ಕರೋನಾ ಸಂಕಷ್ಟದಲ್ಲೂ ಬಂಗಾಳದಲ್ಲಿ ʼಭಯಂಕರʼ ರಾಜಕೀಯ..!
ರಾಜಕೀಯ

ಕರೋನಾ ಸಂಕಷ್ಟದಲ್ಲೂ ಬಂಗಾಳದಲ್ಲಿ ʼಭಯಂಕರʼ ರಾಜಕೀಯ..!

ರಾಜಕೀಯ ಲೆಕ್ಕಾಚಾರ ಯಾವುದನ್ನೂ ಬಿಟ್ಟಿಲ್ಲ ಅನ್ನೋದಕ್ಕೆ ಕರೋನಾವೂ ಒಂದು ಉದಾಹರಣೆ. ಕೇಂದ್ರ ಹಾಗೂ ರಾಜ್ಯ ಜೊತೆಯಾಗಿ ಸಾಗಬೇಕಿದ್ದ ಈ ಸಂದರ್ಭದಲ್ಲೂ ಪಕ್ಷಗಳ ನಡುವಿನ ಬುಸುಗುಟ್ಟುವಿಕೆ ಜಾಸ್ತಿಯೇ ಇದೆ. ಅದರಲ್ಲೂ ಮುಂದಿನ ವಿಧಾನಸಭೆ ಚುನಾವಣೆ ಪಶ್ಚಿಮ ಬಂಗಾಳದಲ್ಲಿ TMC ಗೆ ಪ್ರತಿಷ್ಠೆ ವಿಚಾರವಾಗಿದ್ದು, ʼದೀದಿʼಯಂತೂ ʼಫುಲ್‌ ಟೈಂʼ ಫೀಲ್ಡ್‌ಗಿಳಿದಿದ್ದು, ಕೇಂದ್ರ ಸರಕಾರದ ವಿರುದ್ಧ ಹರಿಹಾಯುವುದನ್ನ ಮುಂದುವರೆಸಿದ್ದಾರೆ.

ಕೃಷ್ಣಮಣಿ

ದೇಶದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಸಿಗದ ಹುಚ್ಚು ಕುದುರೆಯಂತೆ ಓಡುತ್ತಿದೆ. ಕರೋನಾವನ್ನು ಸಂಪೂರ್ಣವಾಗಿ ಮನಿಸಿ ನಿಲ್ಲಿಸುವುದು ಅಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಕೊಟ್ಟ ಬಳಿಕ ಇಡೀ ಪ್ರಪಂಚವೇ ವ್ಯಥ್ಯೆಗೆ ಸಿಲುಕಿದಂತಾಗಿದೆ. ಅದರಲ್ಲೂ ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕರೋನಾ ಲಾಕ್‌ಡೌನ್‌ ಮಾಡಿಕೊಂಡು ಇದ್ದರೆ, ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿಯುತ್ತದೆ ಎನ್ನುವ ಜೊತೆಗೆ ಕರೋನಾ ನಿಯಂತ್ರಣ ಕಷ್ಟ ಸಾಧ್ಯ ಎನ್ನುವುದನ್ನು ಅರಿತು ಕೈಚೆಲ್ಲಿ ಆಗಿದೆ. ಕರೋನಾ ಸೋಂಕಿನ ನಿಯಂತ್ರಣಕ್ಕೆ ಕರೋನಾ ಜೊತೆಗೆ ಹೇಗೆ ಬದುಕಬೇಕು ಎಂಬುದನ್ನು ಕಲಿತುಕೊಳ್ಳಿ ಎಂದು ಜನರಿಗೇ ಬಿಟ್ಟು ಬಿಡುವ ಮೂಲಕ ನಿಧಾನವಾಗಿ ತಮ್ಮ ಮೇಲಿನ ಜವಾಬ್ದಾರಿ ಕಳಚಿಕೊಳ್ಳುವ ಕೆಲಸ ಶುರು ಮಾಡಿವೆ. ಹೀಗಾಗಿ ಕರೋನಾ ಲಾಕ್‌ಡೌನ್‌ ಹೆಸರಲ್ಲೇ ಎಲ್ಲಾ ವಿನಾಯ್ತಿಗಳನ್ನು ಕೊಡುವ ಮೂಲಕ ಕರೋನಾ ವೈರಾಣು ರಾಜಾರೋಷವಾಗಿ ಹರಡಲು ಕಾರಣಕರ್ತರಾಗುತ್ತಿದ್ದಾರೆ. ಆದರೆ ಇದರ ಜೊತೆಗೆ ರಾಜಕಾರಣಿಗಳು ಕರೋನಾ ಕಾಲದಲ್ಲೂ ತಮ್ಮ ಸ್ವಹಿತಾಸಕ್ತಿಯ ಚುನಾವಣೆಗೆ ರೂಪುರೇಷೆಗಳನ್ನೂ ನಿರ್ಮಿಸಿಕೊಳ್ಳುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಗೆಲ್ಲುವ ಕನಸು ಕಮಲ ಪಾಳಯದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಇದಕ್ಕೆ ಕಾರಣ ಕಳೆದ ವರ್ಷ ನಡೆದ ಲೋಕಸಭಾ ಚುನಾವಣಾ ಫಲಿತಾಂಶ. ಒಟ್ಟು 42 ಸ್ಥಾನಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ 22 ಸ್ಥಾನಗಳನ್ನೂ ಕೇಸರಿ ಪಡೆ 18 ಸ್ಥಾನಗಳನ್ನು ಹಾಗೂ ಕಾಂಗ್ರೆಸ್‌ ಕೇವಲ ಎರಡು ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಇನ್ನೊಂದು ವಿಶೇಷ ಎಂದರೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಶೇಕಡವಾರು 43.28 ರಷ್ಟು ಮತಗಳನ್ನು ಬಾಚಿಕೊಂಡರೆ ಬಿಜೆಪಿ ಕೂಡ ಭಾರೀ ಪೈಪೋಟಿಯೊಂದಿಗೆ 40.25 ಕಬಳಿಸಿತ್ತು. ಕಾಂಗ್ರೆಸ್‌ ಮತ್ತೆ ಮತಗಳಿಕೆಯಲ್ಲೂ ಹೀನಾಯ ಪ್ರದರ್ಶನ ನಡೆಸಿ ಕೇವಲ 5.61ರಷ್ಟು ಮತ ಪಡೆಯಲು ಶಕ್ತವಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಕನಸಿಗೆ ಕರೋನಾ ಸಮಯದಿಂದಲೇ ನೀರುಣಿಸಲು ಸಿದ್ಧತೆ ನಡೆಸುತ್ತಿದೆ. ಬಿಜೆಪಿಯ ಮತಚಿಂತನೆಗೆ ಮಮತಾ ಬ್ಯಾನರ್ಜಿ ಬಂಗಾಳಿ ಅಸ್ತ್ರ ಪ್ರಯೋಗ ಮಾಡ್ತಿದ್ದಾರೆ.

294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು 147ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವುದು ಅನಿವಾರ್ಯ. ಈಗಿನ ಲೆಕ್ಕಾಚಾರದಂತೆ ತೃಣಮೂಲ ಕಾಂಗ್ರೆಸ್‌ 224, ರಾಷ್ಟ್ರೀಯ ಕಾಂಗ್ರೆಸ್‌ 25, ಸಿಪಿಐಎಂ 21, ಭಾರತೀಯ ಜನತಾ ಪಾರ್ಟಿ 16 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಆದರೆ ಬಿಜೆಪಿ ಲೋಕಸಭಾ ಗೆಲುವಿನ ಹುರುಪಿನಲ್ಲಿದ್ದು, ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ದೀದಿ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಇಳಿಸಿ ಗಂಟು ಮೂಟೆ ಕಟ್ಟಿಸುವ ಎಲ್ಲಾ ಲೆಕ್ಕಾಚಾರಗಳು ಸಾಗಿವೆ. ಇದೇ ಕಾರಣಕ್ಕಾಗಿ ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಘಟಕ ಸಾಕಷ್ಟು ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದು, ಕರೋನಾ ನಿಯಂತ್ರಣ ಮಾಡುವಲ್ಲಿ ದೀದಿ ಸೋತಿದ್ದಾರೆ. ವಲಸೆ ಕಾರ್ಮಿಕರ ಹಿತ ಕಾಯುವಲ್ಲಿಯೂ ವಿಫಲ ಆಗಿದ್ದಾರೆ ಎಂದು ದಿನನಿತ್ಯ ವಾಗ್ದಾಳಿಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇದರಿಂದ ಕುಪಿತಗೊಂದಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ನೇರವಾಗಿ ಪ್ರಧಾನಿಯನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಇದು ಕರೋನಾ ಸೋಂಕಿನ ವಿರುದ್ಧ ಹೋರಾಟ ಮಾಡಬೇಕಾದ ಸಮಯ ರಾಜಕಾರಣ ಮಾಡುವ ಸಮಯವಲ್ಲ ಎಂದು ಚುಚ್ಚಿದ್ದರು.

ಬಿಜೆಪಿ ಅಖಾಡಕ್ಕೆ ಇಳಿದ ಬಳಿಕ ಮಮತಾ ಬ್ಯಾನರ್ಜಿ ಸುಮ್ಮನಿರಲು ಸಾಧ್ಯವೇ? ನೋ ವೇ.. ಮಮತಾ ಬ್ಯಾನರ್ಜಿ ಕೂಡ ತನ್ನ ರಾಜ್ಯದ ಜನರ ಮನಸ್ಸನ್ನು ಗೆಲ್ಲಲು ಏನೇನು ಬೇಕು ಎಲ್ಲಾ ಸಿದ್ಧತೆಗಳನ್ನು ಶುರು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿದ್ದ ಮಮತಾ ಬ್ಯಾನರ್ಜಿ ದೇಶದ ಮೂಲೆ ಮೂಲೆಯಲ್ಲಿರುವ ಬಂಗಾಳಿ ಜನರನ್ನು ವಾಪಸ್‌ ರಾಜ್ಯಕ್ಕೆ ಕರೆತರಲು ರಾಜ್ಯ ಸರ್ಕಾರ ಒಂದು ತಿಂಗಳ ಕಾಲ 105 ರೈಲುಗಳ ವ್ಯವಸ್ಥೆ ಮಾಡಿದೆ. ದೇಶದ ವಿವಿಧ ಮೂಲೆಗಳಲ್ಲಿರುವ ಜನರು ತವರು ರಾಜ್ಯ ಪಶ್ಚಿಮ ಬಂಗಾಳಕ್ಕೆ ಬರಬಹುದು ಎಂದು ಟ್ವೀಟರ್‌ನಲ್ಲೂ ಮಾಹಿತಿ ಹಂಚಿಕೊಂಡಿದ್ದರು. ಟ್ವೀಟ್‌ನಲ್ಲೇ ಉತ್ತರ ಕೊಟ್ಟ ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌, ಪಶ್ಚಿಮ ಬಂಗಾಳಕ್ಕೆ ದಿನನಿತ್ಯ 105 ರೈಲುಗಳಲ್ಲಿ ಜನರು ಬರಲು ಸಿದ್ಧರಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ 1 ತಿಂಗಳಿಗೆ 105 ರೈಲುಗಳು ಆಗಮಿಸಲು ಅವಕಾಶ ಕೊಟ್ಟಿದೆ. ಇದು ಬಂಗಾಳದ ಸಹೋದರ ಸಹೋದರಿಯರನ್ನು ಅವರ ಸ್ವಂತ ಊರುಗಳಿಗೆ ತಲುಪಿಸಲು ಅಡ್ಡಿಯಾಗಿದೆ. ಇದು ಬೇಸರದ ಸಂಗತಿ ಎಂದು ಟ್ವೀಟ್‌ ಮಾಡಿ ಕೌಂಟರ್‌ ಕೊಟ್ಟಿದ್ದರು.

ರಾಜ್ಯ ಸರ್ಕಾರ ವಲಸೆ ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳುವಲ್ಲಿ ಎಡವಿದೆ. ಕಾರ್ಮಿಕರನ್ನು ವಾಪಸ್‌ ಕರೆಸಿಕೊಳ್ಳುವಲ್ಲಿ ಉದಾಸೀನತೆ ತೋರಿಸುತ್ತಿದೆ ಎಂದೆಲ್ಲಾ ಟೀಕೆಗಳಿಗೆ ಉತ್ತರಿಸಿರುವ ಮಮತಾ ಬ್ಯಾನರ್ಜಿ, ನಾನು ಬಂಗಾಳಿ ಎನ್ನುವುದಕ್ಕೆ ಹೆಮ್ಮೆ ಆಗುತ್ತದೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೇಂದ್ರ ಸರ್ಕಾರ ಯಾಕೆ ನಮ್ಮನ್ನೇ ಮಾತ್ರ ಯಾವಾಗಲು ಟಾರ್ಗೆಟ್‌ ಮಾಡುತ್ತಿದೆ. ನಾವು ಬಂಗಾಳಿಗಳು ಪುಟಿದೇಳುತ್ತೇವೆ ಎಂದು ಗುಡುಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಹಿಂದೆ ಗುಜರಾತ್‌ ಆಸ್ಮಿತೆ ಎಂದು ಹೇಳುತ್ತಿದ್ದರು. ಇದೀಗ ಮಮತಾ ಬ್ಯಾನರ್ಜಿ ಬೆಂಗಾಳಿ ಪ್ರೈಡ್‌ ಎಂದು ಗುಡುಗುತ್ತಿದ್ದಾರೆ. ವಿಷಯ ಏನಂದ್ರೆ ಪ್ರಧಾನಿ ತವರು ರಾಜ್ಯ ಗುಜರಾತ್‌ನಲ್ಲಿ ಇಲ್ಲಿ ತನಕ ಸೋಂಕಿತರ ಸಂಖ್ಯೆ 11ಸಾವಿರ ಹಾಗೂ ಪಶ್ಚಿಮ ಬಂಗಾಳದಲ್ಲಿ ಸೋಂಕಿತರ ಸಂಖ್ಯೆ 2500 ರ ಗಡಿ ದಾಟಿದೆ. ಆದರೆ ಮುಂದಿನ ವರ್ಷದ ಚುನಾವಣೆಗಾಗಿ ವಲಸೆ ಕಾರ್ಮಿಕರನ್ನು ಓಲೈಸಿಕೊಳ್ಳುವ ಸಲುವಾಗಿ ಎರಡು ಪ್ರಬಲ ಪಕ್ಷಗಳ ನಡುವೆ ಬಲಾಬಲದ ಹೋರಾಟ ನಡೀತಿದೆ ಎನ್ನುವುದು ಮಾತ್ರ ಸತ್ಯ.

Click here Support Free Press and Independent Journalism

Pratidhvani
www.pratidhvani.com