ದೆಹಲಿ ಚುನಾವಣೆ ಮುಗಿದರೂ ಬಗೆಹರಿಯುತ್ತಿಲ್ಲ ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಗೊಂದಲ
ರಾಜಕೀಯ

ದೆಹಲಿ ಚುನಾವಣೆ ಮುಗಿದರೂ ಬಗೆಹರಿಯುತ್ತಿಲ್ಲ ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಗೊಂದಲ

ಎರಡು ತಿಂಗಳಾದರೂ ಕೆಪಿಸಿಸಿ ಅಧ್ಯಕ್ಷ ಹುದ್ದೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕ ಸ್ಥಾನ, ಕಾರ್ಯಾಧ್ಯಕ್ಷರ ನೇಮಕ ಗೊಂದಲ ಬಗೆಹರಿಯುತ್ತಿಲ್ಲ. ಇದರಿಂದಾಗಿ ರಾಜ್ಯ ನಾಯಕರಲ್ಲಿ ಹುಮ್ಮಸ್ಸು ಕಡಿಮೆಯಾಗುತ್ತಿದ್ದು, ಇದು ಪಕ್ಷದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಕಾಣಿಸಿಕೊಳ್ಳುತ್ತಿದೆ.

ಇಂದಿರಾತನಯ

ಸೋಮವಾರದಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಮಂತ್ರಿಮಂಡಲ ವಿಸ್ತರಣೆ ಮಾಡಿ ಅರ್ಹ ಹತ್ತು ಮಂದಿಗೆ ಸಚಿವ ಸ್ಥಾನ ನೀಡುವ ಮೂಲಕ ಸ್ವಲ್ಪ ಮಟ್ಟಿಗೆ ಮುಜುಗರದಿಂದ ಪಾರಾಗಿದೆ. ಆದರೆ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ನಾಯಕತ್ವ ಬದಲಾವಣೆಯ ತೊಳಲಾಟ ಮುಂದುವರಿದಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪ್ರತಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಕುರಿತು ಇನ್ನೂ ಗೊಂದಲ ಬಗೆಹರಿದಿಲ್ಲ. ಇದರಿಂದಾಗಿ ಹಿರಿಯ ಕಾಂಗ್ರೆಸ್ಸಿಗರ ಆಕ್ಷೇಪದ ನಡುವೆಯೂ ಈ ಹಿಂದಿನಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಸರ್ಕಾರವನ್ನು ಎದುರಿಸಬೇಕಾದ ಅನಿವಾರ್ಯತೆ ಪಕ್ಷಕ್ಕೆ ಬಂದೊದಗಿದೆ.

ಕಳೆದ ಡಿಸೆಂಬರ್ ಆರಂಭದಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಆದ ಹೀನಾಯ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರು. ಈ ಎರಡೂ ಸ್ಥಾನಗಳಿಗೆ ಬೇರೆಯವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆಗಲೇ ಆರಂಭವಾಗಿತ್ತು. ಆದರೆ, ಗೊಂದಲ ಬಗೆಹರಿಯದ ಕಾರಣ ಎರಡು ತಿಂಗಳಾದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಹೀಗಾಗಿ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕ ಎರಡೂ ಹುದ್ದೆಯಲ್ಲೂ ಮುಂದುವರಿಯುವಂತಾಗಿದೆ.

ದಿನೇಶ್ ಗುಂಡುರಾವ್ ಅವರಿಂದ ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಮಧ್ಯೆ ತೀವ್ರ ಪೈಪೋಟಿ ನಡುವೆ ಅಂತಿಮವಾಗಿ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಲು ಕಾಂಗ್ರೆಸ್ ಹೈಕಮಾಂಡ್ ಯೋಚಿಸಿತ್ತು. ಅಲ್ಲದೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆ ತಿರಸ್ಕರಿಸಿ ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಅವರನ್ನೇ ಮುಂದುವರಿಸಲು ಆಸಕ್ತಿ ತೋರಿಸಿತ್ತು. ಆದರೆ, ಯಾವಾಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೇಮಕ ಕುರಿತು ವಿವಾದ ಕಾಣಿಸಿಕೊಂಡಿತೋ ಪರಿಸ್ಥಿತಿಯೇ ಬದಲಾಯಿತು. ಸಿದ್ದರಾಮಯ್ಯ ಅವರಿಗೆ ಯಾವುದಾದರೂ ಒಂದು ಹುದ್ದೆ ಮಾತ್ರ ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್ಸಿನ ಹಿರಿಯ ನಾಯಕರ ಕಡೆಯಿಂದ ಆರಂಭವಾಯಿತು.

ಅಷ್ಟರಲ್ಲಿ ದೆಹಲಿ ಚುನಾವಣೆ ಸಮೀಪಿಸಿದ ಕಾರಣ ರಾಜ್ಯ ಕಾಂಗ್ರೆಸ್ಸಿನ ನಾಯಕತ್ವ ಬದಲಾವಣೆಯನ್ನು ಪಕ್ಕಕ್ಕಿಟ್ಟ ಕಾಂಗ್ರೆಸ್ ವರಿಷ್ಠರು ಚುನಾವಣೆಯತ್ತ ಗಮನಹರಿಸಿದರು. ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ನೇಮಕ ಸೇರಿದಂತೆ ಶಾಸಕಾಂಗ ಪಕ್ಷದ ನಾಯಕರ ಬದಲಾವಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಈ ಹುದ್ದೆಯ ಮೇಲೆ ಕಣ್ಣಿಟ್ಟು ಪ್ರತಿನಿತ್ಯ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಾ ಹುದ್ದೆಯ ಬಗ್ಗೆ ಜಪ ಮಾಡುತ್ತಿದ್ದ ನಾಯಕರೂ ನಿರಾಶೆಯಿಂದ ಸುಮ್ಮನೆ ಕುಳಿತಿದ್ದಾರೆ. ಇದೀಗ ದೆಹಲಿ ಚುನಾವಣೆ ಮುಗಿದಿದ್ದು, ಅಧಿವೇಶನ ಆರಂಭವಾಗುವುದರೊಳಗೆ ಎಲ್ಲಾ ಗೊಂದಲಗಳು ಬಗೆಹರಿದು ನಾಯಕತ್ವ ಬದಲಾವಣೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ದೆಹಲಿ ಚುನಾವಣೆ ನೇಮಕಾತಿ ಮೇಲೆ ಪರಿಣಾಮ ಬೀರುವುದೇ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅತ್ಯಂತ ಹೀನಾಯವಾಗಿತ್ತು. ಸ್ಪರ್ಧೆ ಮಾಡಿದ್ದ 66 ಕ್ಷೇತ್ರಗಳ ಪೈಕಿ 63ರಲ್ಲಿ ಠೇವಣಿ ಕಳೆದುಕೊಂಡಿತ್ತು (ನಾಲ್ಕು ಕ್ಷೇತ್ರಗಳನ್ನು ಆರ್‌ಜೆಡಿಗೆ ಬಿಟ್ಟುಕೊಟ್ಟಿತ್ತು). ಪಕ್ಷದ ಪ್ರಚಾರ ಸಮಿತಿ ಮುಖ್ಯಸ್ಥ ಕೀರ್ತಿ ಆಜಾದ್‌ ಪತ್ನಿ ಪೂನಂ ಆಜಾದ್‌, ಕೇಂದ್ರದ ಮಾಜಿ ಸಚಿವೆ ಕೃಷ್ಣಾ ತಿರಥ್‌, ದಿಲ್ಲಿ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ರಾಜೇಶ್‌ ಲಿಲೋಥಿಯಾ ಸೇರಿ ಘಟಾನುಘಟಿಗಳು ಸೋತಿದ್ದಾರೆ. ದಶಕದ ಹಿಂದೆ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ನಂತರ ದೆಹಲಿಯಲ್ಲಿ ಕಾಂಗ್ರೆಸ್ ಸಮೂಹ ನಾಯಕತ್ವ ಮತ್ತು ಮಾಸ್ ಲೀಡರ್ ಕೊರತೆ ಎದುರಿಸುತ್ತಿದೆ. ಪದೇ ಪದೇ ಅದು ಸಾಬೀತಾಗುತ್ತಿದೆ. ಈ ಬಾರಿ ದೆಹಲಿ ಕಾಂಗ್ರೆಸ್ ಎರಡು ಹೋಳಾಗಿ ಘಟಾನುಘಟಿ ನಾಯಕರು ಚುನಾವಣಾ ಪ್ರಕ್ರಿಯೆಯಿಂದಲೇ ದೂರ ಉಳಿದಿದ್ದರು. ಇದಕ್ಕೆಲ್ಲಾ ಕಾರಣ ತಳ ಮಟ್ಟದ ಕಾರ್ಯಕರ್ತರೊಂದಿಗೆ ಗುರುತಿಸಿಕೊಳ್ಳುವ ನಾಯಕರ ಬದಲಾಗಿ ಹೈಕಮಾಂಡ್ ಗೆ ಸಲಾಮು ಹೊಡೆಯುವವರಿಗೆ ಆದ್ಯತೆ ನೀಡಿದ ಕಾಂಗ್ರೆಸ್ ವರಿಷ್ಠರ ಕ್ರಮ. ಹೀಗಾಗಿ ದೆಹಲಿ ವಿಧಾನಸಭೆ ಚುನಾವಣೆ ಸೋಲು ಮತ್ತು ಅದರ ಕಾರಣಗಳು ಪಕ್ಷದ ವರಿಷ್ಠರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದು, ಇದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಡಿ.ಕೆ.ಶಿವಕುಮಾರ್ ಕಾರ್ಯಕರ್ತರ ಮಧ್ಯೆ ನೇರವಾಗಿ ಬೆರೆಯುತ್ತಾರೆ. ಕೆಳಹಂತದಲ್ಲಿ ಕಾರ್ಯಕರ್ತರು ಮತ್ತು ಮುಖಂಡರನ್ನು ಒಟ್ಟಿಗೆ ಕರೆದೊಯ್ಯುವ ಚಾಕಚಕ್ಯತೆ ಅವರಲ್ಲಿದೆ. ಅದೇ ರೀತಿ ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅವರದ್ದೂ ಇದೇ ರೀತಿಯ ಸ್ವಭಾವ. ಉಡಾಫೆ, ನಾನೇ ಎಂಬ ಅಹಂ ಹೊರತುಪಡಿಸಿದರೆ ಜನರ ಮಧ್ಯೆ ಇದ್ದು ಬೆಳೆದುಬಂದವರು. ಮೇಲಾಗಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಸರ್ಕಾರವನ್ನು ಎದುರಿಸಲು ಸಿದ್ದರಾಮಯ್ಯ ಅವರಷ್ಟು ಸಮರ್ಥ ನಾಯಕ (ಡಿ.ಕೆ.ಶಿವಕುಮಾರ್ ಹೊರತುಪಡಿಸಿ) ಬೇರೆ ಇಲ್ಲ. ಡಾ.ಪರಮೇಶ್ವರ್, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್ ಮುಂತಾದ ಹಲವು ನಾಯಕರ ಹೆಸರು ಕೇಳಿಬರುತ್ತಿದೆಯಾದರೂ ಅವರು ಕೆಲವು ಗುಂಪುಗಳಿಗಷ್ಟೇ ಸೀಮಿತ ಎಂಬ ಅಪವಾದವಿದೆ.

ಹೀಗಾಗಿ ದೆಹಲಿ ಚುನಾವಣೆ ಸೋಲು ಮತ್ತು ಅದಕ್ಕೆ ಕಾರಣಗಳಿಂದ ಎಚ್ಚೆತ್ತುಕೊಂಡು ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕತ್ವ ಬದಲಾವಣೆ ಕುರಿತು ತೀರ್ಮಾನ ತೆಗೆದುಕೊಂಡರೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಳ್ಳುವಲ್ಲಿ ಯಾವುದೇ ಅನುಮಾನ ಇಲ್ಲ. ಅದೇ ರೀತಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರಿಯಬಹುದು. ಈ ಮೂರು ಸ್ಥಾನಗಳು ಪ್ರಬಲರ ಕೈಯ್ಯಲ್ಲಿ ಉಳಿದರೆ ಇನ್ನುಳಿದಂತೆ ಕಾರ್ಯಾಧ್ಯಕ್ಷರ ಹುದ್ದೇ ಸೇರಿದಂತೆ ಇತರೆ ಪದಾಧಿಕಾರಿಗಳಾಗಿ ಯಾರೇ ನೇಮಕಗೊಂಡರೂ ಅದು ದೊಡ್ಡ ಸಮಸ್ಯೆ ಏನೂ ಆಗದು.

ಆದರೆ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಾರೆಯೇ ಎಂಬ ಒಂದು ಅನುಮಾನ ಹೈಕಮಾಂಡ್ ನಾಯಕರಲ್ಲಿದೆ. ಅವರಿಬ್ಬರನ್ನು ಒಟ್ಟಿಗೆ ಕುಳ್ಳಿರಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬಹುದು. ಇಬ್ಬರ ಪಕ್ಷ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲವಾದರೂ ಅವರು ಬೆಂಬಲಿಗರ ಮಾತು ಕೇಳಿ ಬದಲಾಗುವ ಸ್ವಭಾವ ಹೊಂದಿರುವುದರಿಂದ ಹೊಂದಾಣಿಕೆ ಎಂಬುದು ಎಷ್ಟು ದಿನ ಇರಬಹುದು ಎಂಬ ಪ್ರಶ್ನೆಯೂ ಕಾಡುತ್ತದೆ. ಈ ಕಾರಣದಿಂದಾಗಿಯೇ ನಾಯಕತ್ವ ಬದಲಾವಣೆ ಎಂಬುದು ವಿಳಂಬವಾಗುತ್ತಿದೆ.

ಕುಸಿಯುತ್ತಿದೆ ನಾಯಕರ ಹುಮ್ಮಸ್ಸು

ನಾಯಕತ್ವ ಬದಲಾವಣೆ ಕುರಿತಂತೆ ಹೈಕಮಾಂಡ್ ನಾಯಕರ ವಿಳಂಬ ಧೋರಣೆ ರಾಜ್ಯ ನಾಯಕರಲ್ಲಿ ಹುಮ್ಮಸ್ಸು ಕುಸಿಯುವಂತೆ ಮಾಡುತ್ತಿದೆ. ಪರಸ್ಪರ ಕಾಲೆಳೆಯುವ ಕೆಲಸ ಮುಂದುವರಿಯುತ್ತಿದೆ. ನಾಯಕ ನಡುವೆ ಅಂತರ ಹೆಚ್ಚುತ್ತಿದೆ. ಅಧಿವೇಶನ ಸಮೀಪಿಸುತ್ತಿದ್ದರೂ ಶಾಸಕರಲ್ಲಿ ಉತ್ಸಾಹ ಕಂಡುಬರುತ್ತಿಲ್ಲ. ಹೀಗಾಗಿ ವಿಳಂಬ ಧೋರಣೆ ಮಂದುವರಿದರೆ ಅಥವಾ ದೆಹಲಿ ಫಲಿತಾಂಶದಿಂದ ಎಚ್ಚೆತ್ತುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳದೇ ಇದ್ದರೆ ಭವಿಷ್ಯದಲ್ಲಿ ಕಾಂಗ್ರೆಸ್ ಸಂಘಟನೆ ಮೇಲೆ ಅದು ಪ್ರತೀಕೂಲ ಪರಿಣಾಮ ಉಂಟುಮಾಡಲಿದ್ದು, ನಾಯಕರಲ್ಲಿ ಒಗ್ಗಟ್ಟು ಮೂಡಿಸುವುದೂ ಕಷ್ಟವಾಗಲಿದೆ.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com