ರಾಜ್ಯ ರಾಜಕೀಯದಲ್ಲಿ ಅʻಸಂತೋಷʼ ಸಂಚಲನ..!
ರಾಜಕೀಯ

ರಾಜ್ಯ ರಾಜಕೀಯದಲ್ಲಿ ಅʻಸಂತೋಷʼ ಸಂಚಲನ..!

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿ ಒಂದು ವರ್ಷ ಈಗಾಗಲೇ ಪೂರ್ಣಗೊಂಡಿದ್ದು, ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಅಧಿಕಾರದಿಂದ ವಂಚಿತರಾದವರಿಗೆ ಈ ಬಾರಿ ಅಧಿಕಾರ ಸಿಗುವುದೋ ಇಲ್ಲವೋ ಎಂಬ ಕುತೂಹಲ ಸಂತೋಷ್‌ ಭೇಟಿಯ ನಂತರ ಮೂಡಿದೆ.

ಕೃಷ್ಣಮಣಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ದೆಹಲಿಯಲ್ಲೇ ಸಾಕಷ್ಟು ಹೆಚ್ಚು ಕಾಲ ಕಳೆಯುವ ಬಿ ಎಲ್‌ ಸಂತೋಷ್‌ ರಾಜ್ಯಕ್ಕೆ ಬಂದಿದ್ದಾರೆ ಎಂದರೆ ಏನೋ ಬದಲಾವಣೆ ಆಗುತ್ತಿದೆ ಎಂದೇ ಅರ್ಥ. ಬಿ ಎಲ್‌ ಸಂತೋಷ್‌ರಾಜ್ಯ ರಾಜಧಾನಿಯಲ್ಲಿ ಬೀಡು ಬಿಟ್ಟು ಸಾಕಷ್ಟು ಮಂತ್ರಿಗಳನ್ನು ನಾಯಕರನ್ನು, ಬಿಜೆಪಿ ರಾಜ್ಯಾಧ್ಯಕ್ಷನ್ನ ಭೇಟಿ ಮಾಡುತ್ತಿರುವುದು ಸಾಕಷ್ಟು ಜನರಿಗೆ ಸಂತಸವನ್ನು ಉಂಟು ಮಾಡಿದರೆ, ಇನ್ನಷ್ಟು ಜನರಿಗೆ ಸಂತೋಷ್‌ ಸಂಚಾರ ಅಸಂತೋಷವನ್ನು ಉಂಟು ಮಾಡಿದೆ.

ಶುಕ್ರವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಬಿ.ಎಲ್. ಸಂತೋಷ್ ಬಿಜೆಪಿ ಕಚೇರಿಗೆ ಸಚಿವರಾದ ಬೊಮ್ಮಾಯಿ ಮತ್ತು ಸುಧಾಕರ್ ಅವರನ್ನು ಕರೆಸಿಕೊಂಡು ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಹಾಗೂ ಕೋವಿಡ್‌ನಿಯಂತ್ರಣದ ಬಗ್ಗೆ ಚರ್ಚಿಸಿದ್ದರು. ರಾಜ್ಯದಲ್ಲಿ ವಿಪರೀತವಾಗಿ ಹೆಚ್ಚುತ್ತಿರುವ ಕರೋನಾ ಸೋಂಕಿನ ಬಗ್ಗೆ ಸ್ವತಃ ವೈದ್ಯರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಮಾಹಿತಿ ನೀಡಿದ್ದರು. ಇನ್ನೂ ಪೊಲೀಸ್‌ ಠಾಣೆ ಧ್ವಂಸ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಬಳಿಕ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಣೆ ಕೊಟ್ಟಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಂಪುಟ ವಿಸ್ತರಣೆಯೋ..? ಪುನರ್‌ರಚನೆಯೋ..?

ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದ್ದು, ಸಂಪುಟ ವಿಸ್ತರಣೆ ಬದಲಿಗೆ ಪುನರ್‌ರಚನೆ ಮಾಡುವಂತೆ ಒತ್ತಡ ಇದೆ ಎನ್ನಲಾಗಿದೆ. ಪೂರ್ಣ ಪ್ರಮಾಣದ 5 ವರ್ಷಗಳ ಕಾಲ ಒಬ್ಬರೇ ಮಂತ್ರಿಗಳಾಗಿದ್ದರೆ ಬೇರೆಯವರಿಗೆ ಅಸಮಾಧಾನ ಆಗಬಹುದು ಎನ್ನುವ ಕಾರಣಕ್ಕೆ ಕೆಲವರನ್ನು ಕೈಬಿಟ್ಟು ಉಳಿಒದವರಿಗೆ ಅವಕಾಶ ಕೊಡಬೇಕು ಎನ್ನುವ ಚರ್ಚೆ ಆಗಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ. ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಜೊತೆಗೂ ಸಹ ಚರ್ಚಿಸಿದ್ದು, ಪಕ್ಷದ ವತಿಯಿಂದ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಡೆಯಿಂದ ಯಾರನ್ನು ಕೈಬಿಡಬಹುದು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಅಚ್ಚರಿ ಮೂಡಿಸಿದ ಸಚಿವ ಸೋಮಣ್ಣ ಭೇಟಿ..!

ಸಂಪುಟ ಪುನರ್‌ರಚನೆ ಚರ್ಚೆ ನಡೆದಿದೆ ಎನ್ನುವಾಗಲೇ ಸಚಿವ ವಿ. ಸೋಮಣ್ಣ, ಬಿ.ಎಲ್. ಸಂತೋಷ್‌ ಅವರನ್ನು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದು ಅಚ್ಚರಿಗೆ ಕಾರಣವಾಗಿದೆ. ನೇರನುಡಿಯ ವಿ. ಸೋಮಣ್ಣ, ಅನಂತ್‌ ಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕ. ಬಿ.ಎಸ್‌. ಯಡಿಯೂರಪ್ಪ ಅವರ ಜೊತೆಗಿನ ಸಂಬಂಧವೂ ಅಷ್ಟಕಷ್ಟೆ ಎನ್ನುವಂತಿದೆ. ಹಾಗಾಗಿ ಬಿ.ಎಸ್‌. ಯಡಿಯೂರಪ್ಪ, ಸೋಮಣ್ಣ ಹೆಸರನ್ನು ತನ್ನ ಬಣದಿಂದ ಸೂಚಿಸಿದ್ದಾರೆಯೇ..? ಎನ್ನುವ ಅನುಮಾನಗಳು ಮೂಡುತ್ತಿವೆ. ಸಂತೋಷ್ ಭೇಟಿ ಬಳಿಕ ಮಾತನಾಡಿದ್ದ ಸಚಿವ ಸೋಮಣ್ಣ, ಸಂತೋಷ್‌ ಭೇಟಿ ಮಾಡಿ ಹೆಚ್ಚು ದಿನಗಳಾಗಿದ್ದವು, ಹಾಗಾಗಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದೆ ಎಂದಿದ್ದರು.

ಸೋಮಣ್ಣ ಮಾತ್ರವಲ್ಲ, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ, ಐದಾರು ಮಂದಿಯಿಂದ ರಾಜೀನಾಮೆ ಪಡೆದು, ಸಚಿವ ಸ್ಥಾನ ಸಿಗದೆ ಅಸಮಾಧಾನ ಹೊಂದಿರುವ ಉಳಿದ ನಾಯಕರಿಗೆ ಸಚಿವ ಸ್ಥಾನ ಕೊಡುವುದು ಬಹುತೇಕ ಖಚಿವಾಗಿದೆ. ಸಚಿವ ಸ್ಥಾನ ವಾಪಸ್‌ ಕೊಟ್ಟವರು ಬಂಡಾಯ ಹೇಳಬಾರದು ಹಾಗೂ ಸಚಿವ ಸ್ಥಾನ ಮತ್ತೆ ಸಿಗದವರಿಗೆ ನಿಗಮ ಮಂಡಳಿ ಸೇರಿದಂತೆ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷ ನಿರ್ಧಾರ ಮಾಡಿದೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ. ಅಂತಿಮವಾಗಿ ಸಚಿವ ಸ್ಥಾನ ಕಳೆದುಕೊಳ್ಳುವವರ ಪಾಲಿಗೆ ಸಂತೋಷ್‌ ರಾಜ್ಯ ಸಂಚಾರ ಅಸಂತೋಷ ಮೂಡಿಸಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com