ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಸ್ಪಷ್ಟವಾಗಿ ಗೋಚರಿಸುತ್ತಿದೆ ಕಾಂಗ್ರೆಸ್‌ನಲ್ಲಿನ ಆಂತರಿಕ ಬಿರುಕು..!
ರಾಜಕೀಯ

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಸ್ಪಷ್ಟವಾಗಿ ಗೋಚರಿಸುತ್ತಿದೆ ಕಾಂಗ್ರೆಸ್‌ನಲ್ಲಿನ ಆಂತರಿಕ ಬಿರುಕು..!

ರಾಜಸ್ಥಾನದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟು, ಅಧಿಕಾರ ಕಳೆದುಕೊಳ್ಳುವ ಮುಖಭಂಗದಿಂದ ಪಾರಾದ ನಂತರ, ಈಗ ಕಾಂಗ್ರೆಸ್‌ ನಾಯಕತ್ವಕ್ಕೆ ಹಿರಿಯ ನಾಯಕರ ಪತ್ರದಿಂದ ಇನ್ನೊಂದು ಸುತ್ತಿನ ಮುಖಭಂಗ ಎದುರಿಸುವ ಸಂದರ್ಭ ಎದುರಾಗಿದೆ ಎಂದರೆ ತಪ್ಪಾಗಲಾರದು.

ಪ್ರತಿಧ್ವನಿ ವರದಿ

ಸುಮಾರು 200ಕ್ಕೂ ಹೆಚ್ಚು ಕಾಂಗ್ರೆಸ್‌ನ ಹಿರಿಯ ನಾಯಕರ ಸಹಿ ಇರುವ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ನೀಡಿರುವ ಕುರಿತು ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಹಿರಿಯ ಕಾಂಗ್ರೆಸ್‌ ಮುಖಂಡರಾದ ಕಪಿಲ್‌ ಸಿಬಲ್‌ ಹಾಗೂ ಗುಲಾಂ ನಬಿ ಆಜಾ಼ದ್‌ ಸಾರ್ವಜನಿಕವಾಗಿ ರಾಹುಲ್‌ ಗಾಂಧಿ ವಿರುದ್ದ ಕಿಡಿಕಾರುವ ಮಟ್ಟಕ್ಕೆ ಬಿರುಸಿನ ಚರ್ಚೆ ನಡೆದಿದೆ.

ರಾಜಸ್ಥಾನದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟು, ಅಧಿಕಾರ ಕಳೆದುಕೊಳ್ಳುವ ಮುಖಭಂಗದಿಂದ ಪಾರಾದ ನಂತರ, ಈಗ ಕಾಂಗ್ರೆಸ್‌ ನಾಯಕತ್ವಕ್ಕೆ ಹಿರಿಯ ನಾಯಕರ ಪತ್ರದಿಂದ ಇನ್ನೊಂದು ಸುತ್ತಿನ ಮುಖಭಂಗ ಎದುರಿಸುವ ಸಂದರ್ಭ ಎದುರಾಗಿದೆ ಎಂದರೆ ತಪ್ಪಾಗಲಾರದು. ಪಕ್ಷದಲ್ಲಿನ ಆಂತರಿಕ ಭಿನ್ನಮತ ಸಭೆಯಲ್ಲಿ ಚರ್ಚೆಗೆ ಬಂದ ನಂತರ ಕಾಂಗ್ರೆಸ್‌ನ ಹಿರಿಯ ನಾಯಕರು ಬಿಜೆಪಿಯೊಂದಿಗೆ ಸೇರಿಕೊಂಡು ಇಂತಹ ಪತ್ರ ಬರೆದಿದ್ದಾರೆ ಎಂಬ ಬಹಿರಂಗ ಆರೋಪವನ್ನು ಕಾಂಗ್ರೆಸ್‌ ನಾಯಕರ ಮೇಲೆ ಹೇರಲಾಯಿತು.

ಖುದ್ದು ರಾಹುಲ್‌ ಗಾಂಧಿ ತಮ್ಮದೇ ಪಕ್ಷದ ಹಿರಿಯ ನಾಯಕರ ವಿರುದ್ದ ಸಿಡಿದೇಳುವ ಪ್ರಸಂಗ ಕೂಡಾ ಸಭೆಯಲ್ಲಿ ಎದುರಾಯಿತು. ಗುಲಾಂ ನಬಿ ಆಜಾ಼ದ್‌ ಅವರು, ತಮ್ಮ ಸಂಬಂಧ ಬಿಜೆಪಿಯೊಂದಿಗೆ ಇದೆ ಎಂದು ಸಾಬೀತು ಪಡಿಸಿದಲ್ಲಿ ರಾಜಿನಾಮೆಗೆ ಸಿದ್ದ ಎಂಬ ಮಾತುಗಳನ್ನು ಹೇಳುವ ತನಕ ಈ ಚರ್ಚೆ ಮುಂದುವರೆದಿತ್ತು.

ಗುಲಾಂ ನಬಿ ಆಜಾ಼ದ್‌ ಸ್ಪಷ್ಟನೆ:

“CWC ಸಭೆಯಲ್ಲಾಗಲಿ ಅಥವಾ ಹೊರಗಾಗಲಿ, ಆ ಪತ್ರವನ್ನು ಬಿಜೆಪಿಯೊಂದಿಗೆ ಸೇರಿ ಬರೆಯಲಾಗಿದೆ ಎಂಬ ಮಾತನ್ನು ರಾಹುಲ್‌ ಗಾಂಧಿ ಹೇಳಿಲ್ಲ,” ಎಂದು ಗುಲಾಂ ನಬಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾತುಗಳನ್ನು ಮಾಧ್ಯಮಗಳು ತಿರುಚಿವೆ ಎಂದು ಅವರು ಹೇಳಿದ್ದಾರೆ.

“ನನ್ನ ಸಹೋದ್ಯೋಗಿಗಳಲ್ಲಿ ಕೆಲವರು, CWC ಸಭೆಯ ಹೊರಗೆ ನಾನು ಬಿಜೆಪಿಯೊಂದಿಗೆ ಕೈ ಮಿಲಾಯಿಸಿದ್ದೇನೆ ಎಂದು ಹೇಳಿರುವುದು ನಿಜಕ್ಕೂ ದುರ್ದೈವಕರ. ಅವರು ತಮ್ಮ ಆರೋಪವನ್ನು ಸಾಬೀತುಪಡಿಸಿದರೆ ನಾನು ರಾಜಿನಾಮೆ ನೀಡುತ್ತೇನೆ,” ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ರಾಹುಲ್‌ ಗಾಂಧಿಯವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ನನಗೆ ಬೇಡವೆಂದರೂ, ಮತ್ತೆ ಅವರನ್ನೇ ಅಧ್ಯಕ್ಷರನ್ನಾಗಿಸುವ ಹಂಬಲವನ್ನು ಹೆಚ್ಚಿನ ನಾಯಕರು ವ್ಯಕ್ತಪಡಿಸಿದ್ದರೆ, ಜಾರ್ಖಂಡ್‌ ಕಾಂಗ್ರೆಸ್‌ ಅಧ್ಯಕ್ಷ ಡಾ. ರಾಮೇಶ್ವರ್‌ ಅವರು ಸೋನಿಯಾ ಗಾಂಧಿ ಅಧ್ಯಕ್ಷರಾಗಿ ಮುಂದುವರೆಯಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಂಧಿ ಕುಟುಂಬದಿಂದ ಹೊರತುಪಡಿಸಿ ಹೊರಗಿನವರನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಗಾಂಧಿ ಕುಟುಂಬದ ಇರಾದೆ ಈಡೇರುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com