ಬಿಹಾರ ಚುನಾವಣೆ: ಹಿಂದುಳಿದ ವರ್ಗಗಳ ಆದಾಯ ಮಿತಿ ಹೆಚ್ಚಳಕ್ಕೆ ಮುಂದಾಗುತ್ತಿರುವ ಕೇಂದ್ರ
ರಾಜಕೀಯ

ಬಿಹಾರ ಚುನಾವಣೆ: ಹಿಂದುಳಿದ ವರ್ಗಗಳ ಆದಾಯ ಮಿತಿ ಹೆಚ್ಚಳಕ್ಕೆ ಮುಂದಾಗುತ್ತಿರುವ ಕೇಂದ್ರ

ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪಡೆಯಲು 8 ಲಕ್ಷ ರೂಪಾಯಿ ಒಳಗಿನ ಆದಾಯ ಮಿತಿ ಇತ್ತು. ಇದನ್ನೀಗ 12 ಲಕ್ಷಕ್ಕೆ ಏರಿಸುವ ಚಿಂತನೆ ನಡೆಯುತ್ತಿದೆ.

ಯದುನಂದನ

ಕರೋನಾ ಎಂಬ ಕಡುಕಷ್ಟ ದೇಶವನ್ನೇ ನಡುಗಿಸುತ್ತಿರುವ ವೇಳೆಯಲ್ಲೂ ಬಿಜೆಪಿ ಬಿಹಾರ ಚುನಾವಣೆಗೆ ಭಾರೀ ತಯಾರಿ ನಡೆಸುತ್ತಿದೆ. ರಾಷ್ಟ್ರ ಮಟ್ಟದ ಭಾರೀ ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿ ಇದ್ದರೂ, ಚುನಾವಣಾ ಚಾಣಾಕ್ಷ ಎಂಬ ಬಿರುದಾಂಕಿನಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದರೂ, ರಾಜ್ಯದಲ್ಲಿ ಪ್ರತಿಪಕ್ಷಗಳ ನಾಯಕರಿಗೆ ಹೋಲಿಸಿಕೊಂಡರೆ ಈಗಲೂ ವರ್ಚಸ್ವಿ ಎನಿಸಿಕೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಜೊತೆಗಿದ್ದರೂ ಬಿಜೆಪಿಗೆ ಏನೋ ಅಳುಕು. ಹಾಗಾಗಿ ತನ್ನ ಪ್ರಥಮ ಪ್ರಾಶಸ್ತ್ಯವಾದ ಕೋಮು ಅಸ್ತ್ರವನ್ನು ಪಕ್ಕಕ್ಕಿಟ್ಟಿದೆ. ನಾಮಕಾವಸ್ತೆಗಾಗಿ ಬಳಸುತ್ತಿದ್ದ ಅಭಿವೃದ್ಧಿ ಅಜೆಂಡಾವನ್ನು ನೇಪಥ್ಯಕ್ಕೆ ಸರಿಸುತ್ತಿದೆ. ಬದಲಿಗೆ ಜಾತಿ ಬಾಣ ಬಿಡಲೊರಟಿದೆ.

ಅಂದಹಾಗೆ ಅಪಾರ ರಾಜಕೀಯ ಪ್ರಜ್ಞೆ ಮತ್ತು ಜಾತಿಪ್ರಜ್ಞೆ ಇರುವ ಬಿಹಾರದಲ್ಲಿ ಈ ಬಾರಿಯ ಚುನಾವಣೆ ಬಿಜೆಪಿಗೆ ಸುಲಭದ ತುತ್ತಾಗಬೇಕಿತ್ತು. ಏಕೆಂದರೆ ಬಿಹಾರ ರಾಜಕಾರಣದ ಆಳ-ಅಗಲವನ್ನು ಚೆನ್ನಾಗಿ ಬಲ್ಲ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಅವರು ಸದ್ಯ ಜೈಲಿನಲ್ಲಿದ್ದಾರೆ. ಅವರ ಅನುಪಸ್ಥಿತಿ ಪ್ರತಿಪಕ್ಷಗಳ ಪಾಳೆಯದಲ್ಲಿ ಎದ್ದು ಕಾಣುತ್ತಿದೆ. ಅವರ ಪುತ್ರ ತೇಜಸ್ವಿ ಯಾದವ್ ಆರ್ ಜೆ ಡಿ ಪಕ್ಷದ ಮಟ್ಟಿಗೆ ಮಾತ್ರ ನಾಯಕರಾಗಿದ್ದಾರೆಯೇ ಹೊರತು ರಾಜ್ಯದಲ್ಲಿ ಯುಪಿಎ ಮೈತ್ರಿಕೂಟವನ್ನು ಮುನ್ನಡೆಸುವ ಕಸುವು ತೋರ್ಪಡಿಸಿಲ್ಲ. ಪ್ರತಿಪಕ್ಷದ ನಾಯಕನಾಗಿ ಬಿಹಾರ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುವಲ್ಲಿ, ನಿತೀಶ್ ಕುಮಾರ್ ಗೆ ಪರ್ಯಾಯ ನಾಯಕನಾಗಿ‌ ರೂಪುಗೊಳ್ಳುವುದರಲ್ಲಿ ವಿಫಲರಾಗಿದ್ದಾರೆ.

ಇದಲ್ಲದೆ ಆರ್ ಜೆ ಡಿ, ಕಾಂಗ್ರೆಸ್, ಉಪೇಂದ್ರ ಕುಶ್ವಾ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ, ಜಿತಿನ್ ರಾಮ್ ಮಾಂಜಿ ಅವರ ಹಿಂದುಸ್ಥಾನಿ ಅವಾಮ್ ಮೋರ್ಚಾ, ಸಿಪಿಐ, ಸಿಪಿಎಂ ಪಕ್ಷಗಳ ನಡುವೆ ಇನ್ನೂ ಮೈತ್ರಿ ಏರ್ಪಟ್ಟಿಲ್ಲ.‌ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಇತರೆ ಪಕ್ಷಗಳು ಹಿಂದೇಟು ಹಾಕುತ್ತಿವೆ. ನಿತೀಶ್ ಕುಮಾರ್ ಎದುರು ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದಿದ್ದರೆ ಹಿನ್ನಡೆ ಆಗಬಹುದು ಎಂಬ ಲೆಕ್ಕಾಚಾರವೂ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ತೇಜಸ್ವಿ ಯಾದವ್ ಬಿಟ್ಟರೆ ಇನ್ನೊಬ್ಬರಿಲ್ಲ. ಇವೆಲ್ಲವುಗಳ ಹೊರತಾಗಿ ಈ ಬಾರಿ ಆಮ್ ಆದ್ಮಿ ಪಕ್ಷ ಬಿಹಾರ ರಾಜಕಾರಣ ಪ್ರವೇಶ ಮಾಡುತ್ತದೆ. ಆಮ್ ಆದ್ಮಿ ಪಕ್ಷದ ಮುಖಾಂತರ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ರಾಜ್ಯ ರಾಜಕಾರಣ ಆರಂಭಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೀಗೆ ಪ್ರತಿಪಕ್ಷಗಳ ಪಾಳೆಯದಲ್ಲಿ ಪ್ರತಿ ವಿಷಯದ ಬಗೆಗೂ ಗೊಂದಲ ಇದೆ. ಈ ನಡುವೆ ಎನ್ ಡಿ ಎ ಮೈತ್ರಿ ಬಿಕ್ಕಟ್ಟುಗಳನ್ನು ಬಗೆಹರಿಸಲು ಖುದ್ದಾಗಿ ಅಮಿತ್ ಶಾ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ಬಿಜೆಪಿ ಚುನಾವಣಾ ಪ್ರಚಾರವನ್ನೂ ಆರಂಭಿಸಿದೆ. ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಸಂಬಂಧ ಬಹಳ ಸುಧಾರಿಸಿದೆ ಎಂದು ಬಿಂಬಿಸಲಾಗುತ್ತಿದೆ. ಕರೋನಾ ವಿಷಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಣಾಮಕಾರಿಯಾಗಿ ನಿರ್ವಹಿಸಿವೆ ಎಂದು ಬಿಂಬಿಸಲಾಗುತ್ತಿದೆ. ಭಾರತ-ಚೀನಾ ಗಡಿ ಸಮಸ್ಯೆಯಲ್ಲಿ ಪ್ರಧಾನಿ ಮೋದಿ ದಿಗ್ವಿಜಯ ಸಾಧಿಸಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇಷ್ಟೆಲ್ಲಾ ಆದರೂ ಬಿಜೆಪಿಗೆ ಬಿಹಾರದಲ್ಲಿ ಗೆಲುವಿನ‌ ಹಾರ ತನ್ನ ಕೊರಳಿಗೇ ಬರುತ್ತದೆ ಎಂಬ ವಿಶ್ವಾಸವಿಲ್ಲ.

ಅದೇ ಕಾರಣಕ್ಕೆ ಈಗ ಬಿಜೆಪಿ ಬಿಹಾರದಲ್ಲಿ ನಿರ್ಣಾಯಕರಾಗಿರುವ ಹಿಂದುಳಿದ ವರ್ಗಗಳ ಮತಗಳನ್ನು ಬಡಿದೆಬ್ಬಿಸಲು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪಡೆಯಲು ಆದಾಯ ಅರ್ಹತಾ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಅಗತ್ಯ ತಯಾರಿ ನಡೆಸಿದೆ.

ಈವರೆಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪಡೆಯಲು 8 ಲಕ್ಷ ರೂಪಾಯಿ ಒಳಗಿನ ಆದಾಯ ಮಿತಿ ಇತ್ತು. ಇದನ್ನೀಗ 12 ಲಕ್ಷಕ್ಕೆ ಏರಿಸುವ ಚಿಂತನೆ ನಡೆಯುತ್ತಿದೆ. ಹಿಂದೆ ಆದಾಯ ಮಿತಿ ಹೆಚ್ಚಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಮೂಲದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರೇ ಈಗ ಆದಾಯ ಮಿತಿ ಹೆಚ್ಚಳದ ಪ್ರಸ್ತಾಪ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೂರು ವರ್ಷಕ್ಕೊಮ್ಮೆ ಆದಾಯ ಮಿತಿಯನ್ನು ಪರಿಷ್ಕರಿಸಲು ಕಾನೂನಿನಲ್ಲಿ ‌ಅವಕಾಶ ಇದೆ. ಇದರ ಆಧಾರದ ಮೇಲೆ 2013ರಲ್ಲಿ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪಡೆಯಲು ಆದಾಯ ಅರ್ಹತಾ ಮಿತಿಯನ್ನು 4 ಲಕ್ಷ ರೂಪಾಯಿಗಳಿಂದ 6 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಿತ್ತು. ಬಳಿಕ 2017ರಲ್ಲಿ ಬಿಜೆಪಿ ಸರ್ಕಾರ 6ರಿಂದ 8 ಲಕ್ಷ ರೂಪಾಯಿಗೆ ಹೆಚ್ಚಿಸಿತ್ತು. ಈಗ ಬಿಹಾರ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಹಿಂದುಳಿದ ವರ್ಗಗಳ ಮತದಾರ ಮತ್ತೆ ನೆನಪಾಗಿದ್ದಾನೆ.

ಕಳೆದ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಎಸ್ ಎಸ್ ನಾಯಕ ಮೋಹನ್ ಭಾಗವತ್ 'ಮೀಸಲಾತಿಯನ್ನು ಪುನರ್ ಪರಮಾರ್ಶೆ' ನಡೆಸಬೇಕು ಎಂದು ಹೇಳಿದ್ದರು. ಈ ಅಚಾತುರ್ಯ ಆದ ಬಳಿಕ ಪ್ರಧಾನಿ ಮೋದಿಯಿಂದ ಹಿಡಿದು ಬಿಜೆಪಿಯ ಪುಡಿ ನಾಯಕರವರೆಗೆ, ಆರ್ ಎಸ್ ಎಸ್ ಮುಖಂಡರವರೆಗೆ ಎಲ್ಲರೂ ಸ್ಪಷ್ಟೀಕರಣ ನೀಡಿದ್ದರು. ಮೋಹನ್ ಭಾಗವತ್ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ ಎಂದು ಡ್ಯಾಮೇಜ್ ಕಂಟ್ರೋಲ್ ಮಾಡಲು ಪ್ರಯತ್ನಿಸಿದ್ದರು. ಆದರೆ ಅದ್ಯಾವೂ ಫಲ ತಂದು ಕೊಟ್ಟಿರಲಿಲ್ಲ. ಬಿಜೆಪಿ ಬಿಹಾರದಲ್ಲಿ ಸೋಲು ಅನುಭವಿಸಿತ್ತು. ಈಗ ಹಿಂದುಳಿದ ವರ್ಗಗಳ ಓಲೈಕೆ ಮಾಡಲು ಮುಂದಾಗಿದೆ. ಫಲಿತಾಂಶ ಏನು ಬರುತ್ತದೆ ಎಂಬುದನ್ನು ಕಾದುನೋಡಬೇಕು.

Click here to follow us on Facebook , Twitter, YouTube, Telegram

Pratidhvani
www.pratidhvani.com