ಕರ್ನಾಟಕದ ʼದೋಸ್ತ್‌ʼಗಳಿಗೆ ಕೇಂದ್ರದ ಪ್ಯಾಕೇಜ್ ಕಂಡಿದ್ದು ಹೇಗೆ..?
ರಾಜಕೀಯ

ಕರ್ನಾಟಕದ ʼದೋಸ್ತ್‌ʼಗಳಿಗೆ ಕೇಂದ್ರದ ಪ್ಯಾಕೇಜ್ ಕಂಡಿದ್ದು ಹೇಗೆ..?

ಕೋವಿಡ್ 19 ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ ನಲ್ಲಿ ಸಾಕಷ್ಟು ಜನರಿಗೆ ಅನುಕೂಲ ಆಗಲಿದೆ ಎನ್ನುವ ನಂಬಿಕೆ ಇಡೀ ದೇಶದ ಜನರದ್ದಾಗಿತ್ತು. ಆದರೆ ನಿರೀಕ್ಷೆ ಮಾಡಿದ್ದೆಲ್ಲವೂ ಹುಸಿಯಾಗಿದ್ದರಿಂದ ಇದೀಗ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಶುರುವಾಗಿದೆ. 

ಕೃಷ್ಣಮಣಿ

ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಭಾರತವನ್ನು ಮತ್ತೆ ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯಬೇಕು ಎನ್ನುವ ಉದ್ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಆ ಬಳಿಕ ಮೇ 13 ರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಿರಂತರವಾಗಿ ನಾಲ್ಕು ಹಂತಗಳಲ್ಲಿ ಯೋಜನೆಗಳನ್ನು ಬಿಚ್ಚಿಡುವ ಕೆಲಸ ಮಾಡಿದ್ದರು. ಕೋವಿಡ್ 19 ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ ನಲ್ಲಿ ಸಾಕಷ್ಟು ಜನರಿಗೆ ಅನುಕೂಲ ಆಗಲಿದೆ ಎನ್ನುವ ನಂಬಿಕೆ ಇಡೀ ದೇಶದ ಜನರದ್ದಾಗಿತ್ತು. ಆದರೆ ನಿರೀಕ್ಷೆ ಮಾಡಿದ್ದೆಲ್ಲವೂ ಹುಸಿಯಾಗಿದ್ದರಿಂದ ಇದೀಗ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಶುರುವಾಗಿದೆ. ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ತಮಿಳುನಾಡು ಸಿಎಂ ಪಳನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಪ್ರಧಾನಮಂತ್ರಿಗಳು ಕೊವೀಡ್ 19 ಪರಿಣಾಮ ಎದುರಿಸಲು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಪ್ಯಾಕೇಜ್ ನ ಮೊದಲ ಹಂತದಲ್ಲಿ ಆರ್ಥಿಕ ಸಚಿವರು MSME (Micro, Small and Medium Enterprises) ಮತ್ತು ವಲಸೆ ಕಾರ್ಮಿಕರಿಗೆ 6 ಲಕ್ಷ ಕೋಟಿ ಪ್ಯಾಕೇಜ್ ಎಂದು ಘೋಷಿಸಿದ್ರು. ಆ ಬಳಿಕ 4 ದಿನಗಳ ಕಾಲ ನಿರಂತರವಾಗಿ ಸಂಜೆ 4 ಗಂಟೆಗೆ 20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಕಂತುಗಳಲ್ಲಿ ಘೋಷಣೆ ಮಾಡಿದ್ರು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಗಳು ಘೋಷಣೆ ಮಾಡಿದ್ದು, ಸಮಸ್ಯೆಗಳಿಗೆ ಪರಿಹಾರ ಸಿಗೋ ನಿರೀಕ್ಷೆ ಇತ್ತು. ಆದರೆ ಕೇಂದ್ರ ಸರ್ಕಾರ ಕರೋನಾ ಸಾಂಕ್ರಾಮಿಕ ಖಾಯಿಲೆಗೆ ಪರಿಹಾರ ಕೊಟ್ಟಿಲ್ಲ. ಮೊದಲ ಪ್ಯಾಕೇಜ್ ನಲ್ಲಿ 6.5 ಲಕ್ಷ ಕೋಟಿ ಎಂದು ಘೋಷಣೆ ಮಾಡಿದ್ರು. ಕೇಂದ್ರ ಸರ್ಕಾರ ಖಜಾನೆಗೆ ಬಜೆಟ್ ನಿಂದ ಹಣ ಹೋಗುವುದು. 13 ನೇ ಬಜೆಟ್ ಗೆ ಸೇರಿದ ಹಣವನ್ನೇ ಘೋಷಣೆ ಮಾಡಿದ್ದಾರೆ. ಇವರು ಹೆಚ್ಚುವರಿಯಾಗಿ ಕೊಡ್ತಿರೋದು ಕೇವಲ 2500 ಕೋಟಿ ಮಾತ್ರ ಎಂದು ಟೀಕಿಸಿದ್ದಾರೆ.

20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಎರಡು ಮೂರು ದಿನಗಳಿಂದ ಹಲವಾರು ನಾಯಕರು ಜಿಡಿಪಿಯ ಶೇಕಡ 1ರಷ್ಟು ಅಂತ ಹೇಳುತ್ತಿದ್ದಾರೆ. ಪ್ಯಾಕೇಜ್‌ ಗಳ ಮೂಲಕ ಕೇಂದ್ರ ಸರ್ಕಾರ ಕೋವಿಡ್ ಸಂಕಷ್ಟದಿಂದ ಹೊರ ಬರೋದು ಮುಖ್ಯ. ಇದು ಅತ್ಯಂತ ಸೂಕ್ಷ್ಮ ವಿಚಾರ, ಇದರ ಮಾಹಿತಿ ಸಂಗ್ರಹ ಮಾಡಿ ದೇಶದ ಜನತೆ ಮುಂದೆ ಮಾಧ್ಯಮಗಳು ಹೇಳಬೇಕು ಎಂದಿದ್ದಾರೆ. ಸರ್ಕಾರ ಇಂತಹ ನಿರ್ಧಾರ ತೆಗೆದುಕೊಳ್ಳುವಾಗ ಹಲವು ಅರ್ಥಿಕ ಸಂಘ ಸಂಸ್ಥೆಗಳು ಸಲಹೆ ಕೊಡುತ್ತವೆ. ಅದರೆ ನಮ್ಮ ಆರ್ಥಿಕ ಸಚಿವರು ತೆಗೆದುಕೊಂಡ ನಿರ್ಧಾರದಲ್ಲಿ ಪಾರದರ್ಶಕತೆಯಲ್ಲಿ ದೋಷವಿದೆ. ನಾನು ಕೂಡ ಟಿವಿಯಲ್ಲಿ ಸೀರಿಯಲ್ ನೋಡಿದ ಹಾಗೆ ನಾಲ್ಕು ದಿನ ಪ್ಯಾಕೇಜ್ ಘೋಷಣೆ ನೋಡಿದ್ದೇನೆ. ಸರ್ಕಾರದ ತಂದ ಈ ಘೋಷಣೆಯಲ್ಲಿ ಹಲವು ಯಕ್ಷ ಪ್ರಶ್ನೆಗಳು ಇವೆ. ಪ್ಯಾಕೇಜ್ ಘೋಷಣೆಗಳು ಸ್ವೇಚ್ಛಾಚಾರವಾಗಿ ಮಾಡಿದ್ರು. ಇದನ್ನ ಪ್ರಶ್ನೆ ಮಾಡಿದವರನ್ನ ದೇಶದ್ರೋಹಿಗಳು ಅನ್ನೋ ಹಾಗೆ ಬಿಂಬಿಸಿಕೊಂಡು ಬಂದಿದ್ದಾರೆ. 15 ನೇ ಹಣಕಾಸು ಆಯೋಗದ ಸಲಹಾ ಸಮಿತಿ ಇದೆ. ಕೊವೀಡ್ 19 ಸಮಯದಲ್ಲೇ ಏಪ್ರಿಲ್ 23, 24 ರಂದು ಸಭೆ ಮಾಡಿದ್ರು. ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ನಾಲ್ಕು ಶಿಫಾರಸ್ಸುಗಳನ್ನೂ ಮಾಡಿದ್ರು. ಸಣ್ಣ ಪ್ರಮಾಣದ ಉದ್ಯಮಗಳು, ಆರ್ಥಿಕ ದಿವಾಳಿತನಕ್ಕೆ ಒಳಗಾದ ಸಂಸ್ಥೆಗಳ ಉತ್ತೇಜನಕ್ಕೆ ಶಿಫಾರಸು ಮಾಡಿದ್ದರು. ಬ್ಯಾಂಕೇತರ ಸಂಸ್ಥೆಗಳು ಆರ್ಥಿಕವಾಗಿ ಕುಸಿದಿವೆ ಇದನ್ನ ಸರಿಪಡಿಸಿ ಎಂದು ಸಲಹೆ ಕೊಟ್ಟಿತ್ತು. ಆದರೆ ಯಾವುದೂ ನಿರೀಕ್ಷೆ ಮಟ್ಟಕ್ಕೆ ಇಲ್ಲ ಎಂದು ಟೀಕಿಸಿದ್ದಾರೆ.

ಹಣಕಾಸು ಆಯೋಗದ ಶಿಫಾರಸುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ಯಾಕೇಜ್ ಮಾತಾಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಿನ ಪರಿಸ್ಥಿತಿಯಲ್ಲಿ ಸಂಪನ್ಮೂಲದ ಕೊರತೆ ಇದೆ. ಐಎಂಎಫ್ ಭಾರತದ ಜಿಡಿಪಿ ದರ ಶೇಕಡ 5.8 ಎಂದು ಅಂದಾಜು ಮಾಡಿದೆ. ಸದ್ಯದ ಈಗಿನ ಪರಿಸ್ಥಿತಿ ಶೇಕಡ 1.9ರಷ್ಟಿದೆ. 1930ರಲ್ಲಿ ಇದ್ದ ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು IMF ಹೇಳಿದೆ. ವಿಶ್ವಬ್ಯಾಂಕ್ ಶೇಕಡ 1.8 ರಷ್ಟು ಜಿಡಿಪಿ ನಿಲ್ಲುತ್ತೆ ಅಂತ ಹೇಳಿದೆ. ಪಿಕ್ ಸಂಸ್ಥೆ ಶೇಕಡಾ 0.8 ಕ್ಕೆ ನಿಲ್ಲುತ್ತೆ ಅಂತ ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ಸಾಧಕ ಬಾಧಕ ನಿರ್ವಹಣೆ ಬಗ್ಗೆ ಶ್ವೇತ ಪತ್ರ ಹೊರಡಿಸಲು ಹಣಕಾಸು ಆಯೋಗ ಹೇಳಿದೆ. ನಮ್ಮ ದೇಶದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ಸಮಸ್ಯೆ ಇದೆ. 20 ಲಕ್ಷ ಕೋಟಿ ಪ್ಯಾಕೇಜ್‌ ನಲ್ಲಿ ರಾಜ್ಯಗಳಿಗೆ ಯಾವ ರೀತಿ ಕೊಡುತ್ತಾರೆ ಎನ್ನುವುದು ಪ್ರಶ್ನೆಯಾಗುತ್ತಿದೆ. ರಾಜ್ಯಗಳು ಕೊವೀಡ್ 19 ರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಪರಿಹಾರ ಮತ್ತು ಅಭಿವೃದ್ಧಿ ವೆಚ್ಚಗಳಿಗೆ ಹೇಗೆ ಹಣ ಕೊಡುತ್ತಾರೆ..? ಇವರು ಪರಿಹಾರ ಕೊಟ್ಟಿಲ್ಲ. ಈಗ ಕೊಟ್ಟಿರುವ ಆರ್ಥಿಕ ಪ್ಯಾಕೇಜ್ ನಿಂದ ಚೇತರಿಕೆ ಕಾಣಲು ಸಾಧ್ಯವಿಲ್ಲ. ಮೊದಲು ಘೋಷಿಸಿದ್ದ 6500 ಕೋಟಿ ಪ್ಯಾಕೇಜ್ ಸುಳ್ಳಿನ ಕಂತೆ. ಮೂರ್ಖತನದ ಘೋಷಣೆ. ಸರ್ಕಾರ ಇನ್ನೂ ಸರಿಯಾದ ಹೋಂ ವರ್ಕ್ ಮಾಡಿಲ್ಲ. ಫೆಬ್ರವರಿ 29 ರಿಂದ ಎಷ್ಟು ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಅದರಲ್ಲಿ ದಿವಾಳಿಯಾದವು ಎಷ್ಟು ಎಂಬುದು ಸರ್ವೇ ಮಾಡಬೇಕಿತ್ತು.

ಹೆಚ್ಚುವರಿಯಾಗಿ 50 ಸಾವಿರ ಕೋಟಿ ಇಟ್ಟಿದ್ದಾರೆ, ಅದು ಯಾರಿಗೆ ಕೊಡ್ತಾರೆ..? ಏನಕ್ಕೆ ಇಟ್ಟಿದ್ದಾರೆ..? ಇದಕ್ಕೆ ಹಣಕಾಸು ಸಚಿವರು ಉತ್ತರ ಕೊಡಬೇಕು. 13ನೇ ತಾರೀಕಿನ ಪ್ಯಾಕೇಜ್ ಬಗ್ಗೆ ಸಚಿವರು ಲೈಟ್ ಆಗಿ ತೆಗೆದುಕೊಂಡು‌ ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯ ಸರ್ಕಾರ 1610 ಕೋಟಿ ಪ್ಯಾಕೇಜ್ ಕೊಟ್ಟು ಆಟೋ ಚಾಲಕರಿಗೆ ಹೂವು ಮುಡಿಸಿದ್ರು. ಆಟೋ ಚಾಲಕರಿಗೆ , ಟ್ಯಾಕ್ಸಿಗಳಿಗೆ 20 ಕೋಟಿ ಹಣ ಆಂದ್ರು. ಎಷ್ಟು ಜನರಿಗೆ ಇದನ್ನ ಕೊಡೋಕೆ ಸಾಧ್ಯ.? ಇವತ್ತು ಅವರ ಪರಿಸ್ಥಿತಿ ಹೇಗಿದೆ..? ಇಂತಹ ಸಮಯದಲ್ಲಿ ಜನರ ಜೊತೆ ಆಟವಾಡಬೇಡಿ. ಪ್ರತಿದಿನ ಮೀಟಿಂಗ್ ಅಂತಿರಿ. ಪೂರ್ವ ತಯಾರಿ ಇಲ್ಲ. ಮಾಸ್ಕ್ ಇಲ್ಲ. ಸ್ಯಾನಿಟೈಸರ್ ಇಲ್ಲ ಅಂತೀರಿ. ಆದರೆ ದುಡ್ಡು ಮಾತ್ರ ಹೊಡಿತೀರಿ. ಕೇಂದ್ರದ ಆರ್ಥಿಕ ಸಚಿವರು ಪೊಳ್ಳು ಭಾಷಣ ಬಿಟ್ಟು ಹೋಗಿದ್ದಾರೆ. ಬಡವರ ಜೀವ ಉಳಿಸುವುದು ನಿಮ್ಮ ಕರ್ತವ್ಯ. ನೀವು ಒಳ್ಳೆಯ ಇಂಗ್ಲೀಷ್ ಮಾತಾಡಬಹುದು, ಇಂಗ್ಲೀಷ್ ಮಾತಾಡಿದ್ರೆ, ಜನರ ಜೀವ ಉಳಿಯಲ್ಲ ಎಂದು ನಿರ್ಮಲಾ ಸೀತಾರಾಮನ್ ಗೆ ಕುಟುಕಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಸುದ್ದಿಗೋಷ್ಠಿ ನಡೆಸಿ ಸರ್ಕಾರರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಆಧಿಕಾರ ಸ್ವೀಕಾರ ಮಾಡದಿದ್ದರು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಕರೋನಾ ಸಮಯದಲ್ಲಿ ಕಾರ್ಯಕರ್ತರ ಜೊತೆ ಕೆಲಸ ಮಾಡ್ತಿದ್ದೇನೆ. ಹಲವಾರು ತಾಲೂಕುಗಳಿಗೆ ಭೇಟಿ ಕೊಟ್ಟು ರೈತರ ಸಮಸ್ಯೆ ಅಲಿಸಿದ್ದೇನೆ. ರೇಷನ್ ಕಿಟ್ ವಿತರಿಸಿದ್ದೇವೆ. ರೈತರಿಂದ ತರಕಾರಿ, ಹೂವು ಖರೀದಿ ಮಾಡಿ ಜನರಿಗೆ ಹಂಚಿದ್ದೇವೆ. ಕರೋನಾ ವಿಚಾರದಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಇಡೀ ಸರ್ಕಾರ ರೈತರ ಬಳಿ ಹೋಗಿಲ್ಲ. ವಲಸೆ ಕಾರ್ಮಿಕರ ಬಳಿ ಹೋಗಿಲ್ಲ, ಅವರನ್ನ ಉಳಿಸಿಕೊಳ್ಳಲು ಅಗಿಲ್ಲ. ಆಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಅನೌನ್ಸ್ ಮಾಡಿದೆ. ಅಂತಿಮವಾಗಿ ಲೆಕ್ಕ ಹಾಕಿದ್ರೆ ಕೇವಲ 2 ಲಕ್ಷ ಕೋಟಿ ಮಾತ್ರ ಸರ್ಕಾರದ ಕಡೆಯಿಂದ ಸಿಗಲಿದೆ. ಉಳಿದ ಹಣ ಸಾಲದ ಮೂಲಕ ಕೊಡಲು ಮಾರ್ಗಸೂಚಿ ರೆಡಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಮಾಜಿ ಸಿಎಂ ಜೆ ಹೆಚ್ ಪಟೇಲರು ಬಡ್ಡಿ ಕೊಟ್ಟು ಬಡ್ಡಿ ಮಕ್ಕಳು ಮಾಡಿದ್ರು ಅಂತಿದ್ರು. ಅದೇ ರೀತಿ ಮೋದಿ ಸರ್ಕಾರ ಸಾಲ ಕೊಟ್ಟು ಸಾಲಗಾರರನ್ನಾಗಿ ಮಾಡಲು ಮುಂದಾಗಿದ್ದಾರೆ. ಜನರಿಗೆ ನೇರವಾಗಿ ಸಹಕಾರ ಮಾಡಿದ್ರೆ ಚೆನ್ನಾಗಿತ್ತು. ಕೇಂದ್ರದ ಘೋಷಣೆಗಳು‌ ಜನಸಾಮಾನ್ಯರಿಗೆ ಅನುಕೂಲ ಇಲ್ಲ. ಸಿಎಂ ಬಿ.ಎಸ್ ಯಡಿಯೂರಪ್ಪ 1610 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ರು. 50 ದಿನ ಅದ್ರು ಒಬ್ಬರಿಗೆ ಒಂದು ರೂಪಾಯಿ ಕೊಟ್ಟಿಲ್ಲ. ಪೀಣ್ಯದಲ್ಲಿ ಲಕ್ಷಾಂತರ ಕಾರ್ಮಿಕರು ಇದ್ದಾರೆ. ಅದ್ರೆ 3 ಸಾವಿರ ಕಿಟ್ ವಿತರಿಸಿ ಬಿಜೆಪಿ ಕಾರ್ಯಕರ್ತರು ದುರುಪಯೋಗ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ವಲಸೆ ಕಾರ್ಮಿಕರನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಎಲ್ಲರೂ ಬೆಂಗಳೂರು ನಗರ ಬಿಟ್ಟು ಹೋಗಿದ್ದಾರೆ. ದೇಶ ಕಟ್ಟಿದ್ದು ಕಾರ್ಮಿಕರು. ಇಡೀ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕಾರ್ಮಿಕರು, ನೊಂದ ಜನರನ್ನ ಭೇಟಿ ಮಾಡುತ್ತೇನೆ, ಎಲ್ಲ ವರ್ಗ, ಧರ್ಮದ ಜನರನ್ನ ಭೇಟಿಯಾಗುತ್ತೇವೆ. ಅಧಿಕಾರ, ರಾಜಕಾರಣಕ್ಕೆ ಈ‌ ಕಾರ್ಯಕ್ರಮ ಮಾಡಲ್ಲ. ಮಾನವೀಯ ದೃಷ್ಟಿಯಿಂದ ಕಾರ್ಯಕ್ರಮ ಮಾಡ್ತೇನೆ ಎಂದಿದ್ದಾರೆ.

ಒಟ್ಟಾರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ನಾಯಕರು ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಆರೋಪಕ್ಕೆ ಉತ್ತರ ಕೊಡಬೇಕಿದೆ. ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವ ಪ್ಯಾಕೇಜ್ ಸಾಮಾನ್ಯ ಜನರಿಗೆ ಅರ್ಥವಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜನಸಾಮಾನ್ಯನಿಗೆ ಕೇಂದ್ರ ಸರ್ಕಾರ ಕೊಟ್ಟಿದ್ದು ಏನು ಎನ್ನುವುದೂ ಇಲ್ಲೀವರೆಗೂ ಗೊತ್ತಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೂ ಮುನ್ನವೇ ಘೋಷಣೆ ಮಾಡಿದ್ದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಮಾತ್ರ ಬಿಡುಗಡೆಯಾಗಿದೆ. ಇನ್ನುಳಿದ ಸಹಾಯ ಏನು..? ಗೊತ್ತಿಲ್ಲ. ಬಿಜೆಪಿ ನಾಯಕರು ಉತ್ತರ ಕೊಡುತ್ತಾರ ಕಾದು ನೋಡಬೇಕು.

Click here Support Free Press and Independent Journalism

Pratidhvani
www.pratidhvani.com