ಆರ್ ಎಸ್‌‌ ಎಸ್‌‌, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಗೆ ಡಿಕೆಶಿ ಪ್ರತ್ಯುತ್ತರವೇನು?      
ರಾಜಕೀಯ

ಆರ್ ಎಸ್‌‌ ಎಸ್‌‌, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಗೆ ಡಿಕೆಶಿ ಪ್ರತ್ಯುತ್ತರವೇನು?     

ರಾಮನಗರದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪಿಸುವ ವಿಚಾರವನ್ನು ವಿವಾದವಾಗಿಸಿ ಡಿಕೆಶಿ ಶಕ್ತಿ ಕುಂದಿಸಲು RSS ಯತ್ನಿಸುತ್ತಿರುವ ನಡುವೆಯೇ ರಮೇಶ ಜಾರಕಿಹೊಳಿಗೆ ಸಿಎಂ ಬಿಎಸ್‌ವೈ ಜಲಸಂಪನ್ಮೂಲ ಖಾತೆ ನೀಡಿದ್ದಾರೆ. ಈ ಬೆಳವಣಿಗೆಗಳು KPCC ಗಾದಿಯ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಹಿನ್ನಡೆ ಎನ್ನಲಾಗುತ್ತಿದೆ

ಮಹದೇವಪ್ಪ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್‌ ಅವರಿಗೆ ರಾಜಕೀಯವಾಗಿ ಹಿನ್ನಡೆಯಾಗುವಂಥ ಎರಡು ಪ್ರಮುಖ ಘಟನೆಗಳು ನಡೆದಿವೆ. ರಾಮನಗರ ಜಿಲ್ಲೆಯ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ಸ್ಥಾಪಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದಲ್ಲಿ ಹಿಂದೂ ಮತ ಧ್ರುವೀಕರಣದ ಮೂಲಕ ಡಿಕೆಶಿ ಶಕ್ತಿ ಕುಂದಿಸುವ ಕೆಲಸವನ್ನು ಬಿಜೆಪಿಯು ತನ್ನ ಮಾತೃಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ (ಆರ್ ಎಸ್‌ಎಸ್‌) ಮೂಲಕ ಆರಂಭಿಸಿದೆ. ಇದರ ಭಾಗವಾಗಿ ಸಾವಿರಾರು ಗಣವೇಷಧಾರಿಗಳನ್ನು ಒಗ್ಗೂಡಿಸಿ ರಾಮನಗರದಲ್ಲಿ ಪಥಸಂಚಲನ ನಡೆಸಲಾಗಿದೆ. ಇದರ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರ ಪತನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಾರಕಿಹೊಳಿ ಕುಟುಂಬದ ಹಿರಿಯಣ್ಣ ರಮೇಶ ಜಾರಕಿಹೊಳಿ ಅವರು ಹಿಂದಿನ ಸರ್ಕಾರದಲ್ಲಿ ಡಿಕೆಶಿ ಪಡೆದಿದ್ದ ಜಲಸಂಪನ್ಮೂಲ ಖಾತೆಯನ್ನೇ ಪಡೆಯುವ ಮೂಲಕ ಕಾಂಗ್ರೆಸ್‌ ನ ಕಟ್ಟಾಳುವಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ತಮ್ಮ ಕ್ಷೇತ್ರವಾದ ಗೋಕಾಕಿನ ಆಚೆಗೆ ಅಪರಿಚಿತರಾದ ರಮೇಶ ಜಾರಕಿಹೊಳಿ ಅವರು ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕದ ವಿಚಾರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸುವ ಮೂಲಕ ಸಮ್ಮಿಶ್ರ ಸರ್ಕಾರ ಪತನಗೊಳಿಸಿದ್ದರು. ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಸಾಬೀತುಪಡಿಸಲು ವಿಫಲವಾಗುವಂತೆ ಮಾಡುವಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದ 17 ಶಾಸಕರ ತಂಡ ಯಶಸ್ವಿಯಾಗಿತ್ತು. ರಮೇಶ ಅವರು ಕುಮಾರಸ್ವಾಮಿ ಸರ್ಕಾರ ತೆಗೆಯುವ ವಿಚಾರ ಹೆಚ್ಚು ಪ್ರಾಮುಖ್ಯತೆ ಪಡೆಯುವಲ್ಲಿ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಪ್ರಕರಣ ಒಂದಷ್ಟೇ. ಇದರ ಹಿಂದೆ ದೊಡ್ಡ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ.

ಬೆಂಗಳೂರಿನ ನಂತರ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಅತಿದೊಡ್ಡ ಜಿಲ್ಲೆ. ಕುಂದಾ ನಗರಿಯಲ್ಲಿ ಬಿಜೆಪಿಗೆ ಸರಿಸಾಟಿಯಾಗಿ ಕಾಂಗ್ರೆಸ್ ಕಟ್ಟುವಲ್ಲಿ ಜಾರಕಿಹೊಳಿ ಕುಟುಂಬದ ಪಾತ್ರ ಮಹತ್ವದ್ದಾಗಿದೆ. ಸಕ್ಕರೆ ಲಾಬಿ ಪ್ರಬಲವಾಗಿರುವ ಬೆಳಗಾವಿ ರಾಜಕಾರಣದ ಮೇಲೆ ಜಾರಕಿಹೊಳಿ ಕುಟುಂಬ ನಿಯಂತ್ರಣ ಸಾಧಿಸಿದೆ. ಬಿಜೆಪಿ, ಕಾಂಗ್ರೆಸ್‌ ಅಥವಾ ಜೆಡಿಎಸ್‌ ಒಳಗೊಂಡ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಜಾರಕಿಹೊಳಿ ಸಹೋದರರ ಪೈಕಿ ಯಾರಾದರೊಬ್ಬರು ಸಂಪುಟ ದರ್ಜೆ ಸಚಿವರಾಗಿರುತ್ತಾರೆ. ಅಷ್ಟರ ಮಟ್ಟಿಗೆ ಈ ಕುಟುಂಬ ರಾಜ್ಯ ರಾಜಕಾರಣದಲ್ಲಿ ತನ್ನ ಪ್ರಾಬಲ್ಯ ಹೊಂದಿದೆ. ಪರಿಸ್ಥಿತಿ ಹೀಗಿರುವಾಗ ಮೊದಲ ಬಾರಿಗೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂಬುದು ರಮೇಶ ಹಾಗೂ ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ ಅವರ ಆರೋಪ.

ಪಿಎಲ್ ಡಿ ಬ್ಯಾಂಕ್ ವಿಚಾರ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ವ್ಯಾಪ್ತಿಯಲ್ಲಿದರೂ ಅದರಲ್ಲೂ ತಮ್ಮದೇ ಮಾತು ನಡೆಯಬೇಕೆಂಬ ಜಾರಕಿಹೊಳಿ ಸದಸ್ಯರ ದುರ್ವರ್ತನೆ ಅಸಮರ್ಥನೀಯ. ಇದನ್ನೇ ಪ್ರಮುಖವಾಗಿಟ್ಟುಕೊಂಡು ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ಜಾರಕಿಹೊಳಿ ಸಹೋದರರು ದಾಳಿ ಆರಂಭಿಸಿದ್ದರು. ನಿಜಕ್ಕೂ ಈ ಹೋರಾಟದಲ್ಲಿ ಲಕ್ಷ್ಮಿ ಬೆನ್ನಿಗೆ ನಿಂತಿದ್ದ ಡಿಕೆಶಿಯನ್ನು ಅಣಿಯುವುದು ಜಾರಕಿಹೊಳಿ ಸಹೋದರರ ಉದ್ದೇಶ ಎಂಬುದರಲ್ಲಿ ಲವಲೇಶದಷ್ಟೂ ಅನುಮಾನವಿಲ್ಲ. ಸಚಿವರಾದ ಬಳಿಕ ಗೋಕಾಕ್ ಗೆ ಭೇಟಿ ರಮೇಶ ಜಾರಕಿಹೊಳಿ “ಡಿಕೆಶಿಯಿಂದಾಗಿ ನಾನು ನಾಯಕನಾಗಿ ಹೊರಹೊಮ್ಮಿದ್ದೇನೆ” ಎಂದು ಹೇಳುವ ಮೂಲಕ ಪ್ರತಿಷ್ಠೆಯ ಕದನದ ಎಳೆಯನ್ನು ಜಾಹೀರುಗೊಳಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿಯಾಗಿ ಆಯ್ಕೆಯಾಗಿರುವುದರಲ್ಲಿ ಹಾಗೂ ಹಿಂದೆ ಕಾಂಗ್ರೆಸ್ ರಾಜ್ಯ ಘಟಕದ ಮಹಿಳಾ ಅಧ್ಯಕ್ಷೆಯಾಗುವಲ್ಲಿ ಡಿಕೆಶಿ ಪಾತ್ರ ಮಹತ್ವದ್ದಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗುವ ಅವಕಾಶ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇತ್ತಾದರೂ ರಮೇಶ ಹಾಗೂ ಸತೀಶ ಜಾರಕಿಹೊಳಿ ಅವರ ತೊಡರುಗಾಲಿನಿಂದ ಅವಕಾಶ ತಪ್ಪಿತ್ತು ಎನ್ನುವ ಮಾತುಗಳಿದ್ದವು.

ಇತ್ತೀಚೆಗೆ ಹವಾಲಾ ಹಣ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿತ್ತು. ಇದೇ ಪ್ರಕರಣದಲ್ಲಿ ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಚಾರಣೆಯನ್ನೂ ಜಾರಿ ನಿರ್ದೇಶನಾಲಯ ನಡೆಸಿತ್ತು ಎಂಬುದನ್ನು ನೆನೆಯಬಹುದಾಗಿದೆ. ಹೀಗಾಗಿ ಬೆಳಗಾವಿ ರಾಜಕಾರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಹಾದಿಗೆ ತೊಡರುಗಾಲಾಗಬಹುದು ಎಂಬ ಆತಂಕ ರಮೇಶ-ಸತೀಶ ಜಾರಕಿಹೊಳಿ ಅವರಲ್ಲಿ ಮನೆ ಮಾಡಿತ್ತು ಎನ್ನಲಾಗಿದೆ.

ಇಷ್ಟುಮಾತ್ರವಲ್ಲದೇ ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಮುಖ ಸ್ಥಾನಮಾನ ಪಡೆಯಲು ಯತ್ನಿಸುತ್ತಿರುವ ಡಿಕೆಶಿ ಮುಂದಿನ ದಿನಗಳಲ್ಲಿ, ಪಕ್ಷದಲ್ಲಿ ತಮ್ಮ ಬೆಳವಣಿಗೆಗೆ ಸಹಜವಾಗಿ ಅಡ್ಡಿಯಾಗಬಹುದು. ಆದ್ದರಿಂದ ಪಿಎಲ್ ಡಿ ಬ್ಯಾಂಕ್ ವಿಚಾರವನ್ನೇ ಗಂಭೀರವಾಗಿಸಿ ಡಿಕೆಶಿಯನ್ನು ಸೈಲೆಂಟಾಗಿಸುವುದು ಮುಖ್ಯ ಉದ್ದೇಶ ಎನ್ನುವ ಚರ್ಚೆಯೂ ಇದೆ. ಇದರ ಜೊತೆಗೆ 2018ರ ವಿಧಾನಸಭೆ ಚುನಾವಣೆಗೂ ಮುನ್ನ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. ಕೆಲವು ಹೂಡಿಕೆಗೆ ಸಂಬಂಧಿಸಿದಂತೆ ಗೊಂದಲಕಾರಿ ದಾಖಲೆಗಳು ಐಟಿ ಬಳಿ ಇದ್ದರಿಂದ ಅವುಗಳಿಗೆ ಹೆದರಿ ರಮೇಶ ಜಾರಕಿಹೊಳಿ ಬಿಜೆಪಿ ಪ್ರವೇಶಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ರಮೇಶ ಜಾರಕಿಹೊಳಿ ಅವರ ಪತ್ನಿಯ ಸಹೋದರ ರಾಜಕೀಯ ಮಹತ್ವಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ ನಲ್ಲಿ ರಮೇಶ ಜಾರಕಿಹೊಳಿಯವರ ಕಿರಿಯ ಸಹೋದರ ಲಖನ್ ಜಾರಕಿಹೊಳಿ ರಾಜಕೀಯ ಭವಿಷ್ಯಕ್ಕೆ ಹಾತೊರೆಯುತ್ತಿದ್ದಾರೆ. ರಮೇಶ ಅವರು ಕಾಂಗ್ರೆಸ್ ನಲ್ಲೇ ಮುಂದುವರಿದರೆ ಅವರ ಪತ್ನಿಯ ಸಹೋದರನಿಗೆ ರಾಜಕೀಯ ಭವಿಷ್ಯ ರೂಪಿಸಲಾಗದು. ಅದಕ್ಕಾಗಿ ಡಿಕೆಶಿ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸೇರಿದ್ದಾರೆ. ಅನಗತ್ಯ ವಿಚಾರವನ್ನು ಸಾರ್ವಜನಿಕವಾಗಿ ತೇಲಿಬಿಟ್ಟು ಸಹೋದರ ಲಖನ್ ಹಾಗೂ ಪತ್ನಿಯ ಸಹೋದರನಿಗೆ ರಾಜಕೀಯ ಭವಿಷ್ಯ ರೂಪಿಸಿಕೊಡುವ ಮಧ್ಯೆಯೇ ಅಧಿಕಾರ ಸವಿಯುವುದು ತಂತ್ರ ಎನ್ನುವ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.

ರಮೇಶ ಜಾರಕಿಹೊಳಿ ನಿರ್ಗಮನದಿಂದ ಬೆಳಗಾವಿಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಂಡಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಡಿಕೆಶಿ ಅವರನ್ನು ಜಿಲ್ಲಾ ರಾಜಕಾರಣದಲ್ಲಿ ತಲೆಹಾಕದಂತೆ ಮಾಡುವುದು. ಜೊತೆಗೆ ರಾಜ್ಯ ಕಾಂಗ್ರೆಸ್ ನಲ್ಲೂ ಜಾರಕಿಹೊಳಿ ಕುಟುಂಬಕ್ಕೆ ಹೆಚ್ಚಿನ ಮಾನ್ಯತೆ ಗಿಟ್ಟಿಸುವುದು. ಈ ಮೂಲಕ ಡಿಕೆಶಿ ಪ್ರಭಾವವನ್ನು ಹಿಮ್ಮೆಟ್ಟಿಸಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಹದ್ದುಬಸ್ತಿನಲ್ಲಿಟ್ಟು ಬೆಳಗಾವಿ ರಾಜಕಾರಣದಲ್ಲಿ ಏಕಸ್ವಾಮ್ಯ ಸಾಧಿಸುವ ಯತ್ನ ಎನ್ನಲಾಗುತ್ತಿದೆ.

ಹೃದಯ ಸಂಬಂಧಿ ಚಿಕಿತ್ಸೆಗೆ ಆಸ್ಪತ್ರೆ ಸೇರಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ರಮೇಶ ಜಾರಕಿಹೊಳಿ ಅವರು “ಬಿಜೆಪಿ ಸೇರಿದ್ದರೂ ಸಿದ್ದರಾಮಯ್ಯ ನಮ್ಮ ನಾಯಕ” ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕೆಪಿಸಿಸಿಗೆ ಅಧ್ಯಕ್ಷರ ನೇಮಕ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಕ್ಕೆ ಹಾಕಿದೆ. ರಾಜ್ಯ ರಾಜಕಾರಣದಲ್ಲಿ ಮಹತ್ವದ ಸ್ಥಾನದ ಮೇಲೆ ಗಮನ ಕೇಂದ್ರೀಕರಿಸಿರುವ ಡಿಕೆಶಿ ಅವರು ತಮಗೆ ಎದುರಾಗಿರುವ ಅಡ್ಡಿ ಆತಂಕಗಳನ್ನು ಹೇಗೆ ನಿವಾರಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ನಿರಂತರ ಸುದ್ದಿಗಾಗಿ ಪ್ರತಿಧ್ವನಿಯ Facebook, YouTube, Twitter ಪೇಜ್ ಸೇರಿಕೊಳ್ಳಿ. ಪ್ರತಿಧ್ವನಿಯ ಟೆಲಿಗ್ರಾಂ ಸೇರಲು, ಈ ಲಿಂಕ್ ಕ್ಲಿಕ್ ಮಾಡಿ

Pratidhvani
www.pratidhvani.com