ನಿಷ್ಕ್ರಿಯತೆ ಉನ್ಮಾದದ ನಡುವೆ ಪ್ರಜಾಸತ್ತೆಯ ರಕ್ಷಣೆಗಾಗಿ

ಕಳೆದ ಒಂದು ದಶಕದ ಉನ್ಮತ್ತ ರಾಜಕಾರಣಕ್ಕೆ ಬಲಿಯಾಗಿ ತಮ್ಮ ಸ್ವಪ್ರಜ್ಞೆಯನ್ನೇ ಕಳೆದುಕೊಂಡಂತಿರುವ ಒಂದು ಬೃಹತ್ ಮಧ್ಯಮ ವರ್ಗ ಮತ್ತು ಯುವ ಪೀಳಿಗೆ ತಮ್ಮ ಕಣ್ಣೆದುರಿನ ಅಪಾಯಗಳನ್ನು ಅರಿತುಕೊಳ್ಳಬೇಕಿದೆ.
ನಿಷ್ಕ್ರಿಯತೆ ಉನ್ಮಾದದ ನಡುವೆ ಪ್ರಜಾಸತ್ತೆಯ ರಕ್ಷಣೆಗಾಗಿ

ಪ್ರಜಾಪ್ರಭುತ್ವ ಎಂದರೆ ಅದು ಕೇವಲ ಒಂದು ಆಡಳಿತ ವ್ಯವಸ್ಥೆ ಅಲ್ಲ, ಒಂದು ನಾಗರಿಕ ಸಮಾಜವನ್ನು ಮಾನವೀಯ ಮೌಲ್ಯಗಳ ಚೌಕಟ್ಟಿನಲ್ಲಿ ಬಂಧಿಸುವ ಒಂದು ಸಂವೇದನಾಶೀಲ ತತ್ವ . ಈ ಸಂವೇದನೆಯನ್ನು ಕಳೆದುಕೊಂಡ ಯಾವುದೇ ಸಮಾಜ ಸುಲಭವಾಗಿ ಸರ್ವಾಧಿಕಾರದತ್ತ ಹೊರಳಿಬಿಡುತ್ತದೆ. ತನ್ನೊಳಗಿನ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡ ಮನುಷ್ಯ ತನ್ನ ಸುತ್ತಲಿನ ಶೋಷಣೆಗೆ, ಹಿಂಸೆಗೆ, ಅನ್ಯಾಯಗಳಿಗೆ ಕುರುಡಾಗಿಬಿಡುತ್ತಾನೆ. ಸ್ವಾಭಾವಿಕವಾಗಿಯೇ ಒಂದು ಸಮಾಜವೂ ಇದೇ ಸನ್ನಿವೇಶವನ್ನು ಎದುರಿಸುತ್ತದೆ. ರಾಜಕೀಯವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಳ್ಳುವ ಒಂದು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನೆಲೆಗಟ್ಟಿನಲ್ಲೂ ಪ್ರಜಾಪ್ರಭುತ್ವ ಸ್ಥಾಪಿತವಾದಲ್ಲಿ ಮಾತ್ರ ಒಂದು ಸಮ ಸಮಾಜದ ನಿರ್ಮಾಣ ಸಾಧ್ಯ ಎಂದು ಡಾ. ಬಿ ಆರ್ ಅಂಬೇಡ್ಕರ್ ಪ್ರತಿಪಾದಿಸುತ್ತಾರೆ.

ಆತ್ಮನಿರ್ಭರ ಭಾರತದ ಇಂದಿನ ಪರಿಸ್ಥಿತಿಯನ್ನು ನೋಡಿದರೆ ಈ ದಾರ್ಶನಿಕ ದೃಷ್ಟಿಕೋನ ಎಷ್ಟು ವಾಸ್ತವತೆಯಿಂದ ಕೂಡಿತ್ತು ಎನಿಸುತ್ತದೆ. ಇಂದು ರಾಜಕೀಯ ನೆಲೆಯಲ್ಲಿ ಭಾರತ ಪ್ರಜಾಪ್ರಭುತ್ವದ ತಳಹದಿಯನ್ನೇ ಕಳೆದುಕೊಳ್ಳುತ್ತಿದೆ. ಗ್ರಾಂಥಿಕವಾಗಿ ಭಾರತದ ಶ್ರೇಷ್ಠ ಸಂವಿಧಾನ ಸುರಕ್ಷಿತವಾಗಿಯೇ ಇದ್ದರೂ, ಮೌಲಿಕವಾಗಿ ಸಂವಿಧಾನದ ಒಂದೊಂದೇ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ದಿನಬೆಳಗಾದರೆ ಸಂವಿಧಾನದ ಧ್ಯಾನ ಮಾಡುವ ಅಸಂಖ್ಯಾತ ಜನಪ್ರತಿನಿಧಿಗಳು ಮೌನವಾಗಿಯೇ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ಉನ್ಮತ್ತ ಮನಸ್ಥಿತಿ ತಲುಪಿರುವ ನಾಗರಿಕ ಸಮಾಜದ ಬೃಹತ್ ವರ್ಗ ಸಂಪೂರ್ಣ ನಿಷ್ಕ್ರಿಯವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಸಮಾನತೆ, ಅಸಹಿಷ್ಣುತೆ ಮತ್ತು ಶ್ರೇಷ್ಠತೆಯ ವ್ಯಸನದೊಂದಿಗೇ ಶತಮಾನಗಳನ್ನು ಕಳೆದಿರುವ ಭಾರತೀಯ ಸಮಾಜ ತನ್ನ ಸಾಂಪ್ರದಾಯಿಕ ಪೊರೆಯನ್ನು ಇನ್ನೂ ಸಂಪೂರ್ಣವಾಗಿ ಕಳಚಿಹಾಕಿಲ್ಲ ಎನ್ನುವುದು ಕಳೆದ ಹಲವು ವರ್ಷಗಳಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ. ಅನ್ಯಾಯಗಳನ್ನು ಸಹಿಸಿಕೊಳ್ಳುವುದನ್ನು ಸಹಿಷ್ಣುತೆ ಎನ್ನುವುದಾದರೆ ಭಾರತ ಸಹಿಷ್ಣುತೆಯ ಕರ್ಮಭೂಮಿ ಎಂದೇ ಹೇಳಬಹುದು. ಇದು ವಾಸ್ತವವೂ ಹೌದು. ಇಲ್ಲಿ ನ್ಯಾಯಾನ್ಯಾಯಗಳ ನಿಷ್ಕರ್ಷೆಯಾಗುವುದು ಮನುಜ ಭೂಮಿಕೆಯ ಮೇಲಲ್ಲ. ಜಾತಿ-ಧರ್ಮ-ಸಮುದಾಯದ ಅಸ್ಮಿತೆಗಳ ಭೂಮಿಕೆಯ ಮೇಲೆ. ಅನ್ಯಾಯಕ್ಕೊಳಗಾದವರ, ದೌರ್ಜನ್ಯಕ್ಕೊಳಗಾದವರ ಸಮಾಜೋ ಸಾಂಸ್ಕೃತಿಕ ಅಸ್ಮಿತೆಗಳು ನ್ಯಾಯದ ಪರಾಮರ್ಶೆಗೆ ವೇದಿಕೆಯಾಗುತ್ತವೆ. ಭಾರತದ ಸಾಂಪ್ರದಾಯಿಕ ಸಮಾಜ ಎಷ್ಟು ಬಲಿಷ್ಠವಾಗಿದೆ ಎಂದರೆ ತುಳಿತಕ್ಕೊಳಗಾದ ಸಮುದಾಯದಿಂದಲೇ ಬೆಳೆದು ನಿಂತವರೂ ಸಹ ತಮ್ಮೆದುರಿನ ದೌರ್ಜನ್ಯಕ್ಕೆ ಕುರುಡಾಗಿಬಿಡುತ್ತಾರೆ. ಇದು ನಮ್ಮ ದೇಶದ ಸಾಂಸ್ಕೃತಿಕ ನಾಗರಿಕತೆ ಶತಮಾನಗಳಿಂದ ಸೃಷ್ಟಿಸಿರುವ ವಿಕೃತ ವಾತಾವರಣದ ಫಲ.

ನಿಷ್ಕ್ರಿಯತೆ ಉನ್ಮಾದದ ನಡುವೆ ಪ್ರಜಾಸತ್ತೆಯ ರಕ್ಷಣೆಗಾಗಿ
ತುಮಕೂರಿನಲ್ಲಿ ದಲಿತ ಎಳೆ ಮಗು ಶವ ಹೊರತೆಗೆದು ಶವ ಸಂಸ್ಕಾರಕ್ಕೆ ತಡೆ!

ತಮ್ಮ ಅಧಿಕಾರ, ಅಸ್ತಿತ್ವ ಮತ್ತು ರಾಜಕೀಯ ಪ್ರಾಬಲ್ಯ ಕಾಪಾಡಿಕೊಳ್ಳಲು ದೇಶಾದ್ಯಂತ ನೂರಾರು ಮಸಣಗಳನ್ನು ಸೃಷ್ಟಿಸಿ, ಸಾವಿರಾರು ಜನರ ಹತ್ಯೆಗೈದಿರುವ ಒಂದು ರಾಜಕೀಯ ಆಡಳಿತ ವ್ಯವಸ್ಥೆಯಲ್ಲಿ , ಜನಸಾಮಾನ್ಯರ ಶವಸಂಸ್ಕಾರಕ್ಕೆ ಸೂಕ್ತವಾದ ಸ್ಮಶಾನ ಇಲ್ಲದಿರುವುದನ್ನು ನೋಡಿದರೆ ನಾವು ಎಷ್ಟು ಅಸೂಕ್ಷ್ಮರಾಗಿದ್ದೇವೆ ಎಂದು ಅರಿವಾಗುತ್ತದೆ. ಇದು ಕೇವಲ ಒಂದು ಕೊರಟಗೆರೆಯ ಪ್ರಶ್ನೆಯಲ್ಲ. ತುಮಕೂರು ಬಳಿ ಇರುವ ಕೊರಟಗೆರೆಯಲ್ಲಿ ದಲಿತ ಕುಟುಂಬದ ಒಂದು ಹಸುಳೆಯ ಶವಕ್ಕೆ ಮಣ್ಣುಮಾಡಲು ಅವಕಾಶವೀಯದೆ, ಹೂತ ಶವವನ್ನು ಹೊರಕ್ಕೆ ತೆಗೆಸುವಷ್ಟು ಕ್ರೌರ್ಯ ನಮ್ಮ ನಡುವೆ ಇದೆ. ಈ ಘಟನೆಗೆ ಕಾರಣವಾದವರ ವಿಕೃತಿ, ಕ್ರೌರ್ಯ ಜಾತಿ ಪೀಡಿತ ಸಮಾಜದ ಒಂದು ಆಯಾಮವನ್ನು ತೋರಿಸಿದರೆ, ಈ ಘಟನೆಯ ಬಗ್ಗೆ ಪ್ರತಿಕ್ರಯಿಸಲೂ ಮುಂದಾಗದೆ ನಿಷ್ಕ್ರಿಯ ಮೌನ ವಹಿಸಿರುವ ಚುನಾಯಿತ ಪ್ರತಿನಿಧಿಗಳು, ಮಾಧ್ಯಮಗಳು ಮತ್ತು ನಾಗರಿಕ ಸಮಾಜ ಈ ಸಮಾಜದ ನಿರ್ಲಜ್ಜತೆಯನ್ನು ಹೊರಗೆಡಹಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ, 21ನೆಯ ಶತಮಾನದ ಮೂರನೆಯ ದಶಕದಲ್ಲೂ ಸಹ, ನಾವು ಹಲವಾರು ಕೊರಟಗೆರೆಗಳನ್ನು ಕಂಡಿದ್ದೇವೆ. ಒಂದೆಡೆ ಶವಸಂಸ್ಕಾರಕ್ಕೆ ಜಾಗ ನೀಡಲು ನಿರಾಕರಿಸುವ ಸಮಾಜವೇ ಮತ್ತೊಂದೆಡೆ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಸಂತ್ರಸ್ತೆಯೊಬ್ಬಳ ಶವಸಂಸ್ಕಾರವನ್ನು ರಾತ್ರೋರಾತ್ರಿ ನಡೆಸುತ್ತದೆ.. ಇಲ್ಲಿ ಹೂಳಲಾಗಿದ್ದ ಶವವನ್ನು ಹೊರಗೆಳೆಯಲಾಗುತ್ತದೆ ಅಲ್ಲಿ ಶವದ ಸುಳಿವು ಸಿಗದಂತೆ ಸುಟ್ಟುಹಾಕಲಾಗುತ್ತದೆ. ಎರಡೂ ಶವಗಳು ಸಾಂಪ್ರದಾಯಿಕ ಭಾರತದ ದೃಷ್ಟಿಯಲ್ಲಿ ಬಹಿಷ್ಕೃತವೇ ಆಗಿರುವುದು ಕಾಕತಾಳೀಯವೇನಲ್ಲ. ಈ ಎರಡು ವೈಪರೀತ್ಯಗಳ ನಡುವೆ ಒಂದು ನಾಗರಿಕತೆಯ ಎಳೆಯನ್ನು ಶೋಧಿಸಲು ಈ ದೇಶದ ಕೆಲವೇ ಕೆಲವು ಮನಸುಗಳು ಹಾತೊರೆಯುತ್ತಿವೆ. ಮತ್ತೊಂದೆಡೆ ನಾಗರಿಕ ಸಮಾಜದ ಒಂದು ವರ್ಗ ನಿಷ್ಕ್ರಿಯ ಮೌನ ವಹಿಸುತ್ತದೆ.

ಹುಟ್ಟಿನಿಂದ ಸಾಯುವವರೆಗೂ ಜಾತಿಯ ಚೌಕಟ್ಟಿನಲ್ಲೇ ಬದುಕು ಸವೆಸುವ ಭಾರತೀಯ ಸಮಾಜ ಮಸಣದಲ್ಲೂ ಜಾತಿ ಸೂಚಕಗಳನ್ನು ಹುಡುಕುವುದು ದುರಂತ ಅಲ್ಲವೇ ? ಹೂಳುವವರಿಗೆ ಅಸ್ಮಿತೆಯ ಪ್ರಶ್ನೆ ಕಾಡುವುದು ಸಹಜ ಆದರೆ ಹೂತು ಹೋಗುವ ಜೀವಕ್ಕೆ ಯಾವ ಅಸ್ಮಿತೆ ಇರಲು ಸಾಧ್ಯ ? ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ಜಾತಿಯಿಂದಲೇ ಗುರುತಿಸಿಕೊಳ್ಳುತ್ತಾನೆ ಎಂದು ಅಂಬೇಡ್ಕರ್ ಹೇಳಿದ್ದುದು ಎಷ್ಟು ಮಾರ್ಮಿಕ ಅಲ್ಲವೇ ? ಸಾವಿನ ನಂತರವೂ ಜಾತಿಯ ಭೂತ ನಮ್ಮ ಬೆನ್ನೇರಿರುತ್ತದೆ, ನಾವು ಜಾತಿಯ ಬೆನ್ನಟ್ಟಿ ನಡೆದಿರುತ್ತೇವೆ. ನಮ್ಮ ಅಂತರ್ ಪ್ರಜ್ಞೆಯನ್ನು ಪ್ರಕ್ಷುಬ್ಧಗೊಳಿಸುವ ಕೊರಟಗೆರೆಯಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ, ನಾವು ಸಂವಿಧಾನದ ರಕ್ಷಣೆಗೆ ಪಣ ತೊಡುತ್ತಲೇ ಇದ್ದೇವೆ.

70 ವರ್ಷಗಳ ನಂತರವೂ ಅಂಬೇಡ್ಕರ್ ಕನಸಿನ ಸಾಮಾಜಿಕ ಪ್ರಜಾಪ್ರಭುತ್ವವನ್ನು , ಗಾಂಧಿ ಕನಸಿನ ನಿರ್ಭೀತ ಪ್ರಾಮಾಣಿಕ ಸಮಾಜವನ್ನು ಸಾಧಿಸಲು ಸಾಧ್ಯವಾಗದ ಭಾರತ ಈಗ ರಾಜಕೀಯ ಪ್ರಜಾಪ್ರಭುತ್ವವನ್ನೂ ಕಳೆದುಕೊಳ್ಳುತ್ತಿದೆ. ಆರ್ಥಿಕವಾಗಿ ಭಾರತದ ಬಹುಸಂಖ್ಯೆಯ ಜನರು ಈಗಾಗಲೇ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ತಾವೇ ಕಟ್ಟಿ ಬೆಳೆಸಿದ ಬೃಹತ್ ಸಾರ್ವಜನಿಕ ಉದ್ದಿಮೆಗಳು, ಸಂಸ್ಥೆಗಳು ತಮ್ಮ ಕಣ್ಣೆದುರಿನಲ್ಲೇ ಖಾಸಗಿ ಬಂಡವಾಳಿಗರ ಪಾಲಾಗುತ್ತಿರುವುದನ್ನು ಸಂಭ್ರಮಿಸುವ ಮಧ್ಯಮ ವರ್ಗದ ಉನ್ಮತ್ತರ ನಡುವೆಯೇ ಅಸಹಾಯಕರಂತೆ ಕಾಣುವ ಒಂದು ವರ್ಗವೂ ನಮ್ಮ ನಡುವೆ ಇದೆ. 136 ಕೋಟಿ ಜನಸಂಖ್ಯೆಗೆ ಅನ್ನ ಬೆಳೆಯುವ ರೈತ ಸಮುದಾಯ ತನ್ನ ನೆಲೆಯನ್ನು ಉಳಿಸಿಕೊಳ್ಳಲು 119 ದಿನಗಳಿಂದಲೂ ಹೋರಾಡುತ್ತಿದೆ.

ಮುಂಬರುವ ದಿನಗಳಲ್ಲಿ ಈ ರೈತಾಪಿಯೊಡನೆ ಕಾರ್ಮಿಕ ವರ್ಗವೂ ಸೇರಿಕೊಳ್ಳುತ್ತದೆ. ಸಂಘಟಿತ/ಅಸಂಘಟಿತ ಕಾರ್ಮಿಕ ವಲಯ ದಿನದಿಂದ ದಿನಕ್ಕೆ ಅನಿಶ್ಚಿತತೆಯನ್ನೇ ಎದುರಿಸುತ್ತಿದ್ದು ದೇಶದ ಸಕಲ ಸಂಪನ್ಮೂಲಗಳೂ ಖಾಸಗಿ ಕಾರ್ಪೋರೇಟ್ ಬಂಡವಾಳಿಗರ ಪಾಲಾಗುತ್ತಿರುವ ಸಂದರ್ಭದಲ್ಲಿ ದುಡಿಯುವ ವರ್ಗಗಳ ನಾಳಿನ ಪ್ರಶ್ನೆ ಜಟಿಲವಾಗುತ್ತಿದೆ. ಏಪ್ರಿಲ್ 1 ರಿಂದ ಜಾರಿಯಾಗಲಿರುವ ಹೊಸ ಕಾರ್ಮಿಕ ಸಂಹಿತೆಗಳು ಶ್ರಮಜೀವಿಗಳ ಬದುಕುವ ಹಕ್ಕನ್ನೂ ಕಸಿದುಕೊಳ್ಳುವ ಕರಾಳ ಅಧ್ಯಾಯವನ್ನು ತೆರೆಯಲಿವೆ. ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಜೀವನೋಪಾಯದ ರಕ್ಷಣೆಗಾಗಿ ಉದ್ಯಮಗಳನ್ನು ಕಳೆದುಕೊಳ್ಳುವ ಸ್ವಾವಲಂಬಿ ಭಾರತ ಸತ್ತುಹೋಗಿದೆ. ಇಂದು ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ನಮ್ಮ ರಾಜಕೀಯ ವ್ಯವಸ್ಥೆ ಕಾರ್ಮಿಕರ ಹಿತಾಸಕ್ತಿಗಳನ್ನು ಬಲಿಕೊಡಲು ಸಿದ್ಧವಾಗಿದೆ. ಅಳಿವು ಉಳಿವಿನ ಪ್ರಶ್ನೆ ಎದುರಾದಾಗ ಸಹಜವಾಗಿಯೇ ಕಾರ್ಮಿಕರು ಇದ್ದುದರಲ್ಲಿ ತೃಪ್ತಿಪಟ್ಟುಕೊಳ್ಳುವ ಸಾಂಪ್ರದಾಯಿಕ ಬದುಕನ್ನು ಅಪ್ಪಿಕೊಂಡುಬಿಡುತ್ತಾರೆ.

ಈ ಜಟಿಲ ಸವಾಲುಗಳ ನಡುವೆಯೇ ಭಾರತದ “ ಪ್ರಗತಿಪರ-ಜನಪರ ” ಹೋರಾಟಗಳು, ಸಂಘರ್ಷದ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಮೂಲತಃ ಊಳಿಗಮಾನ್ಯ ಧೋರಣೆಯನ್ನೇ ಪ್ರತಿಪಾದಿಸುವ ರೈತ ಸಂಘಟನೆಗಳು ಒಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಹೊಸ ಆಯಾಮವನ್ನು ನೀಡಿರುವುದು ವಿಡಂಬನೆ ಎನಿಸಿದರೂ, ಚಾರಿತ್ರಿಕವೂ ಆಗಿದೆ. ಮುಂಬರುವ ದಿನಗಳ ಕಾರ್ಮಿಕ ಸಂಘರ್ಷಗಳಿಗೆ ಈ ರೈತ ಮುಷ್ಕರ ಸ್ಫೂರ್ತಿಯಾಗಲಿಕ್ಕೂ ಸಾಕು. ಈ ಹೋರಾಟದ ಗರ್ಭದಲ್ಲೇ ನೂರಾರು ಜೀವನ್ಮುಖಿ ಸಂಘರ್ಷಗಳು ಅಡಗಿರುವುದನ್ನು ಗಮನಿಸುವುದು ಸಮಾಜೋ ಆರ್ಥಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವಕ್ಕಾಗಿ ಹಂಬಲಿಸುವ ಮನಸುಗಳ ಆದ್ಯತೆಯೂ ಆಗಬೇಕಿದೆ. ಏಕೆಂದರೆ ರೈತರ ಇಂದಿನ ಹೋರಾಟ ಸಮಸ್ತ ಜನತೆಯ ಹೋರಾಟವೂ ಆಗಿದೆ.

ಈ ನಡುವೆಯೇ ನಮ್ಮ ರಾಜಕೀಯ ಪ್ರಜಾಪ್ರಭುತ್ವದ ಸ್ಥಾವರಗಳು, ಸ್ತಂಭಗಳು ಕುಸಿಯುತ್ತಿವೆ. ಪ್ರಜಾತಂತ್ರದ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮಗಳು ಈಗಾಗಲೇ ಕುಸಿದು ಭೂತಳಕ್ಕೆ ಸೇರಿರುವುದರಿಂದ ಉಳಿದ ಸ್ಥಾವರ-ಸ್ತಂಭಗಳನ್ನಾದರೂ ಉಳಿಸಿಕೊಳ್ಳುವ, ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ. ಈ ಸಾಂಸ್ಥಿಕ ಪ್ರಜಾಪ್ರಭುತ್ವದ ತಳಹದಿ ಭಾರತದ ಒಕ್ಕೂಟ ವ್ಯವಸ್ಥೆ. ಇಂದು ಒಕ್ಕೂಟ ವ್ಯವಸ್ಥೆಯೇ ಅಪಾಯದ ಅಂಚಿನಲ್ಲಿರುವುದನ್ನು ದೆಹಲಿ ಸರ್ಕಾರದ ಸುತ್ತಲಿನ ಬೆಳವಣಿಗೆಗಳಲ್ಲಿ ಕಾಣುತ್ತಿದ್ದೇವೆ. ಸಂವಿಧಾನ ವಿಧಿ 370ನ್ನು ರದ್ದುಪಡಿಸಿ, ಜಮ್ಮು ಕಾಶ್ಮೀರ ರಾಜ್ಯದ ಭಾಗವಾಗಿದ್ದ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದಾಗಲೇ, ಭಾರತದ ಒಕ್ಕೂಟ ವ್ಯವಸ್ಥೆಗೆ ಸಂಚಕಾರ ಎದುರಾಗುವ ಸೂಚನೆಗಳು ದೊರೆತಿದ್ದವು. ಈಗ ದೇಶದ ರಾಜಧಾನಿಯಿಂದಲೇ ಈ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಿರುವ ದೆಹಲಿಯ “ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ” 2021 ಜಾರಿಯಾದರೆ ಬಹುಶಃ ಮುಂಬರುವ ದಿನಗಳಲ್ಲಿ ದೆಹಲಿಯ ಜನತೆ ಮತಗಟ್ಟೆಗಳಿಂದ ಶಾಶ್ವತವಾಗಿ ದೂರ ಉಳಿಯಬಹುದು. ಏಕೆಂದರೆ ದೆಹಲಿಯ ಪ್ರಜೆಗಳು ಚುನಾಯಿಸುವ ಸರ್ಕಾರದ ಯಾವುದೇ ನಿರ್ಧಾರಗಳು ಊರ್ಜಿತವಾಗಬೇಕಾದರೆ ಲೆಫ್ಟಿನೆಂಟ್ ಜನರಲ್ ಸಮ್ಮತಿ ಪಡೆಯಬೇಕಾಗುತ್ತದೆ. ದೆಹಲಿಯ ವಿಧಾನಸಭೆ ಅಂಗೀಕರಿಸುವ ಯಾವುದೇ ಕಾಯ್ದೆಯಲ್ಲಿ ಉಲ್ಲೇಖವಾಗುವ ‘ಸರಕಾರ’ ಎನ್ನುವ ಪದವನ್ನು ‘ಲೆಫ್ಟಿನೆಂಟ್ ಗವರ್ನರ್’ ಎಂದೇ ಪರಿಭಾವಿಸಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಅಂದರೆ ದೆಹಲಿ ಸರ್ಕಾರ ಅನುಮೋದಿಸುವ ಯಾವುದೇ ಮಸೂದೆಗೆ ಅಂಗೀಕಾರ ನೀಡಲು ಲೆಫ್ಟಿನೆಂಟ್ ಗವರ್ನರ್ ನಿರಾಕರಿಸಬಹುದು ಅಥವಾ ರಾಷ್ಟ್ರಪತಿ ಕಚೇರಿಗೆ ರವಾನಿಸಬಹುದು. ಇನ್ನೂ ಆತಂಕಕಾರಿ ಅಂಶ ಎಂದರೆ ದೆಹಲಿಯ ಕಾರ್ಯಾಂಗ ಯಾವುದೇ ಕಾರ್ಯವನ್ನು ಕೈಗೊಳ್ಳುವ ಮುನ್ನ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಪಡೆಯಬೇಕಾಗುತ್ತದೆ.

ಕೇಂದ್ರಾಡಳಿತ ದೆಹಲಿಗೆ ವಿಶೇಷ ಸ್ಥಾನಮಾನ ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಸಂವಿಧಾನದ ಅನುಚ್ಚೇದ 293(ಎಎ)ನ್ನು ಆಧರಿಸಿ ತೀರ್ಪು ನೀಡಿತ್ತು. ಈ ಅನುಚ್ಚೇದವನ್ನು ಈವರೆಗೂ ತಿದ್ದುಪಡಿ ಮಾಡಲಾಗಿಲ್ಲ. ಹಾಗಾಗಿ ಇದರ ಅನ್ವಯ ರೂಪಿಸಲಾಗಿರುವ ದೆಹಲಿಯ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಯಾವುದೇ ಮಸೂದೆ ಅಸಾಂವಿಧಾನಿಕ ಮತ್ತು ಕಾನೂನುಬಾಹಿರವಾಗುತ್ತವೆ. ಕೇಂದ್ರ ಸರ್ಕಾರ ಈ ದುಸ್ಸಾಹಸಕ್ಕೆ ಕೈಹಾಕಿದೆ. ಈ ತೀರ್ಪಿನ ಅನುಸಾರ ದೆಹಲಿ ಸರ್ಕಾರ ಜಾರಿಗೊಳಿಸುವ ಯಾವುದೇ ಕಾನೂನು ಕಾಯ್ದೆಗಳ ಬಗ್ಗೆ ಲೆಫ್ಟಿನೆಂಟ್ ಗವರ್ನರ್‍ಗೆ ಮಾಹಿತಿ ನೀಡಬೇಕಾಗುತ್ತದೆ. ಒಂದು ವೇಳೆ ಭಿನ್ನಾಭಿಪ್ರಾಯ ತಲೆದೋರಿದರೆ ಅದನ್ನು ರಾಷ್ಟ್ರಪತಿಯವರ ಸಮ್ಮತಿಗೆ ಕಳುಹಿಸುವ ಅವಕಾಶವೂ ಇರುತ್ತದೆ. ಆದರೆ ರಾಷ್ಟ್ರಪತಿಯವರ ಸಮ್ಮತಿ ಪಡೆಯುವುದು ಕೇವಲ ಅಪವಾದವಾಗಿರಬೇಕಷ್ಟೇ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಚುನಾಯಿತ ಜನಪ್ರತಿನಿಧಿಗಳು ಮತದಾರರಿಗೆ ಮತ್ತು ಸಾರ್ವಭೌಮ ಪ್ರಜೆಗಳಿಗೆ ಉತ್ತರದಾಯಿತ್ವ ಹೊಂದಿರುವುದು ಪ್ರಜಾತಂತ್ರದ ಲಕ್ಷಣವಾಗಿದ್ದು ಸರ್ಕಾರದ ಯಾವುದೇ ಯೋಜನೆ, ಕಾಯ್ದೆ ಕಾನೂನುಗಳನ್ನು ಜನರಿಂದ ಚುನಾಯಿತರಾದ ಪ್ರತಿನಿಧಿಗಳೇ ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ ಒಂದೆಡೆ ಸಂವಿಧಾನವನ್ನೂ ಮತ್ತೊಂದೆಡೆ ದೇಶದ ಸರ್ವೋಚ್ಚ ನ್ಯಾಯಾಲಯವನ್ನೂ ಧಿಕ್ಕರಿಸಿ ಕೇಂದ್ರ ಸರ್ಕಾರ ಹೊಸ ಮಸೂದೆಗೆ ಅಂಗೀಕಾರ ನೀಡಿದೆ. ಕಳೆದ ಹಲವು ವರ್ಷಗಳಿಂದಲೂ ದೆಹಲಿಯಲ್ಲಿ ಅಧಿಕಾರ ಹಿಡಿಯಲು ಹೆಣಗಾಡುತ್ತಿರುವ ಬಿಜೆಪಿ ಈ ರೀತಿಯ ವಾಮಮಾರ್ಗದಿಂದ ತನ್ನ ಅಧಿಪತ್ಯ ಸಾಧಿಸಲು ಲೆಫ್ಟಿನೆಂಟ್ ಗವರ್ನರ್ ಕಚೇರಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಈ ಮಸೂದೆಯ ಬಗ್ಗೆ ಸಹಜವಾಗಿಯೇ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಇದು ಕೇವಲ ಒಂದು ಭೂ ಪ್ರದೇಶದ, ಪ್ರಾಂತ್ಯದ , ರಾಜ್ಯದ ಪ್ರಶ್ನೆಯಲ್ಲ. ಇದು ಭಾರತದ ಗಣತಂತ್ರ ವ್ಯವಸ್ಥೆಯ, ಒಕ್ಕೂಟ ವ್ಯವಸ್ಥೆಯ ಮತ್ತು ಸಾಂವಿಧಾನಿಕ ನಿಯಮಗಳ ಪ್ರಶ್ನೆ. ಇಂದು ದೆಹಲಿಯಲ್ಲಾದುದೇ ನಾಳೆ ಪಾಂಡಿಚೆರಿಯಲ್ಲಿ ಆಗಬಹುದು. ಅಲ್ಲಿಯೂ ಚುನಾವಣೆ ನಡೆಯಲಿದೆ, ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಹೋದರೆ ಅಲ್ಲಿಯೂ ಲೆಫ್ಟಿನೆಂಟ್ ಗವರ್ನರ್ ಆಳಲು ಅವಕಾಶ ಕಲ್ಪಿಸಬಹುದು. ಡಿಯು ಮತ್ತು ಡಮನ್, ಅಂಡಮಾನ್ ಮತ್ತು ನಿಕೋಬಾರ್, ಲಡಾಖ್ ಹೀಗೆ ಎಲ್ಲ ಕೇಂದ್ರಾಡಳಿತ ಪ್ರದೇಶಗಳೂ ವಸ್ತುಶಃ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಧಿಪತ್ಯಕ್ಕೆ ಒಳಪಡುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಮಸೂದೆಯನ್ನು ಆಡಳಿತ ಪಕ್ಷದಲ್ಲಿರುವ ಎಲ್ಲ ಸಂವಿಧಾನ ಪ್ರೇಮಿಗಳೂ ವಿರೋಧಿಸಬೇಕಿತ್ತಲ್ಲವೇ ? ಡಾ ಅಂಬೇಡ್ಕರ್ ಅವರ ಸಾಂವಿಧಾನಿಕ ಚಿಂತನಾ ವಾಹಿನಿಯಲ್ಲಿ ಪ್ರಮುಖವಾದ ತೊರೆಗಳೆಂದರೆ ಈ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಹಾಗೂ ಇದಕ್ಕೆ ಪೂರಕವಾದ ಮೂಲಭೂತ ಹಕ್ಕುಗಳು. ತಮ್ಮ ಪಕ್ಷಕ್ಕೆ ನಿಷ್ಠೆಯಿಂದಿರಬೇಕು ಎನ್ನುವುದು ಎಲ್ಲ ರಾಜಕಾರಣಿಗಳ ಮೂಲ ಮಂತ್ರ , ಇದು ಸಹಜ. ಆದರೆ ಸಂವಿಧಾನವನ್ನೇ ಅಪಮೌಲ್ಯಗೊಳಿಸುವ ಕಾಯ್ದೆ ಕಾನೂನುಗಳನ್ನು ಜಾರಿಗೊಳಿಸಿದಾಗಲೂ ಸ್ವಾಮಿನಿಷ್ಠೆಯಿಂದಿರುವುದು ಅಧಿಕಾರ ದಾಹದ ದ್ಯೋತಕವಾಗಷ್ಟೇ ಕಾಣುತ್ತದೆ. ಮುಂದೊಂದು ದಿನ ಬೆಳಗಾವಿ ವಿವಾದ ರಾಜಕೀಯ ಲಾಭ ನಷ್ಟಗಳ ಕೇಂದ್ರ ಬಿಂದುವಾದರೆ, ಬೆಳಗಾವಿ ಸುತ್ತಲಿನ ವಿವಾದಿತ ಪ್ರದೇಶಗಳನ್ನೂ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ, ಇದೇ ನಿಯಮವನ್ನು ಜಾರಿಗೊಳಿಸಬಹುದಲ್ಲವೇ ? ಒಂದು ರಾಜ್ಯದ ಭಾಗವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವ ಪರಂಪರೆಗೆ ಲಡಾಖ್ ನಾಂದಿ ಹಾಡಿದೆ ಅಲ್ಲವೇ ?

ಸಂವಿಧಾನ ಶಿಲ್ಪಿಗಳ ಸಾಮಾಜಿಕ ಪ್ರಜಾಪ್ರಭುತ್ವದ ಕನಸು ಕನಸಾಗಿಯೇ ಉಳಿದಿದೆ, ಈಗ ರಾಜಕೀಯ ಪ್ರಜಾಪ್ರಭುತ್ವದ ಕನಸೂ ಮಣ್ಣುಪಾಲಾಗುತ್ತಿದೆ. ಆರ್ಥಿಕ ಪ್ರಜಾಪ್ರಭುತ್ವದ ಕನಸು ಹಂತಹಂತವಾಗಿ ಅವಸಾನ ಕಾಣುತ್ತಿದೆ. ಈ ಹೊತ್ತಿನಲ್ಲೂ ದೇಶದ ಸುಶಿಕ್ಷಿತ ಹಿತವಲಯದ ವರ್ಗ ಉನ್ಮಾದದಿಂದ ಹೊರಬರದೆ ಇರುವುದು ಅಚ್ಚರಿ ಮೂಡಿಸುತ್ತದೆ. ಭಾರತ ಖಂಡಿತವಾಗಿಯೂ ಹೀಗಿರಲಿಲ್ಲ. “ ನಾನು ಅಂಬೇಡ್ಕರ್ ಅವರನ್ನೇ ಅನುಸರಿಸುತ್ತೇನೆ, ಅಂಬೇಡ್ಕರ್ ಹೊರತು ಮತ್ತಾರನ್ನೂ ಅನುಸರಿಸುವುದಿಲ್ಲ, ಅಂಬೇಡ್ಕರ್ ಹೇಳಿರುವುದೇ ಸತ್ಯ , ಸಂವಿಧಾನದ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದಾಗಿ ಪ್ರಮಾಣೀಕರಿಸುತ್ತೇನೆ ” ಎಂದು ನಿತ್ಯ ಭಜನೆ ಮಾಡುವ ನಮ್ಮ ಎಲ್ಲ ಜನಪ್ರತಿನಿಧಿಗಳು ತಮಗೆ ಸಂವಿಧಾನದ ಪರಿಜ್ಞಾನ ಇಲ್ಲ ಎಂದು ಒಪ್ಪಿಕೊಳ್ಳಲಿ ಅಥವಾ ಸಂವಿಧಾನದ ಬಗ್ಗೆ ಕೊಂಚಮಟ್ಟಿಗೆ ಅರಿವು ಇದ್ದರೂ ಇಂತಹ ಪ್ರಜಾತಂತ್ರ ವಿರೋಧಿ ಕಾನೂನು, ಕಾಯ್ದೆ, ಮಸೂದೆಗಳನ್ನು ವಿರೋಧಿಸಿ ದನಿ ಎತ್ತಲಿ. ಒಂದೆರಡು ಅವಧಿಯ ಅಧಿಕಾರದ ಸವಿಯುಂಡು ಜನಪ್ರತಿನಿಧಿಗಳು ಶಾಶ್ವತವಾಗಿ ಮಣ್ಣಾಗಿ ಹೋಗುತ್ತಾರೆ. ಇಂದಿನ ಪೀಳಿಗೆ ಮುಂದೊಂದು ದಿನ ಇಲ್ಲವಾಗುತ್ತದೆ.

ಆದರೆ ಪ್ರಜಾಸತ್ತಾತ್ಮಕ ಭಾರತ ಶಾಶ್ವತವಾಗಿ ಉಳಿದಿರಬೇಕಲ್ಲವೇ ? ಇಂದು ದೇಶದ ಸಾರ್ವಭೌಮ ಪ್ರಜೆಗಳು ವಿಶ್ವಾಸಪೂರ್ವಕವಾಗಿ ತಮ್ಮ ಪ್ರತಿನಿಧಿಗಳನ್ನು ಸಂಸತ್ತಿಗೆ, ವಿಧಾನಸಭೆಗಳಿಗೆ ಆಯ್ಕೆ ಮಾಡಿ ಕಳಿಸಿರುವುದು “ ಈ ದೇಶದ ಸಂವಿಧಾನ ಬಯಸುವಂತಹ ಪ್ರಜಾಪ್ರಭುತ್ವವನ್ನು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ” ಸಂರಕ್ಷಿಸಲೆಂದೇ ಅಲ್ಲವೇ ? ತಾವು ಅಲಂಕರಿಸಿರುವ ಅಧಿಕಾರಪೀಠಗಳು, ಸವಿಯುತ್ತಿರುವ ಸವಲತ್ತು ಸೌಲಭ್ಯಗಳು ಈ ದೇಶದ ಪ್ರತಿಯೊಬ್ಬ ಸಾರ್ವಭೌಮ ಪ್ರಜೆಯ ಆಸ್ತಿ ಎಂಬ ಪರಿವೆ ಜನಪ್ರತಿನಿಧಿಗಳಲ್ಲಿರಬೇಕಲ್ಲವೇ ? ಈ ಪರಿವೆ ಇಲ್ಲದಿರುವುದರಿಂದಲೇ ಭಾರತ ಅನಾಹುತಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇತ್ತ ಸಾಮಾಜಿಕ ಪ್ರಜಾಪ್ರಭುತ್ವವೂ ಇಲ್ಲದೆ ರಾಜಕೀಯ ಪ್ರಜಾಪ್ರಭುತ್ವವೂ ಇಲ್ಲದೆ ಸೊರಗುವಂತಾಗಿದೆ.

ಜನಪ್ರತಿನಿಧಿಗಳ ಮೇಲಿರುವಷ್ಟೇ ನೈತಿಕ, ಸಾಂವಿಧಾನಿಕ ಹೊಣೆ ಜನತೆಯ ಮೇಲೆಯೂ ಇರುತ್ತದೆ. ಕಳೆದ ಒಂದು ದಶಕದ ಉನ್ಮತ್ತ ರಾಜಕಾರಣಕ್ಕೆ ಬಲಿಯಾಗಿ ತಮ್ಮ ಸ್ವಪ್ರಜ್ಞೆಯನ್ನೇ ಕಳೆದುಕೊಂಡಂತಿರುವ ಒಂದು ಬೃಹತ್ ಮಧ್ಯಮ ವರ್ಗ ಮತ್ತು ಯುವ ಪೀಳಿಗೆ ತಮ್ಮ ಕಣ್ಣೆದುರಿನ ಅಪಾಯಗಳನ್ನು ಅರಿತುಕೊಳ್ಳಬೇಕಿದೆ. ಇವರ ಕಣ್ಣುಗಳಿಗೆ ಕವಿದಿರುವ ಪೊರೆಯನ್ನು ಕಳಚಿಹಾಕಲು ಜಾಗೃತಿ ಮೂಡಿಸುವ ಹೊಣೆಗಾರಿಕೆ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಸಕ್ರಿಯವಾಗಿರುವ ಸಂಘಟನೆಗಳ ಮೇಲೆಯೂ ಇದೆ. ಸಾಹಿತಿ ಕಲಾವಿದರು, ವಿಜ್ಞಾನಿಗಳು, ವಿದ್ಯಾರ್ಥಿ ಯುವಜನತೆ, ವೈದ್ಯಕೀಯ ಲೋಕ ಮತ್ತು ಮಣ್ಣ ಋಣಕ್ಕೆ ಬದ್ಧರಾದ ಪ್ರತಿಯೊಬ್ಬ ಪ್ರಜೆಯಲ್ಲೂ ಈ ಜಾಗೃತಿ ಮೂಡದೆ ಹೋದರೆ ಬಹುಶಃ ಭಾರತೀಯ ಪ್ರಜಾಪ್ರಭುತ್ವ ಎನ್ನುವ ಕಲ್ಪನೆಯೇ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾದ ಪಳೆಯುಳಿಕೆಯಾಗಿಬಿಡುತ್ತದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com