ಸಚಿನ್ ಪೈಲಟ್ ಕಿತ್ತುಹಾಕಿದ ಕಾಂಗ್ರೆಸ್ ಪರ್ಯಾಯ ನಾಯಕನನ್ನು ಹುಟ್ಟುಹಾಕುವುದೇ?
ರಾಜಕೀಯ

ಸಚಿನ್ ಪೈಲಟ್ ಕಿತ್ತುಹಾಕಿದ ಕಾಂಗ್ರೆಸ್ ಪರ್ಯಾಯ ನಾಯಕನನ್ನು ಹುಟ್ಟುಹಾಕುವುದೇ?

ಕಾಂಗ್ರೆಸ್ ಹೀಗೆ ತ್ವರಿತವಾಗಿ ಕ್ರಮ ಕೈಗೊಳ್ಳುವ ಗುಣ ಬೆಳಸಿಕೊಳ್ಳುವುದು ಆ ಪಕ್ಷದ ಸದ್ಯದ ಪರಿಸ್ಥಿತಿಗೆ ಬಹಳ ಅಗತ್ಯವೇ ಆಗಿದೆ. ಆದರೆ ಸಚಿನ್ ಪೈಲಟ್ ವಿಷಯದಲ್ಲಿ ಮರುಚಿಂತನೆ ನಡೆಸಬೇಕಿತ್ತು. ಮೇಲುನೋಟಕ್ಕೆ ಸಚಿನ್ ಪೈಲಟ್ ಅಧಿಕಾರದಾಹಿ ಎಂದು ಕಾಣಿಸಬಹುದು. ವಾಸ್ತವ ಭಿನ್ನವಾಗಿದೆ.

ಯದುನಂದನ

ಕಾಂಗ್ರೆಸ್ ಹೈಕಮಾಂಡ್ ಸಚಿನ್ ಪೈಲಟ್ ಅವರನ್ನು ‌ಉಪ ಮುಖ್ಯಮಂತ್ರಿ ಸ್ಥಾನದಿಂದ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕುವ ಮೂಲಕ ಬಹಳ ಅಪರೂಪದ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್ ಒಳ್ಳೆಯದಕ್ಕೂ ಕೆಟ್ಟದಕ್ಕೂ ಹೀಗೆ ಬೇಗ ಕ್ರಮ ಕೈಗೊಂಡ ಉದಾಹರಣೆ ವಿರಳಾತಿವಿರಳ. ಅನಗತ್ಯವಾಗಿ ಕಾದುನೋಡುವ ತಂತ್ರ ಅನುಸರಿಸುತ್ತಿತ್ತು. ವಿನಾಕಾರಣ ವಿಳಂಬ ಮಾಡುತ್ತಿತ್ತು. ಸೋಮಾರಿತನದ ಪರಮಾವಧಿ ತೋರುತ್ತಿತ್ತು. ಅದೆಲ್ಲದಕ್ಕೂ ಅಪವಾದವೆಂಬಂತೆ ತಕ್ಷಣವೇ ಕ್ರಮ ಕೈಗೊಂಡಿದೆ.

ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನಗಳಲ್ಲಿ ಸಾಲು ಸಾಲಾಗಿ ಬಂಡಾಯ ಎದ್ದ ಕಾರಣ ಕಡೆಗೂ ಕಾಂಗ್ರೆಸ್ ಹೈಕಮಾಂಡ್ 'ಏನಾದರೊಂದು ಕ್ರಮ' ಕೈಗೊಳ್ಳಬೇಕೆಂದು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇದು ಕೂಡ ವಿಳಂಬವಾದ ತೀರ್ಮಾನವೇ. ಆದರೆ ಈಗಲಾದರೂ ಶಿಸ್ತು ಕ್ರಮ ಕೈಗೊಂಡಿದೆ. ಆ ಮುಖಾಂತರ 'ದುರ್ಬಲ ಹೈಕಮಾಂಡ್' ಎಂಬ ದೂರಿಗೆ ತಕ್ಕ ಉತ್ತರ ನೀಡಿದೆ. ಮತ್ತು ಮುಂದೆ ಬಂಡೇಳುವವರಿಗೂ ಸಂದೇಶ ರವಾನಿಸಿದೆ.

ಹಾಗಂತ ಕಾಂಗ್ರೆಸ್ ಹೈಕಮಾಂಡಿಗೆ ಬುದ್ದಿ ಬಂದೇಬಿಟ್ಟಿತು ಎಂದು ಎಣಿಸುವಂತಿಲ್ಲ. ಏಕೆಂದರೆ ಈ ಬಾರಿ ಸಚಿನ್ ಪೈಲಟ್ ಅವರಿಂದ ಹೈಕಮಾಂಡ್ ನಾಯಕರಿಗೆ ಆಗಿರುವುದು ಮರ್ಮಾಘಾತ. ಖುದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಹಮದ್ ಪಟೇಲ್ ಅವರಂಥ ನಾಯಕರು ಮನವೊಲಿಸಲು ಮುಂದಾದರೂ ಸಚಿನ್ ಪೈಲಟ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದು ಹೈಕಮಾಂಡ್ ನಾಯಕರನ್ನು ಕೆರಳಿಸಿದೆ.

ಇದಲ್ಲದೆ ಸಚಿನ್ ಪೈಲಟ್ ಹಾಕಿರುವ ಮೂರು ಷರತ್ತುಗಳು ಕೂಡ ಹೈಕಮಾಂಡ್ ರೊಚ್ಚಿಗೇಳುವಂತೆ ಮಾಡಿದೆ. ಆ ಮೂರು ಷರತ್ತುಗಳೇನೆಂದರೆ... ಒಂದು- ಮುಂಬರುವ ವಿಧಾನಸಭೆಗೂ ಮುನ್ನ ಸಾರ್ವಜನಿಕವಾಗಿ ತನ್ನನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು. ಎರಡು- ತನ್ನ ಬೆಂಬಲಿಗ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಅಥವಾ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು. ಮೂರು- ರಾಜಸ್ಥಾನದ ಕಾಂಗ್ರೆಸ್​ ಉಸ್ತುವಾರಿಯಾಗಿರುವ ಅವಿನಾಶ್ ಪಾಂಡೆ ಅವರನ್ನು ಬದಲಾಯಿಸಬೇಕು. ಹೀಗೆ ತಮ್ಮ ಪರಮಾಧಿಕಾರವನ್ನೇ ಪ್ರಶ್ನೆ ಮಾಡುವಂಥ ಷರತ್ತುಗಳನ್ನು ವಿಧಿಸಿದ್ದರಿಂದ ಸಿಡಿದೆದ್ದ ಹೈಕಮಾಂಡ್ ಸಚಿನ್ ಪೈಲಟ್ ಅವರನ್ನೇ ಪದಚ್ಯುತಗೊಳಿಸಿದೆ.

ಕಾಂಗ್ರೆಸ್ ಹೀಗೆ ತ್ವರಿತವಾಗಿ ಕ್ರಮ ಕೈಗೊಳ್ಳುವ ಗುಣ ಬೆಳಸಿಕೊಳ್ಳುವುದು ಆ ಪಕ್ಷದ ಸದ್ಯದ ಪರಿಸ್ಥಿತಿಗೆ ಬಹಳ ಅಗತ್ಯವೇ ಆಗಿದೆ. ಆದರೆ ಸಚಿನ್ ಪೈಲಟ್ ವಿಷಯದಲ್ಲಿ ಮರುಚಿಂತನೆ ನಡೆಸಬೇಕಿತ್ತು. ಮೇಲುನೋಟಕ್ಕೆ ಸಚಿನ್ ಪೈಲಟ್ ಅಧಿಕಾರದಾಹಿ ಎಂದು ಕಾಣಿಸಬಹುದು. ವಾಸ್ತವ ಭಿನ್ನವಾಗಿದೆ. ಇವತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಚಿನ್ ಪೈಲಟ್ ಬೆವರು ಸುರಿಸಿದ್ದಾರೆ. ಅಶೋಕ್ ಗೆಹ್ಲೋಟ್ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡು ದೆಹಲಿಯಲ್ಲಿದ್ದಾಗ ರಾಜಸ್ಥಾನದ ಉದ್ದಗಲಕ್ಕೂ ಓಡಾಡಿ ಪಕ್ಷ ಕಟ್ಟಿದ್ದಾರೆ. 36ನೇ ವರ್ಷಕ್ಕೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷಗಾದಿ ಏರಿದರೂ ಎಲ್ಲರನ್ನೂ ಸಂಭಾಳಿಸಿದ್ದಾರೆ. ಹಾಗಾಗಿ ಸಚಿನ್ ಪೈಲಟ್ ವಿಷಯದಲ್ಲಿ ಮತ್ತೊಂದು ಅವಕಾಶ ನೀಡಬೇಕಿತ್ತು‌.

ಇನ್ನೊಂದು ವಿಷಯಕ್ಕೆ ಸಚಿನ್ ಪೈಲಟ್ ಅವರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೆದು ಧೋರಣೆ ತಾಳಬೇಕಿತ್ತು. ಮಧ್ಯಪ್ರದೇಶದಲ್ಲಿ ಪಕ್ಷ ತ್ಯಜಿಸಿದ ಜ್ಯೊತಿರಾಧಿತ್ಯ ಸಿಂಧ್ಯ ಬಿಜೆಪಿ ಸೇರಿದರು. ಆದರೆ ಸಚಿನ್ ಪೈಲಟ್ ತಾನು ಬಿಜೆಪಿ ಸೇರುವುದಿಲ್ಲ ಎಂಬುದನ್ನು ಬೆಂಬಲಿಗರ ಮೂಲಕ ಸ್ಪಷ್ಟಪಡಿಸಿದ್ದಾರೆ. ಜ್ಯೊತಿರಾಧಿತ್ಯ ಸಿಂಧ್ಯ ರೀತಿ ನೇರವಾಗಿ ಬಿಜೆಪಿ ಪಾಳೆಯ ಸೇರಿಕೊಂಡಿದ್ದರೆ ಕಾಂಗ್ರೆಸಿಗೆ ಇನ್ನೂ ಹೆಚ್ಚು ನಷ್ಟ ಆಗಿರುತ್ತಿತ್ತು.

ಇದೆಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಈಗ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಗೆ ಪರ್ಯಾಯ ನಾಯಕನನ್ನು ಹುಡುಕಿಲ್ಲ. ಕರ್ನಾಟಕದಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ, ಬಿ.ಕೆ. ಹರಿಪ್ರಸಾದ್ ಅವರನ್ನು ವಿಧಾನ‌ ಪರಿಷತ್ ಸದಸ್ಯರನ್ನಾಗಿ ಮಾಡಿ ಹಲವು ಯುವಕರಿಗೆ ಭ್ರಮನಿರಸನ ಉಂಟುಮಾಡಲಾಗಿತ್ತು. ರಾಜಸ್ಥಾನದಲ್ಲಿ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಉಳಿಸಿಕೊಳ್ಳಲು ಯುವ ನಾಯಕ ಸಚಿನ್ ಪೈಲಟ್ ಅವರನ್ನು ಕಳೆದುಕೊಂಡಿದೆ. ಅಶೋಕ್ ಗೆಹ್ಲೋಟ್ ಸಂಧ್ಯಾಕಾಲದಲ್ಲಿರುವವರು. ಸಚಿನ್ ಪೈಲಟ್ ಇನ್ನಷ್ಟು ವರ್ಷ ಪಕ್ಷಕ್ಕಾಗಿ ದುಡಿಯಬಲ್ಲವರಾಗಿದ್ದರು. ಹಳೆಯ ಬೇರನ್ನು ಉಳಿಸಿಕೊಂಡು ಹೊಸ ಚಿಗುರನ್ನು ಕಳೆದುಕೊಂಡಿದೆ. ಕ್ರಮ ತೆಗೆದುಕೊಳ್ಳುವುದೆಂದರೆ ಇರುವುದನ್ನು ಕಳೆದುಕೊಳ್ಳುವುದಲ್ಲ. ಪ್ರೊ ಆ್ಯಕ್ಟೀವ್ ಆಗುವುದೆಂದರೆ ಅಕಾಲದಲ್ಲಿ ಸಕ್ರಿಯವಾಗುವುದಲ್ಲ ಎನ್ನುವುದು ಕಾಂಗ್ರೆಸ್ ಹೈಕಮಾಂಡಿಗೆ ಅರ್ಥ ಆಗಬೇಕಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com