ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ, ನೂತನ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ
ರಾಜಕೀಯ

ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ, ನೂತನ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆ

2017ರಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾದರಾದರೂ 2019ರ‌ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಸೋಲಿನ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದರು. ಮತ್ತು ಆನಂತರ ರಾಜೀನಾಮೆ ಹಿಂಪಡೆಯುವಂತೆ ಎಷ್ಟೇ ಒತ್ತಡ ಬಂದರೂ ರಾಹುಲ್ ಗಾಂಧಿ ಒಪ್ಪಿರಲಿಲ್ಲ. ಆಗ ಒಪ್ಪದೆ ಇದ್ದ ರಾಹುಲ್ ಗಾಂಧಿ ಅವರು ಈಗ ಒಪ್ಪುವರೇ ಎಂಬುದೇ ಸದ್ಯದ ಪ್ರಶ್ನೆ.

ಯದುನಂದನ

ಒಂದು ವರ್ಷದ ಮಟ್ಟಿಗೆ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರ ಅವಧಿ ಆಗಸ್ಟ್​ 10ಕ್ಕೆ ಮುಗಿದಿದ್ದು ಈಗ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷರಾಗುವವರು ಯಾರು? ಎಂಬ ಚರ್ಚೆ ಶುರುವಾಗಿದೆ. ಈ ನಡುವೆ ಸೋನಿಯಾ ಗಾಂಧಿ ಅವರೇ ಸ್ವತಃ ಕಾಂಗ್ರೆಸ್​ ಮುಖಂಡರಿಗೆ ಪತ್ರ ಬರೆದು ಆದಷ್ಟು ಬೇಗ ಶೀಘ್ರವೇ ಪಕ್ಷಕ್ಕೆ ಹೊಸ ನಾಯಕನ್ನು ಆಯ್ಕೆ ಮಾಡಿ ಎಂದು ಹೇಳಿರುವುದರಿಂದ ಇಂದು ನಡೆಯುವ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನೇತೃತ್ವದಲ್ಲಿ ನಡೆಯುವ ಇಂದಿನ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷಗಾದಿಯ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಲಿದೆ. ವಾಸ್ತವವಾಗಿ ಇದು ಚರ್ಚೆ ಆಗುತ್ತಿರಲಿಲ್ಲ‌. ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ರಾಹುಲ್ ಗಾಂಧಿ ಅವರೇ ಮತ್ತೆ ಎಐಸಿಸಿ ಅಧ್ಯಕ್ಷರಾಗಬೇಕೆಂದು ಬಯಸಿದ್ದರು. ಅದೇ ರೀತಿಯಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಿಬಿಡುತ್ತಿದ್ದರು‌. ಆದರೆ ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಅವರಾಡಿದ ಮಾತು ಸುದೀರ್ಘ ಚರ್ಚೆಗೆ ನಾಂದಿಯಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

'ಈ ಬಾರಿ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗೆ ನೀಡುವ ಬಗ್ಗೆ ರಾಹುಲ್ ಗಾಂಧಿ ಒಲವು ಹೊಂದಿದ್ದಾರೆ. ಈಗಾಗಲೇ ತಾಯಿ ಸೋನಿಯಾ ಗಾಂಧಿ ಮತ್ತು ನನ್ನ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.‌ ಈ ಬಾರಿ ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರು ಎಐಸಿಸಿ ಅಧ್ಯಕ್ಷರಾಗಲಿ. ಪಕ್ಷ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ನಾವು ಬೆಂಬಲಿಸೋಣ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ' ಎಂದು ಪ್ರಿಯಾಂಕಾ ಗಾಂಧಿ 'ನೆಕ್ಸ್ಟ್ ಜನರೇಷನ್ ಲೀಡರ್ಸ್ ಆಫ್ ಇಂಡಿಯಾ' ಪುಸ್ತಕಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ರಾಹುಲ್ ಗಾಂಧಿ ಎಷ್ಟೇ ಒತ್ತಡ ಬಂದರೂ ತಾನು‌ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಆಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ‌. ರಾಹುಲ್ ಗಾಂಧಿ ಅವರು ಇಂಥ ಅಭಿಪ್ರಾಯ ಹೊಂದಿರುವುದರಿಂದ ಮತ್ತು ಸ್ವತಃ ಪ್ರಿಯಾಂಕಾ ಗಾಂಧಿ ಇದನ್ನು ಹೇಳಿರುವುದರಿಂದ ಈ ಬಾರಿ ಗಾಂಧಿ ಕುಟುಂಬಕ್ಕೆ ಹೊರತಾದ ವ್ಯಕ್ತಿಯನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲೂ ಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ಇಂಥ ಚರ್ಚೆ ಹುಟ್ಟಿಕೊಂಡಿದ್ದೇ ತಡ ರಾಹುಲ್ ಗಾಂಧಿ ಅವರೇ ಅಧ್ಯಕ್ಷರಾಗಬೇಕು ಎಂಬ ಒತ್ತಡ ಕೂಡ ಹೆಚ್ಚಾಗುತ್ತಿದೆ.‌ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ, ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಮತ್ತಿತರರು ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಸ್ಸಾಂ ಕಾಂಗ್ರೆಸ್​ ಅಧ್ಯಕ್ಷ ರಿಪುನ್​ ಬೋರಾ, 'ರಾಹುಲ್​ ಗಾಂಧಿಯವರನ್ನೇ ಕಾಂಗ್ರೆಸ್​ ಅಧ್ಯಕ್ಷನನ್ನಾಗಿ ನೇಮಕ ಮಾಡಬೇಕು. ಏಕೆಂದರೆ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆದರುವುದು ರಾಹುಲ್​ ಗಾಂಧಿ ಅವರೊಬ್ಬರಿಗೇ ಮಾತ್ರ' ಎಂದಿದ್ದಾರೆ‌. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ 'ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಬೇಕು' ಎಂದು ಆಗ್ರಹಿಸಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಜನ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಆದಷ್ಟು ಬೇಗ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಒತ್ತಾಯಿಸಿದ್ದಾರೆ. ಆ ಪೈಕಿ ಬಹುತೇಕರು ರಾಹುಲ್ ಗಾಂಧಿ ಅವರನ್ನೇ ಅಧ್ಯಕ್ಷರನ್ನಾಗಿ ಒಪ್ಪಿಸಿ ಎಂದು ಸಲಹೆ ನೀಡಿದ್ದಾರೆ. ನರೇಂದ್ರ ಮೋದಿ ಆಳ್ವಿಕೆಯಲ್ಲಿ ದೇಶ ಅತ್ಯಂತ ಸಂಕಷ್ಟದಲ್ಲಿದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದೆ. ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲದರ ವಿರುದ್ಧ ಗಟ್ಟಿ ದನಿಯಲ್ಲಿ ಹೋರಾಡಲು ರಾಹುಲ್​ ಗಾಂಧಿ ಅವರೇ ಸೂಕ್ತ. ರಾಹುಲ್ ಗಾಂಧಿ ಅವರು ಮಾತ್ರ ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ನೇರವಾಗಿ ಹೋರಾಟ ಮಾಡುತ್ತಾರೆ. ಜೊತೆಗೆ ಕಾಂಗ್ರೆಸ್​​ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಬಲ್ಲರು ಎಂದು ಹೇಳಿದ್ದಾರೆ. ಕೆಲವರು ರಾಹುಲ್ ಗಾಂಧಿ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಬೇಗ ಅಧ್ಯಕ್ಷರನ್ನು ನೇಮಕ ಮಾಡಿ ಎಂದು ಒತ್ತಾಯಿಸಿದ್ದಾರೆ.

ಇದೆಲ್ಲದರ ನಡುವೆ ರಾಹುಲ್ ಗಾಂಧಿ ಒಪ್ಪದಿರುವ ಕಾರಣಕ್ಕೆ ಮತ್ತು ಪ್ರಿಯಾಂಕಾ ಗಾಂಧಿ ಹೇಳಿರುವ ಕಾರಣಕ್ಕೆ 'ಬೇರೆಯವರ' ಬಗ್ಗೆಯೂ ಚರ್ಚೆಯಾಗುತ್ತಿದೆ. ಆ ಪೈಕಿ ಮಂಚೂಣಿಯಲ್ಲಿರುವವರು ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಗೆಹ್ಲೋಟ್, ಸುಶಿಲ್ ಕುಮಾರ್ ಶಿಂಧೆ,ಮುಕುಲ್ ವಾಸ್ನಿಕ್ ಮತ್ತು ಶಶಿ ತರೂರ್. ಇವರಲ್ಲಿ ಯಾರಾದರೂ ಅಧ್ಯಕ್ಷರಾದರೆ ಅಥವಾ ಗಾಂಧಿ ಕುಟುಂಬಕ್ಕೆ ಹೊರತಾದ ಯಾವುದೇ ನಾಯಕ ಎಐಸಿಸಿ ಅಧ್ಯಕ್ಷರಾದರೆ 22 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಮಹತ್ತರವಾದ ಬದಲಾವಣೆ ಆದಂತಾಗುತ್ತದೆ‌.

ಹಿಂದೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ 1991ರಿಂದ 1996ರವರೆಗೆ ಎಐಸಿಸಿ ಅಧ್ಯಕ್ಷರಾಗಿದ್ದರು. ಆಮೇಲೆ ಸೀತಾರಾಂ ಕೇಸರಿ 1996ರಿಂದ 1998ರವರೆಗೆ ಮಾತ್ರ ಅಧ್ಯಕ್ಷರಾಗಿದ್ದರು. ಅದಾದ ಬಳಿಕ ರಾಜಕಾರಣದ ಸಹವಾಸವೇ ಬೇಡ ಎಂದು ದೂರ ಇದ್ದ ಸೋನಿಯಾ ಗಾಂಧಿ ಅವರನ್ನು ಕಾಡಿ ಬೇಡಿ ಕರೆತಂದು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಸೋನಿಯಾ ಗಾಂಧಿ 19ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದರು‌. ಈ ಮುಖಾಂತರ ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ದಾಖಲೆ ಬರೆದಿದ್ದರು. ಅಲ್ಲದೆ ಯುಪಿಎ ಮೈತ್ರಿ ಕೂಟ ಮಾಡಿಕೊಂಡು ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತಂದರು. ಬಳಿಕ 2017ರಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾದರಾದರೂ 2019ರ‌ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಸೋಲಿನ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದರು. ಮತ್ತು ಆನಂತರ ರಾಜೀನಾಮೆ ಹಿಂಪಡೆಯುವಂತೆ ಎಷ್ಟೇ ಒತ್ತಡ ಬಂದರೂ ರಾಹುಲ್ ಗಾಂಧಿ ಒಪ್ಪಿರಲಿಲ್ಲ. ಆಗ ಒಪ್ಪದೆ ಇದ್ದ ರಾಹುಲ್ ಗಾಂಧಿ ಅವರು ಈಗ ಒಪ್ಪುವರೇ ಎಂಬುದೇ ಸದ್ಯದ ಪ್ರಶ್ನೆ.

Click here to follow us on Facebook , Twitter, YouTube, Telegram

Pratidhvani
www.pratidhvani.com