ರಾಹುಲ್‌ ಗಾಂಧಿ ಮಾಡಿದ್ದು ಇದೆಂಥಾ ಘೋರ ಅಪರಾಧ!?
ರಾಜಕೀಯ

ರಾಹುಲ್‌ ಗಾಂಧಿ ಮಾಡಿದ್ದು ಇದೆಂಥಾ ಘೋರ ಅಪರಾಧ!?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಲಸೆ ಕಾರ್ಮಿಕರನ್ನ ಭೇಟಿ ಮಾಡಿದ್ದಾರೆ ಅನ್ನೋ ಕಾರಣಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ರಾಹುಲ್‌ ಅವರನ್ನ ʼನಾಟ್ಯ ರಾಜʼ ಎಂದಿದ್ದಾರೆ. ಹಾಗಿದ್ದರೆ ರಾಹುಲ್‌ ಗಾಂಧಿ ಮಾಡಿದ್ದು ತಪ್ಪೇ?, ಏನಂತಾರೆ ಟ್ವೀಟ್‌ ಬಳಕೆದಾರರು..? 

ಕೃಷ್ಣಮಣಿ

ಕರೋನಾ ಸಂಕಷ್ಟ ಕಾಲದಲ್ಲಿ ಇಡೀ ಭಾರತ ದೇಶವೇ ನಲುಗಿ ಹೋಗಿದೆ. ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳೂ ತನ್ನ ಶಕ್ತಿಮೀರಿ ಕರೋನಾ ನಿಯಂತ್ರಣಕ್ಕೆ ಬೇಕಾದ ಪ್ರಯತ್ನ ಮಾಡಿದವು. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಜೀವ, ಜೀವನ ಎರಡು ಆಯ್ಕೆಗಳಲ್ಲಿ ಅಂತಿಮ ಆಯ್ಕೆ ಜೀವ ಎಂದಿದ್ದರು. ಅದಾದ ಬಳಿಕ ಕರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಮಾಡಿಕೊಂಡು ಇದ್ದರೆ ಸರ್ಕಾರ ನಡೆಸುವುದು ಕಷ್ಟಸಾಧ್ಯ ಎನ್ನುವುದು ಅರಿವಾಯಿತು. ಆ ನಂತರ ಸರ್ಕಾರಗಳು ಅಂತಿಮವಾಗಿ ಜೀವವನ್ನು ಉಳಿಸಿಕೊಳ್ಳುವ ಆಲೋಚನೆ ಬಿಟ್ಟು ಜೀವನವನ್ನೇ ಆಯ್ಕೆ ಮಾಡಿಕೊಂಡು ಮುಂದೆ ಸಾಗುವ ದೃಷ್ಟಿ ನೆಟ್ಟಿವೆ. ಇದೇ ಕಾರಣಕ್ಕೆ ಲಾಕ್‌ಡೌನ್‌ ವ್ಯವಸ್ಥೆ ಒಳಗೂ ಸಾಮಾನ್ಯ ಜನಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕರೋನಾ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಏರುತ್ತಿದ್ದರೂ ಸರ್ಕಾರ ಮಾತ್ರ ಕರೋನಾ ನಿಯಂತ್ರಣಕ್ಕೆ ಯಾವುದೇ ಕ್ರಮವನ್ನೂ ಕೈಗೊಳ್ಳದೆ ಸಾಂಕ್ರಾಮಿಕ ರೋಗ ಕರೋನಾಗೆ ಚಿಕಿತ್ಸೆ ಕೊಡುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಅಂದರೆ ಕರೋನಾ ಎನ್ನುವುದು ನಿಮ್ಮ ಬದುಕಿನ ಒಂದು ಭಾಗ ಎನ್ನುವಂತೆ ಅದರೊಂದು ಬದುಕಿ ಎಂದು ಪರೋಕ್ಷವಾಗಿ ಜನರಿಗೆ ತಿಳಿಸಿದೆ.

ಕರೋನಾದಿಂದ ಬದುಕು ಹೀಗಿರುವಾಗ ಲಕ್ಷಾಂತರ ಕಾರ್ಮಿಕರು ಅನ್ನ ನೀರು ಇಲ್ಲದೆ, ಶ್ರಮಿಕ್‌ ರೈಲು ವ್ಯವಸ್ಥೆ ಸಿಗದೆ ಬರಿಗಾಲಿನಲ್ಲಿ ಸಾವಿರಾರು ಕಿಲೋ ಮೀಟರ್‌ ದೂರ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಕರೋನಾ ಸಂಕಷ್ಟದ ಬದುಕಿನ ಬಾಳ ದೋಣಿ ತೇಲಿಸಲಾಗದೆ ಅದೆಷ್ಟೋ ಸಾಮಾನ್ಯ ಜನರು ಸಾವಿನ ಮನೆಯ ಬಾಗಿಲು ತಟ್ಟಿದ್ದಾರೆ. ಇದನ್ನೆಲ್ಲಾ ವಿರೋಧ ಪಕ್ಷಗಳು ಪ್ರಶ್ನಿಸುವ ಜರೂರತ್ತು ಇದ್ದರೂ ಕರೋನಾ ಕಾಲದ ನೆಪದಲ್ಲಿ ತೆಪ್ಪಗಿವೆ. ಅದೆಷ್ಟೋ ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್‌ ಒದಗಿಸಿಲ್ಲ ಎನ್ನುವ ಕಾರಣಕ್ಕೆ ಆರೋಗ್ಯ ಸಿಬ್ಬಂದಿಗಳೇ ಪ್ರತಿಭಟನೆ ನಡೆಸಿದ್ದಾರೆ. ಆರೋಗ್ಯ ಸೇವೆ ನೀಡುತ್ತಿರುವ ನರ್ಸ್‌ಗಳನ್ನು ಕ್ವಾರಂಟೈನ್‌ ಮಾಡಿರುವ ಕಟ್ಟಡದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎನ್ನುವ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನುವ ಕಾರಣಕ್ಕೆ ಕರ್ನಾಟಕದ ಶಿವಮೊಗ್ಗದಲ್ಲಿ ಅಮಾನತು ಶಿಕ್ಷೆ ಕೊಟ್ಟಿದ್ದಾರೆ. ಶ್ರೀಸಾಮಾನ್ಯ ಜನರು ಮಹಾರಾಷ್ಟ್ರ ಸೇರಿದಂತೆ ದೇಶದ ಬೇರೆ ಭಾಗದಿಂದ ಬಂದು ಕ್ವಾರಂಟೈನ್‌ ಆಗಿದ್ದಾಗ ಸರ್ಕಾರ ಸೂಕ್ತ ಊಟೋಪಚಾರ ಮಾಡಿಲ್ಲ ಎನ್ನುವ ದೂರುಗಳು ಸರ್ವೇ ಸಾಮಾನ್ಯವಾಗಿವೆ. ಪರಿಸ್ಥಿತಿ ಹೀಗಿದ್ದರೂ ವಿರೋಧ ಪಕ್ಷಗಳು ಬಾಯಿಗೆ ಬೀಗ ಹಾಕಿಕೊಂಡು ನಿದ್ರೆಗೆ ಜಾರಿದ್ದಾಗಿದೆ. ಜನರು ನಮ್ಮ ಸಮಸ್ಯೆ ಯಾರಿಗೂ ಅರ್ಥವಾಗಲ್ಲ, ಒಂದು ವೇಳೆ ಅರ್ಥವಾದರೂ ನಮ್ಮ ಸಹಾಯಕ್ಕೆ ಯಾರೂ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದು ಆಗಿದೆ. ಆದರೆ ಈ ಸಮಯದಲ್ಲಿ ಕಾಂಗ್ರೆಸ್‌ ನಾಯಕ ಮಾಡಿರುವ ಮಹಾನ್‌ ಅಪರಾಧ ಕೇಂದ್ರ ಸರ್ಕಾರದ ಕಣ್ಣು ಕುಕ್ಕಿಬಿಟ್ಟಿದೆ.

ಕಳೆದ ಶನಿವಾರ (16/05/2020) ರಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಆನ್‌ಲೈನ್‌ ಸಂವಾದ ನಡೆಸಿದ ಬಳಿಕ ರಾಹುಲ್‌ ಗಾಂಧಿ, ದೆಹಲಿಯ ಸುಖ್‌ದೇವ್‌ ವಿಹಾರ್‌ ಫ್ಲೈ ಓವರ್‌ ಬಳಿ ನಡೆದುಕೊಂಡು ಹೋಗುತ್ತಿದ್ದ ಕೆಲವು ಕಾರ್ಮಿಕರನ್ನು ಮಾತನಾಡಿದ್ದರು. ವಲಸೆ ಕಾರ್ಮಿಕರ ಸಮಸ್ಯೆ ಹಾಗೂ ಕಾಲ್ನಡಿಗೆ ಪ್ರಯಾಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಮಧ್ಯಪ್ರದೇಶದಕ್ಕೆ ದೆಹಲಿಯಿಂದ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಹೇಶ್‌ ಕುಮಾರ್‌ ಹಾಗೂ ಆತನ 14 ಕುಟುಂಬಸ್ಥರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನರು ರಾಹುಲ್‌ ಗಾಂಧಿ ಜೊತೆಗೆ ತಮ್ಮ ಸಮಸ್ಯೆ ಹಂಚಿಕೊಂಡಿದ್ದರು. ಆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಕಾರ್ಮಿಕರು ರಾಹುಲ್‌ ಗಾಂಧಿ ಜೊತೆಗೆ ಮಾತನಾಡಿದ್ದು ಖುಷಿಯಾಯ್ತು. ನಮ್ಮ ಸಮಸ್ಯೆಯನ್ನು ಯಾರಾದರೂ ಒಬ್ಬರು ಆಲಿಸಿದ್ರು ಎನ್ನುವ ಭಾವನೆಯಿದೆ ಎಂದು ಹೇಳಿದ್ದರು. ಈ ಮಾತುಗಳು ದೇಶವನ್ನು ಮುನ್ನಡೆಸುತ್ತಿರುವ ಬಿಜೆಪಿಯ ಕಣ್ಣು ಕೆಂಪಾಗುವಂತೆ ಮಾಡಿದೆ. ರಾಹುಲ್‌ ಗಾಂಧಿ ಮಾಡಿದ್ದು ಅಕ್ಷಮ್ಯ ಎನ್ನುವಂತೆ ಕೇಂದ್ರ ಹಣಕಾಸು ಸಚಿವೆಯೂ ಆಗಿರುವ ನಿರ್ಮಲಾ ಸೀತಾರಾಮನ್‌ ಗುಡುಗಿದ್ದಾರೆ.

20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್‌ ಘೋಷಣೆ ಭಾನುವಾರ ಅಂತ್ಯವಾಗಿದೆ. 5 ಕಂತುಗಳು ಕೇಂದ್ರ ಸರ್ಕಾರ ಕರೋನಾ ಸಂಕಷ್ಟ ಕಾಲದಲ್ಲಿ ತೆಗೆದುಕೊಂಡ ನಿಲುವುಗಳು ಹಾಗೂ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಏನು ಮಾಡಲಿದೆ. ಯಾರಿಗೆಲ್ಲಾ ಸಹಾಯ ಮಾಡಲಿದ್ದೇವೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್‌, ಅಂತಿಮವಾಗಿ ಕಾಂಗ್ರೆಸ್‌ ವಿರುದ್ಧ ಕೆಂಡ ಕಾರಿದ್ದರು. ದೆಹಲಿಯ ಮಥುರಾ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕುಳಿತು ಮಾತನಾಡಿರುವ ರಾಹುಲ್‌ ಗಾಂಧಿ ʼನಾಟ್ಯ ರಾಜʼ ಎನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಲಸೆ ಕಾರ್ಮಿಕರ ಬಗ್ಗೆ ನಮಗೂ ಕಾಳಜಿ ಇದೆ. ತಮ್ಮ ಹುಟ್ಟೂರುಗಳಿಗೆ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರ ಪಕ್ಕದಲ್ಲಿ ಕುಳಿತು ಮಾತನಾಡಿರುವುದು ನಾಟಕ ಅಲ್ಲವೇ..? ಇದು ರಾಜಕೀಯ ನಾಟಕ ಮಾಡುವ ಸಮಯವೇ..? ನಾನು ವಿರೋಧ ಪಕ್ಷಗಳಲ್ಲಿ ಕೈ ಮುಗಿದು ಕೇಳ್ತೇನೆ, ವಲಸೆ ಕಾರ್ಮಿಕರ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ವ್ಯಂಗ್ಯವಾಗಿ ಆಕ್ರೋಶಭರಿತವಾಗಿ ಮಾತನಾಡಿದ್ದಾರೆ. ಈ ಮಾತುಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವಿವಾದ ಸ್ವರೂಪ ಪಡೆಯುತ್ತಿದೆ.

ರಾಹುಲ್‌ ಗಾಂಧಿ ವಲಸೆ ಕಾರ್ಮಿಕರನ್ನು ಕರೆದು ಮಾತನಾಡಿಸಿದ್ದು ಸೌಜನ್ಯದ ವಿಚಾರ ಅಲ್ಲವೇ..? ಆತನೂ ಕೂಡ ಒಂದು ಪಕ್ಷದ ನಾಯಕ. ಆಗಿದ್ದರೂ ಮಾತನಾಡುವ ಕೆಲಸ ಮಾಡಿದ್ದನ್ನು ಸಹಿಸಿಕೊಳ್ಳಲು ನಿರ್ಮಲಾ ಸೀತಾರಾಮನ್‌ಗೆ ಯಾಕೆ ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಇರುವ ʼಏಕೈಕ ಉದ್ಧಟನ ಪ್ರದರ್ಶನ ಮಾಡುವ ಮಹಿಳೆʼ ಎಂದೆಲ್ಲಾ ಟ್ವಿಟಿಗರು ಕಿಡಿಕಾರಿದ್ದಾರೆ.

ರಾಹುಲ್‌ ಗಾಂಧಿ ಮಾಡಿದ್ದು ಸರಿಯಿದೆ. ನಿಮ್ಮ ದ್ವೇಷ ಅಸೂಯೆಗಳ ಮೇಲೆ ನಿಯಂತ್ರಣ ಮಾಡುವುದು ಒಳ್ಳೆಯದು ಎಂದು ಜನರು ಸಲಹೆ ನೀಡಿದ್ದಾರೆ. ಯಾವುದು ನಾಟಕ..? ಕಳೆದ 50 ದಿನಗಳಿಂದ ಕಾರ್ಮಿಕರು ಸಾಯುತ್ತಿದ್ದರೂ ನಿಮ್ಮ ವಿರುದ್ಧ ಒಂದೇ ಒಂದು ಮಾತನಾಡಲಿಲ್ಲವಲ್ಲಾ ಅದು ನಾಟಕವೇ..? ನಿಮ್ಮ ನಡತೆಯನ್ನು ಸರಿ ಮಾಡಿಕೊಳ್ಳಿ ಎಂದೆಲ್ಲಾ ಜರಿದಿದ್ದಾರೆ. ರಾಹುಲ್‌ ಗಾಂಧಿ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಸಾವಿರಾರು ಜನರು ನಿರ್ಮಲಾ ಸೀತಾರಾಮನ್‌ ಅವರನ್ನೇ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್‌ ಮಾತ್ರ ಸೌಮ್ಯವಾಗಿ ಟ್ವೀಟ್‌ನಲ್ಲಿ ಕುಟುಕಿದ್ದು “finance minister F M ಅಂದ್ರೆ frustrated minister” ಎಂದು ಟೀಕಿಸಿದ್ದು, “frustrated (ಒತ್ತಡ) ನಿಭಾಯಿಸುವುದನ್ನು ಕಲಿಯಿರಿ” ಎಂದು ಕಿಚಾಯಿಸಿದೆ. ಒಟ್ಟಾರೆ ರಾಹುಲ್‌ ಮಾಡಿದ್ದನ್ನು ಆಕ್ರೋಶಭರಿತವಾಗಿ ಖಂಡಿಸುವ ಆತುರದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ತಮ್ಮ ಮನಸ್ಸು ನಿರ್ಮಲಾ ಅಲ್ಲವೆಂದು ಸಾಬೀತು ಮಾಡಿಕೊಂಡಂತಾಗಿದೆ.

Click here Support Free Press and Independent Journalism

Pratidhvani
www.pratidhvani.com