಿದ್ದರು. ಅನ್ನದಾತನ ಹೊಟ್ಟೆ ತಣ್ಣಗೆ ಮಾಡಿದ್ದರು. ಇಂದು ರೈತ ಹೋರಾಟಗಾರ ಎಂಬ ಹಣೆಪಟ್ಟಿ ಹೊತ್ತಿರುವ, ಕೇಸರಿ ಪಕ್ಷದಲ್ಲಿದ್ದರೂ ತಾನೊಬ್ಬ ಅಪ್ಪಟ ರೈತ ನಾಯಕನೆಂದು ಸಾರಿ ಹೇಳಲು ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಭೂಸುಧಾರಣಾ ಕಾಯ್ದೆಯನ್ನು ಭೂಸ್ವಾಧೀನ ಕಾಯ್ದೆಯನ್ನಾಗಿ ಪರಿವರ್ತಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಅದ್ಯಾವ ಕಾರ್ಪೊರೇಟ್ ಕುಳಗಳ ಒತ್ತಡ ಇದೆಯೋ? ಯಡಿಯೂರಪ್ಪ ಮೇಲೆ ಯಾರ ಪ್ರಭಾವ ಇದೆಯೋ? ಅವರ ಪುತ್ರ ಬಿ.ವೈ. ವಿಜಯೇಂದ್ರ ಮೇಲೆ ಯಾರು ಒತ್ತಡ ಹಾಕುತ್ತಿದ್ದಾರೋ? ಅಥವಾ ಅದ್ಯಾವ ಮಾರ್ವಾಡಿಗಳು ಆರ್ ಎಸ್ ಎಸ್ ಮೂಲದಿಂದ ಒತ್ತಡ ಹೇರಿ ಇಂಥ ಕಾಯ್ದೆಗೆ ಮುನ್ನುಡಿ ಬರೆಸಿದ್ದಾರೊ? ಇವೆಲ್ಲವೂ ನಿಗೂಢ. ಆದರೆ ಈ ಕಾಯ್ದೆಯಿಂದ ರೈತರು ಭೂಮಿ ಕಳೆದುಕೊಳ್ಳುವುದು, ಕ್ರಮೇಣ ತಮ್ಮದೇ ಜಮೀನಿನಲ್ಲಿ ತಾವೇ ಕಾರ್ಪೊರೇಟ್ ಕಂಪನಿಗಳ ಕೂಲಿಯಾಳುಗಳಾಗುವುದು ನಿಶ್ಚಿತ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಭೂಸ್ವಾಧೀನ ಮಸೂದೆ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ‌. ರೈತ ಮುಖಂಡರು ಯಡಿಯೂರಪ್ಪ ಜೊತೆ ಚರ್ಚೆಯನ್ನೂ ಮಾಡಿದ್ದಾರೆ‌. ಇದಲ್ಲದೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್, ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಜಗ್ಗದ ಸರ್ಕಾರ ಭಾರೀ ವಿರೋಧದ ನಡುವೆಯೂ ಭೂಸ್ವಾಧೀನ ಮಸೂದೆಯನ್ನು ಅಂಗೀಕರಿಸಿದೆ. ಮಸೂದೆ ಅಂಗೀಕಾರದ ವೇಳೆ ಕಾಯ್ದೆಯ ಕರಡು ಪ್ರತಿಯನ್ನು ಹರಿದು ಹಾಕಿದ ಸಿದ್ದರಾಮಯ್ಯ 'ಈ ಹೋರಾಟ ಸದನಕ್ಕೆ ಮಾತ್ರ ಸೀಮಿತವಾಗಿಲ್ಲ. ಹೊರಗಡೆಯೂ ಹೋರಾಟ ಮಾಡುತ್ತೇವೆ' ಎಂದು ಅಬ್ಬರಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಈ ಬಾರಿಯಾದರೂ ವ್ಯವಸ್ಥಿತ ಹೋರಾಟ ನಡೆಸುವುದೇ ಕಾಂಗ್ರೆಸ್‌?
ಹೋರಾಟ ಸದನಕ್ಕೆ ಸೀಮಿತವಲ್ಲ, ಬೀದಿಗಿಳಿದು ಹೋರಾಟ ಮಾಡುತ್ತೇವೆ- ಸಿದ್ದರಾಮಯ್ಯ ಎಚ್ಚರಿಕೆ
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಈ ಬಾರಿಯಾದರೂ ವ್ಯವಸ್ಥಿತ ಹೋರಾಟ ನಡೆಸುವುದೇ ಕಾಂಗ್ರೆಸ್‌?
ಕೃಷಿ ಮಸೂದೆಗೆ ಮೋದಿ ಧಾವಂತ ಮತ್ತು ಕೃಷಿ ಹೂಡಿಕೆಗೆ ಅಂಬಾನಿ ಆತುರ!

ಸಿದ್ದರಾಮಯ್ಯ ಅವರೇ ಆಶಾವಾದ!

ರೈತರಿಗೆ ಈಗ ಉಳಿದಿರುವ ಏಕೈಕ ಆಶಾವಾದ ಸಿದ್ದರಾಮಯ್ಯ. ರೈತ ಸಂಘಟನೆಗಳು ಈಗ ರಾಜ್ಯ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ಧ ಹೋರಾಟ ಮಾಡುತ್ತಿವೆ ನಿಜ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲದ ರೈತ ಸಂಘಟನೆಗಳು ಈ ಹೋರಾಟವನ್ನು ದೀರ್ಘ ಕಾಲದವರೆಗೆ ಕಾಪಿಟ್ಟುಕೊಳ್ಳುತ್ತವೆ, ಸರ್ಕಾರದ ಮೇಲೆ ಒತ್ತಡ ಹೇರುತ್ತವೆ ಎಂಬುದರ ಬಗ್ಗೆ ಗ್ಯಾರಂಟಿ ಇಲ್ಲ. ಇನ್ನು ರೈತರ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಬಂದ ಮಾಜಿ ಪ್ರಧಾನ ಮಂತ್ರಿ ಹೆಚ್‌.ಡಿ. ದೇವೇಗೌಡ ಅಥವಾ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗಟ್ಟಿದನಿಯಲ್ಲಿ ಭೂಸ್ವಾಧೀನ ಮಸೂದೆ ವಿರುದ್ಧ ಮಾತನಾಡುತ್ತಿಲ್ಲ. ಹಾಗಾಗಿ ರೈತರಿಗೆ ಬರಸಿಡಿಲು ಬಡಿದಂತೆ ಬಂದಿರುವ ಭೂಸ್ವಾಧೀನ ಮಸೂದೆ ವಿರುದ್ಧ ಹೋರಾಡುವುದು ಸಿದ್ದರಾಮಯ್ಯ ಒಬ್ಬರಿಂದ ಮಾತ್ರ ಸಾಧ್ಯವೆನಿಸುತ್ತಿದೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಈ ಬಾರಿಯಾದರೂ ವ್ಯವಸ್ಥಿತ ಹೋರಾಟ ನಡೆಸುವುದೇ ಕಾಂಗ್ರೆಸ್‌?
ರಾಜ್ಯಸಭೆಯಲ್ಲಿ ನೂತನ ಕೃಷಿ ಮಸೂದೆ ಅಂಗೀಕಾರ, ವಿಪಕ್ಷಗಳ ವಿರೋಧ!

ಸಿದ್ದರಾಮಯ್ಯ ದಾರಿ ಸುಲಭದ್ದಲ್ಲ

ಸಿದ್ದರಾಮಯ್ಯ ರೈತರ ಪರವಾಗಿ, ಭೂಸ್ವಾಧೀನ ಮಸೂದೆ ವಿರುದ್ಧವಾಗಿ ಬೀದಿಗಿಳಿದು ಹೋರಾಟ ನಡೆಸುವುದು ಸದ್ಯ ಸುಲಭದ ಸಂಗತಿಯಾಗಿ ಉಳಿದಿಲ್ಲ. ಏಕೆಂದರೆ ಇತ್ತೀಚೆಗೆ ಕರೋನಾ ಕಷ್ಟ ಕಾಲದಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಡೆಸಿದ ಭ್ರಷ್ಟಾಚಾರದಿಂದ ಹಿಡಿದು ಸಿದ್ದರಾಮಯ್ಯ ಪ್ರಸ್ತಾಪಿಸಿದ ಯಾವ ವಿಷಯಕ್ಕೂ ಅವರ ಪಕ್ಷದ ಸಹವರ್ತಿಗಳಿಂದ ಪೂರ್ಣಪ್ರಮಾಣದ ಸಹಕಾರ ಸಿಕ್ಕಿಲ್ಲ‌. ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ. ಸದನದಲ್ಲಿ ಭೂಸ್ವಾಧೀನ ಮಸೂದೆ ಬಗ್ಗೆ ಚರ್ಚೆ ವೇಳೆ ಕೂಡ ಡಿ.ಕೆ. ಶಿವಕುಮಾರ್ ಅವರ ಹೋರಾಟ, ಮಾತುಗಳು ನೆಪಮಾತ್ರಕ್ಕೆ ಎಂಬಂತೆಯೇ ಇತ್ತು.

ಸಿದ್ದರಾಮಯ್ಯ ಈ ವಿಷಯದಲ್ಲಿ ಡಿ.ಕೆ. ಶಿವಕುಮಾರ್ ಅವರಿಂದ ಹಿಡಿದು ಎಲ್ಲವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಡಬೇಕು. ಈ ಹೋರಾಟವನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ ಕಡೆಪಕ್ಷ ತಾಲೂಕು ಮಟ್ಟದವರೆಗೆ ಕೊಂಡೊಯ್ಯಬೇಕು. ಅದಕ್ಕಾಗಿ ಅವರಿಗೆ ಪಕ್ಷದ ಅಗತ್ಯವಿದೆ. ಕಾಂಗ್ರೆಸ್ ಕಾರ್ಯಕರ್ತರ ಸಹಕಾರವಿಲ್ಲದೆ ಅದು ಅಸಾಧ್ಯ. ಭೂಸ್ವಾಧೀನ ಮಸೂದೆ ಯಾವ ರೀತಿ ರೈತ ವಿರೋಧಿಯಾಗಿದೆ? ರೈತರಿಗೆ ಯಾವ ರೀತಿ ಮಾರಕವಾಗಲಿದೆ? ಕಾಯ್ದೆ ಜಾರಿಯಾದರೆ ರೈತರು ಹೇಗೆ ಅನಾಥರಾಗಲಿದ್ದಾರೆ? ಎಂಬೆಲ್ಲ ವಿಷಯಗಳನ್ನು ಜನರಿಗೆ ತಿಳಿಸಿ ಹೇಳಬೇಕು. ಅದಕ್ಕೂ ಮೊದಲು ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿಕೊಡಬೇಕು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಈ ಬಾರಿಯಾದರೂ ವ್ಯವಸ್ಥಿತ ಹೋರಾಟ ನಡೆಸುವುದೇ ಕಾಂಗ್ರೆಸ್‌?
ವಿವಾದಿತ ಮೂರು ಕೃಷಿ ಮಸೂದೆ: ರಾಜ್ಯಸಭೆಯ ಬಲಾಬಲದ ಲೆಕ್ಕಾಚಾರವೇನು?

ಪಾದಯಾತ್ರೆಯನ್ನು ನೆನಪಿಸಿಕೊಳ್ಳಬೇಕು!

ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರೆಲ್ಲರೂ ಸರಿಯಾಗಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆಸಿದ 'ನಾಡರಕ್ಷಣಾ ನಡಿಗೆ' ಎಂದು ಪಾದಯಾತ್ರೆ ನಡೆಸಿದ್ದನ್ನು ನೆನಪಿಸಿಕೊಳ್ಳಬೇಕು.‌ ಆ ಪಾದಯಾತ್ರೆ ಸೊರಗಿದ್ದ ಪಕ್ಷಕ್ಕೆ ಸ್ಪೂರ್ತಿ ತಂದುಕೊಟ್ಟಿತ್ತು. ಈಗಲೂ ಕಾಂಗ್ರೆಸ್ ಪಕ್ಷದ ಕತೆ ಸಂಘಟನೆಯ ದೃಷ್ಟಿಯಿಂದ ಭಿನ್ನವಾಗಿಯೇನೂ ಇಲ್ಲ, ಕಾರ್ಯಕರ್ತರ ಪಡೆಗೆ ಸ್ಪೂರ್ತಿ ಬೇಕಾಗಿದೆ. ಅದಕ್ಕಾಗಿ ಪ್ರಮುಖ ವಿಷಯವೊಂದರ ಬಗ್ಗೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗಿದೆ. ಭೂಸ್ವಾಧೀನ ಮಸೂದೆಯ ಅಂಗೀಕಾರ ರಾಜ್ಯ ಸರ್ಕಾರದ ಎಡೆಮುರಿ ಕಟ್ಟಲು ಹೇಳಿಮಾಡಿಸಿದಂತಹ ಸಂಗತಿಯಾಗಿದೆ. ಕಾಂಗ್ರೆಸ್ ಈ ಹೋರಾಟವನ್ನು ದಡ ಮುಟ್ಟಿಸಿದರೆ, ಅಂದರೆ ಸರ್ಕಾರ ಮಸೂದೆಯನ್ನು ಹಿಂಪಡೆಯುವಂತೆ ಮಾಡಿದರೆ ರೈತರು ನಿರಾಳರಾಗುತ್ತಾರೆ‌. ಕಾಂಗ್ರೆಸ್ ಪಕ್ಷದಲ್ಲೂ ನವಚೈತನ್ಯ ಮೂಡಲಿದೆ.

ಈ ಭೂಸ್ವಾಧೀನ ಮಸೂದೆಯ ಜೊತೆಗೆ ಕೃಷಿ ಉತ್ಪದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಬಹುದು. ಅದು ಕೂಡ ರೈತರಿಗೆ ಸಂಬಂಧಿಸಿದ ವಿಷಯವೇ ಆಗಿರುವುದರಿಂದ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ. ಇದಲ್ಲದೆ ರಾಜ್ಯದಂತೆ ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿರುವ 'ಎಪಿಎಂಸಿಯನ್ನು ದುರ್ಬಲಗೊಳಿಸುವ ಕಾಯ್ದೆ, ಕಾಂಟ್ರಾಕ್ಟ್ ಫಾರ್ಮಿಂಗ್ ಜಾರಿ ಮಾಡುವ ಕಾಯ್ದೆ ಮತ್ತು ಬೃಹತ್ ಕಂಪನಿಗಳಿಗೆ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯ್ದೆಗಳನ್ನು' ವಿರೋಧಿಸಬೇಕು. ಈ ಎಲ್ಲಾ ವಿಷಯಗಳ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಬೇಕಿರುವುದು ರೈತರ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿ ಆಗಬೇಕಿರುವ ಕೆಲಸ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com