ಜಮ್ಮು ಕಾಶ್ಮೀರ ರಾಜಕೀಯ ಪಡಸಾಲೆಯಲ್ಲಿ ಉದಯಿಸಿದ ಹೊಸ ರಾಜಕೀಯ ಪಕ್ಷ ʼಅಪ್ನಿ ಪಾರ್ಟಿʼ
ರಾಜಕೀಯ

ಜಮ್ಮು ಕಾಶ್ಮೀರ ರಾಜಕೀಯ ಪಡಸಾಲೆಯಲ್ಲಿ ಉದಯಿಸಿದ ಹೊಸ ರಾಜಕೀಯ ಪಕ್ಷ ʼಅಪ್ನಿ ಪಾರ್ಟಿʼ

ಕಾಂಗ್ರೆಸ್‌, ಪಿಡಿಪಿ, ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕರು ಸೇರಿ ಒಟ್ಟು 23 ನಾಯಕರು ಈವರೆಗೆ ಅಪ್ನಿ ಪಾರ್ಟಿಯ ಧ್ವಜವನ್ನು ಅಪ್ಪಿಕೊಂಡಿದ್ದಾರೆ. ಇವರಲ್ಲಿ ಬಹುತೇಕರು, ಈ ಹಿಂದಿನ ಸರ್ಕಾರಗಳಲ್ಲಿ ಸ್ವತಂತ್ರ ಖಾತೆಯನ್ನು ನಿಭಾಯಿಸಿದ ಅನುಭವ ಇರುವವರು ಎನ್ನುವುದು ಗಮನಾರ್ಹ ವಿಚಾರ.  

ಪ್ರತಿಧ್ವನಿ ವರದಿ

ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಮತ್ತು ವಿತ್ತ ಸಚಿವರಾಗಿದ್ದ ಅಲ್ತಾಫ್‌ ಬುಖಾರಿ ಜಮ್ಮು ಕಾಶ್ಮೀರದಲ್ಲಿ ತಮ್ಮ ಹೊಸ ರಾಜಕೀಯ ಪಕ್ಷ ʼಅಪ್ನಿ ಪಾರ್ಟಿʼ ಪಾರ್ಟಿಯನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಈ ಹಿಂದೆ ಪಿಡಿಪಿ ಪಕ್ಷದಲ್ಲಿದ್ದ ಅಲ್ತಾಫ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕಾಗಿ 19 ಜನವರಿ 2020 ರಂದು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈಗ ಅಪ್ನಿ ಪಾರ್ಟಿ ಮುಖಾಂತರ ಜಮ್ಮು ಕಾಶ್ಮೀರದಲ್ಲಿ ಉಂಟಾಗಿದ್ದ ರಾಜಕೀಯ ನಿರ್ವಾತದಲ್ಲಿ ತಮ್ಮ ಹೆಜ್ಜೆ ಇಡಲು ಮುಂದಾಗಿದ್ದಾರೆ ಅಲ್ತಾಫ್‌ ಬುಖಾರಿ.

ದೆಹಲಿ ಮತ್ತು ಜಮ್ಮು ಕಾಶ್ಮೀರದ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಪ್ನಿ ಪಾರ್ಟಿ ಅಸ್ಥಿತ್ವಕ್ಕೆ ಬಂದಿದೆ ಎಂದು ಹೇಳಿಕೊಂಡಿರುವ ಬುಖಾರಿ, ಕಾಶ್ಮೀರಿ ಪಂಡಿತರನ್ನು ಗೌರವಪೂರ್ವಕವಾಗಿ ಮತ್ತೆ ಕಾಶ್ಮೀರಕ್ಕೆ ವಾಪಾಸ್ಸು ಕರೆದುಕೊಳ್ಳುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. "ದೆಹಲಿ ಹಾಗೂ ಜಮ್ಮ ಕಾಶ್ಮೀರದ ನಡುವೆ ಇರುವಂತಹ ಅಪನಂಬಿಕೆಯನ್ನು ದೂರಮಾಡಬೇಕಿದೆ. ದೆಹಲಿಯಲ್ಲಿ ಯಾರೇ ಅಧಿಕಾರಕ್ಕೆ ಬರಲಿ, ಅವರನ್ನು ನಾವು ಭಾರತದ ಸರ್ಕಾರ ಎಂದು ನೋಡುತ್ತೇವೆಯೇ ಹೊರತು ಬೇರೆ ಯಾವ ದೃಷ್ಟಿಯಿಂದಲೂ ಅಲ್ಲ," ಎಂದು ಅಲ್ತಾಫ್‌ ಬುಖಾರಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರು PSA ಅಡಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಬಂಧನದಲ್ಲಿರುವ ಸಮಯದಲ್ಲಿ ನಡೆದಂತಹ ಹೊಸ ರಾಜಕೀಯ ಬೆಳವಣಿಗೆ ಇದಾಗಿದೆ. ಜಮ್ಮು ಕಾಶ್ಮೀರದ ರಾಜಕೀಯ ಪಡಸಾಲೆಯಲ್ಲಿ ಉದಯಿಸಿದ ತೃತೀಯ ರಂಗವಾಗಿದೆ ಅಪ್ನಿ ಪಾರ್ಟಿ. ಈ ತೃತೀಯ ರಂಗದ ಕೇಂದ್ರ ಬಿಂದುವಾಗಿರಲಿದ್ದಾರೆ ಅಲ್ತಾಫ್‌ ಬುಖಾರಿ. ಈ ತೃತೀಯ ರಂಗಕ್ಕೆ ಹಲವಾರು ಕಾಶ್ಮೀರಿ ರಾಜಕೀಯ ನಾಯಕರು ಬೆಂಬಲ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಹಾಗೂ ಪಿಡಿಪಿಯ ಬಹಳಷ್ಟು ರಾಜಕಾರಣಿಗಳು, ಅಪ್ನಿ ಪಾರ್ಟಿಯನ್ನು ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರದ ಕಾಂಗ್ರೆಸ್‌ ನಾಯಕ ಮಂಜೀತ್‌ ಸಿಂಗ್‌, "ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ, ಕಾಶ್ಮೀರದಲ್ಲಿ ಕಾಂಗ್ರೆಸ್‌ ಜೀವ ಕಳೆದುಕೊಂಡಿದೆ," ಎಂದು ಹೇಳಿದ್ದಾರೆ. ರಮನ್‌ ಭಲ್ಲಾರಂಥಹ ನಾಯಕರು ಜಮ್ಮು ಕಾಶ್ಮೀರ ಕಾಂಗ್ರೆಸ್‌ನಲ್ಲಿದ್ದರೂ ಅವರಿಗೆ ಉನ್ನತ ಸ್ಥಾನ ನೀಡುವಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಎಡವಿದೆ ಎಂದು ಆರೋಪಿಸಿದ್ದಾರೆ ಮಂಜೀತ್‌ ಸಿಂಗ್.‌

ಇನ್ನು ಕೇವಲ ಕಾಂಗ್ರೆಸ್‌ ಮಾತ್ರವಲ್ಲದೇ, ಪಿಡಿಪಿ, ನ್ಯಾಷನಲ್‌ ಕಾನ್ಫರೆನ್ಸ್‌ನ ನಾಯಕರು ಸೇರಿ ಒಟ್ಟು 23 ನಾಯಕರು ಈವರೆಗೆ ಅಪ್ನಿ ಪಾರ್ಟಿಯ ಧ್ವಜವನ್ನು ಅಪ್ಪಿಕೊಂಡಿದ್ದಾರೆ. ಇವರಲ್ಲಿ ಬಹುತೇಕರು, ಈ ಹಿಂದಿನ ಸರ್ಕಾರಗಳಲ್ಲಿ ಸ್ವತಂತ್ರ ಖಾತೆಯನ್ನು ನಿಭಾಯಿಸಿದ ಅನುಭವ ಇರುವವರು ಎನ್ನುವುದು ಗಮನಾರ್ಹ ವಿಚಾರ.

ಒಟ್ಟಿನಲ್ಲಿ, ಕಾಶ್ಮೀರದ ರಾಜಕೀಯವು ಮಗ್ಗಲು ಬದಲಿಸುತ್ತಿದ್ದು ಈ ಎಲ್ಲಾ ಬೆಳವಣಿಗೆಗಳು ಯಾವ ರೀತಿ ಅಲ್ಲಿನ ರಾಜಕೀಯ ಸ್ಥಿತಿಗತಿಗಳ ಪಲ್ಲಟಕ್ಕೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ನಾಯಕರ ಕೊರತೆಯನ್ನು ಎದುರಿಸುತ್ತಿರುವ ಕಾಂಗ್ರೆಸ್‌, ಪಿಡಿಪಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷಗಳು ಯಾವ ರೀತಿ ತಮ್ಮ ಪಕ್ಷದ ಬಲವರ್ಧನೆಯನ್ನು ಮಾಡಲಿವೆ ಎಂಬುದು ನಿಜಕ್ಕೂ ಕುತೂಹಲಕಾರಿಯಾದ ವಿಚಾರ.

ಕೃಪೆ: ಸಿಯಾಸತ್‌

Click here Support Free Press and Independent Journalism

Pratidhvani
www.pratidhvani.com