ʼಅನ್ಯಥಾ ಭಾವಿಸಬೇಡಿʼ ಎಂದು ಹಿಂದೂ ಓಲೈಕೆ ರಾಜಕಾರಣಕ್ಕೆ ಇಳಿದರಾ ದೀದಿ?
ರಾಜಕೀಯ

ʼಅನ್ಯಥಾ ಭಾವಿಸಬೇಡಿʼ ಎಂದು ಹಿಂದೂ ಓಲೈಕೆ ರಾಜಕಾರಣಕ್ಕೆ ಇಳಿದರಾ ದೀದಿ?

8,000 ಬಡ ಬ್ರಾಹ್ಮಣರು ಮನವಿ ಮಾಡಿಕೊಂಡ ಕಾರಣಕ್ಕೆ ಅವರಿಗೆ ಪ್ರತಿ ತಿಂಗಳು ರೂ. 1,000 ಸ್ಟೈಪೆಂಡ್‌ ನೀಡುವುದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರತಿಧ್ವನಿ ವರದಿ

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಹರಸಾಹಸ ಪಡುತ್ತಿವೆ. ಬಿಜೆಪಿ ತನ್ನ ಹಿಂದುತ್ವ ಅಜೆಂಡಾದ ಮೇಲೆ ತೃಣಮೂಲ ಕಾಂಗ್ರೆಸ್‌ ನಾಯಕಿಯನ್ನು ಟೀಕಿಸಿದರೆ, ಮಮತಾ ಬ್ಯಾನರ್ಜಿ ಒಂದು ಹೆಜ್ಜೆ ಮುಂದೆ ಹೋಗಿ, ಈಗ ಹಿಂದೂ ಮತಗಳ ಓಲೈಕೆಗೆ ಪ್ರಯತ್ನ ಪಡುತ್ತಿದ್ದಾರೆ.

ಕೇವಲ ನಾಲ್ಕು ದಿನಗಳ ಹಿಂದಷ್ಟೇ, ದೀದಿ ಹಿಂದೂ ವಿರೋಧಿ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ಜೆ ಪಿ ನಡ್ಡಾ ಟೀಕಿಸಿದ್ದರು. ಈಗ ಮಮತಾ ಬ್ಯಾನರ್ಜಿ, ಬಡ ಪುರೋಹಿತರಿಗೆ ಸರ್ಕಾರದ ಪರವಾಗಿ ತಿಂಗಳಿಗೆ ಒಂದು ಸಾವಿರ ಮಾಸಾಶನ ನೀಡುವುದಾಗಿ ಘೋಷಿಸಿದ್ದಾರೆ. ಹಿಂದೂ ವಿರೋಧಿ ಎಂಬ ಪಟ್ಟವನ್ನು ಕಳಚಲು ಮತ್ತು ತಮ್ಮ ಪಕ್ಷ ಬೇರೆಯವರಿಗಿಂತ ಮುಸ್ಲಿಂರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಅಪವಾದವನ್ನು ತೊಲಗಿಸಲು ಈ ಯೋಜನೆಯನ್ನು ಜಾರಿಗೆ ತಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಡ ಪುರೋಹಿತರಿಗೆ ಮಾತ್ರವಲ್ಲದೇ, ದಲಿತರಿಗೂ ಯೋಜನೆಯನ್ನು ಘೊಷಿಸಿರುವ ಸಿಎಂ ಮಮತಾ ಬ್ಯಾನರ್ಜಿ, ದಲಿತ ಅಕಾಡೆಮಿಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಇದರೊಂದಿಗೆ, ಹಿಂದಿ ಅಕಾಡೆಮಿ ಹಾಗೂ ರಾಜಭಾಂಶಿ ಅಕಾಮಿಯನ್ನು ವಿಸ್ತರಿಸುವುದಾಗಿ ಕೂಡಾ ಘೋಷಣೆ ಮಾಡಿದ್ದಾರೆ.

ಇನ್ನು 14 ಶತಮಾನಗಳಿಗೂ ಪುರಾತನವಾದ ಬಂಕುರ ಬಿಷ್ಣುಪುರ್‌ ದೇವಸ್ಥಾನವನ್ನು ಅಭಿವೃದ್ದಿಗೊಳಿಸುವುದರ ಜೊತೆಗೆ, ಕೊಲ್ಕತ್ತಾದಲ್ಲಿರುವ ದೇವಸ್ಥಾನ, ಗುರುದ್ವಾರ ಹಾಗೂ ಮಸೀದಿಗಳನ್ನೂ ಅಭಿವೃಧ್ದಿಗೊಳಿಸುವುದಾಗಿ ಹೇಳಿದ್ದಾರೆ. ಈ ಯೋಜನೆಗಳು ಸರ್ಕಾರದ ʼಸರ್ಬ ಧರ್ಮ ಸಮನ್ವಯ್‌ʼ (ಸರ್ವ ಧರ್ಮ ಸಮನ್ವಯ) ಧೋರಣೆಯನ್ನು ಪ್ರತಿಪಾದಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

“ಅನ್ಯಥಾ ಭಾವಿಸಬೇಡಿ. ಸುಮಾರು 8,000 ಬಡ ಬ್ರಾಹ್ಮಣರು ಮನವಿ ಮಾಡಿಕೊಂಡ ಕಾರಣಕ್ಕೆ, ರೂ. ಒಂದು ಸಾವಿರ ಮಾಸಾಶನ ನಿಗದಿ ಪಡಿಸಿದ್ದೇವೆ. ಇದರೊಂದಿಗೆ ಬಾಂಗ್ಲಾ ಅಬಾಸ್‌ ಯೋಜನಾ (ಬಾಂಗ್ಲಾ ವಾಸ್ತವ್ಯ ಯೋಜನೆ)ಯಡಿಯಲ್ಲಿ ಅವರಿಗೆ ಮನೆ ನಿರ್ಮಿಸಲು ಸಹಾಯ ಮಾಡಲಾಗುವುದು. ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಆರಂಬವಾಗುವ ದುರ್ಗಾ ಪೂಜೆಯ ಸಮಯದಿಂದ 8,000 ಬ್ರಾಹ್ಮಣರಿಗೆ ಈ ಯೋಜನೆ ತಲುಪುವುದು,” ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com